ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದ ರಸ್ತೆಗುಂಡಿಗಳನ್ನು ಮುಚ್ಚಲು ಗಡುವು ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಯುಕ್ತ ತುಷಾರ್ ಗಿರಿನಾಥ್, ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಡಿಸೆಂಬರ್ 31 ಕೊನೆ ದಿನ ನಿಗದಿಪಡಿಸಿದ್ದಾರೆ. ಈ ಸಂಬಂಧ ಇಂಜಿನಿಯರುಗಳು ಕಾರ್ಯಪ್ರವೃತ್ತರಾಗದಿದ್ದಲ್ಲಿ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್, ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವುದು ನಿರಂತರ ಕಸರತ್ತಾಗಿದೆ. ಆದರೂ, ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಹೊಸ ಗಡುವು ತಪ್ಪಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಒಂದು ವೇಳೆ ಅಧಿಕಾರಿಗಳು ಗುಂಡಿ ಮುಚ್ಚಿಲ್ಲ ಅಂದರೆ ಸಂಬಳ ಕಡಿತ ಮಾಡುವ ಎಚ್ಚರಿಕೆ ನೀಡಿರುವ ಬಿಬಿಎಂಪಿ ಆಯುಕ್ತರು, ರಸ್ತೆಗುಂಡಿ ಮುಚ್ಚುವ ಸಂಬಂಧ ನಾವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೇವೆ. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗುಂಡಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಡಿಸೆಂಬರ್ 31ರ ಒಳಗಾಗಿ ಎಲ್ಲಾ ಇಂಜಿನಿಯರ್‌ಗಳು, ಕನಿಷ್ಠ ಪ್ರಮುಖ ರಸ್ತೆಗಳಲ್ಲಾದರೂ ಯಾವುದೇ ಗುಂಡಿಗಳಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಗುಂಡಿಗಳ ನಿರ್ಮಾಣಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್‌ಎಸ್‌ಬಿ) ಮತ್ತು ವಿದ್ಯುತ್ ಇಲಾಖೆ ಎಂದು ಬಿಬಿಎಂಪಿಯ ಆರೋಪವಾಗಿದೆ. ನಾವೆಲ್ಲಾ ಕಾಮಗಾರಿಗಳನ್ನು ಕೈಗೊಂಡು ರಸ್ತೆಗುಂಡಿಗಳನ್ನು ಮುಚ್ಚುತ್ತಿದ್ದರೆ, ಈ ಎರಡೂ ಸಂಸ್ಥೆಗಳು ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದಾರೆ. ಈ ಸಂಸ್ಥೆಗಳಿಗೆ ನಮ್ಮ ಬಿಬಿಎಂಪಿ ಇಂಜಿಯರ್‌ಗಳೇ ಅನುಮತಿ ಕೊಡಬೇಕು. ಕೊಟ್ಟ ಬಳಿಕ ಕಾಮಗಾರಿ ಮುಗಿದ ಮೇಲೆ ಅಧಿಕಾರಿಗಳೇ ರಸ್ತೆಗಳನ್ನು ಮುಂದೆ ನಿಂತು, ಆ ಸಂಸ್ಥೆಗಳಿಂದಲೇ ಅಗೆದ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
ರಸ್ತೆಗಳು ಸಮಮಟ್ಟದಲ್ಲಿವೆಯೇ ಎಂದು ಖಚಿತಪಡಿಸಿಕೊಳ್ಳಲು ವಿಫಲವಾದರೆ ವಾರ್ಡ್ ಅಥವಾ ಪ್ರಮುಖ ರಸ್ತೆಗಳ ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಂತಹ ಎಂಜಿನಿಯರ್‌ಗಳಿಗೆ ದಂಡ ವಿಧಿಸಲಾಗುತ್ತದೆ ಮತ್ತು ರಸ್ತೆಗಳನ್ನು ಸರಿಪಡಿಸಲು ತಮ್ಮ ಜೇಬಿನಿಂದ ಹಣವನ್ನು ತೆರಬೇಕಾಗುತ್ತದೆ ಎಂದು ತಿಳಿಸಿದರು.