ನ್ಯಾಯಮೂರ್ತಿ ಎ.ಪಿ.ಶಾಹ್,
ವಿಶ್ರಾಂತ ನ್ಯಾಯಾಧೀಶರು, ದೆಹಲಿ ಉಚ್ಛ ನ್ಯಾಯಾಲಯ
ಭಾರತದ ಸುಪ್ರೀಂಕೋರ್ಟಿನ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತರಾದ ಒಂದು ತಿಂಗಳೊಳಗೇ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಅವರು ಅಯೋಧ್ಯಾ ರಾಮಮಂದಿರ ವಿವಾದ ಕುರಿತು ತೀರ್ಪು ನೀಡಿದ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠದ ಸದಸ್ಯರಾಗಿದ್ದರು ಎಂಬ ಸಂಗತಿ ಕಾಕತಾಳೀಯವೇನಲ್ಲ. 2014 ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸುಪ್ರೀಂಕೋರ್ಟಿನ ನ್ಯಾಯಾಧೀಶರು “ರಾಜಕೀಯ ಉದ್ಯೋಗ” ಪಡೆದವರಲ್ಲಿ ಇವರು ಮೂರನೇಯವರು.
“ತೀರ್ಮಾನಗಳು ಸರ್ಕಾರದ ಪರವಾಗಿದ್ದರೆ, ಸೂಕ್ತ ಪುರಸ್ಕಾರ ದೊರೆಯುತ್ತದೆ” ಎಂಬ ಸಂದೇಶವನ್ನು ಇಂತಹ ನೇಮಕಾತಿಗಳು ಉನ್ನತ ನ್ಯಾಯಾಂಗಕ್ಕೆ ಸರ್ಕಾರ ನೀಡುತ್ತಿದೆ. ಇವು ನ್ಯಾಯಾಧೀಶರುಗಳನ್ನು ಭ್ರಷ್ಟಗೊಳಿಸುತ್ತವೆ ಮತ್ತು ಭಟ್ಟಂಗಿತನದ ಸಂಸ್ಕೃತಿಯನ್ನು ಉತ್ತೇಜಿಸುತ್ತವೆ. ಇವು ನ್ಯಾಯಾಂಗದ ಬಗೆಗಿನ ಸಾರ್ವಜನಿಕರ ಭರವಸೆ ಹಾಗೂ ನಂಬಿಕೆಯನ್ನು ನಾಶಗೊಳಿಸುತ್ತವೆ.
ಇದನ್ನು ಓದಿ: ಬಾಬ್ರಿ ಮಸೀದಿ ತೀರ್ಪಿನ ಬಳಿಕ ಸಹೋದ್ಯೋಗಿ ನ್ಯಾಯಾಧೀಶರಿಗೆ ಭೋಜನ, ಮದ್ಯ ಕೂಟ ಏರ್ಪಡಿಸಿದ್ದೆ: ಮಾಜಿ ಸಿಜೆಐ ರಂಜನ್ ಗೊಗೊಯ್
1980ರಲ್ಲಿ ನ್ಯಾಯಮೂರ್ತಿ ವಿ.ಡಿ.ತುಳಜಾಪುರ್ಕರ್ ಹೀಗೆ ಹೇಳಿದ್ದರು “ರಾಜಕೀಯ ಮುಖಂಡನೊಬ್ಬ ರಾಜಕೀಯ ಗೆಲುವು ಸಾಧಿಸಿದಾಗ ಮತ್ತು ಅವನು ಉನ್ನತ ಸ್ಥಾನ ಅಲಂಕರಿಸಿದಾಗ ನ್ಯಾಯಾಧೀಶರುಗಳು ಅಭಿಮಾನದಿಂದ ಅವನಿಗೆ ಅಭಿನಂದನಾ ಸಂದೇಶಗಳನ್ನು ಕಳಿಸುವುದು ಮತ್ತು ಅವನನ್ನು ಹಾಡಿ ಹೊಗಳುವುದು ನ್ಯಾಯಾಂಗದ ಬಗ್ಗೆ ಜನರಲ್ಲಿರುವ ವಿಶ್ವಾಸವನ್ನು ಅಲುಗಾಡಿಸುತ್ತದೆ.”
ನಿಜ ಹೇಳಬೇಕೆಂದರೆ, ಇದು ನ್ಯಾಯಾಂಗವನ್ನು ಅಸ್ಥಿರಗೊಳಿಸುವ ಮತ್ತು ಅದರ ಕಾರ್ಯನಿರ್ವಹಣೆಯನ್ನು ಒಂದೊಂದಾಗಿ ಕಿತ್ತೆಸೆಯುವ ರಾಜಕೀಯ ಪಕ್ಷದ ಹುನ್ನಾರಗಳಲ್ಲಿ ಒಂದು. ಒಮ್ಮೆ ನಾವು ಸೂಕ್ಷ್ಮವಾಗಿ ಗಮನಿಸಿದಾಗ, ನ್ಯಾಯಾಂಗ ಖಂಡಿತವಾಗಿಯೂ ಹಾಗೂ ನಿಧಾನವಾಗಿಯೂ ದುರ್ಬಲಗೊಳ್ಳುತ್ತಿದೆ ಎಂಬುದನ್ನು ಕಾಣುತ್ತೇವೆ.
ವಾಸ್ತವವಾಗಿ ನೋಡಿದರೆ, ನ್ಯಾಯಾಧೀಶರನ್ನು ಭ್ರಷ್ಟಗೊಳಿಸುವ ಸಾಹಸಕ್ಕೆ ಕೈ ಹಾಕಿರುವುದು ಇದು ಮೊದಲ ಸರ್ಕಾರವೇನಲ್ಲ. ಈ ಹಿಂದೆ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ನೇತೃತ್ವದ ಸರ್ಕಾರಗಳು ಇದನ್ನೇ ಮಾಡಿದ್ದವು. ಆದರೆ ಹಿಂದಿನವರು ಮಾಡಿದ್ದರು ಎಂಬ ಕಾರಣ ನೀಡಿ ಈಗಿನ ಸರ್ಕಾರವೂ ಅದನ್ನೇ ಮಾಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಾಗಬಾರದು.
ಇದನ್ನು ಓದಿ: ರಾಜ್ಯಸಭೆ: ಪೂರ್ಣಗೊಂಡ ಆಯ್ಕೆ ಪ್ರಕ್ರಿಯೆ-57 ಸ್ಥಾನಗಳಲ್ಲಿ 41 ಅಭ್ಯರ್ಥಿಗಳು ಅವಿರೋಧ ಆಯ್ಕೆ
ಪ್ರಜಾಸತ್ತೆಯ ಇತರ ಅಂಗಗಳು ತಮ್ಮ ಕರ್ತವ್ಯಗಳ ಸ್ವತಂತ್ರ ನಿಭಾವಣೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಸಂರಕ್ಷಣೆ ಮಾಡುವುದನ್ನು ಕಾರ್ಯಾಂಗವು ಖಾತ್ರಪಡಿಸಬೇಕು. ಆದರೆ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದ ಸರ್ಕಾರಗಳು ತಮ್ಮ ಅಧಿಕಾರದ ಮುಂದುವರಿಕೆಗಾಗಿ ಅಧಿಕಾರ ಮದ ನೆತ್ತಿಗೇರಿಸಿಕೊಂಡು ಇಂತಹ ಹೊಸ ಹೊಸ ‘ಸೃಜನಾತ್ಮಕ’ ದಾರಿಗಳನ್ನು ಹುಡುಕುತ್ತವೆ.
ನ್ಯಾಯಾಂಗ ಕೂಡ ಕಡಿಮೆ ಅಪರಾಧಿಯೇನಲ್ಲ. ಭಾರತೀಯ ನ್ಯಾಯಾಧೀಶರುಗಳು ಶಕ್ತಿಯುತವಾದ ಆದರ್ಶಗಳನ್ನು ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ. ಅದಕ್ಕೆ ಪೂರಕವಾಗಿ ನೈತಿಕತೆ ಮತ್ತು ಗುಣಲಕ್ಷಣಗಳನ್ನು, ನ್ಯಾಯಮೂರ್ತಿ ಅಕಿಲ್ ಖುರೇಷಿಯವರು ಪ್ರದರ್ಶಿಸಿದಂತೆ ತೋರಲು ಸಾಧ್ಯವಾಗಬೇಕು. ತಮ್ಮನ್ನು ದೇಶದ ಹಲವಾರು ಹೈಕೋರ್ಟುಗಳಿಗೆ ಅಲೆದಾಡಿಸಿದ ತಮ್ಮ ಬಗೆಗಿನ ಸರ್ಕಾರದ ‘ನಕಾರಾತ್ಮಕ ಧೊರಣೆ’ಯು ತನ್ನ ಸ್ವತಂತ್ರ ಧೋರಣೆಯನ್ನು ದೃಢೀಕರಿಸಿದೆ ಮತ್ತು ತಾನು ನಿವೃತ್ತನಾಗುವಾಗ ತಲೆ ಎತ್ತಿ ನಿರ್ಗಮಿಸುವಂತೆ ಮಾಡಿದೆ” ಎಂದು ಅವರು ಹೆಮ್ಮೆಯಿಂದ ಹೇಳಿದರು.
ನಿವೃತ್ತಿಯ ನಂತರ ರಾಜ್ಯಸಭೆಯ ಸದಸ್ಯರಾಗಿ ಮುಂಬಡ್ತಿ ಪಡೆದ ನ್ಯಾಯಮೂರ್ತಿ ರಂಜನ್ ಗೊಗೋಯಿ ಆಡಿದ ಮಾತು ಗಮನಾರ್ಹವಾದುದು. “ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಂತರವನ್ನು ಕಡಿಮೆ ಮಾಡಬೇಕೆಂದು ಇಷ್ಟಪಟ್ಟಿದ್ದೆ. ಆದರೆ ಸಂಸತ್ತಿನಲ್ಲಿನ ನನ್ನ ಹಾಜರಾತಿ ದಾಖಲೆ ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿನ ನನ್ನ ಭಾಗವಹಿಸುವಿಕೆಯು ಅದು ಆಗಲಿಲ್ಲ ಎನ್ನುವುದನ್ನು ಸಾಬೀತುಮಾಡಿದೆ.’ ಅದೇ ರೀತಿಯಲ್ಲಿ ಕೇರಳದ ರಾಜ್ಯಪಾಲರಾಗಿ ನೇಮಿಸಲ್ಪಟ್ಟಿದ್ದ ನ್ಯಾಯಮೂರ್ತಿ ಸದಾಶಿವಂ ತಾನು ರಾಜ್ಯಪಾಲನಾಗಿ ಜನರ ಸೇವೆ ಮಾಡಬೇಕು ಎಂದು ಆಸೆಪಟ್ಟಿದ್ದೆ. ಆದರೆ ಭಾರತದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶನಾಗಿ ನಿವೃತ್ತನಾದ ತಾನು ಬೇರಾವುದಾದರೂ ಕೆಲಸ ಮಾಡಿದ್ದರೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತಿತ್ತು ಎಂದು ಪಶ್ಚಾತ್ತಾಪಪಟ್ಟಿದ್ದಾರೆ.
ಇದನ್ನು ಓದಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾತಿ ಪದ್ಧತಿ ಹೋಗಲಾಡಿಸಬೇಕು: ನ್ಯಾಯಮೂರ್ತಿ ಬಿ ವೀರಪ್ಪ
ಆದರ್ಶಪ್ರಾಯವಾಗಿ, ನ್ಯಾಯಾಂಗ ಸಮುದಾಯವು ಒಂದು ನಿರ್ಧಾರಕ್ಕೆ ಬರಬೇಕು. “ನ್ಯಾಯಾಧೀಶರುಗಳು ನಿವೃತ್ತರಾದ ನಂತರ ರಾಜಕೀಯ ಪ್ರೋತ್ಸಾಹದ ಯಾವುದೇ ನೇಮಕಾತಿಯನ್ನು ಸ್ವೀಕರಿಸುವುದಿಲ್ಲ” ಎಂದು ಮುಖ್ಯ ನ್ಯಾಯಾಧೀಶರ ಸಮ್ಮೇಳನದಲ್ಲಿ ತೀರ್ಮಾನ ಮಾಡಬೇಕು. ಜೊತೆಗೆ, ನಿವೃತ್ತಿಯ ನಂತರ ಕೊನೇಪಕ್ಷ ಎರಡು ವರ್ಷಗಳ ಕಾಲ ಯಾವುದೇ ತೀರ್ಪುಗಾರನ ಪಾತ್ರದ ನೇಮಕಾತಿಯನ್ನು ನ್ಯಾಯಾಧೀಶರುಗಳು ಒಪ್ಪಿಕೊಳ್ಳಬಾರದು ಎಂಬ ನಿರ್ಬಂಧ ವಿಧಿಸಿಕೊಳ್ಳಬೇಕು.
ಮುಖ್ಯ ನ್ಯಾಯಾಧೀಶ ಡಿ.ವಿ.ಚಂದ್ರಾಚೂಡ್ ಅವರು “ನ್ಯಾಯಾಂಗಕ್ಕೆ ಹೆಚ್ಚಿನ ಅಪಾಯ ಅದರೊಳಗಡೆಯೇ ಇದೆ” ಎಂದಿದ್ದಾರೆ. ನ್ಯಾಯಾಂಗದ ಸದಸ್ಯರಾರೂ ನಿವೃತ್ತಿಯ ನಂತರ ಯಾವುದೇ ಆರ್ಥಿಕ ಪ್ರಯೋಜನವಿರುವ ಉದ್ಯೋಗಕ್ಕಾಗಿ ‘ದಂಧೆ’ ನಡೆಸಬಾರದು. ನ್ಯಾಯಾಧೀಶರಾಗುವವರು ‘ನ್ಯಾಯಯುತವಾದ ಹಾಗೂ ಸ್ವತಂತ್ರವಾದ ನ್ಯಾಯಾಂಗಕ್ಕೆ ಬದ್ಧರಾಗುವ’ ಒಂದು ಭರವಸೆಗೆ ಸಹಿಮಾಡಬೇಕು. ಯಾವುದೇ ಕಾರಣಕ್ಕೂ ಈ ಭರವಸೆಗೆ ಧಕ್ಕೆಯುಂಟಾಗಬಾರದು. ಭಾರತದ ಜನರೊಂದಿಗೆ ಈ ರೀತಿಯ ಒಂದು ಅಲಿಖಿತ ಒಪ್ಪಂದವಿದೆ ಎಂಬುದನ್ನು ನ್ಯಾಯಾಧೀಶರಿಗೆ ನೆನಪಿಸಬೇಕಾಗಿದೆ.
ಭಾವಾನುವಾದ : ಟಿ.ಸುರೇಂದ್ರರಾವ್
(ಫೆಬ್ರವರಿ 16, 2023 ರ ‘ದಿ ಹಿಂದು’ ಪತ್ರಿಕೆಯ ‘ಒಪೀನಿಯನ್’ ವಿಭಾಗದಲ್ಲಿ ಪ್ರಕಟವಾದ ಲೇಖನದ ಕನ್ನಡ ಭಾವಾನುವಾದ)