ಧಾರವಾಡ: ಕಿತ್ತೂರು ನಾಡಿನ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ದವಾಗಿದ್ದು, ಕಿತ್ತೂರು ಕೋಟೆಯ ಪುನರ್ ನಿರ್ಮಾಣ, ದಾಖಲೆ ಸಂರಕ್ಷಣೆಗೆ ಸರಕಾರ ಅಗತ್ಯ ಕ್ರಮವಹಿಸಿದೆ. ಧಾರವಾಡ ರಂಗಾಯಣ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕದ ಮೂಲಕ ಇತಿಹಾಸವನ್ನು ಮರು ಸೃಷ್ಟಿಸಿ, ಅಭಿಮಾನ ಮೂಡಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಅವರು ಶನಿವಾರ ಸಂಜೆ ಕೆಸಿಡಿ ಆವರಣದಲ್ಲಿ ಧಾರವಾಡ ರಂಗಾಯಣ ಹಾಗೂ ಜಿಲ್ಲಾಡಳಿತ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕವನ್ನು ಉದ್ಘಾಟಿಸಿ, ಮಾತನಾಡಿದರು. ವೀರರಾಣಿ ಕಿತ್ತೂರು ಚನ್ನಮ್ಮಳನ್ನು ನೆನೆಸಿದರೆ ರೋಮಾಂಚನವಾಗುತ್ತದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ ಮೊದಲು ಸ್ವಾತಂತ್ರ್ಯದ ಕಹಳೆ ಮೊಳಗಿಸಿ, ಬ್ರಿಟಿಷರ ವಿರುದ್ದ ಹೊರಾಡಿದಳು. ಸಣ್ಣ ಸೈನ್ಯ ಕಟ್ಟಿಕೊಂಡು ಕೆಚ್ಚೆದೆಯಿಂದ ಪರಕೀಯರ ವಿರುದ್ಧ ಯುದ್ದ ಸಾರಿದ್ದಳು. ಇಂತಹ ನಾಟಕವನ್ನು ಪರವಿನಾಯ್ಕರ್ ಅವರು ಶ್ರದ್ದೆಯಿಂದ ರೂಪಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ರಮೇಶ ಪರವಿನಾಯ್ಕರ ಅವರ ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದರು.
ಧಾರವಾಡ ರಂಗಾಯಣದಿಂದ ಈ ನಾಟಕವನ್ನು ರಾಜ್ಯದಾದ್ಯಂತ ಪ್ರದರ್ಶನ ಆಯೋಜಿಸಿ, ವೀರರಾಣಿ ಕಿತ್ತೂರು ಚನ್ನಮ್ಮಳ ಇತಿಹಾಸವನ್ನು ಪಸರಿಸುವಂತೆ ಅವರು ತಿಳಿಸಿದರು.
ವೀರರಾಣಿ ಕಿತ್ತೂರು ಚನ್ನಮ್ಮ ಮೆಗಾ ನಾಟಕಕ್ಕೆ ಈಗ ಸರಕಾರ ನೀಡಿರುವ ಅನುದಾನವನ್ನು ದ್ವಿಗುಣಗೊಳಿಸಿ, ಎರಡುಪಟ್ಟು ಅನುದಾನ ನೀಡಲು ನಿರ್ಧಿರಿಸಲಾಗಿದೆ. ಈ ಮೂಲಕ ಮೆಗಾ ನಾಟಕ ಪ್ರದರ್ಶನವನ್ನು ಪ್ರೋತ್ಸಾಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಅವರು ಮಾತನಾಡಿ, ಮರಾಠಿಯಲ್ಲಿ ಪ್ರದರ್ಶನವಾದ ಜನತಾರಾಜಾ ನಾಟಕದ ಮೂಲಕ ಶಿವಾಜಿ ಮಹಾರಾಜರ ಸಾಹಸಗಾಥೆಯನ್ನು ತೆರೆಗೆ ತರಲಾಗಿತ್ತು. ಅದಕ್ಕೆ ಪೂರಕವಾಗಿ ಕನ್ನಡ ನಾಡಿನ ಹೆಮ್ಮೆಯ ನಾಯಕಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮನ ಕುರಿತು ಮೆಗಾ ನಾಟಕ ಧಾರವಾಡ ರಂಗಾಯಣಿಂದ ರೂಪುಗೊಂಡಿದೆ ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ನಾಟಕದ ತಯಾರಿ, ಶ್ರಮ ಮತ್ತು ನಿರ್ದೇಶಕ ರಮೇಶ ಅವರ ಸಾಹಸ ಸ್ಮರಿಸಿ, ಪ್ರೋತ್ಸಾಹಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಅರುಣ ಜೋಶಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ರಮೇಶ ಪರವಿನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗದಗ-ಡಂಬಳ ತೋಂಟದಾರ್ಯ ಮಠದ ಡಾ. ಸಿದ್ದರಾಮ ಮಹಾಸ್ವಾಮಿಗಳು, ಹುಕ್ಜೆರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರ ಮಹಾಸ್ವಾಮಿಗಳು, ಕಿತ್ತೂರು ಚನ್ನಮ್ಮ ರಾಜಗುರು ಸಂಸ್ಥಾನ ಕಲ್ಲಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಧಾರವಾಡ ಶಾಸಕ ಅಮೃತ ದೇಸಾಯಿ, ಸೆಡಂ ಶಾಸಕ ರಾಜಕುಮಾರ ಪಾಟೀಲ, ಮಹಾಪೌರ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕವಿವಿ ಕುಲಪತಿ ಡಾ. ಕೆ.ಬಿ.ಗುಡಸಿ, ಕುಲಸಚಿವ ಯಶಪಾಲ್, ರಂಗಾಯಣ ಆಡಾಳಿತಾಧಿಕಾರಿ ಶಶಿಕಲಾ ಹುಡೆದ ಸೇರಿದಂತೆ ವಿವಿಧ ನಿಗಮ, ಮಂಡಳಿ ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು, ಇತರರು ವೇದಿಕೆಯಲ್ಲಿ ಇದ್ದರು.
ಜೀವಂತ ಆನೆ, ಕುದುರೆ, ಒಂಟೆಗಳನ್ನು ಬಳಸಿ ನಡೆಸಲಾದ ಯುದ್ದದ ಸನ್ನಿವೇಶಗಳು ರಂಗಾಸಕ್ತರನ್ನು ಸೆಳೆದವು. ವಿಶಾಲ ವೇದಿಕೆ, ನೈಜವೆಂಬಂತೆ ಕಂಡ ಕೋಟೆಯೊಳಗೆ 150 ಕಲಾವಿದರ ಪ್ರತಿಭೆ ಅನಾವರಣಗೊಂಡಿತು. ಕರಡಿ ಮಜಲು, ಡೊಳ್ಳು, ಇತ್ಯಾದಿ ನೃತ್ಯಗಳು ಗಮನ ಸೆಳೆದವು.
ಬಾಲ ಚೆನ್ನಮ್ಮ, ರಾಣಿ ಚೆನ್ನಮ್ಮ, ಥ್ಯಾಕರೆ, ಟಿಪ್ಪು, ಮಲ್ಲಸರ್ಜ, ಪ್ರಧಾನಿ, ಭಂಟರ ಪಾತ್ರಧಾರಿಗಳ ಅಭಿನಯ ನೋಡುಗರ ಕಣ್ಮನ ಸೆಳೆಯಿತು. ಸನ್ನಿವೇಶದ ಮಧ್ಯದಲ್ಲಿನ ಹಾಡು, ನೃತ್ಯಗಳು ನಾಟಕಕ್ಕೆ ಮೆರಗು ನೀಡಿದವು. ಬೆಳುಕು, ವಿನ್ಯಾಸದ ಕೈಚಳಕ ನಾಟಕಕ್ಕೆ ಇನ್ನಷ್ಟು ಮೆರಗು ತಂದಿತು. 10 ಸಾವಿರಕ್ಕೂ ಹೆಚ್ಚು ಜನ ನಾಟಕವನ್ನು ವೀಕ್ಷಿಸಿದರು.