ಕಲಬುರಗಿ: ಎರಡು ದಶಕಗಳ ಹಿಂದೆ ಅಸ್ತಿತ್ವಕ್ಕೆ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಸ್ತಿತ್ವ ಬಂದರೂ ಸಹ, ಇಂದಿಗೂ ಹೆಸರಿಗೆ ಮಾತ್ರ ಕಾರ್ಯನಿರ್ವಹಿಸುತ್ತಿದೆ ವಿನಃ ಮಂಡಳಿಯಿಂದ ತೊಗರಿ ಬೆಳೆಗಾರರ ಹಿತರಕ್ಷಣೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಾಗಾಗಿ, ಸರ್ಕಾರವು ಹಾಲು ಉತ್ಪಾದಕರ ಸಹಕಾರ ಮಹಾಮಂಡಳಿ(ಕೆಎಂಎಫ್) ಮಾದರಿಯಲ್ಲಿ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಹಿಸುವಂತೆ ಯೋಜನೆ ರೂಪಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ಆಗ್ರಹಿಸಿದೆ.
ಡಿಸೆಂಬರ್ 04ರಂದು ಕೆಪಿಆರ್ಎಸ್ ವತಿಯಿಂದ ಹಮ್ಮಿಕೊಂಡಿದ್ದ ತೊಗರಿ ಬೆಳೆಗಾರರ ರಾಜ್ಯಮಟ್ಟದ ವಿಚಾರ ಸಂಕಿರಣ ಡಾ. ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪದಾಧಿಕಾರಿಗಳು ಪಾಲ್ಗೊಂಡು ತಮ್ಮ ಸಲಹೆಗಳನ್ನು ನೀಡಿದರು.
ವಿಚಾರ ಸಂಕಿರಣವನ್ನು ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಅಶೋಕ ಧಾವಲೆ ಉದ್ಘಾಟನೆ ಮಾಡಿ ಮಾತನಾಡಿದರು. ಕೇಂದ್ರದ ಬಿಜೆಪಿ ಸರ್ಕಾರವು ವಿದೇಶದ ತೊಗರಿ ಬೇಳೆಗಳ ಮೇಲಿನ ಆಮದು ಸುಂಕವನ್ನು ಶೂನ್ಯಕ್ಕೆ ಇಳಿಸಿದ್ದಾರೆ. ಇದರ ಫಲವಾಗಿ 7 ಲಕ್ಷ ಟನ್ ಭಾರತಕ್ಕೆ ಬಂದಿದೆ. ವಿದೇಶದವರಿಗೆ ಆದ್ಯತೆಯಾಗಿ ಪರಿಗಣಿಸಿದರೆ, ಸ್ಥಳೀಯ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗದಂತಾಗಿ ರೈತರ ಬದುಕು ಯಾತನಮಯವಾಗಲಿದೆ. ವಿದೇಶಿ ಬೇಳೆಗಳ ಆಮದು ನಿಲ್ಲಿಸಬೇಕು. ತೊಗರಿ ಖರೀದಿಯಲ್ಲಿ ದೊಡ್ಡ ಬಂಡವಾಳದಾರರ ಏಕಸ್ವಾಮ್ಯತೆ ಕೊನೆಗಾಣಿಸಿ ಸರ್ಕಾರವೇ ರೈತರಿಂದ ತೊಗರಿ ಬೆಳೆಯನ್ನು ನೆರವಾಗಿ ಖರೀದಿ ಮಾಡಬೇಕು. ಅತಿವೃಷ್ಟಿ ಹಾಗೂ ನೆಟೆ ರೋಗದಿಂದ ಬೆಳೆ ಕಳೆದುಕೊಂಡ ರೈತರ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಕೊಡಬೇಕು’ ಎಂದು ವಿಚಾರ ಸಂಕಿರಣದಲ್ಲಿ ಆಗ್ರಹಿಸಲಾಗಿದೆ.
ಬಿಜೆಪಿಯದ್ದು ಬ್ರಿಟಿಷ್ ಮಾದರಿ ಆಡಳಿತ
‘ಈ ಹಿಂದೆ ಧರ್ಮ ಹಾಗೂ ಜಾತಿಯ ಹೆಸರಲ್ಲಿ ಜನರನ್ನು ವಿಭಜಿಸುವ ಮೂಲಕ ಬ್ರಿಟಿಷರು 200 ವರ್ಷಗಳ ಕಾಲ ಭಾರತವನ್ನು ಆಳಿದ್ದರು. ಅದೇ ಮಾದರಿಯಲ್ಲಿ ಮೋದಿ–ಅಮಿತ್ ಶಾ ಜೋಡಿಯ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ. ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತವು ಇಂದು ಗುಲಾಮಿ ಸರ್ಕಾರದಂತೆ ನಡೆಯುತ್ತಿದೆ.. ರೈತರನ್ನು ಕಡೆಗಣಿಸಿ ಅಂಬಾನಿ, ಅದಾನಿ ಅಂತಹ ಬಂಡವಾಳಶಾಹಿಗಳ ಪರವಾಗಿ ನಿಂತಿದೆ. ಧರ್ಮ, ಜಾತಿ ಹಾಗೂ ಭಾಷೆಯ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಿ ದೇಶವನ್ನು ವಿಭಜಿಸುವ ಕೆಲಸಗಳಲ್ಲಿ ಬಿಜೆಪಿ ತೊಡಗಿದೆ. ರೈತರ ಹೋರಾಟಗಳು ಮುಂದಿನ ದಿನಗಳಲ್ಲಿ ರಾಜನೀತಿ ಆಗಬೇಕು. ಚುನಾವಣೆಯೇ ಪ್ರಮುಖ ಅಸ್ತ್ರವಾಗಬೇಕು ಎಂದು ಡಾ. ಅಶೋಕ ಧವಳೆ ಹೇಳಿದರು.
ವಿಚಾರ ಸಂಕಿರಣದಲ್ಲಿ ಪ್ರಮುಖವಾದ ನಿರ್ಣಯಗಳನ್ನು ಅಂಗೀಕರಿಸಲಾಯಿತು. ತೊಗರಿ ಬೆಂಬಲ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಶೋಷಣೆಯಾಗುತ್ತಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯತನ ಮತ್ತು ಬೆಳೆವಿಮೆ ಮಂಜೂರಾತಿಯಲ್ಲೂ ಅನ್ಯಾಯದಿಂದಾಗಿ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಇದಕ್ಕೆ ಪ್ರಬಲವಾದಂತಹ ವ್ಯಾಪಕ ಹೋರಾಟವೇ ಪರಿಹಾರವಾಗಿದೆ. ಪ್ರಮುಖವಾಗಿ ಜನಪ್ರತಿನಿಧಿ ತಮ್ಮ ಬಳಿ ಬಂದಾಗ ತೊಗರಿ ಬೆಲೆ ಹೆಚ್ಚಾಗಲು ಏನು ಮಾಡುತ್ತೀರಿ? ಎಂದು ಪ್ರತಿಯೊಬ್ಬ ರೈತರು ಕೇಳಬೇಕು. ಹೀಗೆ ಕೇಳುವುದು ಒಂದು ಜನಾಂದೋಲನವಾದರೆ ಮಾತ್ರ ನಿಜವಾದ ಸಮಸ್ಯೆಗೆ ಪರಿಹಾರ ಕಂಡುಕೊಂಡುಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ಸಂದೇಶ ನೀಡಲಾಗಿದೆ.
ಕಲಬುರಗಿ ಜಿಲ್ಲೆ ವಾಣಿಜ್ಯ ಬೆಳೆ ತೊಗರಿ ನಾಡು ಎಂದು ಕರೆಯಲಾಗುತ್ತದೆ. ಆದರೆ ಇಂತಹ ನಾಡಿನಲ್ಲಿ ತೊಗರಿ ಬೆಳೆಗಾರರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ತೊಗರಿ ಬೆಳೆಗಾರರು ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಾರೆ. ಆದರೂ ಸರಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ. ಪ್ರತಿ ವರ್ಷ ತೊಗರಿ ಬೆಳೆಗಾರರು ಬೆಲೆ ಕುಸಿತದ ಭೀತಿ ಎದುರಿಸುತ್ತಾರೆ.
ಪ್ರತ್ಯೇಕ ತೊಗರಿ ಮಂಡಳಿಗೆ ₹25 ಕೋಟಿ ಅನುದಾನ ನೀಡಬೇಕು. ಪ್ರತಿ ಕ್ವಿಂಟಲ್ ತೊಗರಿಗೆ ₹ 12 ಸಾವಿರ ಕನಿಷ್ಠ ಬೆಂಬಲ ಬೆಲೆ ನೀಡಿ, ಗ್ರಾಮ ಪಂಚಾಯಿತಿಗೆ ಒಂದು ತೊಗರಿ ಖರೀದಿ ಕೇಂದ್ರ ತೆರೆಯಬೇಕು. ಅಕ್ಷರ ದಾಸೋಹ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ತೊಗರಿ ಬೇಳೆ ಪೂರೈಕೆ ಮಾಡಬೇಕು. ಬೆಳೆ ಸಂರಕ್ಷಣೆಗೆ ಸಂಶೋಧನೆ ನಡೆಸಿ, ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನ ಪರಿಚಯಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ.
ತೊಗರಿ ಬೆಳೆಗಾರರ ಹಿತಕಾಪಾಡಲು ಅಸ್ತಿತ್ವಕ್ಕೆ ಬಂದಿರುವ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ತೊಗರಿ ಖರೀದಿಯೂ ನಡೆಸದೇ ಹೊಸ ತಳಿ ಅಭಿವೃದ್ಧಿ ಮಾಡದೆ ಮಂಡಳಿ ಇದ್ದೂ ಇಲ್ಲದಂತಾಗಿದೆ. ಕಲಬುರಗಿಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ, ಬಂಪರೆ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಆದರೆ ಈ ಬಾರಿ ಒಂದೆಡೆ ಬರ, ಇನ್ನೊಂದೆಡೆ ನೆರೆ. ಆದರೆ ಎರಡು ಪಾರಾಗಿ ಬಂದರೆ ಮಾರುಕಟ್ಟೆಯಲ್ಲಿ ತೊಗರಿಗೆ ಸೂಕ್ತ ಬೆಲೆ ಸಿಗದೆ ರೈತ ಕಂಗಾಲಾಗುತ್ತಾನೆ. ಮಾರುಕಟ್ಟೆಯಲ್ಲಿ ತೊಗರಿಗೆ ಬೆಲೆ ಕುಸಿತವಾಗ ಮಂಡಳಿ ಮಾರುಕಟ್ಟೆ ಪ್ರವೇಶಿಸಿ ತೊಗರಿ ಖರೀದಿಸುತ್ತಿತ್ತು. ಆದರೆ ಕ್ರಮೇಣ ತೊಗರಿ ಖರೀದಿ ನಾಫೆಡ್ ಎಂಬ ಏಜೆನ್ಸಿಗೆ ಜವಾಬ್ದಾರಿ ನೀಡಿದ್ದರಿಂದ ಮಂಡಳಿ ಇದ್ದು ಇಲ್ಲದಂತಾಗಿದೆ. ಹೆಸರಿಗೆ ಮಾತ್ರ ಉಪ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ ಎಂದು ವಿವರಿಸಲಾಯಿತು.
ಸಂಸದರನ್ನು ಪ್ರಶ್ನಿಸಿ
ಕೆಪಿಆರ್ಎಸ್ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಮಾತನಾಡಿ ‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದೇನೆ ಎಂದು ಗೆದ್ದು ಬೀಗುತ್ತಿರುವ ಸಂಸದ ಡಾ.ಉಮೇಶ ಜಿ. ಜಾಧವ್ ಅವರು ಸಂಸತ್ತನಲ್ಲಿ ಏನು ಮಾಡುತ್ತಿದ್ದಾರೆʼ ಎಂದು ಪ್ರಶ್ನಿಸಿದರು. ಜಿಲ್ಲೆಯ ಸಂಸದರು ರೈತರ ಪರವಾಗಿ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಅವರು. ತೊಗರಿಗೆ ಬೆಂಬಲ ಬೆಲೆ ಕೊಡಿಸಲು ಕೇಂದ್ರದ ಮೇಲೆ ಒತ್ತಡ ಹಾಕಿತ್ತಿಲ್ಲ. ರೈತರು ಉಮೇಶ ಜಾಧವ ಅವರನ್ನು ಹಿಡಿದು ನಿಲ್ಲಿಸಿ ಕೇಳಬೇಕು’ ಎಂದರು.
ವಿಚಾರ ಸಂಕಿರಣದಲ್ಲಿ ಕೆಪಿಆರ್ಎಸ್ ಜಿಲ್ಲಾ ಕಾರ್ಯದರ್ಶಿ ಡಾ. ಸಾಯಬಣ್ಣ ಗುಡುಬಾ, ಖಜಾಂಚಿ ಸುಭಾಷ ಹೊಸಮನಿ, ಯಾದಗಿರಿ ಜಿಲ್ಲಾ ಅಧ್ಯಕ್ಷ ಚನ್ನಪ್ಪ ಆನೆಗುಂದಿ, ಕಾರ್ಯದರ್ಶಿ ಎಸ್.ಎಂ.ಸಾಗರ, ರಾಯಚೂರು ಜಿಲ್ಲಾ ಅಧ್ಯಕ್ಷ ಡಿ.ವೀರಣ್ಣಗೌಡ, ಕಾರ್ಯದರ್ಶಿ ನರಸಣ್ಣ ನಾಯಕ, ವಿಜಯಪುರ ಜಿಲ್ಲಾ ಅಧ್ಯಕ್ಷ ಅಣ್ಣರಾಯ ಇಳಿಗೆರಾ, ಕಾರ್ಯದರ್ಶಿ ಭೀಮರಾಯ ಪೂಜಾರಿ, ಜಿಲ್ಲಾ ಪದಾಧಿಕಾರಿಗಳು ಇದ್ದರು.
ಈ ಬಾರಿ ಸರಾಸರಿಗಿಂತ ಅಧಿಕ ಮಳೆಯಾಗಿದ್ದು, ರಾಜ್ಯದಲ್ಲಿ ಅತಿವೃಷ್ಟಿಯಾಗಿದೆ. ಇದರಿಂದ ಈ ಬಾರಿ ತೊಗರಿ 4,80,645 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ, ಅತಿವೃಷ್ಟಿ ಮಳೆಯಿಂದ 1,50,000 ಹೆಕ್ಟೇರ್ ತೊಗರಿ ಬೆಳೆ ಹಾನಿಯಾಗಿದೆ. ತೊಗರಿ ಬೆಳೆಗಾರರ ಬದುಕು ಬೀದಿಗೆ ಬಿದ್ದಂತಾಗಿದೆ. ತೊಗರಿ ಬೆಳೆ ಗೊಡ್ಡು, ನೆಟೆ ರೋಗಕ್ಕೆ ತುತ್ತಾಗಿದೆ. ಹೀಗಾಗಿ ತೊಗರಿ ಬೆಳೆಗಾರರ ರೈತರ ರಕ್ಷಣೆಗೆ ಸರ್ಕಾರ ಧಾವಿಸಬೇಕೆಂದು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡರು ಆಗ್ರಹಿಸಿದರು. ನಿರ್ಣಯವನ್ನು ರಾಯಚೂರು ಜಿಲ್ಲೆ ಕೆಪಿಆರ್ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಮಂಡನೆ ಮಾಡಿದರು. ಚನ್ನಪ್ಪ ಆನೇಗುಂದಿ ಯಾದಗಿರಿ ಕೆಪಿಆರ್ಎಸ್ ಜಿಲ್ಲಾ ಅಧ್ಯಕ್ಷರು ಇವರು ಅನುಮೋದನೆ ಮಾಡಿದರು.
ತೊಗರಿ ಬೆಳೆಗಾರರ ಸಂರಕ್ಷಣೆ ಕೈಗೊಂಡ ನಿರ್ಣಯ.
- ತೊಗರಿ ಮಂಡಳಿಯನ್ನು ದ್ವಿದಳ ಧಾನ್ಯ ಮಂಡಳಿಯನ್ನಾಗಿ ಮಾಡಿರುವುದು ಕೈಬಿಡಬೇಕು. ತೊಗರಿ ಮಂಡಳಿ ಬಲವರ್ಧನೆಗೆ ಸರಕಾರ ಕನಿಷ್ಟ 25 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು.
- ಡಾ. ಎಮ್.ಎಸ್.ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ತೊಗರಿಗೆ ಬೆಳೆಗೆ ಎಮ್.ಎಸ್.ಪಿ ಕಾನೂನು ಜಾರಿಯಾಗಬೇಕು. ರಾಜ್ಯದ ನ್ಯಾಯಬೆಲೆ ಅಂಗಡಿಗಳಿಗೆ ತೊಗರಿ ಬೆಳೆಯನ್ನು ಪೂರೈಸುವಂತೆ ಸರಕಾರ ಸೂಕ್ತ ಕ್ರಮಗಳನ್ನು ಜಾರಿಗೊಳಿಸಬೇಕು.
- ಕ್ವಿಂಟಾಲ್ ತೊಗರಿಗೆ ಕನಿಷ್ಟ 12,000 ರೂಪಾಯಿ ಬೆಂಬಲ ಬೆಲೆ ಜಾರಿ ಮಾಡಬೇಕು. ಪಂಚಾಯತಿ ಗೊಂದು ತೊಗರಿ ಖರೀದಿ ಕೇಂದ್ರ ತೆರೆಯಬೇಕು. ಅಕ್ಷರ ದಾಸೋಹ ಅಡಿ ತೊಗರಿ ಬೆಳೆ ಪೂರೈಕೆಯಾಬೇಕು. ತೊಗರಿ ಬೆಳೆ ಸಂರಕ್ಷಣೆ ಮಾಡಲು ತೊಗರಿ ಹೆಚ್ಚಿನ ಸಂಶೋಧನೆಯಾಗಬೇಕು. ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನ ಜಾರಿಯಾಬೇಕು.
- ಮೊಜಾಂಬಿಕ್-2.86 ಲಕ್ಷ ಟನ್, ತಾಂಜಾನಿಯ 9ಲಕ್ಷ ಟನ್, ಮ್ಯಾನಮರ್ 1.7 ಲಕ್ಷ ಟನ್, ಮಾಲ್ವಾ .55 ಲಕ್ಷ ಟನ್ ವಿದೇಶದಿಂದ ತೊಗರಿ ಬೆಳೆಯನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಈ ಕೂಡಲೇ ಆಮದು ಪ್ರಕ್ರಿಯೆಯನ್ನು ತಕ್ಷಣ ಆಮದು ಮಾಡಿಕೊಳ್ಳುತ್ತಿರುವುದನ್ನು ನಿರ್ಭಂದಿಸಬೇಕು ಹಾಗೂ ಅಮದು ಸುಂಕವನ್ನು ಕನಿಷ್ಠ ಶೇ. 100ಕ್ಕೆ ಹೆಚ್ಚಿಸಬೇಕು.
- ತೊಗರಿ ಬೆಳೆಗಾರರನ್ನು ಸಂರಕ್ಷಣೆ ಮಾಡಲು, ತೊಗರಿ ಮಂಡಿ ಬಲಪಡಿಸಲು, ಸ್ವಾಮಿನಾಥನ್ ಶಿಪಾರಸ್ಸು ಪ್ರಕಾರ ಪ್ರತಿ ಕ್ವಿಂಟಾಲ್ ಗೆ 12,000 ರೂ ನಂತೆ ಎಂ.ಎಸ್ ಪಿ ಘೋಷಿಸಲು ಆಗ್ರಹಿಸಿ ತೊಗರಿ ಬೆಳೆಗಾರರ ವಿಚಾರ ಸಂಕಿರಣದಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು.