ಮಹಾರಾಷ್ಟ್ರದ ಸಾರ್ವಜನಿಕ ವಲಯದ ವಿದ್ಯುತ್ ಕಂಪನಿಗಳ 86 ಸಾವಿರ ಕಾರ್ಮಿಕರು ಮತ್ತು ನೌಕರರು ಖಾಸಗೀಕರಣದ ವಿರುದ್ಧ 72 ಗಂಟೆಗಳ ಮುಷ್ಕರವನ್ನು ಜನವರಿ 4 ರಿಂದ ಆರಂಭಿಸಿದ್ದಾರೆ. ಮಹಾರಾಷ್ಟ್ರ ಸರಕಾರ ಈ ಮುಷ್ಕರವನ್ನು ಮುರಿಯಲು ಕರಾಳ ಎಂಇಎಸ್ಎಂ ಕಾಯ್ದೆಯನ್ನು ಬಳಸುತ್ತಿದೆ. ಆದರೂ ಮೊದಲ ದಿನ ಮುಷ್ಕರ 100% ಯಶಸ್ವಿಯಾಗಿದೆ ಎಂದು ರಾಜ್ಯದ ವಿದ್ಯುತ್ ವಲಯದಲ್ಲಿನ 30ಕ್ಕೂ ಹೆಚ್ಚು ನೌಕರರ ಸಂಘಗಳ ಐಕ್ಯ ರಂಗ ಹೇಳಿದೆ. ಕಾರ್ಮಿಕರು ಮತ್ತು ಇಂಜಿನಿಯರುಗಳಲ್ಲದೆ 46 ಸಾವಿರ ಕಾಂಟ್ರಾಕ್ಟ್ ಕಾರ್ಮಿಕರು ಕೂಡ ಈ ಮುಷ್ಕರದಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: ಸರ್ಕಾರ ಉಚಿತ ವಿದ್ಯುತ್ ಬದಲು ಮೀಟರ್ ಅಳವಡಿಸಿ ರೈತರನ್ನು ಸುಲಿಗೆ ಮಾಡುತ್ತಿದೆ: ಮೊಹಮದ್ ಸಮೀಉಲ್ಲಾ
ನಿರ್ದಿಷ್ಟವಾಗಿ ಅದಾನಿ ಗುಂಪಿನ ಕಂಪನಿಗಳಿಗೆ ನವೀ ಮುಂಬೈಯ ಭಾಂಡುಪ್ ಪ್ರದೇಶದಲ್ಲಿ ವಿತರಣೆಯ ಕ್ಷೇತ್ರದಲ್ಲಿ ಪ್ರವೇಶಕ್ಕೆ ಅವಕಾಶ ಕೊಡಲು ನಡೆಯುತ್ತಿರುವ ಕಸರತ್ತುಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿಂದ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ.
ವಿದ್ಯುತ್ ವಿತರಣೆಗೆ ಅನುಮತಿ ಕೋರಿರುವ ಅದಾನಿ ಕಂಪನಿಯ ಅರ್ಜಿ ತಪ್ಪುದಾರಿಗೆಳೆಯುವ, ಅಪೂರ್ಣವಾದ, ಹಲವು ರೀತಿಗಳಲ್ಲಿ ತಪ್ಪಾದ, ದುರಾಶಯಗಳಿಂದ ಕೂಡಿದ ಮಾಹಿತಿಗಳನ್ನು ಒಳಗೊಂಡಿವೆ. ಈ ಗುಂಪು ತೀವ್ರ ಹಣಕಾಸು -ಸಾಲ ಬಿಕ್ಕಟ್ಟಿಗೆ ಒಳಗಾಗಿದೆ, ಅಲ್ಲದೆ ಈ ಕಂಪನಿಗೆ ವಿದ್ಯುತ್ ವಿತರಣೆಯಲ್ಲಿ ಯಾವುದೇ ಅನುಭವವಿಲ್ಲ. ಆದ್ದರಿಂದ , ವಿದ್ಯುತ್ ಕಾಯ್ದೆ 2013ರ ಅಡಿಯಲ್ಲಿ ಪರವಾನಿಗೆ ನೀಡಿಕೆಗೆ ಅರ್ಹವಾಗಿಲ್ಲ ಎಂದು ರಾಜ್ಯ ದ ವಿದ್ಯುತ್ ವಲಯದ ಕಾರ್ಮಿಕರು ಮತ್ತು ಇಂಜಿನಿಯರುಗಳು ಕಳೆದ ಎರಡು ತಿಂಗಳಿಂದ ಇದರ ವಿರುದ್ಧ ಮತಪ್ರದರ್ಶನ , ರ್ಯಾಲಿಗಳನ್ನು ನಡೆಸಿದ್ದಾರೆ.
ಇದನ್ನು ಓದಿ: ವಿದ್ಯುತ್ ಮಸೂದೆ: ಜನತೆಯನ್ನು ಮತ್ತಷ್ಟು ದುಸ್ತರಗೊಳಿಸುವ ಹುನ್ನಾರ
ಇತ್ತೀಚೆಗೆ ನಾಗಪುರದಲ್ಲಿ ರಾಜ್ಯ ವಿಧಾನ ಮಂಡಲದ ಅಧಿವೇಶನದ ವೇಳೆಯಲ್ಲಿ 35000 ಕ್ಕಿಂತ ಹೆಚ್ಚು ನೌಕರರು ವಿಧಾನಸಭಾ ಚಲೋದಲ್ಲಿ ಭಾಗವಹಿಸಿದ್ದರು. ಜನವರಿ 2ರಂದು 10000 ನೌಕರರು ಥಾಣೆಯಲ್ಲಿ ಮತಪ್ರದರ್ಶ ನಡೆಸಿದರು. ಇವೆಲ್ಲವನ್ನೂ ಸರಕಾರ ಕಡೆಗಣಿಸಿರುವುದರಿಂದ ನಿರ್ವಾಹವಿಲ್ಲದೆ ಈ ವಲಯದ ಸುಮಾರು 30 ಕಾರ್ಮಿಕ/ನೌಕರ ಸಂಘಗಳು ಒಟ್ಟುಕೂಢಿ ಜನವರಿ 4ರಿಂದ ಮುಷ್ಕರಕ್ಕೆ ಇಳಿದಿದ್ದಾರೆ. ಆದ್ದರಿಂದ ಈ ಮುಷ್ಕರದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಮಹಾರಾಷ್ಟ್ರದ ಆಡಳಿತವೇ ಹೊಣೆ ಎಂಧು ಮಹಾರಾಷ್ಟ್ರದ ವಿದ್ಯುತ್ ಕಾರ್ಮಿಕರ ಮುಷ್ಕರವನ್ನು ಬೆಂಬಲಿಸುತ್ತ ಸಿಐಟಿಯು ಹೇಳಿದೆ. ಎಂಇಎಸ್ಎಂ ಕಾಯ್ದೆಯ ಬಳಕೆಯನ್ನು ಕೈಬಿಡಬೇಕು ಎಂದೂ ಆದು ಆಗ್ರಹಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ