ವಿದ್ಯಾರ್ಥಿ ನಿಲಯ ವಸತಿ ಕೇಂದ್ರಗಳ ಡಿ ವರ್ಗದ ಸಿಬ್ಬಂದಿಗಳನ್ನು ನಿವೃತ್ತಿವರೆಗೆ ಮುಂದುವರೆಸಲು ಪ್ರತಿಭಟನೆ

ಬೆಳಗಾವಿ: ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ಸರ್ಕಾರಿ ವಸತಿ ಶಾಲೆ ಕಾಲೇಜುಗಲ್ಲಿ ದುಡಿಮೆ ಮಾಡಿಕೊಂಡು ಬಂದಿದ್ದ ‘ಡಿ’ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳನ್ನು ನಿವೃತ್ತಿವರೆಗೆ ಸೇವೆಯಲ್ಲಿ ಮುಂದುವರೆಸಬೇಕು ಮತ್ತು ಬಾಕಿ ವೇತನವನ್ನು ಸಂದಾಯ ಮಾಡುವಂತೆ ಆಗ್ರಹಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

ಪ್ರಸಕ್ತ ಚಳಿಗಾಲದ ವಿಧಾನಮಂಡಲ ಅಧಿವೇಶನ ಕುಂದಾನಗರಿ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಸುವರ್ಣ ಸೌಧದ ಸಮೀಪ ಪ್ರತಿಭಟನೆಯನ್ನು ಹಮ್ಮಿಕೊಂಡ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘವು ಈ ಕುರಿತು ಸರ್ಕಾರ ಇಲಾಖಾ ಮಟ್ಟದಲ್ಲಿ ಸಭೆಯನ್ನು ಕರೆದು ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಮಾ.10ರಿಂದ ವಸತಿಶಾಲಾ ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಧರಣಿ

ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮತ್ತು ಮೊರಾರ್ಜಿ ದೇಸಾಯಿ, ರಾಣಿಚನ್ನಮ್ಮ, ಡಾ. ಅಂಬೇಡ್ಕರ್ ಮೊದಲಾದ ವಿದ್ಯಾರ್ಥಿ ವಿದ್ಯಾರ್ಥಿನೀಯರ ವಸತಿ ಶಾಲೆಗಳಲ್ಲಿ ಅಡುಗೆ, ಸ್ವಚ್ಛತೆ, ಕಾವಲು ಮೊದಲಾದ ಕೆಲಸಗಳನ್ನು ‘ಡಿ’ ವರ್ಗದ ಸಿಬ್ಬಂದಿಗಳು ಮಾಡುತ್ತಾ ಬಂದಿದ್ದರು. ಈ ಬಗ್ಗೆ ಯಾರ ತಕರಾರು ಇರಲಿಲ್ಲ. ಒಂದಲ್ಲ ಒಂದು ದಿನ ತಮ್ಮತಮ್ಮ ಸ್ಥಾನಗಳಲ್ಲಿ ಕಾಯಂ ಆಗುವ ಕನಸು ಕಾಣುತ್ತಿದ್ದರು. ಇವರಲ್ಲಿ ಹೆಚ್ಚಿನವರು ಅವಿದ್ಯಾವಂತ ಮಹಿಳೆಯರಾದ್ದು ಸಾಮಾಜಿಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರಾಗಿದ್ದಾರೆ. ಹಲವರು ವಿಧವೆಯರು, ಒಂಟಿ ಜೀವನ ನಡೆಸುವವರು ಆಗಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರ ಡಿ ವರ್ಗದ ಸಿಬ್ಬಂದಿಗಳನ್ನು ಕಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಿತು. ಆದರೆ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನು ಜೇಷ್ಠತೆಗೆ  ಅನುಗುಣವಾಗಿ ಕಾಯಂ ಮಾಡುವ ಬದಲಾಗಿ ನೇರ ನೇಮಕಾತಿ ಮಾಡಲು ಮುಂದಾಗಿರುವುದು ಈಗಾಗಲೇ ಹತ್ತಾರು ವರ್ಷಗಳ ಅನುಭವಿ ನೌಕರರ ಕೆಲಸಕ್ಕೆ ಕುತ್ತಾಗಿದೆ. ಇದರ ಪರಿಣಾಮವಾಗಿ ಅನೇಕ ವರ್ಷಗಟ್ಟಲೆ ಕೆಲಸ ಮಾಡಿ ಅನುಭವ ಇದ್ದವರು ಕೆಲಸ ಕಳೆದುಕೊಂಡರು. ಅಡುಗೆ ಮಾಡುವ ಅನುಭವವೂ, ಆಸಕ್ತಿಯೂ ಇಲ್ಲದವರು ಆಯ್ಕೆಯಾಗಿದ್ದಾರೆ. ವರ್ಷಗಟ್ಟಲೆ ಕೆಲಸ ಮಾಡಿದ ನಮ್ನನ್ನು ಹೆಚ್ಚುವರಿ ಸಿಬ್ಬಂದಿಗಳೆಂದು ಹೊರಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಹಾಸ್ಟೇಲ್‌ ನರಕ : ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?!

ಕೊರೊನಾ ಸಾಂಕ್ರಾಮಿಕತೆ ಸಂದರ್ಭದಲ್ಲಿಯೂ ಅನುಭವಿ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದರು. ಇದರೊಂದಿಗೆ ಬಹುತೇಕ ಮಂದಿಗೆ ಅನೇಕ ತಿಂಗಳುಗಳಿಂದ ವೇತನ ಪಾವತಿ ಆಗಿರುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಇಲಾಖೆಯ ಕೆಲವು ಸ್ಥಳೀಯ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು, ತಮಗೆ ಬೇಕಾದವರಿಗೆ, ಲಂಚಕೊಟ್ಟವರಿಗೆ ಈ ‘ಡಿ’ ವರ್ಗದ ಹುದ್ದೆಗಳನ್ನು ಮಾರಿಕೊಂಡಿದ್ದಾರೆ ಎಂದು ಆರೋಪಿಸಿದರು.

ಹಲವು ಕಡೆ ನೇರ ನೇಮಕಾತಿಯಲ್ಲಿ ನೇಮಕಗೊಂಡವರು ವಿದ್ಯಾವಂತರೂ, ಪದವೀದರರೂ ಆಗಿದ್ದು ತಮ್ಮ ಬದಲಿಗೆ ಬೆರೆಯವರನ್ನು ಅಂಥ ಕೆಲಸಗಳಿಗೆ ನಿಯೋಜಿಸಿ ಕೆಲಸ ಮಾಡಿಸುತ್ತಾ ತಮ್ಮ ಸಂಬಳದಲ್ಲಿ ಒಂದು ಅತ್ಯಲ್ಪ ಭಾಗವನ್ನು ಅವರಿಗೆ ಕೊಟ್ಟು ದುಡಿಸಿಕೊಳ್ಳುತ್ತಿರುವುದು ದ್ರೋಹದ ಕೆಲಸಕ್ಕೆ ಕೈಹಾಕಿದ್ದಾರೆ.

ಪ್ರಮುಖ ಬೇಡಿಕೆಗಳಾದ ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ಸರ್ಕಾರಿ ವಸತಿ ಶಾಲೆ ಕಾಲೇಜುಗಳಲ್ಲಿ ಸಿಬ್ಬಂದಿಗಳ ನೇರ ನೇಮಕಾತಿಯನ್ನು ಕೈಬಿಡಬೇಕು. ಕೆಲಸದಿಂದ ಕೈಬಿಡಲಾದ ಎಲ್ಲ ‘ಡಿ’ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮರಳಿ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಶಾಸಕರು ಅಥವಾ ಸಂಸದರ  ಶಿಫಾರಸ್ಸು ಪತ್ರ ಕೇಳಬಾರದು. ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ತಾಲ್ಲೂಕು ಅಧಿಕಾರಿಗಳು ಹಾಗು ವಾರ್ಡನ್ ಗಳ ಅಕ್ರಮವಾಗಿ ನೇಮಕಾತಿ ಮಾಡುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಮೂಲಭೂತ ಸೌಲಭ್ಯ ಹಾಗೂ ಗುಣಮಟ್ಟದ ಊಟಕ್ಕಾಗಿ ಹಾಸ್ಟೆಲ್ ವಿದ್ಯಾರ್ಥಿಗಳ ಆಗ್ರಹ

ಹೊರ ಸಂಪನ್ಮೂಲ ಸಿಬ್ಬಂದಿಗಳಿಗೆ ಬಾಕಿ ಇರುವ ವೇತನ ಮತ್ತು ಲಾಕ್‌ಡೌನ್ ಅವಧಿಯ ವೇತನವನ್ನು ಹಾಗೂ ಡಿ.ಎ. ಅರಿಯರ್ಸ್‌ ಹಣವನ್ನು ಕೂಡಲೇ ಪಾವತಿ ಮಾಡಬೇಕು. ಹೊರಗುತ್ತಿಗೆ ಸಿಬ್ಬಂದಿಗಳನ್ನು ನಿವೃತ್ತಿವರೆಗೆ ಸೇವೆಯಲ್ಲಿ ಮುಂದುವರೆಸಿ ಸೇವಾ ಭದ್ರತೆಯನ್ನು ನೀಡಬೇಕು. ಹೊಸದಾಗಿ ತೆರೆಯಲಾದ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆ-ಕಾಲೇಜುಗಳ ‘ಡಿ’ ವರ್ಗದ ಕೆಲಸಗಳಿಗೆ ಈ ಹಿಂದೆ ಕೆಲಸ ಮಾಡಿ ಅನುಭವ ಇರುವ ಹೊರಗುತ್ತಿಗೆ ಸಿಬ್ಬಂದಿಗಳನ್ನೇ ನೇಮಿಸಬೇಕು ಎಂದು ಪ್ರತಿಭಟನಾಕಾರರ ಒತ್ತಾಯವಾಗಿದೆ.

ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವಿದ್ಯಾರ್ಥಿ ನಿಲಯಗಳಿಗೆ ಈ ಹಿಂದೆ ಕೆಲಸ ಮಾಡಿದವರನ್ನೇ ರಾತ್ರಿ ಕಾವಲುಗಾರರಾಗಿ ನೇಮಿಸಬೇಕು. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಊಟದಲ್ಲಿ ಜೋಳದ ರೊಟ್ಟಿ ಹೆಚ್ಚು ಬಳಕೆಯಾಗುತ್ತಿರುವುದರಿಂದ ಮತ್ತು ರೊಟ್ಟಿ ತಯಾರಿಸುವ ಕೆಲಸ ಹೆಚ್ಚು ಶ್ರಮದಾಯಕವಾಗಿರುವುದರಿಂದ ಪ್ರತಿಯೊಂದು ವಿದ್ಯಾರ್ಥಿ ನಿಲಯಕ್ಕೆ ಕನಿಷ್ಠ ಒಬ್ಬ ಮಹಿಳಾ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಈ ಹಿಂದೆ ಕೆಲಸ ಮಾಡಿ ಅನುಭವ ಇದ್ದವರನ್ನೇ ನೇಮಿಸಬೇಕು ಎಂದು ಪ್ರತಿಭಟನಾಕಾರರ ಆಗ್ರಹವಾಗಿದೆ.

ಇದನ್ನು ಓದಿ: ಹೊರಗುತ್ತಿಗೆ ನೌಕರರನ್ನು ನಿವೃತ್ತಿವರೆಗೆ ಮುಂದುವರೆಸಲು-ಬಾಕಿ ವೇತನ ಬಿಡುಗಡೆಗೊಳಿಸಲು ಒತ್ತಾಯ

ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಶೇ. 25ರಷ್ಟು ವಿದ್ಯಾರ್ಥಿ/ವಿದ್ಯಾರ್ಥಿನೀಯರ ಸಂಖ್ಯೆಯನ್ನು ಹೆಚ್ಚಿಸಬೇಕು. ಅದರೊಂದಿಗೆ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಹೊರ ಸಂಪನ್ಮೂಲ ಸಿಬ್ಬಂದಿಗಳಿಗೆ ಕಾನೂನು ಪ್ರಕಾರ ವಾರದ ರಜೆ ಹಾಗೂ ಹೆರಿಗೆ ಭತ್ಯೆಯನ್ನು ಕೊಡಬೇಕು. ಇಎಸ್‌ಐ ಮತ್ತು ಪಿ.ಎಫ್. ಸೌಲಭ್ಯವನ್ನು ವಿಸ್ತರಿಸಿ, ಸಿಬ್ಬಂದಿಗಳು ಹಿಂಪಡೆಯಲು ಬಯಸುವ ಅವರ ಪಾಲಿನ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ವಸತಿ ಶಾಲೆ-ಕಾಲೇಜುಗಳಲ್ಲಿ ಎಸ್‌ಡಿಸಿ ಮೊದಲಾದ ಪಠ್ಯೇತರ ಹೊರ ಸಂಪನ್ಮೂಲ ನೌಕರರನ್ನು ಅವರವರ ಸ್ಥಾನದಲ್ಲಿ ಕಾಯಂ ಮಾಡಬೇಕು. ಬಾಕಿ ವೇತನವನ್ನು ಸಂದಾಯ ಮಾಡಬೇಕು ಎಂದು ಪ್ರತಿಭಟನಾಕಾರರ ವಿನಂತಿಯಾಗಿದೆ.

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹೊರ ಸಂಪನ್ಮೂಲ ಸಿಬ್ಬಂದಿಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಕೆಲವು ಸ್ಥಳೀಯ ಅಧಿಕಾರಿಗಳಿಂದ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಸರ್ಕಾರದ ಹಣದ ದುರ್ಬಳಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟುಬೇಕು. ವಿದ್ಯಾರ್ಥಿಗಳಿಗೆ ಗುಣ್ಣಮಟ್ಟದ ಆಹಾರ, ವೈದ್ಯಕೀಯ ಮತ್ತು ಇತರ ಸೇವೆಗಳನ್ನು ಒದಗಿಸಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.

ಪ್ರತಿಭಟನೆಯ ಮೂಲಕ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಕೂಡಲೇ ಸಚಿವರು ನೌಕರರ ಪರಿಸ್ಥಿತಿ ಹಾಗೂ ಬೇಡಿಕೆಗಳ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಪ್ರತಿನಿಧಿಗಳ ಸಭೆಯನ್ನು ಕರೆಯಬೇಕೆಂದು ವಿನಂತಿಸಿಕೊಂಡಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಅಧ್ಯಕ್ಷ ನಿತ್ಯಾನಂದಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಶೆಟ್ಟಿ ಯಂಪಳ್ಳಿ, ರಾಜ್ಯ ಜಂಟಿ ಕಾರ್ಯದರ್ಶಿ ಕೆ. ಹನುಮೇಗೌಡ, ರಾಜ್ಯ ಖಜಾಂಚಿ ಚಂದ್ರಪ್ಪ ಹೊಸ್ಕೇರಾ, ಉಪಾಧ್ಯಕ್ಷರಾದ ಎಂ. ಜಂಬಯ್ಯ ನಾಯಕ(ವಿಜಯನಗರ ಜಿಲ್ಲೆ), ಜಂಟಿ ಕಾರ್ಯದರ್ಶಿಗಳಾದ ಹುಲುಗಪ್ಪ ಚಲುವಾದಿ(ವಿಜಯಪುರ), ಇ.ಆರ್. ಯಲ್ಲಪ್ಪ (ಬಳ್ಳಾರಿ), ಸಹ ಕಾರ್ಯದರ್ಶಿಗಳಾದ ಗ್ಯಾನೇಶ್ ಕಡಗದ(ಕೊಪ್ಪಳ), ರಾಜೇಶ್ ದೇಶಪಾಂಡೆ(ಬಾಗಲಕೋಟೆ), ರೇಣುಕ ನಾಗನೂರು(ಬೆಳಗಾವಿ), ಹಾಲೇಶ್ ನಾಯಕ್(ದಾವಣಗೆರೆ), ಬೆಳಗಾವಿ ಜಿಲ್ಲಾ ಅಧ್ಯಕ್ಷ ಪ್ರದೀಪ್ ದಳವಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾಂಬ್ಳೆ, ಜಿಲ್ಲಾ ಉಪಾಧ್ಯಕ್ಷ ದ್ವಾರಕ ಎದ್ದಲ ಪುಡಿ, ಬೀದರ್ ಜಿಲ್ಲಾ ಅಧ್ಯಕ್ಷ ಇಸಾಮೋದೀನ್, ಜಿಲ್ಲಾ ಮುಖಂಡರಾದ ಮಹಾಂತೇಶ್ ಶಿರಶೂರ(ಗದಗ), ಮಲ್ಲೇಶ್(ಧಾರವಾಡ) ವಹಿಸಿ ನಡೆಸಿಕೊಟ್ಟರು.

 

 

Donate Janashakthi Media

Leave a Reply

Your email address will not be published. Required fields are marked *