ಬಿಡುಗಡೆ ಸಿದ್ದಗೊಂಡ ʻಕುತ್ಲೂರು ಕಥನʼ

ಲೇಖಕರು ಸ್ವತಹ ಕುತ್ಲೂರಿಗೆ ಹೋಗಿ ಅಲ್ಲಿನ ಆದಿವಾಸಿಗಳ ಜೊತೆ ಒಡನಾಟದಲ್ಲಿ ಇದ್ದುಕೊಂಡು ಅಲ್ಲಿನ ಸಂಕಷ್ಟವನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಅಳಂಬದ ರಾಮಯ್ಯ ಮಲೆಕುಡಿಯ, ಬಾಬು ಮಲೆಕುಡಿಯ, ದುಗ್ಗಣ್ಣ ಮಲೆಕುಡಿಯ, ಪೂವಪ್ಪ ಮಲೆಕುಡಿಯ ಸೇರಿದಂತೆ ಹಲವರು ಅನುಭವಿಸಿದ ನೋವುಗಳನ್ನು ಸವಿಸ್ತಾರವಾಗಿ ಓದುಗರ ಮುಂದಿರಿಸಿದ್ದಾರೆ. ವಸಂತ ಮಲೆಕುಡಿಯ ಮತ್ತು ಸುಂದರಿ ಮಲೆಕುಡಿಯ ಎಂಬ ನಕ್ಸಲರ ಬಗ್ಗೆ ಮಾರ್ಮಿಕವಾದ ಬರಹಗಳು ಈ ಪುಸ್ತಕದಲ್ಲಿವೆ. ಕಥನದಲ್ಲಿ ವಿಠಲ ಮಲೆಕುಡಿಯನ ಮೇಲಿನ ಕೇಸು, ಪೊಲೀಸರ ಹುನ್ನಾರಗಳು, ಕೋರ್ಟ್ ಕಲಾಪಗಳನ್ನು ಲೇಖಕರು ಕಣ್ಣಾರೆ ಕಂಡು ದಾಖಲೆ ಸಮೇತ ಬರೆದಿದ್ದಾರೆ.

ಪತ್ರಕರ್ತ ನವೀನ್‌ ಸೂರಿಂಜೆ ಬರೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಎಂಬ ಗ್ರಾಮದಲ್ಲಿ ನೆಲೆಸಿರುವ ಆದಿವಾಸಿ ಬುಡಕಟ್ಟು ಜನಾಂಗವಾದ ಮಲೆಕುಡಿಯರ ಜೀವನಗಾಥೆ ʼಕುತ್ಲೂರು ಕಥನʼ ಜನವರಿ 26ರಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕವನ್ನು ಅಹರ್ನಿಶಿ ಪ್ರಕಾಶನ ಹೊರತಂದಿದೆ.

ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾಂತ ಚಿಂತಕ ಹರ್ಷ ಮಂದರ್‌ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುನೀರ್‌ ಕಾಟಿಪಳ್ಳ, ದಿನೇಶ್‌ ಹೆಗ್ಡೆ ಉಳೆಪಾಡಿ, ವಿಠಲ ಮಲೆಕುಡಿಯ, ಅಕ್ಷತಾ ಹುಂಚದ ಕಟ್ಟೆ, ನವೀನ್‌ ಸೂರಿಂಜೆ ಭಾಗಿಯಾಗಲಿದ್ದಾರೆ.  ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಬೆಳಗೆಗ 11 ಕ್ಕೆ ಕಾರ್ಯಕ್ರಮ ನಡೆಯಲಿದೆ.

ಪುಸ್ತಕದ ಮುನ್ನುಡಿಯಲ್ಲಿ, ನಿವೃತ್ತ ನ್ಯಾಯಾಧೀಶರಾದ ವಸಂತ ಮುಳಸಾವಳಗಿ ಈ ರೀತಿ ಬರೆದಿದ್ದಾರೆ.

ಕುತ್ಲೂರು ಕಥನ ಯಾವುದೋ ಕಾಲ್ಪನಿಕ ಕಥೆಯಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಕುತ್ಲೂರು ಗ್ರಾಮ ಮತ್ತು ಅಲ್ಲಿನ ಪ್ರಕೃತಿಯ ಮಡಿಲಲ್ಲಿ ಶಾಂತಿ ನೆಮ್ಮದಿಯಿಂದ ಬದುಕಿರುವ ಆದಿವಾಸಿ ಬುಡಕಟ್ಟು ಜನಾಂಗವಾದ ಮಲೆಕುಡಿಯರ ಜೀವನಗಾಥೆಯಾಗಿದೆ.

ಕುತ್ಲೂರಿನ ಮಲೆಕುಡಿಯರು ತಮ್ಮ ಜೀವನ ನಿರ್ವಹಣೆಗಾಗಿ ಕಾಡುತ್ಪತ್ತಿಗಳಾದ ಜೇನು ತುಪ್ಪ, ಮಾವು, ಗೇರು ಬೀಜ, ದಾಲ್ಚಿನಿ, ಕಾಳುಮೆಣಸು, ಇವುಗಳನ್ನು ಮಾರಿ ಬಂದ ಹಣದಿಂದ ತಮ್ಮ ದೈನಂದಿನ ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತಾ ತಮ್ಮ ಪಾಡಿಗೆ ಜೀವನ ಸಾಗಿಸುತ್ತಿದ್ದರು.

ಸರಕಾರದವರು ಕುದುರೇಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಜಾರಿ ಮಾಡುವುದಕ್ಕಾಗಿ ಶತಶತಮಾನಗಳಿಂದ ಕಾಡಿನಲ್ಲಿ ವಾಸವಿದ್ದ ಮಲೆಕುಡಿಯರನ್ನು ಒಕ್ಕಲೆಬ್ಬಿಸುವ ಹುನ್ನಾರವನ್ನು ಮಾಡುತ್ತಾರೆ. ಯೋಜನೆಯ ಮುಂದುವರೆದ ಭಾಗವಾಗಿ ಕಾಡುತ್ಪತ್ತಿಗಳು ಮಲೆಕುಡಿಯರಿಗೆ ಸಿಗದಂತೆ ಮಾಡಲಾಗುತ್ತದೆ. ಆ ಕಾಡುತ್ಪತ್ತಿಗಳನ್ನು ಕಾನೂನುಬಾಹಿರವಾಗಿ ಸಲೀಂ ಮತ್ತು ಪ್ರಭಾಕರ್ ಅನ್ನುವ ವ್ಯಾಪಾರಿಗಳಿಗೆ ಸಂಗ್ರಹಿಸುವ ಹಕ್ಕನ್ನು ನೀಡಲಾಗುತ್ತದೆ. ಇದರಿಂದ ನೊಂದ ಮಲೆಕುಡಿಯರು ಸಂಘಟಿತರಾಗಿ ಮೌನ ಕ್ರಾಂತಿಯನ್ನು ಮಾಡಿ ಕಾಡುತ್ಪತ್ತಿಯನ್ನು ತಾವೇ ಸಂಘಟಿತವಾಗಿ ಸಂಗ್ರಹಿಸಿ ಅಕ್ರಮ ವ್ಯಾಪಾರಿಗಳಿಗೆ ಕಾಡುತ್ಪತ್ತಿ ಸಿಗದಂತೆ ಮಾಡುತ್ತಾರೆ. ಹೀಗೆ ನಿಧಾನಕ್ಕೆ ಸಂಘರ್ಷ ಪ್ರಾರಂಭವಾದಾಗ ಆದಿವಾಸಿ ಮಲೆಕುಡಿಯರನ್ನು ‘ನಕ್ಸಲರು’ ಎಂದು ಬಿಂಬಿಸಿ ಸರಕಾರವು ಸುಳ್ಳು ಮೊಕದ್ದಮೆಗಳನ್ನು ಹಾಕಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ“ನೇತ್ರಾವತಿಯಲ್ಲಿ ನೆತ್ತರು” ಕರಾವಳಿಯ ಕರಾಳತೆಯ ಅನಾವರಣ

ಕುತ್ಲೂರಿನ ಏಕೈಕ ಶಿಕ್ಷಿತ ಯುವಕ ವಿಠಲ ಮಲೆಕುಡಿಯನು ಆದಿವಾಸಿಗಳ ಜಾಗೃತಿ ಮಾಡುವುದನ್ನು ಕುಮ್ಮಕ್ಕು ಎಂದು ಬಗೆದು ಅತನ ವಿರುದ್ಧ ನಕ್ಸಲ್ ಎಂಬ ಸುಳ್ಳು ಆರೋಪದಲ್ಲಿ ದೂರು ದಾಖಲಿಸಲಾಗುತ್ತದೆ. ಆ ಬಳಿಕ ವಕೀಲರು, ಬುದ್ದಿಜೀವಿಗಳು, ಪತ್ರಕರ್ತರ ಸಹಾಯದಿಂದ ವಿಠಲ ನಿರಪರಾಧಿಯಾಗಿ ಹೊರಬರುತ್ತಾನೆ.

ಲೇಖಕರು ಸ್ವತಹ ಕುತ್ಲೂರಿಗೆ ಹೋಗಿ ಅಲ್ಲಿನ ಆದಿವಾಸಿಗಳ ಜೊತೆ ಒಡನಾಟದಲ್ಲಿ ಇದ್ದುಕೊಂಡು ಅಲ್ಲಿನ ಸಂಕಷ್ಟವನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಅಳಂಬದ ರಾಮಯ್ಯ ಮಲೆಕುಡಿಯ, ಬಾಬು ಮಲೆಕುಡಿಯ, ದುಗ್ಗಣ್ಣ ಮಲೆಕುಡಿಯ, ಪೂವಪ್ಪ ಮಲೆಕುಡಿಯ ಸೇರಿದಂತೆ ಹಲವರು ಅನುಭವಿಸಿದ ನೋವುಗಳನ್ನು ಸವಿಸ್ತಾರವಾಗಿ ಓದುಗರ ಮುಂದಿರಿಸಿದ್ದಾರೆ. ವಸಂತ ಮಲೆಕುಡಿಯ ಮತ್ತು ಸುಂದರಿ ಮಲೆಕುಡಿಯ ಎಂಬ ನಕ್ಸಲರ ಬಗ್ಗೆ ಮಾರ್ಮಿಕವಾದ ಬರಹಗಳು ಈ ಪುಸ್ತಕದಲ್ಲಿವೆ. ಕಥನದಲ್ಲಿ ವಿಠಲ ಮಲೆಕುಡಿಯನ ಮೇಲಿನ ಕೇಸು, ಪೊಲೀಸರ ಹುನ್ನಾರಗಳು, ಕೋರ್ಟ್ ಕಲಾಪಗಳನ್ನು ಲೇಖಕರು ಕಣ್ಣಾರೆ ಕಂಡು ದಾಖಲೆ ಸಮೇತ ಬರೆದಿದ್ದಾರೆ.

ಮಡೆಮಡೆಸ್ನಾನ ಎಂಬುದು ಆದಿವಾಸಿಗಳನ್ನು, ಹಿಂದುಳಿದ ವರ್ಗಗಳನ್ನು ಅವಮಾನಿಸುವ ಸಂಪ್ರದಾಯವಾಗಿದ್ದರೂ, ಆದಿವಾಸಿಗಳೇ ಮಡೆಮಡೆಸ್ನಾನದ ಪರವಾಗಿ ನ್ಯಾಯಾಲಯದಲ್ಲಿ ಹೇಳಿಕೆ ಕೊಡುವುದು ಮುಗ್ದ ಜನರ ಶೋಷಣೆಯ ಪ್ರತೀಕವಲ್ಲದೆ ಇನ್ನೇನು ? ಈ ಸನ್ನಿವೇಶವು ಮಂಡಲ್ ವರದಿಯ ವಿರುದ್ಧ ಒಬಿಸಿಗಳೇ ಚಳವಳಿ ಮಾಡಿದ್ದು ನೆನಪಾಗುತ್ತದೆ.

ಇದನ್ನೂ ಓದಿಕಮ್ಯೂನಿಸ್ಟರಿಗೆ ಸ್ವಾರ್ಥ ಇಲ್ಲ-ಶ್ರೀರಾಮರೆಡ್ಡಿ ಜನಪರ ಬದ್ದತೆಯುಳ್ಳ ನಾಯಕರಾಗಿದ್ದರು: ಸಿದ್ದರಾಮಯ್ಯ

ಒಬ್ಬ ವಿಠಲ ಮಲೆಕುಡಿಯ ವಿದ್ಯಾವಂತನಾಗಿ ಹೊರ ಜಗತ್ತಿಗೆ ಬಂದು ಸಮಾನ ಮನಸ್ಕರ ಸಂಪರ್ಕ ಹೊಂದಿ, ಆ ಮೂಲಕ ತಾನೊಬ್ಬ ನಿರಪರಾಧಿ ಎಂದು ಸಾಭೀತುಪಡಿಸಿದ್ದಲ್ಲದೆ ತನ್ನ ಜನಾಂಗವನ್ನೇ ಪ್ರಭುತ್ವದ ದೌರ್ಜನ್ಯದಿಂದ ಬಿಡುಗಡೆಗೊಳಿಸುತ್ತಾನೆ. ಇದು ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಅದಕ್ಕಾಗಿಯೇ ಮಹಾತ್ಮ ಫುಲೆ ಹಾಗೂ ಡಾ ಬಾಬಾ ಸಾಹೇಬ್ ಅಂಬೇಡ್ಕರ್ರವರುಗಳು ಶಿಕ್ಷಣಕ್ಕೆ ಯಾಕೆ ಇಷ್ಟೊಂದು ಮಹತ್ವ ಕೊಟ್ಟರು ಅನ್ನುವುದನ್ನು ನಾವು ತಿಳಿಯಬೇಕು.

ಗೆಳೆಯ ನವೀನ್ ಸೂರಿಂಜೆಯವರು ಒಂದು ನೈಜ ಕಥನವನ್ನು ದಾಖಲಿಸಿ ತಮ್ಮ ಬದ್ಧತೆ ಮೆರೆದಿದ್ದಾರೆ. ಅದಕ್ಕಾಗಿ ಅವರು ಅಭಿನಂದನಾರ್ಹರು. ಇಂತಹ ಅನೇಕ ಅನುಭವಗಳನ್ನು, ಸಮುದಾಯದ ಕಥನಗಳನ್ನು ಅವರು ಗ್ರಂಥರೂಪದಲ್ಲಿ ತರಲಿ ಎಂದು ಹಾರೈಕೆಗಳು. ಇದೊಂದು ಎಲ್ಲರೂ ಓದಲೇಬೇಕಾದ ಕೃತಿಯಾಗಿದ್ದು, ಸಾರ್ವಕಾಲಿಕ ಮಹತ್ವವನ್ನು ಪಡೆದಿದೆ.

Donate Janashakthi Media

Leave a Reply

Your email address will not be published. Required fields are marked *