ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗುಜರಾತ್ ಸೋಲಲು ಕಾರಣ ಸಾಕಷ್ಟು ಇವೆ. ಪಕ್ಷ ಇಷ್ಟು ಕೆಳ ಮಟ್ಟಕ್ಕೆ ಬರಲು ಪ್ರಚಾರ ಮಾಡಿಲ್ಲ. ಕಳೆದ ಬಾರಿ ಅತೀ ಹೆಚ್ಚು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದೆವು. ಆದರೆ ಹಲವು ಕಡೆ ಕಡಿಮೆ ಅಂತರದಲ್ಲಿ ಸೋತಿದ್ದೆವು. ಈ ಸಲ ಹೊಸದಾಗಿ ಬಂದು ಸ್ಪರ್ಧಿಸಿರುವ ಪಕ್ಷ ಬಂದು ನಮ್ಮ ಮತ ಕೆಡಿಸಿವೆ. ಅಸ್ತಿತ್ವದಲ್ಲಿ ಇಲ್ಲದ ಪಕ್ಷ ಬಂದು ಮತಗಳ ವಿಭಜನೆ ಮಾಡಿದೆ ಎಂದರು.
ಕಾಂಗ್ರೆಸ್ ಪಕ್ಷದ ಹೋರಾಟ ನಿರಂತರವಾಗಿದ್ದು, ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಒಂದು ದಿನದ ಸೋಲು-ಗೆಲುವು ಶಾಶ್ವತವಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಇದು ಸೈದ್ಧಾಂತಿಕ ಸಂಘರ್ಷವಾಗಿದ್ದು, ಸೋಲು-ಗೆಲುವು ಸಂಭವಿಸಬಹುದು. ನಮ್ಮ ಲೋಪಗಳನ್ನು ಸರಿಪಡಿಸಿಕೊಂಡು ಹೋರಾಟ ಮುಂದುವರಿಸಲಿದ್ದೇವೆ ಎಂದು ತಿಳಿಸಿದರು.
ಗುಜರಾತಿನಲ್ಲಿ ಒಂದು ವರ್ಷದಿಂದ ಮೋದಿ ಪ್ರಚಾರ ಮಾಡಿದ್ದಾರೆ. ಮಣ್ಣಿನ ಮಗ ಅಂತಾ ಹೇಳಿದ್ದು, ದಾಖಲೆಯ ಪ್ರದರ್ಶನಗಳನ್ನು ನೀಡಿದ್ದು, ಮತದಾನದ ದಿನ ನಡೆದುಕೊಂಡು ಬಂದು ಮತದಾನ ಮಾಡಿದ ಗಿಮಿಕ್ಗಳು ಹೀಗೆ ಬಿಜೆಪಿ ತಂತ್ರಗಳನ್ನು ಪಟ್ಟಿ ಮಾಡಬಹುದಾಗಿದೆ. ಆದರೆ ಅವರ ಪ್ರಚಾರದ ಹಕ್ಕು ಅವರು ಮಾಡಿದ್ದಾರೆ. ಗುಜರಾತ್ ವಿಧಾನಸಭೆ ಸೋಲನ್ನು ಒಪ್ಪಿಕೊಳ್ಳುತ್ತೇವೆ. ವಿಜೇತರನ್ನು ಅಭಿನಂದಿಸುತ್ತೇವೆ ಎಂದು ಹೇಳಿದರು.
ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಭಾರತ್ ಜೋಡೋ ಯಾತ್ರೆ ಬಗ್ಗೆ ಅಲ್ಲಿನ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಹೋದಾಗ ಕೂಡ ಉತ್ತಮ ಸ್ಪಂದನೆ ಸಿಕ್ಕಿತ್ತು. ಹೀಗಾಗಿ ಉತ್ತಮ ಬಹುಮತದಿಂದ ಪಕ್ಷಕ್ಕೆ ಗೆಲುವು ಬಂದಿದೆ. ಕಾಂಗ್ರೆಸ್ ಗೆಲುವಿಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಸಹಾಯ ಮಾಡಿದೆ ಎಂದು ಹೇಳಿದರು.
ಹಿಮಾಚಲ ಪ್ರದೇಶ ರಾಜ್ಯಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದ ಪಟ್ಟಿ ಕೊಟ್ಟಿದ್ದೆವು. ಅದಕ್ಕೆ ನಮಗೆ ಅಲ್ಲಿನ ಜನರು ಒಗ್ಗೂಡಿಸಿ ಗೆಲ್ಲಿಸಿದ್ದಾರೆ. ಇದರಲ್ಲಿ ಹೆಚ್ಚಿನ ಪಾತ್ರ ಪ್ರಿಯಾಂಕಾ ವಾದ್ರಾದ್ದು ಇದೆ. ಸಾಕಷ್ಟು ರ್ಯಾಲಿ, ಸಮಾವೇಶ ಮಾಡಿದ್ದಾರೆ. ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.