ಭೀಮಾ ಕೊರೆಗಾಂವ್‍ ಹಿಂಸಾಚಾರದಲ್ಲಿ ಎಲ್ಗಾರ್ ಪರಿಷದ್‍ ಪಾತ್ರವಿರಲಿಲ್ಲ ಎಂದು ಈಗ ಹಿರಿಯ ಪೋಲೀಸ್‍ ಅಧಿಕಾರಿಯೇ ಒಪ್ಪಿಕೊಂಡಿದ್ದಾರೆ

ಐದು ವರ್ಷಗಳ ಹಿಂದೆ, ಜನವರಿ 1, 2018 ರಂದು ಭೀಮಾ ಕೋರೆಗಾಂವ್‌ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೂ ಪುಣೆಯ ಎಲ್ಗಾರ್ ಪರಿಷತ್ತಿಗೂ ಯಾವುದೇ ಸಂಬಂಧವಿಲ್ಲ. ಹೀಗೆಂದು ಮಹಾರಾಷ್ಟ್ರ ಸರ್ಕಾರ ರಚಿಸಿರುವ ಎನ್.ಜೆ.ಪಟೇಲ್ ನ್ಯಾಯಾಂಗ ಆಯೋಗದ ಮುಂದೆ ಅಂದಿನ ತನಿಖಾಧಿಕಾರಿಗಳಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ಗಣೇಶ್ ಮೋರೆ ಹೇಳಿರುವುದಾಗಿ ವರದಿಯಾಗಿದೆ. ಅಂದರೆ ಈಗ ಆರೋಪಿಗಳೆಂದು ನಾಲ್ಕು ವರ್ಷಗಳು ಕಳೆದರೂ ಇನ್ನೂ ವಿಚಾರಣೆಯೇ ಆರಂಭವಾಗದೆ, ಜಾಮೀನಿಗೂ ಹೆಜ್ಜೆ-ಹೆಜ್ಜೆಯಲ್ಲೂ ಕಷ್ಟಪಡಬೇಕಾಗಿರುವ 16 ಮಂದಿ ಮಾನವ ಹಕ್ಕು ಹೋರಾಟಗಾರರು ಭೀಮಾ ಕೊರೆಗಾಂವ್ ಸಮರದ 200ನೇ ವಾರ್ಷಿಕೋತ್ಸವದಂದು ಸೇರಿದ್ದ ಜನರ ಎದುರು ‘ಉದ್ರೇಕಕಾರಿ’ ಭಾಷಣಗಳನ್ನು ಮಾಡಿದ್ದರಿಂದಾಗಿ ಹಿಂಸಾಚಾರ ನಡೆಯಿತು ಎಂದು ಮೊದಲಿಗೆ ಪುಣೆ ಪೋಲೀಸರು, ನಂತರ ಕೇಂದ್ರ ಸರಕಾರದ ಅಡಿಯಲ್ಲಿರುವ ಎನ್‌ಐಎ ಆರೋಪಿಸಿರುವುದರಲ್ಲಿ ಹುರುಳಿಲ್ಲ ಎಂದು ಬಯಲಾದಂತಾಗಿದೆ.

ಇದನ್ನು ಓದಿ: ವಿರೋಧಿಗಳನ್ನು ಗುರಿಯಾಗಿಸುವ ದುಷ್ಟ ಕಾರ್ಯಾಚರಣೆ – ಸರಕಾರ ಮತ್ತು ಎನ್‍ಐಎ ಮೇಲೆ ಕಟು ದೋಷಾರೋಪಣೆ: ಸಿಪಿಐ(ಎಂ)

ಡಿಸೆಂಬರ್ 31, 2017ರಂದು ಪುಣೆಯ ಶನಿವಾರವಾಡಾದಲ್ಲಿ ನಡೆದ ಎಲ್ಗಾರ್ ಪರಿಷದ್‍ನ ಸಮಾರಂಭದ ಫಲಿತಾಂಶವಾಗಿ ಮರುದಿನ ಗಲಭೆಗಳು ನಡೆದವು ಎಂದು ತೋರಿಸುವ ಯಾವುದೇ ಮಾಹಿತಿಯಾಗಲೀ, ಸಾಕ್ಷ್ಯವಾಗಲೀ ನನಗೆ ಕಂಡುಬಂದಿಲ್ಲ” ಎಂದು ಹಿಂಸಾಚಾರವನ್ನು ಕಂಡಿರುವ ಸಾಕ್ಷಿಯೊಬ್ಬರ ವಕೀಲರ ಪ್ರಶ್ನೆಗೆ ಉತ್ತರಿಸುತ್ತ ಗಣೇಶ್‍ ಮೋರೆ  ಹೇಳಿದ್ದಾರೆ. ಅವರು ಈಗ ಸೇವೆಯಿಂದ ನಿವೃತ್ತರಾಗಿದ್ದಾರೆ.

ಈ  ಮೊದಲೇ ಈ ಇಡೀ ಪ್ರಕರಣವೇ ಒಂದು ಸುಳ್ಳು ಸೃಷ್ಟಿಯಿರಬಹುದೇ ಎಂಬ ಸಂದೇಹ ಈ 16 ಜನರಲ್ಲಿ ಮೂವರ ಲ್ಯಾಪ್‌ಟಾಪ್‌ಗಳಲ್ಲಿ ದುಷ್ಟ ತಂತ್ರಾಂಶ ನೆಡಲಾಗಿತ್ತು ಎಂದು ಫೊರೆನ್ಸಿಕ್ ಪರೀಕ್ಷೆಯಿಂದ ತಿಳಿದು ಬಂದಿದೆಯೆಂಬ ವರದಿ ಬಂದಾಗಿನಿಂದ ಎದ್ದಿತ್ತು. ಈ 16 ಮಂದಿಯಲ್ಲಿ ಮೂವರು ಬಹಳ ಅಡೆ-ತಡೆಗಳನ್ನು ಎದುರಿಸಿ ಜಾಮೀನು ಪಡೆದಿದ್ದಾರೆ. ಬಂಧನದಲ್ಲಿ ಅಮಾನುಷ ವರ್ತನೆಗಳನ್ನು ಎದುರಿಸಬೇಕಾಗಿ ಬಂದ 80 ವರ್ಷ ವಯಸ್ಸಿನ ಸಮಾಜ ಸೇವಕ ಫಾದರ್ ಸ್ಟಾನ್ ಸ್ವಾಮಿ ಜೈಲಿನಲ್ಲಿಯೇ ಕೊನೆಯುಸಿರೆಳೆದರು. ಉಳಿದ 12 ಮಂದಿ ಈಗಲೂ ಜೈಲಿನಲ್ಲಿದ್ದಾರೆ.

ಇದನ್ನು ಓದಿ: ಭೀಮಾ ಕೋರೆಗಾಂವ್ ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಿ: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಈಗ ಪ್ರಭುತ್ವದ ಪ್ರತಿನಿಧಿಯಾಗಿರುವವರೇ ಒಬ್ಬರು ಆ ದಿನದ ಹಿಂಸಾಚಾರದಲ್ಲಿ ಎಲ್ಗಾರ್‍ ಪರಿಷದ್ ನ ಪಾತ್ರ ಇರಲಿಲ್ಲ  ಎಂದು ಒಪ್ಪಿಕೊಂಡಿರುವ   ಹಿನ್ನೆಲೆಯಲ್ಲಿ ಇವರೆಲ್ಲರನ್ನೂ ಈಗ  ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿನ ಎಲ್ಲಾ ಆರೋಪಗಳನ್ನು ಯಾವುದೇ ವಿಳಂಬವಿಲ್ಲದೆ ಹಿಂಪಡೆಯಬೇಕು ಎಂದು ಸಿಪಿಐ(ಎಂ) ಮಹಾರಾಷ್ಟ್ರ ರಾಜ್ಯ ಸಮಿತಿ ಆಗ್ರಹಿಸಿದೆ. ಇವರೆಲ್ಲರೂ ಸರಕಾರದ ಒಂದು ಅಕ್ರಮ ಮತ್ತು ಕಾನೂನುಬಾಹಿರ ಕ್ರಮಕ್ಕೆ ಬಲಿಪಶುವಾಗಿದ್ದಾರೆ ಎಂದು ಆಗಿನಿಂದಲೂ ಹಲವರು ಹೇಳುತ್ತ ಬಂದಿರುವುದು ನಿಜ ಎಂದು ಸಾಬೀತಾಗುವಂತೆ ಕಾಣುತ್ತಿದೆ.  ತನಿಖಾ ಆಯೋಗದ ಮುಂದೆ ಆಗಿನ ತನಿಖಾಧಿಕಾರಿಯ ಈ ಹೇಳಿಕೆಯು ಅಸಂವಿಧಾನಿಕ ಬಂಧನದಲ್ಲಿ ತಮ್ಮ ಜೀವನದ ಅನಿರ್ದಿಷ್ಟ ಅವಧಿಯನ್ನು ಕಳೆಯುತ್ತಿರುವ ಅಮಾಯಕರ ಜೀವನ ಮತ್ತು ಯೋಗಕ್ಷೇಮಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಸಿಪಿಐ(ಎಂ) ಹೇಳಿದೆ. ಆಗ ಗೃಹ ಖಾತೆಯನ್ನು ದೇವೇಂದ್ರ ಫಡ್ನವೀಸ್ ಹೊಂದಿದ್ದರು ಮತ್ತು ಬಿಜೆಪಿಯ ಉನ್ನತ ಮಟ್ಟದ ನಾಯಕರ ಮಾರ್ಗದರ್ಶನದಲ್ಲಿ ನಡೆದ ಸಂಪೂರ್ಣ ಭ್ರಷ್ಟ ಮತ್ತು ಅನೈತಿಕ ರಾಜಕೀಯ ಪಿತೂರಿಯ ನಂತರ ಈಗ ರಚನೆಯಾಗಿರುವ ಹೊಸ ಸರಕಾರದಲ್ಲೂ ಅವರು ಮತ್ತೆ ಗೃಹಮಂತ್ರಿಗಳಾಗಿದ್ದಾರೆ ಎಂದು ನೆನಪಿಸಿರುವ ಅದು, ಆರೆಸ್ಸೆಸ್ ಮತ್ತು ಬಿಜೆಪಿಯ ಸಿನಿಕ ಮತ್ತು ದುಷ್ಟ ತಂತ್ರಗಳಿಗೆ ಭೀಮಾ ಕೋರೆಗಾಂವ್ ಪ್ರಕರಣದ ಮುಗ್ಧ ಹದಿನಾರು ಮಂದಿ ಭಾರೀ ಬೆಲೆ ತೆರುತ್ತಿದ್ದಾರೆ. ಫಾದರ್ ಸ್ಟಾನ್ ಸ್ವಾಮಿ ಜೈಲಿನಲ್ಲೇ ಕೊನೆಯುಸಿರೆಳೆಯಬೇಕಾಗಿ ಬಂದಂತಹ ಪರಿಸ್ಥಿತಿ ಉಳಿದವರಿಗೂ ಬರಬೇಕು ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರ ಬಯಸುತ್ತಿದೆಯೇ ಎಂದು ಸಿಪಿಐ(ಎಂ) ಕೇಳಿದೆ.

ಇದನ್ನು ಓದಿ: ಭೀಮಾ ಕೋರೆಗಾಂವ್ ಮತ್ತು ಎಲ್ಗಾರ್ ಪರಿಷತ್ ಪ್ರಕರಣ ಆರೋಪಿ ಸ್ಟಾನ್ ಸ್ವಾಮಿ ನಿಧನ

ಈ ಅಮಾಯಕ ನಾಗರಿಕರು ಮತ್ತು ಅವರ ಕುಟುಂಬದ ಸದಸ್ಯರು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ಅನೈತಿಕ ಮತ್ತು ಅಮಾನವೀಯ ವರ್ತನೆಯಿಂದಾಗಿ ಅಪಾರವಾದ ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆ. ಅವರನ್ನು ಕಾನೂನುಬಾಹಿರ ಮತ್ತು ಅಕ್ರಮ ಸೆರೆವಾಸಕ್ಕೆ ಗುರಿಪಡಿಸಿದಕ್ಕಾಗಿ ಅವರೆಲ್ಲರಿಗೂ ಆರ್ಥಿಕವಾಗಿ ಸಮರ್ಪಕ ಪರಿಹಾರವನ್ನು ನೀಡಬೇಕು ಎಂದೂ ಸಿಪಿಐ(ಎಂ)ನ ಮಹಾರಾಷ್ಟ್ರ ರಾಜ್ಯ ಸಮಿತಿ ಆಗ್ರಹಿಸಿದೆ.

ವಾಸ್ತವವಾಗಿ ಜನವರಿ1 ರ ಹಿಂಸಾಚಾರಕ್ಕೆ ಕಾರಣ  ಸಮಸ್ತ ಹಿಂದೂ ಅಘಾಡಿಯ ಮುಖಂಡ ಕೋಮುವಾದಿ ಸಂಘಟನೆಗಳ ಮುಖಂಡರಾದ ಮಿಲಿಂದ್‍ ಎಕ್ಬೋಟೆ ಮತ್ತು ಶಿವ ಪ್ರತಿಷ್ಠಾನ್‍ ಹಿಂದುಸ್ಥಾನ್‍ನ ಸಂಭಾಜಿ ಭಿಡೆ  ಎಂದು ದಲಿತರ ವಿರುದ್ಧ ನಡೆದ ಈ ಗಲಭೆಗಳಿಗೆ ಸಂಬಂಧಪಟ್ಟಂತೆ ಹಾಕಿದ ಎಫ್‍ಐಆರ್ ಗಳಲ್ಲಿ ಆರೋಪಿಸಲಾಗಿದೆ.

ಈ ತನಿಖೆಯಲ್ಲಿ ಆಯೋಗದ ಮುಂದೆ ಹಾಜರಾದ ಇನ್ನೊಬ್ಬ ಹಿರಿಯ ಪೋಲಿಸ್‍ ಅಧಿಕಾರಿ, ಐಪಿಎಸ್‍ ಹುದ್ದೆಯ ರವೀಂದ್ರ ಸೆಂಗಾವಕರ್ ಆದಿನ ದಲಿತರ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣ ಗಳು ಉದ್ರೇಕಕಾರಿ ಯಾಗಿದ್ದವು ಎಂದು ಆಗಲೇ ಗೊತ್ತಾಗಿತ್ತು ಎಂದು ಹೇಳಿದರೂ, ಪೋಲೀಸರು ಆಗಲೇ ಈ ಭಾಷಣಗಳ ವಿರುದ್ಧ ಎಫ್‍ಐಆರ್ ದಾಖಲಿಸಲಿಲ್ಲ ಎಂಬುದನ್ನು ಒಪ್ಪಿಕೊಂಡರು. ಅಂದರೆ  ಆ ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ಯು.ಎ.ಪಿ.ಎ. ಅಡಿಯಲ್ಲಿ ಪ್ರಕರಣ ದಾಖಲಿಸಲಿಕ್ಕಾಗಿಯೇ ನಂತರ ಎಫ್‍ಐಆರ್‍ ಹಾಕಲಾಯಿತು ಎಂದು ಹಲವರು ವ್ಯಕ್ತಪಡಿಸುತ್ತ ಬಂದಿರುವ ಅನುಮಾನವೂ ಬಲಗೊಂಡಂತಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ತನಿಖಾ ಆಯೋಗದ ಮುಂದೆ ಈ ಹಿರಿಯ ಪೋಲೀಸ್‍ ಅಧಿಕಾರಿಗಳ ಹೇಳಿಕೆಗಳು ಬಹಳ ಮಹತ್ವಪೂರ್ಣ ಎಂದು ಕಾನೂನುತಜ್ಞರು ಹೇಳುತ್ತಿದ್ದಾರೆ. ತನಿಖಾ ಆಯೋಗದ ಮುಂದೆ ಹೇಳಿರುವುದು  ತಂತಾನೇ ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷ್ಯವಾಗುವುದಿಲ್ಲ. ಆದರೂ ಇವನ್ನು ಆರೋಪಿಗಳ ರಕ್ಷಣೆಗೆ ಮುಂದೆ ಬಳಸಿಕೊಳ್ಳಬಹುದು ಎಂದು ಒಬ್ಬ ನ್ಯಾಯವಾದಿ ಹೇಳಿದರೆ, ಇನ್ನೊಬ್ಬರು ತನಿಖಾ ಆಯೋಗ ಕೂಡಲೇ ಮೋರೆಯವರ ಹೇಳಿಕೆಯನ್ನು ಮುಂಬೈ ಹೈಕೋರ್ಟಿನ ಅವಗಾಹನೆಗೆ  ಕಳಿಸಬೇಕು, ತನಿಖೆಯಲ್ಲಿ ಭಾಗವಹಿಸಿದ್ದ ಒಬ್ಬ ಹಿರಿಯ ಪೋಲೀಸ್‍ ಅಧಿಕಾರಿ ಆರೋಪಿಗಳ ಪಾತ್ರ ಇರಲಿಲ್ಲ ಎಂದು ಒಪ್ಪಿಕೊಂಡಿರುವುದು ಈ ಪ್ರಕರಣದ ಮೂಲಕ್ಕೇ ಏಟು ಕೊಡುತ್ತದೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *