ವಿಶ್ವದೆಲ್ಲೆಡೆ ನಿರ್ದಯ ಲೂಟಿಗೆ ವಿಧ-ವಿಧ ಪರಿಕಲ್ಪನೆ

ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ಬಂಡವಾಳಶಾಹಿ ಅರ್ಥವ್ಯವಸ್ಥೆಯ ದೀರ್ಘಾವಧಿಯ ಬೆಳವಣಿಗೆಯ ದರವನ್ನು ನಿರ್ಧರಿಸುವ ‘ಬಾಡಿಗೆ ಸರಕು’ಎಂಬ ಪರಿಕಲ್ಪನೆಯು ನಿಸ್ಸಂಶಯವಾಗಿಯೂ ಅಸಂಬದ್ಧವಾಗಿದೆ. ಬಂಡವಾಳಶಾಹಿ  ತನ್ನ ಆಂತರಿಕ ಮಾರುಕಟ್ಟೆಗಷ್ಟೇ ಹೇಗೆ ಸದ್ದಿಲ್ಲದೆ ಸೀಮಿತಗೊಳ್ಳುವುದಿಲ್ಲವೋ, ಹಾಗೆಯೇ ಅದು ತನ್ನ ಆಂತರಿಕ ಸಂಪನ್ಮೂಲ ಲಭ್ಯತೆಗಷ್ಟೇ ಸದ್ದಿಲ್ಲದೆ ಸೀಮಿತಗೊಳ್ಳುವುದಿಲ್ಲ. ಮಾನವ ಬಲವೂ ಸೇರಿದಂತೆ ಆಂತರಿಕವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಅದು ವಿಶ್ವದೆಲ್ಲೆಡೆಯೂ ನುಗ್ಗಿ ಎಲ್ಲ ಸಂಪನ್ಮೂಲಗಳನ್ನೂ ನಿರ್ದಯವಾಗಿ ಲೂಟಿ ಮಾಡುತ್ತದೆ. ಬಂಡವಾಳಶಾಹಿಗೆ ಯಾವುದೇ ‘ಬಾಡಿಗೆ ಸರಕು’ ಇಲ್ಲದಂತೆ ಖಚಿಪಡಿಸಿ ಅದನ್ನು ಸಾಧ್ಯಗೊಳಿಸುವ ಒಂದು ಸಾಧನವೇ ಸಾಮ್ರಾಜ್ಯಶಾಹಿ. ಮುಂದುವರೆದ ಬಂಡವಾಳಶಾಹೀ ದೇಶಗಳಿಗೆ ಅಗತ್ಯವಾದ ಕೃಷಿ ಸರಕುಗಳ ಸರಬರಾಜನ್ನು ಸಾಂಗಗೊಳಿಸಲಿಕ್ಕಾಗಿ ಅವನ್ನು ಉತ್ಪಾದಿಸುವ ದೇಶಗಳ ಆಂತರಿಕ ಕೃಷಿ ಸರಕುಗಳ ಬಳಕೆಯನ್ನು ನಿಯಂತ್ರಿಸಲು ಅದು ಈಗ ನೇರ ರಾಜಕೀಯ ನಿಯಂತ್ರಣಗಳ ಬದಲು ನವ-ಉದಾರವಾದಿ ನೀತಿಗಳನ್ನು ಹೇರುತ್ತದೆ.

ಆರ್ಥಿಕ ಸಿದ್ಧಾಂತವು ʻʻಬಾಡಿಗೆ ಸರಕುʼʼಗಳಿಗೆ ಬಹಳ ಮಹತ್ವ ಕೊಡುತ್ತದೆ. ʻʻಬಾಡಿಗೆ ಸರಕುʼʼ ಎಂದರೆ ಉತ್ಪಾದನೆಗೆ ಹೂಡಿಕೆ ಮಾಡುವ ಮೂಲಕ ಯಾವ ಸರಕಿನ ಪೂರೈಕೆಯನ್ನು ಹೆಚ್ಚಿಸಲಾಗದೋ ಅಂತಹ ಸರಕು; ಅದರ ಪೂರೈಕೆ ಪ್ರಾಕೃತಿಕ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಈ ಕಾರಣದಿಂದಾಗಿ, ಅದಕ್ಕೊಂದು ಗರಿಷ್ಠ ದೀರ್ಘಾವಧಿ ಬೆಳವಣಿಗೆಯ ದರವಿರುತ್ತದೆ, ಅದು ಬಾಹ್ಯವಾಗಿ ನಿರ್ಧರಿಸಲ್ಪಟ್ಟಿರುತ್ತದೆ, ಅದನ್ನು ನಮ್ಮ ಇಚ್ಛಾನುಸಾರ ಬದಲಾಯಿಸಲಾಗದು. ಇಂತಹ ಒಂದು ಬಾಡಿಗೆ ಸರಕನ್ನು ಇತರ ಸರಕುಗಳ ಉತ್ಪಾದನೆಗೆ ಅತ್ಯಗತ್ಯವಾದ ಒಂದು ಲಾಗುವಾಡಾಗಿ ಬಳಸಿದಾಗ, ಅಂತಹ ಸರಕುಗಳ ದೀರ್ಘಾವದಿ ಬೆಳವಣಿಗೆಯೂ ಬಾಡಿಗೆ ಸರಕಿನ ಬಾಹ್ಯವಾಗಿ ನಿರ್ಧರಿಸಲ್ಪಟ್ಟ ಗರಿಷ್ಠ ಬೆಳವಣಿಗೆಯೊಂದಿಗೆ ಗಂಟು ಹಾಕಿಕೊಂಡಿರುತ್ತದೆ. ಮತ್ತು, ಇಡೀ ಉತ್ಪಾದನಾ ವ್ಯವಸ್ಥೆಯ ಬೆಳವಣಿಗೆಯ ದರವು, ಬಾಡಿಗೆ ಸರಕಿನ ಬೆಳವಣಿಗೆಯ ದರದ ರೀತಿಯಲ್ಲಿ, ಬಾಹ್ಯವಾಗಿ ನಿರ್ಧರಿಸಲ್ಪಡುತ್ತದೆ. ಅದಕ್ಕಾಗಿಯೇ ಈ ಸರಕನ್ನು “ಬಾಡಿಗೆ ಸರಕು” ಎಂದು ಕರೆಯಲಾಗುತ್ತದೆ. ಅರ್ಥವ್ಯವಸ್ಥೆಯು ಒಳಗೊಂಡಿರುವ ತಂತ್ರಜ್ಞಾನದ ಪ್ರಗತಿಯು ಇದನ್ನು ತುಸು ಸಡಿಲಗೊಳಿಸಬಹುದು, ಆದರೆ ಈ ಸಡಿಲಿಕೆ ಒಟ್ಟಾರೆ ವ್ಯವಸ್ಥೆಯ ಬೆಳವಣಿಗೆಯ ಮೇಲೆ ಬಾಡಿಗೆ ಸರಕು ವಿಧಿಸುವ ಮೂಲಭೂತ ನಿರ್ಬಂಧವನ್ನು ಬದಲಿಸದು.

ಇದನ್ನು ಓದಿ: ಅರ್ಥವ್ಯವಸ್ಥೆಯ ಮೂಲ ಸಮಸ್ಯೆಯನ್ನೇ ನಿರ್ಲಕ್ಷಿಸಿದ 2023-24ರ ಬಜೆಟ್ – ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಫಲತೆ

ಸಾಂಪ್ರದಾಯಿಕ ಅರ್ಥಶಾಸ್ತ್ರದ ಪರಂಪರೆಗೆ ಸೇರಿದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಡೇವಿಡ್ ರಿಕಾರ್ಡೊ ಭೂಮಿಯನ್ನು ಒಂದು ಬಾಡಿಗೆ ಸರಕು ಎಂದು ಪರಿಗಣಿಸಿದ್ದರು. ದುಡಿಯುವ ಜನರು ಪ್ರಧಾನವಾಗಿ ಬಳಸುವ ಧಾನ್ಯವನ್ನು ಉತ್ಪಾದಿಸಲು ಭೂಮಿ ಅತ್ಯಗತ್ಯವಾಗಿತ್ತು ಮತ್ತು ಅದಕ್ಕಾಗಿ ಲಭ್ಯವಿರುವ ಭೂಮಿಯ ವಿಸ್ತಾರವು ನಿಯತವಾಗಿತ್ತು. ಒಂದು ವೇಳೆ ಅಗತ್ಯವಿರುವಷ್ಟು ಭೂಮಿಯನ್ನು ಪೂರ್ಣವಾಗಿ ಈ ಉದ್ದೇಶಕ್ಕಾಗಿ ನಿಗದಿಪಡಿಸುವುದು ಸಾಧ್ಯವಾಗದಿದ್ದರೆ, ಕೊನೆಯ ಪಕ್ಷ, ಕಳಪೆ ಗುಣಮಟ್ಟದ ಭೂಮಿಯನ್ನು – ಎಷ್ಟರ ಮಟ್ಟಿನ ಕಳಪೆಯ ಭೂಮಿಯನ್ನು ಎಂದರೆ ಅದನ್ನು ಕೃಷಿ ಮಾಡುವ ದುಡಿಮೆಗಾರರ ಸ್ವಂತ ಬಳಕೆಗೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಧಾನ್ಯವನ್ನು ಬೆಳೆಯಲು ಸಾಧ್ಯವಾಗದಷ್ಟು ಮಟ್ಟಿನ ಕಳಪೆಯ ಭೂಮಿಯನ್ನು – ಬಳಸಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಭೂಮಿಯ ಇತಿಮಿತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಮಿತಿಗಳ ಈ ಹಂತವನ್ನು ದಾಟಿ ಇನ್ನೂ ಹೆಚ್ಚು ಬಂಡವಾಳದ ಸಂಗ್ರಹಣೆಯು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯನ್ನು ಶೂನ್ಯ ಶೇಖರಣೆಯ ಮತ್ತು ಆ ಕಾರಣದಿಂದ ಶೂನ್ಯ ಬೆಳವಣಿಗೆಯ “ಸ್ಥಿರ ಸ್ಥಿತಿ” ಎಂದು ರಿಕಾರ್ಡೊ ಕರೆದರು. ಅವರ ಪ್ರಕಾರ, ಒಂದು ಬಾಡಿಗೆ ಸರಕಾಗಿ ಭೂಮಿಯು ಬಂಡವಾಳಶಾಹಿ ಅರ್ಥವ್ಯವಸ್ಥೆಗಳನ್ನು ಒಂದು “ಸ್ಥಿರ ಸ್ಥಿತಿ”ಯತ್ತ ತಳ್ಳಿದೆ. ಆ “ಸ್ಥಿರ ಸ್ಥಿತಿ”ಯ ಆಗಮನವನ್ನು ಹೆಚ್ಚೆಂದರೆ ಮುಂದೂಡಬಹುದೇ ವಿನಃ ಅದನ್ನು ತಡೆಯಲಾಗದು.

ಶ್ರಮಶಕ್ತಿಯೂ ‘ಬಾಡಿಗೆ ಸರಕು’?

ರಿಕಾರ್ಡೊನ ಪ್ರಕಾರ, ಶ್ರಮಶಕ್ತಿಯು ಒಂದು ಬಾಡಿಗೆ ಸರಕಾಗಿ ಪರಿಗಣಿತವಾಗಿರಲಿಲ್ಲ. ಏಕೆಂದರೆ, ದುಡಿಮೆಗಾರರು ತಮ್ಮ ನಿಜ ವೇತನಗಳು ಜೀವನಾಧಾರ ಮಟ್ಟಕ್ಕಿಂತಲೂ ಮೇಲೆ ಏರಿದ ಕೂಡಲೇ ಸಂತಾನೋತ್ಪತ್ತಿಯನ್ನು ತ್ವರಿತಗೊಳಿಸುವ ಪ್ರವೃತ್ತಿಯನ್ನು ಹೊಂದಿದ್ದರು. ಆದ್ದರಿಂದ, ಶ್ರಮಶಕ್ತಿಯ ಕೊರತೆಯ ಸೂಚನೆ ದೊರೆಯುತ್ತಿರುವಂತೆಯೇ, ವೇತನವು ಜೀವನಾಧಾರ ಮಟ್ಟಕ್ಕಿಂತ ಮೇಲೆ ಏರಿದ ಕೂಡಲೇ, ಶ್ರಮಶಕ್ತಿಯ ಪೂರೈಕೆಯು ಬೇಕಾಗುವಷ್ಟು ವಿಸ್ತರಿಸಲ್ಪಟ್ಟಿತು. ಹಾಗಾಗಿ, ಶ್ರಮಶಕ್ತಿಯು ಎಂದಿಗೂ ಬಾಡಿಗೆ ಸರಕಾಗಲಿಲ್ಲ. ಶ್ರಮಶಕ್ತಿಯ ವಿಸ್ತರಣೆಗೆ ಸಮಯ ಹಿಡಿಯಿತು, ನಿಜ. ಆದರೆ, ಒಟ್ಟಾರೆಯಾಗಿ, ಈ ವಿದ್ಯಮಾನವು ಬಂಡವಾಳದ ಸಂಗ್ರಹಣೆಯನ್ನು ಬಹಳ ಕಾಲ ತಡೆಹಿಡಿಯಲಾಗಲಿಲ್ಲ.

ಇದನ್ನು ಓದಿ: ಅರ್ಥಶಾಸ್ತ್ರವನ್ನು ಅಪ್ರಾಮಾಣಿಕತೆಯ ಮಟ್ಟಕ್ಕೆ ಇಳಿಸಿರುವ ನವ-ಉದಾರವಾದ

ರಿಕಾರ್ಡೊನ ಈ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿ ಆಧುನಿಕ ಬಂಡವಾಳಶಾಹಿ ಅರ್ಥಶಾಸ್ತ್ರವು ಶ್ರಮಶಕ್ತಿಯನ್ನು ಒಂದು ಬಾಡಿಗೆ ಸರಕಾಗಿ ನೋಡುತ್ತದೆ. “ಮನು ಕುಲದ ಮೇಲೆ ಹೊರಿಸಿದ ಅಪನಿಂದೆ” ಎಂದು ಮಾರ್ಕ್ಸ್ ಕರೆದಿದ್ದ ಕುಖ್ಯಾತ ಮಾಲ್ಥೂಸಿಯನ್ ಸಿದ್ಧಾಂತದ ಅನುಯಾಯಿ ರಿಕಾರ್ಡೊ ಪ್ರತಿಪಾದಿಸಿದ ರೀತಿಯಲ್ಲಿ ಜನಸಂಖ್ಯೆಯು ವೃದ್ಧಿಸುವುದಿಲ್ಲ ಎಂದು ಆಧುನಿಕ ಬಂಡವಾಳಶಾಹಿ ಅರ್ಥಶಾಸ್ತ್ರವು ನಂಬುತ್ತದೆ. ಜನಸಂಖ್ಯೆಯ ಹೆಚ್ಚಳವು ಹಲವಾರು ಅಂಶಗಳಿಂದ ಸ್ವಾಯತ್ತವಾಗಿ ನಿರ್ಧರಿಸಲ್ಪಡುತ್ತದೆ. ಮತ್ತು, ಈ ಸ್ವಾಯತ್ತ ನಿರ್ಣಯವೇ ಶ್ರಮಶಕ್ತಿಯನ್ನು ಒಂದು ಬಾಡಿಗೆ ಸರಕನ್ನಾಗಿಸುತ್ತದೆ: ಇಡೀ ಅರ್ಥವ್ಯವಸ್ಥೆಯ ಬೆಳವಣಿಗೆ ದರವು ಕಾರ್ಮಿಕ-ಶಕ್ತಿಯ ಬೆಳವಣಿಗೆಯ ದರದೊಂದಿಗೆ ಕಟ್ಟಿಹಾಕಲ್ಪಟ್ಟಿದೆ, ಮತ್ತು ಅದು ಸ್ವತಃ ಬಾಹ್ಯವಾಗಿ ನಿರ್ಧರಿಸಲ್ಪಡುವ ಜನಸಂಖ್ಯೆಯ ಬೆಳವಣಿಗೆಯ ದರವನ್ನು ಅವಲಂಬಿಸಿರುತ್ತದೆ. ಈ ಅವಲಂಬನೆಯನ್ನು ತಾಂತ್ರಿಕ ಪ್ರಗತಿ, ಏರಿಕೆಯಾಗುತ್ತಿರುವ ಕಾರ್ಮಿಕ ಉತ್ಪಾದಕತೆ, ಇವು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಬಹುದೇ ವಿನಃ ಅದನ್ನು ಸಂಪೂರ್ಣವಾಗಿ ನಿವಾರಿಸುವುದು ಸಾಧ್ಯವಿಲ್ಲ. ಜನಸಂಖ್ಯೆಯ ಬೆಳವಣಿಗೆಯ ದರ, ಮತ್ತು ಆ ಕಾರಣದಿಂದ ಕಾರ್ಮಿಕ ಶಕ್ತಿಯ ಬೆಳವಣಿಗೆ, ವಾರ್ಷಿಕವಾಗಿ ಶೇ. 3ರಷ್ಟಿದ್ದರೆ, ಮತ್ತು ಕಾರ್ಮಿಕ ಉತ್ಪಾದಕತೆಯ ಬೆಳವಣಿಗೆಯ ದರವು ವಾರ್ಷಿಕವಾಗಿ ಶೇ. 2ರಷ್ಟಿದ್ದರೆ, ಅರ್ಥವ್ಯವಸ್ಥೆಯ ದೀರ್ಘಕಾಲೀನ ಬೆಳವಣಿಗೆಯ ಗರಿಷ್ಠ ದರವು ಶೇ. 5 ಆಗಿರುತ್ತದೆ, ಅದಕ್ಕಿಂತ ಹೆಚ್ಚಿಗೆ ಇರುವುದಿಲ್ಲ.

ಅಸಂಬದ್ಧ ಪರಿಕಲ್ಪನೆಯಾಗಿಸಿದ ಸಾಮ್ರಾಜ್ಯಶಾಹಿ

ಹೀಗೆ ನಾವು ಸಾಂಪ್ರದಾಯಿಕ ಅರ್ಥಶಾಸ್ತ್ರವನ್ನಾಗಲಿ ಅಥವಾ ಆಧುನಿಕ ನವ-ಸಾಂಪ್ರದಾಯಿಕ ಅರ್ಥಶಾಸ್ತ್ರವನ್ನಾಗಲಿ ಅವಲೋಕಿಸಿದಾಗ, ಬಂಡವಾಳಶಾಹಿ ಅರ್ಥಶಾಸ್ತ್ರದ ಎಲ್ಲಾ ಧಾರೆಗಳೂ ಬಂಡವಾಳಶಾಹಿ ಅರ್ಥವ್ಯವಸ್ಥೆಯ ದೀರ್ಘಕಾಲೀನ ಬೆಳವಣಿಗೆಯ ದರವನ್ನು ವಿವರಿಸಲು ಬಾಡಿಗೆ ಸರಕಿನ ಪರಿಕಲ್ಪನೆಯನ್ನು ಬಳಸುತ್ತವೆ. ಆದಾಗ್ಯೂ, ಈ ಇಡೀ ವಿಧಾನದ ಸಮಸ್ಯೆಯೆಂದರೆ ಅದು ಸಾಮ್ರಾಜ್ಯಶಾಹಿಯ ಅಸ್ತಿತ್ವವನ್ನು ಪರಿಗಣಿಸುವುದಿಲ್ಲ. ಸಾಮ್ರಾಜ್ಯಶಾಹಿ ಇಲ್ಲದಿದ್ದರೆ ಬಂಡವಾಳಶಾಹಿ ಅರ್ಥವ್ಯವಸ್ಥೆಗೆ ಏನಾಗಬಹುದು ಎಂಬುದನ್ನು ವಿವರಿಸಲು ಒಂದು ವೇಳೆ ಬಾಡಿಗೆ ಸರಕು ಎಂಬುದನ್ನು ಪರಿಚಯಿಸಿದ್ದರೆ, ಆಗ ಅದು ಒಂದು ರೀತಿಯ ತಾರ್ಕಿಕ ವಿವರಣೆಯಾಗುತ್ತಿತ್ತು. ಆದರೆ, ಈ ಎಲ್ಲ ಬಂಡವಾಳಶಾಹಿ ಸಿದ್ಧಾಂತಗಳೂ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ವಾಸ್ತವವಾಗಿ ಏನಾಗುತ್ತದೆ ಎಂಬುದನ್ನು ವಿವರಿಸಲು ಈ ಪರಿಕಲ್ಪನೆಯನ್ನು ಬಳಸುತ್ತವೆ. ಹಾಗಾಗಿ, ಈ ಪರಿಕಲ್ಪನೆಯು ಈ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಅಸಂಗತಗೊಳಿಸುತ್ತದೆ. ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯು ತನ್ನ ಆಂತರಿಕ ಮಾರುಕಟ್ಟೆಗೆ ಹೇಗೆ ಸದ್ದಿಲ್ಲದೆ ಸೀಮಿತಗೊಳ್ಳುವುದಿಲ್ಲವೋ, ಹಾಗೆಯೇ ಅದು ತನ್ನ ಆಂತರಿಕ ಸಂಪನ್ಮೂಲ ಲಭ್ಯತೆಗೂ ಸದ್ದಿಲ್ಲದೆ ಸೀಮಿತಗೊಳ್ಳುವುದಿಲ್ಲ. ಮಾನವ ಬಲವೂ ಸೇರಿದಂತೆ ಆಂತರಿಕವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಅದು ವಿಶ್ವದೆಲ್ಲೆಡೆಯೂ ನುಗ್ಗಿ ಎಲ್ಲ ಸಂಪನ್ಮೂಲಗಳನ್ನೂ ನಿರ್ದಯವಾಗಿ ಲೂಟಿ ಮಾಡುತ್ತದೆ. ಆದ್ದರಿಂದ, ಬಂಡವಾಳಶಾಹಿ ಅರ್ಥವ್ಯವಸ್ಥೆಯ ದೀರ್ಘಾವಧಿಯ ಬೆಳವಣಿಗೆಯ ದರವನ್ನು ನಿರ್ಧರಿಸುವ ಬಾಡಿಗೆ ಸರಕಿನ ಪರಿಕಲ್ಪನೆಯು ನಿಸ್ಸಂಶಯವಾಗಿಯೂ ಅಸಂಬದ್ಧವಾಗಿದೆ.

ಇದನ್ನು ಓದಿ: ಹೆಚ್ಚುತ್ತಿರುವ ಹಸಿವು ಮತ್ತು ಬೆಳೆಯುತ್ತಿರುವ ಬಡತನ

ಈ ಸಂಬಂಧವಾಗಿ ನಾವು ದುಡಿಮೆಗಾರರ ವಿಷಯವನ್ನೇ ತೆಗೆದುಕೊಳ್ಳೋಣ. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ, ಇಪ್ಪತ್ತು ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಗುಲಾಮರನ್ನಾಗಿ ಮಾಡಿ ಅವರನ್ನು ಆಫ್ರಿಕಾದಿಂದ “ಹೊಸ ಜಗತ್ತಿಗೆ” ಅಲ್ಲಿನ ಗಣಿಗಳು ಮತ್ತು ಪ್ಲಾಂಟೇಷನ್‌ಗಳಲ್ಲಿ ಕೆಲಸ ಮಾಡಲು ಸಾಗಿಸಲಾಯಿತು. ಅಲ್ಲಿ ತಯಾರಿಸಲಾದ ಉತ್ಪನ್ನಗಳು ಮೆಟ್ರೊಪಾಲಿಟನ್ ದೇಶಗಳಿಗೆ ಬಂಡವಾಳ ಶೇಖರಣೆಯನ್ನು ಪೋಷಿಸಲು ಅಗತ್ಯವಾಗಿದ್ದವು. ಗುಲಾಮಗಿರಿಯು ಔಪಚಾರಿಕವಾಗಿ ಕೊನೆಗೊಂಡ ನಂತರ, ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು ಮೊದಲ ಮಹಾಯುದ್ಧದವರೆಗಿನ ಅವಧಿಯಲ್ಲಿ, 50 ಮಿಲಿಯನ್ ಭಾರತೀಯ ಮತ್ತು ಚೀನೀ ಕೆಲಸಗಾರರನ್ನು ವಿಶ್ವದ ಉಷ್ಣವಲಯದ ಮತ್ತು ಅರೆ ಉಷ್ಣವಲಯದ ಪ್ರದೇಶಗಳಿಗೆ ಸಾಗಿಸಲಾಯಿತು. ಮತ್ತೊಮ್ಮೆ ಅದೇ ಉದ್ದೇಶಕ್ಕಾಗಿ, ಅಂದರೆ, ಮೆಟ್ರೊಪಾಲಿಟನ್ ದೇಶಗಳಿಗೆ ಬಂಡವಾಳ ಶೇಖರಣೆಗಾಗಿ, ಭಾರತೀಯ ಗುತ್ತಿಗೆ ಕೆಲಸಗಾರರನ್ನು ವೆಸ್ಟ್ ಇಂಡೀಸ್, ಫಿಜಿ, ಮಾರಿಷಸ್ ಮತ್ತು ಪೂರ್ವ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೂಲಿ ಕೆಲಸಕ್ಕಾಗಿ ಬಳಸಲಾಯಿತು. ಚೀನೀ ಕೆಲಸಗಾರರನ್ನು ಪೆಸಿಫಿಕ್ ಮಹಾಸಾಗರದಾದ್ಯಂತದ ಸ್ಥಳಗಳಲ್ಲಿ ಕೂಲಿಗಾರರಾಗಿ ಬಳಸಲಾಯಿತು. ಈ ವಲಸೆಯು ಇಡೀ ವಲಸಿಗರನ್ನು ಹೊಸ ಸ್ಥಳಗಳಲ್ಲಿ ನೆಲೆಸುವಂತೆ ಒತ್ತಾಯಿಸಲಿಲ್ಲ. ಆದರೆ ಸಾಕಷ್ಟು ಸಂಖ್ಯೆಯ ಜನರು ಅಲ್ಲಿಯೇ ನೆಲೆಸಿದರು.

ಎರಡನೆಯ ಮಹಾಯುದ್ಧದ ನಂತರ ಬಂಡವಾಳಶಾಹಿಯು ಹಿಂದೆಂದಿಗಿಂತಲೂ ಹೆಚ್ಚು ಏರು ಗತಿಯಲ್ಲಿದ್ದಾಗ, ಮೆಟ್ರೊಪಾಲಿಟನ್ ದೇಶಗಳಲ್ಲಿ ಜನಸಂಖ್ಯೆಯ ಸ್ವಾಭಾವಿಕ ಬೆಳವಣಿಗೆಯ ದರವು ವಾಸ್ತವಿಕವಾಗಿ ಶೂನ್ಯ ಮಟ್ಟದಲ್ಲಿದ್ದ ಅಂಶವು ಬಂಡವಾಳಶಾಹಿಯ ಏರು ಗತಿಯನ್ನು ನಿರ್ಬಂಧಿಸಿರಲಿಲ್ಲ. ಅದು ತನ್ನ ಹಿಂದಿನ ವಸಾಹತುಗಳಿಂದ ಮತ್ತು ಅವಲಂಬಿತ ದೇಶಗಳಿಂದ ಬಂದ ವಲಸೆಯನ್ನು ಅವಲಂಬಿಸಿತ್ತು. ಭಾರತೀಯ, ಪಾಕಿಸ್ತಾನಿ ಮತ್ತು ವೆಸ್ಟ್ ಇಂಡಿಯನ್ ಕಾರ್ಮಿಕರು ಬ್ರಿಟನ್‌ಗೆ ಹೋದರು. ಅಲ್ಜೀರಿಯನ್, ಟುನೀಷಿಯನ್ ಮತ್ತು ಮೊರಾಕನ್ ಕಾರ್ಮಿಕರು ಫ್ರಾನ್ಸ್ಗೆ ಹೋದರು. ಟರ್ಕಿಶ್ ಕಾರ್ಮಿಕರು ಜರ್ಮನಿಗೆ ಹೋದರು. ಕಾರ್ಮಿಕರ ಕೊರತೆಯಿಂದಾಗಿ ಬಂಡವಾಳಶಾಹಿಯ ಉತ್ಕರ್ಷವು ಕುಗ್ಗಲಿಲ್ಲ. ಮೆಟ್ರೊಪಾಲಿಟನ್ ದೇಶಗಳಲ್ಲಿ ಉದ್ಭವಿಸಬಹುದಾದ ಕಾರ್ಮಿಕರ ಕೊರತೆಯ ಪರಿಸ್ಥಿತಿಯನ್ನು ದೊಡ್ಡ ಪ್ರಮಾಣದ ವಲಸೆಯ ಮೂಲಕ ನಿಭಾಯಿಸಲಾಯಿತು. ಈ ವಲಸೆಯು ಖಂಡಿತವಾಗಿಯೂ ಮುಕ್ತವಾಗಿರಲಿಲ್ಲ. ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಟ್ಟಿತ್ತು. ಪಶ್ಚಿಮ ಯುರೋಪಿನ ಮೆಟ್ರೊಪಾಲಿಟನ್ ದೇಶಗಳಿಗೆ ಈಗಲೂ ಸಹ, ಪೂರ್ವ ಯುರೋಪಿಯನ್ ದೇಶಗಳಿಂದ ಬೃಹತ್ ವಲಸೆ ನಡೆಯುತ್ತಲೇ ಇದೆ. ಲಿಥುವೇನಿಯಾದಿಂದ ಹಿಡಿದು ಉಕ್ರೇನ್‌ವರೆಗೆ, ಅವುಗಳಲ್ಲಿ ಹೆಚ್ಚಿನವು, ಮೆಟ್ರೊಪಾಲಿಟನ್ ದೇಶಗಳ ಬಂಡವಾಳ ಸಂಗ್ರಹಣೆಯನ್ನು ಪೋಷಿಸಲು ಅಗ್ಗದ ಕಾರ್ಮಿಕರನ್ನು ಒದಗಿಸುತ್ತವೆ.

ಇದನ್ನು ಓದಿ: `ಗೆದ್ದರೆ ಆಡಲು ಬಂದಿದ್ದೆ, ಸೋತರೆ ನೋಡಲು ಬಂದಿದ್ದೆ’

ಬಂಡವಾಳ ಸಂಚಯವೇ ಕೇಂದ್ರ ವಿಷಯ

ಹೀಗೆ ಬಂಡವಾಳದ ಕ್ರೋಢೀಕರಣದ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಲಕ್ಷಾಂತರ ಜನರನ್ನು ಸಾವಿರಾರು ಮೈಲು ದೂರ ಸ್ಥಳಾಂತರಿಸಿದ ಬಂಡವಾಳವು ಪ್ರಪಂಚದ ನೆತ್ತಿಯ ಮೇಲೆ ಕುಳಿತುಕೊಳ್ಳುತ್ತದೆ. ಬೂರ್ಜ್ವಾ ಅರ್ಥಶಾಸ್ತ್ರವು ಪ್ರತಿಪಾದಿಸುವಂತೆ, ಬಂಡವಾಳದ ಸಂಚಯವು ಒಂದು ದೇಶದೊಳಗೆ ಲಭ್ಯವಿರುವ ಬಾಹ್ಯ ಕಾರ್ಮಿಕ ಶಕ್ತಿಯೊಂದಿಗೆ ನಮ್ರವಾಗಿ ಹೊಂದಿಕೊಳ್ಳುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಂಚಯವೇ ಒಂದು ಬಹಳ ಮುಖ್ಯವಾದ ಅಂಶವಾಗುತ್ತದೆ. ಬಾಡಿಗೆ ಸರಕಿನ ಪರಿಕಲ್ಪನೆಯು ಸೂಚಿಸುವಂತೆ ಬಂಡವಾಳ ಸಂಚಯವು ಕಾರ್ಮಿಕರ ಲಭ್ಯತೆಗೆ ಹೊಂದಿಕೊಳ್ಳುವುದರ ಬದಲು ಕಾರ್ಮಿಕರ ಲಭ್ಯತೆಯು ಬಂಡವಾಳ ಸಂಚಯಕ್ಕೆ ಹೊಂದಿಕೊಳ್ಳುತ್ತದೆ.

ಅಂತೆಯೇ, ಬಂಡವಾಳದ ಕ್ರೋಢೀಕರಣವು ಮೆಟ್ರೊಪಾಲಿಟನ್ ದೇಶಗಳ ಸೀಮಿತ ಭೂಪ್ರದೇಶದಲ್ಲಿ ಉತ್ಪತ್ತಿಯಾಗುವ ಕೇವಲ ಕಚ್ಚಾ ವಸ್ತುಗಳನ್ನು ಸಂಸ್ಕರಿಸುವ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಹತ್ತಿ ಜವಳಿ ಉದ್ಯಮದಲ್ಲಿ ಸಂಭವಿಸಿದ ಕೈಗಾರಿಕಾ ಕ್ರಾಂತಿಯೊಂದಿಗೆ ಕೈಗಾರಿಕಾ ಬಂಡವಾಳಶಾಹಿಯು ತನಗೆ ಸಲ್ಲಬೇಕಾದ ಗೌರವವನ್ನು ಪಡೆದುಕೊಂಡಿತು. ಆದರೆ, ಕೈಗಾರಿಕಾ ಕ್ರಾಂತಿ ನಡೆದ ಶೀತ ಸಮಶೀತೋಷ್ಣ ಪ್ರದೇಶಗಳು ಹತ್ತಿಯನ್ನು ಉತ್ಪಾದಿಸುವುದು ಎಂದಿಗೂ ಸಾಧ್ಯವಾಗಲಿಲ್ಲ. ಆದ್ದರಿಂದ, ಬಂಡವಾಳಶಾಹಿಯು ಆರಂಭದಿಂದಲೂ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಮೂಲಕ ಪಡೆದುಕೊಂಡ ಇತರ ಪ್ರದೇಶಗಳ ಕಚ್ಚಾ ವಸ್ತುಗಳ (ಮತ್ತು ಆಹಾರ ಧಾನ್ಯಗಳ) ಮೇಲೆಯೇ ಅವಲಂಬಿತವಾಗಿತ್ತು. ಬಂಡವಾಳ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಮೆಟ್ರೊಪಾಲಿಟನ್ ದೇಶಗಳ ಸೀಮಿತ ಭೂಭಾಗವು ಎಂದಿಗೂ ಕಳವಳಪಡುವ ವಿಷಯವಾಗಲಿಲ್ಲ.

ವಸಾಹತುಶಾಹಿ ಕಾಲದಲ್ಲಿ, ವಸಾಹತುಗಳಿಂದ ಸಾಕಷ್ಟು ಆಹಾರ ಧಾನ್ಯಗಳು ಮತ್ತು ಕಚ್ಚಾ ವಸ್ತುಗಳನ್ನು ಪುಕ್ಕಟೆಯಾಗಿ ಒಯ್ಯಲಾಗುತ್ತಿತ್ತು. ವಸಾಹತುಗಳ ವಿಮೋಚನೆಯ ನಂತರ, ಅಲ್ಲಿಂದ ಮೆಟ್ರೋಪಾಲಿಟನ್ ಕೇಂದ್ರಗಳಿಗೆ ಅನೇಕ ನೆಪಗಳ ಅಡಿಯಲ್ಲಿ ಮಿಗುತಾಯದ ಹರಿವು ಇನ್ನೂ ಮುಂದುವರೆಯುತ್ತಿದೆಯಾದರೂ, ಅಂತಹ ಏಕಪಕ್ಷೀಯ ವರ್ಗಾವಣೆಗಳ ಪ್ರಮಾಣವು ಕುಸಿದಿದೆ. ಆದರೆ ಆ ವೇಳೆಗಾಗಲೇ ಹಿಂದಿನ ವಸಾಹತುಗಳಲ್ಲಿ ಉತ್ಪಾದನೆಯಾದ ಕಚ್ಚಾವಸ್ತುಗಳ ಮತ್ತು ಆಹಾರ ಧಾನ್ಯಗಳ ಬೆಲೆಗಳನ್ನು ಎಷ್ಟೊಂದು ಅದುಮಿಡಲಾಗಿತ್ತೆಂದರೆ, ಅಂತಹ ಆಮದುಗಳಿಗೆ ಹಣ ಪಾವತಿಸುವುದು ಮೆಟ್ರೊಪಾಲಿಟನ್ ದೇಶಗಳಿಗೆ ಹೊರೆಯಾಗಲಿಲ್ಲ.

ಇದನ್ನು ಓದಿ: ಬಂಡವಾಳಶಾಹಿ ವ್ಯವಸ್ಥೆಯ ಇಬ್ಬಂದಿತನ ಮತ್ತು ಅಮಾನವೀಯತೆ

ವಾಸ್ತವವಾಗಿ ಇಲ್ಲಿ ನಾವು ರಿಕಾರ್ಡಿಯನ್ ವಾದದ ನೇರ ನಿರಾಕರಣೆಯನ್ನು ಕಾಣುತ್ತೇವೆ. ಸೀಮಿತ ಭೂಭಾಗವು ಒಂದು ಬಾಡಿಗೆ ಸರಕಾಗಿರುವುದರಿಂದ, ವ್ಯಾಪಾರದ ನಿಯಮಗಳು ಕೃಷಿ ಸರಕುಗಳ ಪರವಾಗಿ – ಈ ಸೀಮಿತ ಭೂ ಭಾಗದ ಉತ್ಪನ್ನಗಳ ಪರವಾಗಿ – ಮತ್ತು ತಯಾರಿಕಾ ಸರಕುಗಳ ವಿರುದ್ಧವಾಗಿ ಚಲಿಸುತ್ತವೆ ಎಂದು ರಿಕಾರ್ಡೊ ನಂಬಿದ್ದರು. ಆದರೂ, ಬಂಡವಾಳಶಾಹಿಯ ಇತಿಹಾಸದುದ್ದಕ್ಕೂ (ಯುದ್ಧಗಳಂತಹ ಅಸಾಧಾರಣ ಅವಧಿಗಳನ್ನು ಹೊರತುಪಡಿಸಿ), ವ್ಯಾಪಾರದ ನಿಯಮಗಳು ಪ್ರಾಥಮಿಕ ಸರಕುಗಳ ವಿರುದ್ಧವಾಗಿ ಮತ್ತು ತಯಾರಿಕಾ ಸರಕುಗಳ ಪರವಾಗಿ ಚಲಿಸುತ್ತಿರುವುದನ್ನು ನಾವು ಕಾಣುತ್ತೇವೆ. ಈ ವಿದ್ಯಮಾನವು ರಿಕಾರ್ಡೊ ಹೇಳಿದ ಅಂಶಗಳಿಗೆ ಬದಲಾಗಿ ಇತರ ಅಂಶಗಳು ಕಾರ್ಯಪ್ರವೃತ್ತವಾಗಿವೆ ಎಂಬುದನ್ನು ಸೂಚಿಸುತ್ತದೆ.

ಸ್ಥಳೀಯ ಜನರಿಂದ ಕೃಷಿ ಸರಕುಗಳ ಆಂತರಿಕ ಬಳಕೆಯನ್ನು ಹಿಂಡುವ ಮೂಲಕ ಅವುಗಳ ಉತ್ಪಾದನೆಯು (ಸೀಮಿತ ಭೂ ಭಾಗದಿಂದಾಗಿ) ನಿಗದಿತವಾಗಿದ್ದರೂ ಸಹ, ಮೆಟ್ರೋಪಾಲಿಟನ್ ದೇಶಗಳಿಗೆ ಅಗತ್ಯವಾದ ಆ ಸರಕುಗಳ ಸರಬರಾಜನ್ನು ಪಡೆಯಲು ಸಾಧ್ಯವಾದರೆ, ಉಷ್ಣವಲಯಗಳು ಮತ್ತು ಉಪ ಉಷ್ಣವಲಯಗಳಲ್ಲಿನ ಭೂಭಾಗದ ಸೀಮಿತತೆಯು ಪ್ರಸ್ತುತವಾಗುವುದಿಲ್ಲ. ಸಮಕಾಲೀನ ಸಾಮ್ರಾಜ್ಯಶಾಹಿಯು ಅಂತಹ ಹಿಂಡಿಕೆಯನ್ನು ಇನ್ನು ಮುಂದೆ ನೇರ ರಾಜಕೀಯ ನಿಯಂತ್ರಣದ ಮೂಲಕವಲ್ಲ, ಬದಲಿಗೆ, ಈ ದೇಶಗಳ ಮೇಲೆ ನವ ಉದಾರವಾದಿ ನೀತಿಗಳನ್ನು ಹೇರುವ ಮೂಲಕ ವಿಧಿಸುತ್ತದೆ. ಈ ನವ ಉದಾರವಾದಿ ನೀತಿಗಳು, ಯಾವುದೇ ಕೃಷಿ ಸರಕುಗಳಿಗೆ ಸ್ಥಳೀಯವಾಗಿ ಹೆಚ್ಚಿನ ಬೇಡಿಕೆ ಇದ್ದರೆ, “ಮಿತವ್ಯಯ” ನೀತಿಯನ್ನು ಹೇರುವ ಮೂಲಕ ಅಂತಹ ಸ್ಥಳೀಯ ಬಳಕೆಯನ್ನು ತಗ್ಗಿಸುವ ಒಂದು ಅಂತರ್ನಿರ್ಮಿತ ಕಾರ್ಯವಿಧಾನವನ್ನು ಹೊಂದಿವೆ. ಆದ್ದರಿಂದ, ಮೆಟ್ರೋಪಾಲಿಟನ್ ದೇಶಗಳಿಗೆ ಅಂತಹ ಸರಕುಗಳು ರಿಕಾರ್ಡೊ ಕಲ್ಪಿಸಿಕೊಂಡಿದ್ದಂತೆ “ಬಾಡಿಗೆ ಸರಕು”ಗಳಾಗುವುದು ನಿಲ್ಲುತ್ತದೆ. ಬಂಡವಾಳಶಾಹಿಗೆ ಯಾವುದೇ ಬಾಡಿಗೆ ಸರಕುಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವ ಒಂದು ಸಾಧನವೇ ಸಾಮ್ರಾಜ್ಯಶಾಹಿ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *