ಸಮಾಜದ ಸ್ವಾಸ್ಥ್ಯ ಮತ್ತು ಸಮನ್ವಯತೆಗೆ ಅತ್ಯವಶ್ಯವಾದ ಮೌಲ್ಯಗಳನ್ನೇ ನಾಶಮಾಡುತ್ತಿದ್ದೇವೆ
ನಾ ದಿವಾಕರ
ಸಹಸ್ರಮಾನದ ತಲೆಮಾರಿಗೆ ಕನಿಷ್ಠ ಈ ಮನ್ವಂತರ ಕಾಲದ ಚರಿತ್ರೆಯನ್ನಾದರೂ ಇಂದು ಮನದಟ್ಟು ಮಾಡಬೇಕಿದೆ. ಬಡತನ, ದಾರಿದ್ರ್ಯ, ವಸತಿಹೀನತೆ, ನಿರುದ್ಯೋಗ, ಹಸಿವೆ, ಮಾಲಿನ್ಯ, ಅಪೌಷ್ಟಿಕತೆ ಇವೆಲ್ಲದರ ನಡುವೆಯೇ ಭಾರತದ ಜನಸಮುದಾಯಗಳು ತಮ್ಮ ಸಾಂಸ್ಕೃತಿಕ ನೆಲೆಗಳನ್ನು ಉಳಿಸಿಕೊಳ್ಳಲು ಹೋರಾಡಿದ್ದನ್ನು 1970ರ ದಶಕ ಕಂಡಿದೆ. ಅಂದೂ ತಾರತಮ್ಯಗಳಿದ್ದವು, ದೌರ್ಜನ್ಯ-ಅತ್ಯಾಚಾರಗಳಿದ್ದವು. ಇಂದೂ ಇದೆ. ಪಾತಕ ಸಮಾಜ ಅಂದೂ ಸಕ್ರಿಯವಾಗಿತ್ತು ಇಂದೂ ಸಕ್ರಿಯವಾಗಿ ರಾಜಕೀಯ ಅಧಿಕೃತತೆ ಪಡೆದುಕೊಳ್ಳುತ್ತಿದೆ
ರಂಗಾಯಣದ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಸಂದರ್ಭದಲ್ಲಿ ಒಂದು ಮಾತು ಪದೇ ಪದೇ ಕೇಳಿಬರುತ್ತಿದೆ. ಭಾರತೀಯತೆ, ಭಾರತೀಯ ಪರಂಪರೆ, ಭಾರತೀಯ ಸಂಸ್ಕೃತಿ ಮುಂತಾದ ಚಾರಿತ್ರಿಕವಾಗಿ ಪ್ರಧಾನವಾಗಿ ಕಾಣುವ, ಸಾಂಸ್ಕೃತಿಕವಾಗಿ ಚರ್ಚಾಸ್ಪದವಾಗಿ ಕಾಣುವ ಹಾಗೂ ಬೌದ್ಧಿಕವಾಗಿ ಆಕರ್ಷಣೀಯವಾಗಿ ಕಾಣುವ ಪದಗಳೊಡನೆ `ರಾಜಕೀಯ ಶಕ್ತಿಗಳು’ ಚದುರಂಗದಾಟ ಆಡುತ್ತಿವೆ. ಈ ಪದಗಳ ಮೂಲಾರ್ಥ ಮತ್ತು ಮುಖ್ಯ ಧಾತು ಇರುವುದು ಭಾರತದ ತಳಮಟ್ಟದ ಜನಸಮುದಾಯಗಳ ಜೀವನ, ಜೀವನೋಪಾಯ ಮತ್ತು ಜೀವನಾದರ್ಶಗಳಲ್ಲಿ ಎನ್ನುವ ಪ್ರಧಾನ ಅಂಶವನ್ನೇ ಬದಿಗೊತ್ತಿ, ಸಂಸ್ಕೃತಿ ಎನ್ನುವ ಪದವನ್ನು ಕುಬ್ಜಗೊಳಿಸುತ್ತಾ ನಡೆದಿರುವ, ಡಿಜಿಟಲ್ ಯುಗದ ಭಾರತ, ಇತಿಹಾಸ ಮತ್ತು ಸಂಸ್ಕೃತಿಯ ನಡುವೆ ಇರುವ ಸೂಕ್ಷ್ಮ ಸಂಬಂಧಗಳನ್ನೂ ಲೆಕ್ಕಿಸದೆ, ನಾಗರಿಕತೆಯಲ್ಲಿ ಅಡಗಿರುವ ಮೂಲ ಧಾತುಗಳನ್ನೂ ಲೆಕ್ಕಿಸದೆ, ತನ್ನ ಹೊಸ ಹಾದಿಗಳನ್ನು ಕಂಡುಕೊಳ್ಳುತ್ತಿದೆ.
ನಾಗರಿಕತೆಗಳ ಉಗಮಕ್ಕೂ, ಜನಸಂಸ್ಕೃತಿಗಳು ರೂಪುಗೊಳ್ಳುವುದಕ್ಕೂ ನಡುವೆ ಇರುವ ಅಂತರದಲ್ಲಿ ಇರುವಂತಹ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸದೆ ಹೋದರೆ, ನಾವು ಸಂಸ್ಕೃತಿ ಎಂಬ ಪದವನ್ನು ಛಿದ್ರಗೊಳಿಸಿ, ಕುಬ್ಜಗೊಳಿಸಿ ಸಮಕಾಲೀನ ಸಂದರ್ಭಗಳ ಅರ್ಥವ್ಯಾಖ್ಯೆಗಳಿಗೆ ಅನುಗುಣವಾಗಿ ಆರೋಪಿಸಿಕೊಂಡುಬಿಡುತ್ತೇವೆ. ಈ ಅಪಾಯವನ್ನು ಭಾರತ ಇಂದು ಎದುರಿಸುತ್ತಿದೆ. ಸಂಸ್ಕೃತಿಗೆ ಜಾತಿ, ಮತ, ಧರ್ಮ ಹಾಗೂ ಪ್ರಾದೇಶಿಕ ಹೊದಿಕೆಗಳನ್ನು ತೊಡಿಸುವ ಮೂಲಕ ಸಾಂಸ್ಕೃತಿಕ ನೆಲೆಗಳಲ್ಲಿ ಮೂಲತಃ ಕಾಣಬಹುದಾದ ಮನುಜ ಸಂಬಂಧ ಮತ್ತು ಸಂವೇದನೆಗಳ ತಂತುಗಳನ್ನೇ ನಿರ್ವೀರ್ಯಗೊಳಿಸಲಾಗುತ್ತಿದೆ. ಹಾಗಾಗಿಯೇ `ಭಾರತೀಯತೆ ಅಥವಾ ಭಾರತೀಯ ಸಂಸ್ಕೃತಿ’ ಎಂದ ಕೂಡಲೇ ನಮ್ಮೊಳಗಿನ ಸಂಕುಚಿತ ಅಸ್ಮಿತೆಯ ಭೂತಗಳು ಧಿಗ್ಗನೆದ್ದು ಕುಳಿತುಕೊಳ್ಳುತ್ತವೆ. ಬೌದ್ಧಿಕವಾಗಿ ಸೀಮಿತವಾದ ಈ ಚಿಂತನಾ ವಲಯಗಳಲ್ಲೇ ನಮ್ಮ ಇಡೀ ಚಾರಿತ್ರಿಕ ಹೆಜ್ಜೆಗಳನ್ನು ಗುರುತಿಸಿಕೊಳ್ಳುವುದರ ಮೂಲಕ, ಚರಿತ್ರೆಯ ಪುಟಗಳನ್ನೂ ಬಿಡಿಬಿಡಿಯಾಗಿ ಬೆರ್ಪಡಿಸಿ, ತ್ಯಾಜ್ಯ, ಅನಗತ್ಯ, ಅನಿವಾರ್ಯ, ಅತ್ಯಗತ್ಯ, ಅನಪೇಕ್ಷಿತ ಹಾಗೂ ʼ ಲಾಭದಾಯಕ ʼ ಎಂಬ ಹೊಸ ಪ್ರವರ್ಗಗಳ ಚೌಕಟ್ಟುಗಳಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಿದ್ದೇವೆ.
ಸಂಸ್ಕೃತಿ-ಚರಿತ್ರೆಯ ಈ ಹುಡುಕಾಟಗಳ ನಡುವೆಯೇ ನಮ್ಮಲ್ಲಿ ಹಿಂದಿರುಗಿ ನೋಡುವ ಮತ್ತು ನಡೆದು ಬಂದ ಹಾದಿಯನ್ನು ಪುನಃಪುನಃ ಅವಲೋಕನ ಮಾಡುವ ವ್ಯವಧಾನ ಇದ್ದುದೇ ಆದಲ್ಲಿ, ನಾವು ಶತಮಾನಗಳಷ್ಟು ಹಿಂದೆ ಹೋಗುವ ಅಗತ್ಯವಿಲ್ಲ. ವರ್ತಮಾನದ ಬದುಕಿಗೆ ಬೇಕಿರುವುದು ಭವಿಷ್ಯದ ಮುನ್ನೋಟ, ವಸ್ತುನಿಷ್ಠ ಒಳನೋಟವೇ ಹೊರತು, ಭೂತದ ಹಿನ್ನೋಟವಲ್ಲ. ಈ ಭವಿಷ್ಯದ ಮುಂಗಾಣ್ಕೆಯನ್ನೇ ನಿರ್ಲಕ್ಷಿಸಿ, ಸವೆಸಿ ಬಂದ ಹಾದಿಗಳನ್ನೇ ಪುನರುತ್ಖನನಗೊಳಿಸುತ್ತಾ, ಇತಿಹಾಸದ ಪಳೆಯುಳಿಕೆಗಳನ್ನು ಕೆದಕಿ, ಜನಸಂಸ್ಕೃತಿಯ ಬೇರುಗಳಲ್ಲಿರುವ ವೈವಿಧ್ಯತೆಗಳನ್ನು ಭಗ್ನಗೊಳಿಸುತ್ತಾ ಸಾಗುವುದರಿಂದ ನಮ್ಮ ಸಮಾಜ ಶತಮಾನಗಳಷ್ಟು ಹಿಂದಕ್ಕೆ ಹೋಗುತ್ತದೆ. ನಾವು ಏನನ್ನು ಶೋಧಿಸುತ್ತಿದ್ದೇವೆ, ಯಾವುದನ್ನು ಹೊರಕ್ಕೆಳೆಯುತ್ತಿದ್ದೇವೆ, ಏನನ್ನು ಕಂಡುಕೊಳ್ಳಲು ಹಾತೊರೆಯುತ್ತಿದ್ದೇವೆ ಎಂಬ ಪರಿಜ್ಞಾನವೇ ಇಲ್ಲದೆ ಚರಿತ್ರೆ ಮತ್ತು ವರ್ತಮಾನವನ್ನು ಮುಖಾಮುಖಿಯಾಗಿಸುತ್ತಾ ಹೋದರೆ, ಬಹುಶಃ ನಾವು ಈ ಸಂಘರ್ಷದ ನಡುವೆಯೇ ಕಳೆದುಹೋಗುತ್ತೇವೆ. ಭೌಗೋಳಿಕವಾಗಿ ಭಿನ್ನವಾಗಿರುವ ಅಖಂಡ ಭಾರತ ಸಾಂಸ್ಕೃತಿಕವಾಗಿ ಇನ್ನೂ ಸಹ ವ್ಯಾಪಕವಾಗಿ ಚಾಚಿಕೊಂಡಿರುವುದನ್ನು ಗಮನಿಸಬೇಕಾದರೆ, ನಮಗೆ ಚರಿತ್ರೆಯ ಒಳನೋಟಗಳು ಅತ್ಯವಶ್ಯ. ದುರಂತ ಎಂದರೆ ಈ ಒಳನೋಟಗಳನ್ನು ಒದಗಿಸಬಲ್ಲಂತಹ ಇತಿಹಾಸಕಾರರನ್ನು ನೇಪಥ್ಯಕ್ಕೆ ಸರಿಸಿ, ಸಂಸ್ಕೃತಿಯ ಸ್ವಘೋಷಿತ ರಾಯಭಾರಿಗಳು ಜನಸಂಸ್ಕೃತಿಯನ್ನು ಭೇದಿಸಲು ಯತ್ನಿಸುತ್ತಿದ್ದಾರೆ.
ಹಾಗಾಗಿಯೇ ನಮಗೆ ಕೇವಲ ಐದು ದಶಕಗಳ ಹಿಂದೆ ಕಂಡಂತಹ ಸಮನ್ವಯದ ಭಾರತ ಇಂದು ಕಾಣಲಾಗುತ್ತಿಲ್ಲ. 1970ರ ದಶಕದಲ್ಲಿ ಕಂಡಂತಹ ಪ್ರಕ್ಷುಬ್ಧ ಭಾರತವೂ ಸಹ ಇಂದು ನಮಗೆ ಭಿನ್ನವಾಗಿ ಗೋಚರಿಸುತ್ತಿದೆ. 21ನೆಯ ಶತಮಾನದಲ್ಲೂ ಕಾಡುತ್ತಿರುವ ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯ, ಮತಾಂಧತೆ ಮತ್ತು ಪಿತೃಪ್ರಧಾನ ಮೌಲ್ಯಗಳು ಐದು ದಶಕಗಳ ಹಿಂದೆಯೂ ಢಾಳಾಗಿ ಕಾಣುತ್ತಿದ್ದುರಿಂದಲೇ ಆ ದಶಕದಲ್ಲಿ ನೆಲದಾಳದ ಹತಾಶೆ ಮತ್ತು ಆಕ್ರೋಶಗಳು ಒಮ್ಮೆಲೆ ಸ್ಫೋಟಿಸಿದ್ದವು. ಈ ಸಾಮಾಜಿಕ ತರತಮಗಳ ನಡುವೆಯೇ ಭಾರತ ಅಂದು ಸಮನ್ವಯತೆಗಾಗಿ, ಸೌಹಾರ್ದತೆಗಾಗಿ, ಅಮೂರ್ತವಲ್ಲದ ಮಾನವೀಯ ಸಂವೇದನೆಗಳಿಗಾಗಿ ಹಾತೊರೆದಿತ್ತು. 1970ರ ದಶಕದಲ್ಲಿ ಉಗಮಿಸಿದಂತಹ ಎಲ್ಲ ಜನಪರ ಚಳುವಳಿಗಳಲ್ಲೂ ಈ ಕಾತರ ಮತ್ತು ಆತಂಕಗಳು ಎದ್ದು ಕಾಣುತ್ತಿದ್ದವು. ಭಾರತದ ಪ್ರಜಾತಂತ್ರ ವ್ಯವಸ್ಥೆ ಇನ್ನೂ ಉಸಿರಾಡುತ್ತಿದೆ ಎಂಬ ಭರವಸೆ ಮೂಡಿಸುವ ರೀತಿಯಲ್ಲಿ ಜನಸಾಂಸ್ಕೃತಿಕ ನೆಲೆಗಳ ಆಂತರ್ಯದೊಳಗಿಂದ ಪ್ರತಿರೋಧದ ದನಿಗಳು ಉಗಮಿಸಿದ್ದವು. ಈ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯವಲಯದಲ್ಲಿ ಸೃಷ್ಟಿಯಾದ ವಿಪುಲ ಸಾಹಿತ್ಯವೇ ಇಂದಿಗೂ ಸಮಾಜವನ್ನು ನಿರ್ದೇಶಿಸುತ್ತಿರುವುದನ್ನೂ ಗಮನಿಸಬೇಕಿದೆ.
ಸಹಸ್ರಮಾನದ ತಲೆಮಾರಿಗೆ ಕನಿಷ್ಠ ಈ ಮನ್ವಂತರ ಕಾಲದ ಚರಿತ್ರೆಯನ್ನಾದರೂ ಇಂದು ಮನದಟ್ಟು ಮಾಡಬೇಕಿದೆ. ಬಡತನ, ದಾರಿದ್ರ್ಯ, ವಸತಿಹೀನತೆ, ನಿರುದ್ಯೋಗ, ಹಸಿವೆ, ಮಾಲಿನ್ಯ, ಅಪೌಷ್ಟಿಕತೆ ಇವೆಲ್ಲದರ ನಡುವೆಯೇ ಭಾರತದ ಜನಸಮುದಾಯಗಳು ತಮ್ಮ ಸಾಂಸ್ಕೃತಿಕ ನೆಲೆಗಳನ್ನು ಉಳಿಸಿಕೊಳ್ಳಲು ಹೋರಾಡಿದ್ದನ್ನು 1970ರ ದಶಕ ಕಂಡಿದೆ. ಅಂದೂ ತಾರತಮ್ಯಗಳಿದ್ದವು, ದೌರ್ಜನ್ಯ-ಅತ್ಯಾಚಾರಗಳಿದ್ದವು. ಇಂದೂ ಇದೆ. ಪಾತಕ ಸಮಾಜ ಅಂದೂ ಸಕ್ರಿಯವಾಗಿತ್ತು ಇಂದೂ ಸಕ್ರಿಯವಾಗಿ ರಾಜಕೀಯ ಅಧಿಕೃತತೆ ಪಡೆದುಕೊಳ್ಳುತ್ತಿದೆ. ಜಾತಿ ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ನೋವು ಅಂದು ಕಾಣುತ್ತಿದ್ದಂತೆಯೇ ಇಂದೂ ಕಾಣುತ್ತಿದೆ. ಹಾಗಾದರೆ ಬದಲಾಗಿರುವುದೇನು? ಆಧುನಿಕತೆ, ಸಿರಿವಂತಿಕೆ, ಆರ್ಥಿಕ ಅಭಿವೃದ್ಧಿ, ಶೈಕ್ಷಣಿಕ ಮುನ್ನಡೆ, ಬೌದ್ಧಿಕ ಅಧ್ಯಯನ ಮತ್ತು ಸಂಶೋಧನೆ ಇವೆಲ್ಲದರ ಪರಿಣಾಮವಾದರೂ ಏನು? ಈ ಐದು ದಶಕಗಳಲ್ಲಿ ಆರ್ಥಿಕವಾಗಿ, ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿಯೂ ಹೊರಜಗತ್ತಿಗೆ ತೆರೆದುಕೊಂಡೇ ದಾಪುಗಾಲು ಹಾಕುತ್ತಿರುವ ಭಾರತೀಯ ಸಮಾಜ ತನ್ನ ನೆಲಮೂಲದ ಸಂವೇದನೆಯನ್ನೇ ಕಳೆದುಕೊಳ್ಳುತ್ತಿರುವುದನ್ನು ಹೇಗೆ ವ್ಯಾಖ್ಯಾನಿಸಲು ಸಾಧ್ಯ? ಸಾವು ನಮ್ಮನ್ನು ಸಾಪೇಕ್ಷವಾಗಿ ಕಾಡುತ್ತಿದ್ದರೆ ನೋವು ನಮ್ಮನ್ನು ಕಾಡುತ್ತಲೇ ಇಲ್ಲ. ಅತ್ಯಾಚಾರದ ನೋವು, ಅಸ್ಪೃಶ್ಯತೆಯ ನೋವು `ನಮ್ಮದಲ್ಲ’ ಎನ್ನುವ ರೀತಿಯಲ್ಲಿ ಆಧುನಿಕ ಸಮಾಜ ವರ್ತಿಸುತ್ತಿದೆ.
ಇದೇ ವೇಳೆ, ಏಕತೆ ಮತ್ತು ಅಖಂಡತೆಯ ಹೆಸರಿನಲ್ಲಿ ಶತಮಾನಗಳ ಸಮನ್ವಯತೆಯಿಂದ ಬೆಸೆದುಕೊಂಡಿರುವ ತಳಮಟ್ಟದ ಜನಜೀವನದಲ್ಲಿ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಐದು ದಶಕಗಳ ಹಿಂದೆ ಕಾಣಬಹುದಾಗಿದ್ದ ಸಂವೇದನೆ ಮತ್ತು ಸಂಯಮ ಇಂದು ಕ್ರಮೇಣ ಮರೆಯಾಗುತ್ತಿದೆ. ಮನುಜ ಸ್ಪಂದನೆಯ ಎಲ್ಲ ಮಾರ್ಗಗಳನ್ನೂ ಮುಚ್ಚಲಾಗುತ್ತಿದೆ. ಯುವ ಸಮೂಹದಲ್ಲೂ ಸಹ ಗೆಳೆತನ-ಆತ್ಮೀಯತೆ ಮತ್ತು ಆಪ್ತ ಸಂಬಂಧಗಳನ್ನು ಮತೀಯ ದೃಷ್ಟಿಯಿಂದ ನೋಡುವ ಬೃಹತ್ ಪಡೆಗಳನ್ನು ಕಳೆದ ಮೂರು ದಶಕಗಳಲ್ಲಿ ಸೃಷ್ಟಿಸಿಕೊಂಡಿದ್ದೇವೆ. ಅತ್ಯಾಚಾರ, ದೌರ್ಜನ್ಯಗಳಿಗೆ ಅಡ್ಡಿಯಾಗದ ಮತೀಯ, ಜಾತಿ ಅಸ್ಮಿತೆಗಳ ಗೋಡೆಗಳು ಸ್ನೇಹ ಬಾಂಧವ್ಯ ಮತ್ತು ಸಾಂಗತ್ಯಕ್ಕೆ ಅಡ್ಡಿಯಾಗುತ್ತಿವೆ. ಮತ್ತೊಂದೆಡೆ ನಮ್ಮ ನಡುವೆಯೇ ದಿನನಿತ್ಯ ನಡೆಯುತ್ತಿರುವ ದೌರ್ಜನ್ಯಗಳಿಗೆ ಸುಶಿಕ್ಷಿತ ಸಮಾಜ ಕುರುಡಾಗಿದೆ. ಇದೇ ಸುಶಿಕ್ಷಿತ ಸಮಾಜವೇ 1970ರ ದಶಕದ ಸಂವೇದನಾಶೀಲ ಸ್ಪಂದನೆಗೆ ಆಧಾರ ಸ್ತಂಭವಾಗಿದ್ದುದನ್ನು ಸ್ಮರಿಸಬೇಕಿದೆ. ಸಮಾಜದಲ್ಲಿ ಸಂಯಮ, ಸೌಜನ್ಯ, ಸಂವೇದನೆಯನ್ನು ಉದ್ಧೀಪನಗೊಳಿಸಬೇಕಾದ ಸಾಹಿತ್ಯ, ರಂಗಭೂಮಿ ಮತ್ತು ಕಲಾ ಪ್ರಕಾರಗಳಲ್ಲೂ ಸಹ ಸಂಸ್ಕೃತಿಯನ್ನು ಸಾಪೇಕ್ಷವಾಗಿ ಸಂಕುಚಿತಗೊಳಿಸಿ ನೋಡುವ `ಕಲಾವಿದರು-ಸಾಹಿತಿಗಳು-ನಾಟಕಕಾರರು’ ನಮ್ಮ ನಡುವೆ ರಾರಾಜಿಸುತ್ತಿದ್ದಾರೆ.
ಈ ಹೊಸ ರೀತಿಯ ವ್ಯಾಖ್ಯಾನಕಾರರು ಸೃಷ್ಟಿಸುತ್ತಿರುವ ಒಂದು ಲೋಕ ಭಾರತದ ಸಮನ್ವಯ ಸಂಸ್ಕೃತಿಯ ಬೇರುಗಳನ್ನೇ ಅಲುಗಾಡಿಸುತ್ತಿರುವುದನ್ನು ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕಿದೆ. ಬಡತನ, ನಿರುದ್ಯೋಗ, ಹಸಿವು ಮತ್ತು ಇವುಗಳ ನಡುವೆಯೇ ಹೆಚ್ಚಾಗುತ್ತಿರುವ ಮಹಿಳಾ ದೌರ್ಜನ್ಯಗಳತ್ತ ಕಣ್ಣೆತ್ತಿಯೂ ನೋಡದೆ, ಇತಿಹಾಸದ ಪುಟಗಳಲ್ಲಿನ ತರತಮಗಳನ್ನೇ ವರ್ತಮಾನದಲ್ಲಿಟ್ಟು ನೋಡುವ ಮೂಲಕ, ಈಗಾಗಲೇ ಎತ್ತರಕ್ಕೆ ಬೆಳೆದಿರುವ ಅಸ್ಮಿತೆಯ ಗೋಡೆಗಳನ್ನು ಮತ್ತಷ್ಟು ಎತ್ತರಿಸಲು ಬೌದ್ಧಿಕ ವಲಯವೇ ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸೌಹಾರ್ದತೆ ಮತ್ತು ಸಮನ್ವಯದ ಸಾಂಸ್ಕೃತಿಕ ಆಲೋಚನೆಗಳನ್ನು `ವಿಭಜಕ’ ಎಂದು ಪರಿಭಾವಿಸುವ ಈ ಬೌದ್ಧಿಕ ವಲಯಕ್ಕೆ ಮನುಜ ಸಮಾಜವನ್ನು ಬೆಸೆಯುವ ಪ್ರಕ್ರಿಯೆಗಳೆಲ್ಲವೂ `ದೇಶದ್ರೋಹಿ’ ಚಟುವಟಿಕೆಗಳಾಗಿ ಕಾಣುತ್ತಿದೆ. ಈ ಬೌದ್ಧಿಕ ದಿವಾಳಿತನ ಅಥವಾ ತಾತ್ವಿಕ ಭ್ರಷ್ಟತೆಯ ಪರಿಣಾಮವಾಗಿಯೇ ರಂಗಭೂಮಿಯಂತಹ ಸಂವೇದನಾಶೀಲ ವೇದಿಕೆಗಳಲ್ಲೂ ರಾಜಕೀಯ ಪರಿಭಾಷೆ ಬಳಕೆಯಾಗುತ್ತಿದೆ.
ಸುಶಿಕ್ಷಿತ ಅಥವಾ ಮುಂದುವರೆದ ಸಮಾಜವನ್ನು ಪ್ರಭಾವಿಸುವ ಸಾಹಿತ್ಯ ಹಾಗೂ ಕಲಾ ಪ್ರಕಾರಗಳು ಬೌದ್ಧಿಕವಾಗಿ ಭ್ರಷ್ಟವಾದಷ್ಟೂ ಸಮಾಜದಲ್ಲಿ ಸಂವೇದನೆ ಶಿಥಿಲವಾಗುತ್ತಾ ಹೋಗುತ್ತದೆ. ಆಧುನಿಕ ಡಿಜಿಟಲ್ ಯುಗದಲ್ಲಿ ಅಂಗೈಯಲ್ಲೇ ಇಡೀ ಪ್ರಪಂಚವನ್ನು ಕಾಣಲು ಸಾಧ್ಯವಾಗುವ ತಂತ್ರಜ್ಞಾನವು ವ್ಯಾಪಕವಾಗಿ ಲಭ್ಯವಾಗುವುದರಿಂದ, ನಮ್ಮ ನಡುವಿನ ಸಾಮಾಜಿಕ-ಆರ್ಥಿಕ ಸಿಕ್ಕುಗಳನ್ನು, ಈ ಸಿಕ್ಕುಗಳಿಂದ ಜರ್ಝರಿತವಾಗುವ ತಳಮಟ್ಟದ ಸಮಾಜದ ತುಮುಲ-ಹತಾಶೆಗಳನ್ನು, ಈ ಹತಾಶೆಯಿಂದಲೇ ಸಮಾಜದಲ್ಲಿ ಸೃಷ್ಟಿಯಾಗುವ ಪಾತಕೀಕರಣವನ್ನು ಅರ್ಥಮಾಡಿಕೊಳ್ಳಲು ಅವಶ್ಯವಾದ ಅಧ್ಯಯನ ಶಿಸ್ತು ನಮ್ಮಲ್ಲಿ ನಶಿಸುತ್ತಾ ಹೋಗುತ್ತಿದೆ. ವಾಟ್ಸಾಪ್ ವಿಶ್ವವಿದ್ಯಾಲಯದ ಉಗಮ ಮತ್ತು ಬೆಳವಣಿಗೆಗೆ ಇದೂ ಒಂದು ಕಾರಣವಾಗಿದೆ. ಅಧ್ಯಯನಶೀಲ ಒಳನೋಟಗಳಿಲ್ಲದ ಬೌದ್ಧಿಕ ಅಲೋಚನೆಗಳ ಪರಿಣಾಮವಾಗಿಯೇ ನಮ್ಮ ಸುತ್ತಲಿನ ಸಾಮಾಜಿಕ ದೌರ್ಜನ್ಯಗಳನ್ನು, ಅನ್ಯಾಯಗಳನ್ನು ನಿರ್ಲಕ್ಷಿಸುವ ಬೃಹತ್ ಜನಸಮೂಹಗಳು ಸೃಷ್ಟಿಯಾಗಿವೆ. ಹಾಗಾಗಿಯೇ ನಾಗರಿಕ ವಲಯದ ಪ್ರಬಲ ವರ್ಗಗಳಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಕಾಣುವ ನಿಷ್ಕ್ರಿಯತೆ, ನಿರ್ಲಿಪ್ತತೆಯನ್ನೇ, ಅತ್ಯಾಚಾರ, ಅಸ್ಪೃಶ್ಯತೆ ಮತ್ತಿತರ ಸಾಮಾಜಿಕ ದೌರ್ಜನ್ಯಗಳ ಬಗ್ಗೆಯೂ ಕಾಣಬಹುದು.
ಈ ಮೊದಲೇ ಹೇಳಿದಂತೆ ಐದು ದಶಕದ ಹಿಂದೆ, 1970ರಲ್ಲಿ ಭಾರತ ಹೀಗಿರಲಿಲ್ಲ. ಅಸ್ಮಿತೆಗಳು ಅಂದೂ ಇದ್ದವು ಆದರೆ ಬೌದ್ಧಿಕವಾಗಿ ಭ್ರಷ್ಟವಾಗಿರಲಿಲ್ಲ. ರಾಜಕೀಯ ಭ್ರಷ್ಟಾಚಾರ ಅಂದೂ ಇತ್ತು. ಆದರೆ ಭ್ರಷ್ಟರನ್ನು ಶತಾಯಗತಾಯ ರಕ್ಷಿಸುವ ಪರಂಪರೆ ಇರಲಿಲ್ಲ. ಸಮಾಜಘಾತುಕರು ಅಂದೂ ಇದ್ದರು ಆದರೆ ಅವರಿಗೆ ರಾಜಕೀಯ ದೀಕ್ಷೆ ನೀಡುವ ಪದ್ಧತಿ ಇರಲಿಲ್ಲ. ಈಗ ಭಾರತ ಬದಲಾಗಿದೆ, ಬದಲಾಗುತ್ತಿದೆ. ಇತಿಹಾಸದಲ್ಲಿ ದಾಖಲಾದ ಹೆಸರುಗಳನ್ನು ಬದಲಾಯಿಸುವುದರಿಂದ ಯಾವುದೋ ಒಂದು ನೆಲೆಯಲ್ಲಿ ಆತ್ಮತೃಪ್ತಿ ಪಡೆಯಲಷ್ಟೇ ಸಾಧ್ಯ. ಆದರೆ ಚಾರಿತ್ರಿಕ ಪ್ರಮಾದಗಳನ್ನು ಮುಂದಿಟ್ಟುಕೊಂಡು, ಸಮಕಾಲೀನ ಸಮಾಜದ ಸಮನ್ವಯದ ನೆಲೆಗಳನ್ನು ಕದಡುವುದು ಆತ್ಮದ್ರೋಹವಾಗುತ್ತದೆ. ಸಮನ್ವಯ ಮತ್ತು ಸೌಹಾರ್ದತೆಯ ಬೇರುಗಳು ಸಡಿಲವಾದಷ್ಟೂ ಸಮಾಜದಲ್ಲಿ ಬೌದ್ಧಿಕ ನಿಷ್ಕ್ರಿಯತೆ ಹೆಚ್ಚಾಗುತ್ತದೆ. ಜಾಣ ಕುರುಡು ಹೆಚ್ಚಾಗುತ್ತದೆ. ನೆರೆಯವರು ಹೊರೆಯಾಗುತ್ತಾರೆ. ಹೊರೆಯಾದವರು ನಿಕೃಷ್ಟರಾಗುತ್ತಾರೆ. ಈ ಆಲೋಚನಾ ಲಹರಿ ಭಾರತದ ಶತಮಾನದ ಪೀಳಿಗೆಯನ್ನು ಆವರಿಸುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದೆ.
ಈ ಪೀಳಿಗೆಯ ಮನಸುಗಳಲ್ಲಿ ಮನುಜ ಸೂಕ್ಷ್ಮತೆ ಮತ್ತು ಸಂವೇದನೆಯ ಬೀಜ ಬಿತ್ತುವುದು ನಮ್ಮ ಆದ್ಯತೆಯಾಗಬೇಕಿದೆ.