ಬೆಳಗಾವಿ ಸುವರ್ಣಸೌಧ: ವಿಧಾನಸಭೆಯಲ್ಲಿ ಇಂದು ನಾಲ್ಕು ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು. 2022ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು(ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳು ಅನುಮೋದನೆಗೊಂಡವು.
2022ನೇ ಸಾಲಿನ ಕರ್ನಾಟಕ ಭೂಕಂದಾಯ(ಎರಡನೇ ತಿದ್ದುಪಡಿ) ವಿಧೇಯಕ, 2022ನೇ ಸಾಲಿನ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ, 2022ನೇ ಸಾಲಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ ವಿಧೇಯಕಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ, ಮುರುಗೇಶ ನಿರಾಣಿ, ವಿ.ಸುನೀಲಕುಮಾರ್ ಅವರು ಮಂಡಿಸಿದರು. ನಂತರ ಅನುಮೋದನೆ ಪಡೆದುಕೊಳ್ಳಲಾಯಿತು.
ಗೃಹ ಸಚಿವ ಅರಗ ಜ್ಞಾನೇಂದ್ರ ಅವರು 2021ನೇ ಸಾಲಿನ ಬಂಧಿಗಳ ಗುರುತಿಸುವಿಕೆ(ಕರ್ನಾಟಕ ತಿದ್ದುಪಡಿ) ವಿಧೇಯಕ ಹಿಂಪಡೆಯುವುದನ್ನು ಮಂಡಿಸಿರುವುದಕ್ಕೆ ವಿಧಾನಸಭೆ ತಾತ್ಕಾಲಿಕ ತಡೆ ನೀಡಿತು.
ಈ ವಿಧೇಯಕ ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಮತ್ತು ಸ್ಪಷ್ಟತೆ ಬರಬೇಕಾದ ಕಾರಣ ತಡೆಹಿಡಿಯಲಾಗುತ್ತಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.