ವಸಂತರಾಜ ಎನ್.ಕೆ
ಶಾರುಖ್ ಖಾನ್ ಅವರ ಇತ್ತೀಚಿನ ಫಿಲಂ ‘ಪಠಾಣ್’ ಅನಿರೀಕ್ಷಿತ ಅಭೂತಪೂರ್ವ ಕಮರ್ಶಿಯಲ್ ಯಶಸ್ಸು ಕಂಡಿದೆ. ಕಳೆದ ಎರಡು ವರ್ಷಗಳಲ್ಲಿ ನಡೆಯುತ್ತಿರುವ #BoycottBollywood (ಬಾಯ್ಕಾಟ್ ಬಾಲಿವುಡ್) ಗ್ಯಾಂಗಿಗೆ ಇದು ದೊಡ್ಡ ಸೋಲು ಎನ್ನಲಾಗುತ್ತಿದೆ. ಇದು ನಿಜವೇ? ಇದನ್ನು ಎರಡು ಭಾಗಗಳಲ್ಲಿ ವಿಶ್ಲೇಷಿಸಲಾಗಿದೆ.
ಬಾಯ್ಕಾಟ್ ಬಾಲಿವುಡ್’ ಗ್ಯಾಂಗಿನ ಮೇಲೆ ಹೇಳಿದ ದಾಂಧಲೆಗಳ ಮತ್ತು ದೇಶದ ಒಟ್ಟಾರೆ ಗಂಭೀರ ಕೋಮುವಾದೀಕರಣದ ರಾಜಕೀಯ-ಸಾಂಸ್ಕೃತಿಕ ಹಿನ್ನೆಲೆಯಲ್ಲಿ ‘ಪಠಾಣ್’ ಯಶಸ್ಸು ಬಾಲಿವುಡ್’ ಗ್ಯಾಂಗಿನ ಮೇಲೊಂದು ಗಮನಾರ್ಹ ಪ್ರತಿದಾಳಿಯಂತೂ ಖಂಡಿತ. ಆದರೆ ಅದನ್ನು ಸೋಲು ಎನ್ನಬಹುದೇ? ಎಂಬ ಪ್ರಶ್ನೆಯನ್ನು ಭಾಗ 1 ಪರಿಶೀಲಿಸುತ್ತದೆ.
ಭಾಗ 2 ರಲ್ಲಿ ಫಿಲಂ ಗೆ ಸಂಬಂಧಿಸಿದಂತೆ ಸಂಘ ಗ್ಯಾಂಗಿನ ಸಾಂಸ್ಕೃತಿಕ ರಾಜಕಾರಣದ ಮೂರು ಕಾರ್ಯಾಚರಣೆಗಳ ನ್ನು ಗುರುತಿಸಿ, ಅವುಗಳ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಉತ್ತರಿಸಲು ಪ್ರಯತ್ನಿಸಲಾಗಿದೆ.
ಶಾರುಖ್ ಖಾನ್ ಅವರ ಇತ್ತೀಚಿನ ಫಿಲಂ ‘ಪಠಾಣ್’ ಅನಿರೀಕ್ಷಿತ ಅಭೂತಪೂರ್ವ ಕಮರ್ಶಿಯಲ್ ಯಶಸ್ಸು ಕಂಡಿದೆ. ಫಿಲಂ ನ ‘ಬೇಶರಂ ರಂಗ್’ ಹಾಡು ರಿಲೀಸ್ ಆಗುತ್ತಿದ್ದಂತೆ ಪಠಾಣ್’ ಫಿಲಂ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಬಾಯ್ಕಾಟ್ ಪ್ರಚಾರ ಆರಂಭವಾಗಿತ್ತು. ಹಾಢಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಅವಮಾನಿಸುವ ಅಶ್ಲೀಲ ನೃತ್ಯ ಮತ್ತು ಹಿರೋಯಿನ್ ದೀಪಿಕಾ ಪಡುಕೋಣೆ ಉಟ್ಟ ಕೇಸರಿ ಬಿಕಿನಿ ‘ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ಮಾಡಿದೆ’ ಎಂಬ ಕಾರಣವನ್ನು ಬಾಯ್ಕಾಟ್ ಗೆ ಕೊಡಲಾಗಿತ್ತು. ಬಾಯ್ಕಾಟ್ ಪ್ರಚಾರದ ಭರಾಟೆ ಎಷ್ಟು ಜೋರಾಗಿತ್ತಂದರೆ ‘ಪಠಾಣ್’ ಫಿಲಂ ತಂಡ ಸಾಮಾನ್ಯವಾಗಿ ಫಿಲಂ ನ ರಿಲೀಸ್ ಮೊದಲು ಮಾಮೂಲಿಯಾಗಿ ಮಾಡುವ ಮಾಧ್ಯಮ ಪ್ರಚಾರವನ್ನು ಕೈ ಬಿಟ್ಟಿತ್ತು. ಹಲವು ಕಡೆ ಫಿಲಂ ನ ಪ್ರದರ್ಶನ ಮಾಡಲು ಬಿಡುವುದಿಲ್ಲವೆಂಬ ಬೆದರಿಕೆ ಬಂತು. ಹಲವು ಬಿಜೆಪಿ ಮಂತ್ರಿಗಳು, ಶಾಸಕರು, ಇತರ ಸಂಘ ಪರಿವಾರದ ನಾಯಕರು ಫಿಲಂ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿ ಬಾಯ್ಕಾಟ್ ಗೆ ದನಿಗೂಡಿಸಿದರು, ಹಿಂಸಾತ್ಮಕ ಬೆದರಿಕೆಗೆ ಕುಮ್ಮಕ್ಕು ಕೊಟ್ಟರು. ಹಲವು ಕಡೆ ರಿಲೀಸ್ ದಿನ ಹಿಂಸಾತ್ಮಕ ದಾಳಿಯೂ ನಡೆಯಿತು. ಇಂತಹ ಪರಿಸ್ಥಿತಿಯಲ್ಲಿ ಜನವರಿ 25ರಂದು ರಿಲೀಸ್ ಆದ ಪಠಾಣ್’ ಯಶಸ್ಸು ಹಲವು ರೀತಿಗಲ್ಲಿ ಗಮನಾರ್ಹವೆಂದು ಹೇಳಲಾಗುತ್ತಿದೆ.
ಮೊದಲ ದಿನವೇ ‘ಪಠಾಣ್’ 100 ಕೋಟಿ ಸಂಪಾದಿಸಿ ಬಾಯ್ಕಾಟ್ ಗ್ಯಾಂಗಿನ ಬಾಯಿ ಮುಚ್ಚಿಸಿತ್ತು. 16ನೇ ದಿನದ ಹೊತ್ತಿಗೆ (ಫೆ.10) 887 ಕೋಟಿ ರೂ. ಸಂಪಾದಿಸಿದ್ದು 453 ಕೋಟಿ ರೂ. ಲಾಭ ಗಳಿಸಿದೆಯೆಂದು ವರದಿಯಾಗಿದೆ. ಅದು ಕೆಜಿಎಫ್ – ಚಾಪ್ಟರ್ 2 ಲಾಭವನ್ನು ಮೀರಿಸಿದೆ. ಮೊದಲ ಸ್ಥಾನದಲ್ಲಿರುವ ಬಾಹುಬಲಿ-2 ನ ಲಾಭ ಗಳಿಕೆಯನ್ನೂ ಮೀರಬಹುದು ಎಂಬ ಅಂದಾಜಿದೆ. ‘ಬಾಲಿವುಡ್ ನ ಫಿಲಂ ಗಳು ಕಳೆದ ಎರಡು ವರ್ಷಗಳಲ್ಲಿ ಸತತವಾಗಿ ಭಾರೀ ಯಶಸ್ಸು ಕಾಣದೆ ಹೆಚ್ಚಿನವು ಗೋತಾ ಹೊಡೆಯುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಇತರ ಪ್ರಾದೇಶಿಕ ಅಥವಾ ಬಾಲಿವುಡ್ ನ ಹೊರಗಿನ ಬಹುಭಾಷಿ ಫಿಲಂಗಳು ಯಶಸ್ಸು ಕಾಣುತ್ತಿದ್ದ ಹಿನ್ನೆಲೆಯಲ್ಲಿ ಬಾಲಿವುಡ್ ಕತೆ ಮುಗಿಯಿತು ಎಂದು ನಂಬಿಕೆ ಹಬ್ಬಲಾರಂಭಿಸಿತ್ತು. ‘ಪಠಾಣ್’ ಯಶಸ್ಸು ಈ ನಂಬಿಕೆಗೆ ಸಹ ಏಟು ಕೊಟ್ಟಿದೆ. ಕಳೆದ ಎರಡು ವರ್ಷಗಳಲ್ಲಿ ನಡೆಯುತ್ತಿರುವ #BoycottBollywood (ಬಾಯ್ಕಾಟ್ ಬಾಲಿವುಡ್) ಗ್ಯಾಂಗಿಗೆ ಇದು ದೊಡ್ಡ ಸೋಲು ಎನ್ನಲಾಗುತ್ತಿದೆ. ಈ ಬಾಯ್ಕಾಟ್ ಗ್ಯಾಂಗ್ ಹಿಂದೆ ಸಂಘ ಪರಿವಾರದ ಸಂಘಟಿತ ಶಕ್ತಿ, ಬಿಜೆಪಿ ಸರಕಾರಗಳ ಬಲ, ಒತ್ತಾಸೆ ಕುಮ್ಮಕ್ಕುಗಳು ಇರುವುದರಿಂದ ಅದು ಅವರ ಸೋಲು ಸಹ ಎನ್ನಲಾಗುತ್ತಿದೆ. ಇದು ನಿಜವೇ?
ಇದನ್ನು ಓದಿ: ಭಾರತದಲ್ಲಿ ಶಿಕ್ಷಣವೆಂಬುದು ಬಡವರಿಗೆ ಗಗನ ಕುಸುಮವಾಗುತ್ತಿದೆಯೇ?
ಬಾಲಿವುಡ್ ನ ಮೂರು ಖಾನ್ ಗಳಲ್ಲಿ ನಂಬರ್ 1 ಆದ ಶಾರುಖ್ ಖಾನ್ ಬೆನ್ನ ಹಿಂದೆ ‘ಬಾಯ್ಕಾಟ್ ಗ್ಯಾಂಗ್ ಬಹಳ ಹಿಂದಿನಿಂದಲೇ ಬಿದ್ದಿತ್ತು. 2010ರಲ್ಲಿ ಐಪಿಲ್ ನಲ್ಲಿ ಪಾಕ್ ಆಟಗಾರರಿಗೂ ಅವಕಾಶ ಕೊಡಬೇಕು ಎಂಬ ಅವರ ಹೇಳಿಕೆಗೆ ಪ್ರತಿಯಾಗಿ, ಶಿವಸೇನೆ ಅವರ ‘ಮೈ ನೇಮ್ ಈಸ್ ಖಾನ್’ ಫಿಲಂ ಬಾಯ್ಕಾಟ್ ಗೆ ಕರೆ ನೀಡಿತ್ತು. 2015ರಲ್ಲಿ ದೇಶದಲ್ಲಿ ಬೆಳೆಯುತ್ತಿರುವ ‘ಅಸಹನೆ’ ವಿರುದ್ಧ ಶಾರುಖ್ ದನಿಯೆತ್ತಿದಾಗ ಮತ್ತೆ ಬಾಯ್ಕಾಟ್ ಗ್ಯಾಂಗ್ ಸಕ್ರಿಯವಾಗಿತ್ತು. ಶಾರುಖ್ ಖಾನ್ ಮಗ ಆರ್ಯನ್ ಖಾನ್ ನನ್ನು ‘ಡ್ರಗ್ ಪಾರ್ಟಿ’ಯಲ್ಲಿ ಭಾಗವಹಿಸಿದ್ದ ಮತ್ತು ಡ್ರಗ್ಸ್ ಇದ್ದ ಆಪಾದನೆಯ ಮೇಲೆ ಯಾವುದೇ ಪುರಾವೆ ಇಲ್ಲದಿದ್ದರೂ ಬಂಧಿಸಿ ಒಂದು ತಿಂಗಳ ಕಾಲ ಜೈಲಿನಲ್ಲಿ ಇಡಲಾಯ್ತು. ಇದು ಶಾರುಖ್ ಖಾನ್ ಗೆ ಕಿರುಕುಳ ಕೊಡುವುದರಲ್ಲಿ ಬಾಯ್ಕಾಟ್ ಗ್ಯಾಂಗ್ ಮತ್ತು ಬಿಜೆಪಿ ಸರಕಾರಗಳ ಶ್ರಮವಿಭಜನೆ ಮತ್ತು ಸಂಯೋಜನೆಯನ್ನು ತೋರಿಸಿತು.
ಇದೇ ರೀತಿಯ ‘ಟ್ರೀಟ್ ಮೆಂಟ’ನ್ನು ಆಮೀರ್ ಖಾನ್ ಗೂ ಕೊಡಲಾಗಿತ್ತು. ಅವರ ‘ಪಿಕೆ’ ಮತ್ತು ಇತ್ತೀಚಿನ ‘ಲಾಲ್ ಸಿಂಗ್ ಚಡ್ಡಾ’ ನ ಹಿಂದೆಯೂ ಬಾಯ್ಕಾಟ್ ಗ್ಯಾಂಗ್ ಬಿದ್ದಿತ್ತು. ಸಂಜಯ್ ಲೀಲಾ ಬನ್ಸಾಲಿ ಅವರ ‘ಪದ್ಮಾವತ್’ ವಿರುದ್ಧ 2016 ರಲ್ಲಿ ಆರಂಭವಾದ ಬಾಯ್ಕಾಟ್ ಚಳುವಳಿ ಕಳೆದ ಎರಡು ವರ್ಷಗಳಲ್ಲಿ ತಾರಕಕ್ಕೇರಿವೆ. ಗಂಗೂಬಾಯಿ ಕಾಥಿಯಾವಾಡಿ, ಲಿಪ್ ಸ್ಟಿಕ್ ಅಂಡರ್ ಬುರ್ಖಾ, ಶಂಶೇರಾ, ಸಡಕ್ 2, ವಿಕ್ರಂ ವೇದಾ, ಬ್ರಹ್ಮಾಸ್ತ್ರ, ಇವೆಲ್ಲ ಯಾವ ರೀತಿಯ ಫಿಲಂಗಳು ಬಾಯ್ಕಾಟ್ ಗೆ ‘ಅರ್ಹವಾಗುತ್ತವೆ’ ಎಂಬುದನ್ನು ಸ್ಪಷ್ಟ ಪಡಿಸಿದ್ದವು. 2022 ಅಂತೂ ಬಾಯ್ಕಾಟ್ ಬಾಲಿವುಡ್ ಗ್ಯಾಂಗಿಗೆ ಹಬ್ಬದ ವರ್ಷವಾಗಿತ್ತು. ಈ ಎಲ್ಲ ಬಾಯ್ಕಾಟ್ ಗಳನ್ನು ಒಟ್ಟಿಗೆ ತೆಗೆದುಕೊಂಡು ನೋಡಿದರೆ ಯಾವುದೇ ಫಿಲಂ ನ್ನು ಬಾಯ್ಕಾಟ್ ಗೆ ‘ಅರ್ಹವಾಗಿಸುವ’ ಕೆಲವು ಸಾಮಾನ್ಯ ಲಕ್ಷಣಗಳು ಕಂಡು ಬರುತ್ತವೆ. ಅವುಗಳಲ್ಲಿ ಹಲವು ‘ಪಠಾಣ್’ ನಲ್ಲಿ ಇದ್ದೂ ಶಾರುಖ್ ಖಾನ್ ಬಾಯ್ಕಾಟ್ ಗ್ಯಾಂಗಿನ ವಿಶೇಷ ಗುರಿಯಾಗಿದ್ದೂ ಅದು ಯಶಸ್ಸು ಕಂಡಿದ್ದು ಗಮನಾರ್ಹವಂತೂ ನಿಜ.
ಇದನ್ನು ಓದಿ: ಮೂರ್ಖರು-ಮತಾಂಧರು ಬೊಗಳುತ್ತಾರೆ-ಕಚ್ಚುವುದಿಲ್ಲ: ನಟ ಪ್ರಕಾಶ್ ರೈ
* ಹಿಂದೂಗಳು ಮಾತ್ರ ದೇಶಭಕ್ತರಾಗಲು ಸಾಧ್ಯ. ಮುಸ್ಲಿಮರು ದೇಶಭಕ್ತರಾಗಲು ಸಾಧ್ಯವಿಲ್ಲ, ಮಾತ್ರವಲ್ಲ ದೇಶದ್ರೋಹಿಗಳಾಗಿರುತ್ತಾರೆ ಎಂಬುದು ಬಾಯ್ಕಾಟ್ ಗ್ಯಾಂಗಿನ ಸಾಮಾನ್ಯ ಸೂತ್ರ. ಇದನ್ನು ಎಲ್ಲ ಹಿಂದೂಗಳ ಸಾಮಾನ್ಯ ತಿಳಿವಳಿಕೆ ಮಾಡಲು ಪ್ರಯತ್ನಿಸುತ್ತಿತ್ತು. ‘ಪಠಾಣ್’ ನ ಮುಖ್ಯ ಪಾತ್ರ ಮುಸ್ಲಿಂ ಅಪ್ರತಿಮ ದೇಶಭಕ್ತ.. ಅವನು ನೆರೆಯ ‘ವೈರಿ ದೇಶ’ದ ವಿರುದ್ಧ ದೇಶದ ಹಿತಾಸಕ್ತಿಗಾಗಿ ಹೋರಾಡುತ್ತಾನೆ. ಇದು ಬಾಯ್ಕಾಟ್ ಗ್ಯಾಂಗಿಗೆ ತೀರಾ ಅಪಥ್ಯ. ಆದರೆ ಫಿಲಂ ನೋಡುಗರು ಅದನ್ನು ಸಂತೋಷದಿಂದಲೇ ಸ್ವೀಕರಿಸಿ ಬಾಯ್ಕಾಟ್ ಗ್ಯಾಂಗಿನ ಸೂತ್ರವನ್ನು ತಿರಸ್ಕರಿಸಲಿಲ್ಲವೇ ?
* ಯಾವುದೇ ಫಿಲಂ ನ ಮುಖ್ಯ ಪಾತ್ರ ಮುಸ್ಲಿಂ ಆಗಿರಬಾರದು. ಅಥವಾ ಮುಸ್ಲಿಂ ಸಮುದಾಯದ ಸಮಸ್ಯೆಗಳನ್ನು ತೋರಿಸುವಂಥದು ಆಗಿರಬಾರದು. ‘ಪಠಾಣ್’ ಮುಖ್ಯ ಪಾತ್ರ ಮುಸ್ಲಿಂ. ಇಡೀ ಫಿಲಂ ಅವನ ಸುತ್ತ ಗಿರಕಿ ಹೊಡೆಯುತ್ತದೆ. ಮಾತ್ರವಲ್ಲದೆ ಆ ಪಾತ್ರ ವಹಿಸಿದ ಮುಖ್ಯ ಕಲಾವಿದನೂ ಮುಸ್ಲಿಂ. ಬಾಯ್ಕಾಟ್ ಗ್ಯಾಂಗಿಗೆ ಆಕ್ರೋಶಕ್ಕೆ ಕಾರಣವಾಗುವ ಈ ಸೂತ್ರವನ್ನೂ ಫಿಲಂ ನೋಡುಗರು ತಿಪ್ಪೆಗೆಸೆದಿಲ್ಲವೇ?
ಬಾಯ್ಕಾಟ್ ಗ್ಯಾಂಗ್ ಕಳೆದ ಕೆಲವು ವರ್ಷಗಳಲ್ಲಿ ಕೆಲವು ರೀತಿಯ ಫಿಲಂ ಗಳು, ಕಲಾವಿದರ ವಿರುದ್ಧ ಮಾತ್ರವಲ್ಲ, ಇಡೀ ಬಾಲಿವುಡ್ ವಿರುದ್ಧ ತಿರುಗಿ ಬಿದ್ದಿತ್ತು. ಈ ಕೆಳಗಿನ ತನ್ನ ಕೆಲವು ಅನಿಸಿಕೆಗಳನ್ನು ಎಲ್ಲರ ತಿಳಿವಳಿಕೆ ಮಾಡಲು ಪ್ರಯತ್ನಿಸುತ್ತಿತ್ತು. ಇಲ್ಲೂ ಮುಸ್ಲಿಮರು ಗುರಿಯಾಗಿದ್ದರೂ ಇಡೀ ಬಾಲಿವುಡ್ ನ್ನು ಗುರಿ ಮಾಡಲು ಆರಂಭಿಸಿತ್ತು. ಸುಶಾಂತ್ ಸಿಂಗ್ ಸಾವಿಗೆ ರಿಯಾ ಚಕ್ರವರ್ತಿ ಕಾರಣವೆಂಬ ದೊಡ್ಡ ಮಾಧ್ಯಮ ಪ್ರಚಾರದ ಹಿಂದೆ ಇಡೀ ಬಾಲಿವುಡ್ ಡ್ರಗ್ಸ್, ಕುಡಿತ, ಅನೈತಿಕ ವ್ಯವಹಾರಗಳ ಕೂಪವೆಂದು ಚಿತ್ರಿಸುವ ಪ್ರಯತ್ನವಿತ್ತು. ಆದ್ದರಿಂದ ಕೆಲವು ಫಿಲಂಗಳ, ಕಲಾವಿದರ ಬಾಯ್ಕಾಟ್ ಕ್ರಮೇಣ ‘ಬಾಯ್ಕಾಟ್ ಬಾಲಿವುಡ್’ ಆಗಿಬಿಟ್ಟಿತ್ತು. ಈ ಕೆಳಗಿನ ಅನಿಸಿಕೆಗಳಿಗೂ ‘ಪಠಾಣ್’ ಬಲವಾದ ಏಟು ಕೊಟ್ಟಿದೆ.
ಇದನ್ನು ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ತೀರ್ಪುಗಾರ ನಾದವ್ ಲ್ಯಾಪಿಡ್ ಬೆನ್ನಿಗೆ ನಿಂತ ಮೂವರು ತೀರ್ಪುಗಾರರು
* ಬಾಲಿವುಡ್ ನಲ್ಲಿ ಮುಸ್ಲಿಮ್ ಕಲಾವಿದರ, ನಿರ್ದೇಶಕರ, ಬರಹಗಾರರ, ಹಾಡುಗಳ, ಉರ್ದು ಭಾಷೆಯ ಅಧಿಪತ್ಯವಿದೆ. ಅವರು ಫಿಲಂ ಉದ್ಯಮದಲ್ಲಿನ ‘ಹಿಂದೂ’ಗಳನ್ನು ದಮನಿಸುತ್ತಾರೆ. ‘ಭಾಷಾ-ಜಿಹಾದ್’ ಮಾಡುತ್ತಾರೆ. ಅವರು ಫಿಲಂ ನಲ್ಲಿ ಹಿಂದೂ-ವಿರೋಧಿ ಅಜೆಂಡಾಗಳು ಇರುತ್ತವೆ. ಆದ್ದರಿಂದ ಇಂತಹವರ ಅಧಿಪತ್ಯವನ್ನು ಸೋಲಿಸಲು ಅವರ ಫಿಲಂಗಳನ್ನು ಸೋಲಿಸಬೇಕು. ಬಾಯ್ಕಾಟ್ ಬಾಲಿವುಡ್ ಗ್ಯಾಂಗಿನ ಪ್ರಕಾರ ಇದು ಶಾರುಖ್ ಖಾನ್ ಮತ್ತು ‘ಪಠಾಣ್’ ಗೆ ತೀರಾ ಒಪ್ಪುವಂತಹ ಸಹಜವಾದ ತಿಳಿವಳಿಕೆ. ಅದನ್ನೂ ‘ಪಠಾಣ್’ ನೋಡುಗರು ತಿರಸ್ಕರಿಸಿದ್ದಾರೆ.
* ಇಂತಹ ಮುಸ್ಲಿಂ ಕಲಾವಿದರ ಫಿಲಂ ಗಳು ಮಾತ್ರವಲ್ಲ, ವೈಯಕ್ತಿಕವಾಗಿಯೂ ಅವರು ದ್ವೇಷಕ್ಕೆ ಅರ್ಹರು. ಶಾರುಖ್ ಖಾನ್ ವಿರುದ್ಧ ಕಳೆದ ಕೆಲವು ವರ್ಷಗಳ ಪ್ರಚಾರದಿಂದ ಆತನ ವಿರುದ್ಧ ದ್ವೇಷ ಬಲವಾಗಿ ಬೇರೂರಿದೆ ಎಂಬ ಬಾಯ್ಕಾಟ್ ಗ್ಯಾಂಗಿನ ಹಿಗ್ಗಿಗೆ ‘ಪಠಾಣ್’ ನೋಡುಗರು ತಣ್ಣೀರೆರಚಿದ್ದಾರೆ.
ಇದರರ್ಥ ಪಠಾಣ್ ಒಳ್ಳೆಯ ಚಿತ್ರವೆಂದೇನಲ್ಲ. ಇದು ಬಾಲಿವುಡ್ ನ ಸಾಮಾನ್ಯ ‘ದೇಶಭಕ್ತ’ ಫಿಲಂ ನ ದಾಟಿಯಲ್ಲಿಯೇ ಇದೆ. ಇಲ್ಲಿನ ದೇಶಪ್ರೇಮ ಜನಪರ ಪ್ರಗತಿಪರ ಮೌಲ್ಯಗಳನ್ನು ಒಳಗೊಂಡಿಲ್ಲ. ಬದಲಾಗಿ ನೆರೆಯ ದೇಶದ ವಿರುದ್ಧ ದ್ವೇಷದ ಮೇಲೆ ಆಧಾರಿತವಾದದ್ದು. ನೆರೆಯ ದೇಶದ ಪಿತೂರಿಯನ್ನು ಸೋಲಿಸುವ ಮುಖ್ಯ ಪಾತ್ರವಾದ ಬೇಹುಗಾರನ ಸಾಹಸ-ಥ್ರಿಲ್ಲರ್.
ಇದನ್ನು ಓದಿ: ‘ದಿ ಕಾಶ್ಮೀರಿ ಫೈಲ್ಸ್’, ‘ಕಾಂತಾರ’, ಕನ್ನಡ ಸಿನಿಮಾಗಳು, ಬರಹಗಾರರ ನಿಷ್ಕ್ರಿಯತೆ ಇತ್ಯಾದಿ
ಒಂದು ಫಿಲಂ ನ ಅಥವಾ ಮುಖ್ಯ ಕಲಾವಿದ/ನಿರ್ದೇಶಕನ ನಿಜವಾದ ಜನಪ್ರಿಯತೆಯನ್ನು ಅದರ ಕಮರ್ಶಿಯಲ್ ಯಶಸ್ಸಿನಿಂದ ಮಾತ್ರ ಅಳೆಯಬಹುದೇ? ಬಾಯ್ಕಾಟ್ ಪ್ರಚಾರ ಮಾಧ್ಯಮ, ಸಾಮಾಜಿಕ ಮಾಧ್ಯಮ ಗಳಲ್ಲಿ ಅಲೆಗಳನ್ನು ಎಬ್ಬಿಸಿದರೂ ಎಷ್ಟರ ಮಟ್ಟಿಗೆ ಜನ ಫಿಲಂ ನೋಡುವುದರ ಮೇಲೆ ಅಥವಾ ಅದರ ಕುರಿತು ಧೋರಣೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ಖಚಿತವಾಗಿ ಹೇಳಲು ಸಾಕಷ್ಟು ನಿಖರ ಮಾಹಿತಿಯಿಲ್ಲ ಎನ್ನುತ್ತಾರೆ ಫಿಲಂ ಉದ್ಯಮದಲ್ಲಿ ತೊಡಗಿರುವವರೂ, ಅದರ ವಿಶ್ಲೇಷಕರೂ. ‘ಪದ್ಮಾವತ್’, ‘ಬ್ರಹ್ಮಾಸ್ತ್ರ’, ‘ಪಠಾಣ್’ ಗಳು ಅದರ ವಿರುದ್ಧ ಬಾಯ್ಕಾಟ್ ಚಳುವಳಿಯನ್ನು ಧಿಕ್ಕರಿಸಿ ಯಶಸ್ಸು ಗಳಿಸಿವೆಯೇ? ಅಥವಾ ಬಾಯ್ಕಾಟ್ ಅಪಪ್ರಚಾರವೇ ಅವುಗಳಿಗೆ ಭಾರೀ ಪ್ರಚಾರದ ಸಾಧನವಾದವೇ ? ಅಥವಾ ಬಾಯ್ಕಾಟ್ ನ ಯಾವುದೇ ಪರಿಣಾಮವಿಲ್ಲದೆ ಅವುಗಳ ಜನಪ್ರಿಯ ಅಂಶಗಳಿಂದಾಗಿ ಯಶಸ್ಸು ಕಂಡವೇ? ಅದೇ ರೀತಿ ಲಾಲ್ ಸಿಂಗ್ ಚಡ್ಡಾ, ಲಿಪ್ ಸ್ಟಿಕ್ ಅಂಡರ್ ಬುರ್ಖಾ, ಶಂಶೇರಾ ಗಳು ಸೋತದ್ದು ಅಥವಾ ಅಷ್ಟೇನು ಕಮರ್ಶಿಯಲ್ ಯಶಸ್ಸು ಕಾಣದ್ದು ಬಾಯ್ಕಾಟ್ ಅಪಪ್ರಚಾರದಿಂದಾಗಿಯೇ? ಅಥವಾ ಅವುಗಳ ಜನಪ್ರಿಯ ಅಂಶಗಳ ಕೊರತೆ ಕಾರಣವೇ? ಇವ್ಯಾವುದಕ್ಕೂ ಖಚಿತವಾದ ಉತ್ತರಗಳಿಲ್ಲ. ಹಾಗೆ ನೋಡಿದರೆ ಲಾಲ್ ಸಿಂಗ್ ಚಡ್ಡಾ, ಲಿಪ್ ಸ್ಟಿಕ್ ಅಂಡರ್ ಬುರ್ಖಾ,- ಇವು, ‘ಪದ್ಮಾವತ್’, ಪಠಾಣ್ ಗಳಗಿಂತ ಉತ್ತಮ ಫಿಲಂಗಳು.
ಆದರೂ ಬಾಯ್ಕಾಟ್ ಬಾಲಿವುಡ್’ ಗ್ಯಾಂಗಿನ ಮೇಲೆ ಹೇಳಿದ ದಾಂಧಲೆಗಳ ಮತ್ತು ದೇಶದ ಒಟ್ಟಾರೆ ಗಂಭೀರ ಕೋಮುವಾದೀಕರಣದ ರಾಜಕೀಯ-ಸಾಂಸ್ಕೃತಿಕ ಹಿನ್ನೆಲೆಯಲ್ಲಿ ‘ಪಠಾಣ್’ ಯಶಸ್ಸು ಬಾಲಿವುಡ್’ ಗ್ಯಾಂಗಿನ ಮೇಲೊಂದು ಗಮನಾರ್ಹ ಪ್ರತಿದಾಳಿಯಂತೂ ಖಂಡಿತ. ಆದರೆ ಅದನ್ನು ಬಾಯ್ಕಾಟ್ ಬಾಲಿವುಡ್’ ಗ್ಯಾಂಗಿನ ಸೋಲು ಎನ್ನಬಹುದೇ? ಅಲ್ಲವಾದರೆ, ಇದರರ್ಥ ಬಾಯ್ಕಾಟ್ ಬಾಲಿವುಡ್’ ಗ್ಯಾಂಗ್ ಯಾವುದೇ ವ್ಯತಿರಿಕ್ತ ಸಾಂಸ್ಕೃತಿಕ ಪರಿಣಾಮ ಬೀರುತ್ತಿಲ್ಲ, ಅಷ್ಟರ ಮಟ್ಟಿಗೆ ಅಪಾಯಕಾರಿಯಲ್ಲ ಎನ್ನಬಹುದೇ?
(ಭಾಗ-2 ರಲ್ಲಿ ಮುಂದುವರೆಯುವುದು)
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ