ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರನ್ನಾಗಿ ಪರಿಗಣಿಸಿಬೇಕು. ಅಂಗನವಾಡಿಯಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕು. ನೌಕರರಿಗೆ ಗ್ರಾಚ್ಯುಟಿ ಪಾವತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ(ಸಿಐಟಿಯು) ನೇತೃತ್ವದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಸೇರಿದಂತೆ 30 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ. ಜಿಲ್ಲಾಧಿಕಾರಿಗಳ ಕಛೇರ ಮುಂಭಾಗ ನಡೆದ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಪ್ರತಿ ಜಿಲ್ಲೆಯಲ್ಲೂ ಸಾವಿರಕ್ಕೂ ಹೆಚ್ಚು ಜನ ಅಂಗನವಾಡಿ ನೌಕರರು ಭಾಗಿಯಾಗಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಅಧ್ಯಕ್ಷರಾದ ಎಸ್ ವರಲಕ್ಷ್ಮಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, “ಕಳೆದ ಏಪ್ರಿಲ್ 25 ರಂದು ಸುಪ್ರೀಂ ಕೋರ್ಟ್ 1972ರ ಗ್ರಾಚ್ಯುಟಿ ಕಾಯ್ದೆಯ ಪ್ರಕಾರ ʼಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಆರ್ಹರುʼ ಎಂಬ ಐತಿಹಾಸಿಕ ತೀರ್ಪು ನೀಡಿದೆ. 18 ವರ್ಷಗಳ ನಿರಂತರ ಹೋರಾಟಕ್ಕೆ ಫಲ ಸಿಕ್ಕಿದೆ. ಹಾಗಾಗಿ ರಾಜ್ಯದಾದ್ಯಂತ ಸಾವಿರಾರು ನಿವೃತ್ತಿ ನೌಕರರು ಸಿಡಿಪಿಒ, ಉಪ ನಿರ್ದೇಶಕರು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದು, ಕೆಲವೆಡೆ ಅಧಿಕಾರಿಗಳು ಅರ್ಜಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಮಾತ್ರವಲ್ಲ, ಹಲವಾರು ನೌಕರರಿಗೆ ನೇಮಕಾತಿ ಮತ್ತು ನಿವೃತ್ತಿಯ ಆದೇಶಗಳನ್ನು ನೀಡಿಲ್ಲ. ಹಾಗಾಗಿ ಈ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಕರ್ತವ್ಯ ನಿರತ ಅಂಗನವಾಡಿ ನೌಕರರು ಮತ್ತು ನಿವೃತ್ತ ನೌಕರರಿಗೆಲ್ಲ ಗ್ರಾಚ್ಯುಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶನ ನೀಡಬೇಕು” ಎಂದು ಆಗ್ರಹಿಸಿದರು.
‘ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಬಲಿಷ್ಠಗೊಳಿಸಬೇಕು. ಐಸಿಡಿಎಸ್ ಮಾರ್ಗಸೂಚಿಗಳ ಪ್ರಕಾರ ಆರು ಸೇವೆಗಳಿಗೆ ಮಾತ್ರ ಅಂಗನವಾಡಿ ನೌಕರರನ್ನು ಬಳಸಿಕೊಳ್ಳಬೇಕು. “ಅಂಗನವಾಡಿ ನೌಕರರು ಎಂಬುದು ಹೆಸರಿಗೆ ಮಾತ್ರ. ಯೋಜನೇತರವಾಗಿ ಸರ್ವೆ, ಸ್ತೀ ಶಕ್ತಿ ಸಂಘ, ಭಾಗ್ಯಲಕ್ಷ್ಮಿ, ಮಾತೃವಂದನಾ ಕಾರ್ಯಕ್ರಮಗಳು, ಇಲಾಖೇತರವಾಗಿ ಕಂದಾಯ, ಚುನಾವಣೆ, ಸರ್ಕಾರದ ಸಾರ್ವಜನಿಕ ಹಬ್ಬ, ಮಂತ್ರಿ, ಮುಖ್ಯಮಂತ್ರಿಗಳ ಕಾರ್ಯಕ್ರಮ ಸಂಬಂಧಿ ಕೆಲಸಗಳನ್ನು ಮಾಡಿಸುವುದನ್ನು ನಿಲ್ಲಿಸಬೇಕು. ಐಸಿಡಿಎಸ್ ಉದ್ದೇಶಕ್ಕೆ ಧಕ್ಕೆ ತರಲಾಗುತ್ತಿದೆ’ ಎಂದು ಆರೋಪಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ ಮಾತನಾಡಿ, ಕೇಂದ್ರ ಸರ್ಕಾರ ಅಪೌಷ್ಠಿಕತೆ ನಿವಾರಣೆ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಹಣದಲ್ಲಿ ₹ 65 ಸಾವಿರ ಕೋಟಿಯಷ್ಟು ಕಡಿಮೆ ಮಾಡಿರುವುದು ಖಂಡನೀಯ ಎಂದರು. ಭಾರತದಲ್ಲಿ ಹಸಿವಿನ ಸೂಚ್ಯಾಂಕ ಹೆಚ್ಚಾಗಿದ್ದು ಮಕ್ಕಳು ಹಾಗೂ ತಾಯಂದಿರಲ್ಲಿ ಅಪೌಷ್ಠಿಕತೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಅನುದಾನ ಹೆಚ್ಚಳ ಮಾಡುವ ಬದಲಿಗೆ ಐಸಿಡಿಎಸ್ ಬಗ್ಗೆ ನಿರ್ಲಕ್ಷ ತಾಳಿರುವುದು ಸರಿಯಲ್ಲ ಎಂದು ಹೇಳಿದರು.
ಅಂಗನವಾಡಿ ನೌಕರರಿಗೆ ನೀಡುವ ಗೌರವಧನವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನೀಡುತ್ತಿರುವುದು ಸರಿಯಲ್ಲ. ಮೊಟ್ಟೆ, ಎಲ್ಪಿಜಿ ಗ್ಯಾಸ್ ಸಿಲಿಂಡರ್, ಬಾಡಿಗೆ, ಪ್ಲೆಕ್ಸಿಫಂಡ್ ಸಮಯಕ್ಕೆ ಸರಿಯಾಗಿ ನೀಡದೆ ಪ್ರತಿ ತಿಂಗಳು ಕಾರ್ಯಕರ್ತೆಯರು ಕೈಯಿಂದ ಭರಿಸುವಂತಾಗಿದೆ ಎಂದು ದೂರಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಕೊಟ್ಟಿರುವ ಮೊಬೈಲ್ ಪೋನ್ ಅನ್ನು ಮೊದಲು ವಾಪಸ್ ಪಡೆಯಿರಿ. ಮೊಬೈಲ್ನಲ್ಲಿ ಮೂರು ಬಾರಿ, ಲಿಖಿತ ರೂಪದಲ್ಲಿ ಪ್ರತಿ ನಿತ್ಯ ಎರಡು ಬಾರಿ ಹಾಜರಾತಿ ಪುಸ್ತಕವನ್ನು ಬರೆಯಬೇಕು. ಇದು ಇಡೀ ದಿನ ಸಮಯವನ್ನು ಹಾಳು ಮಾಡುತ್ತಿದೆ. ಮಕ್ಕಳ ಕಲಿಕೆಯಲ್ಲಿ ತೊಡಗಲು ಕಾರ್ಯಕರ್ತೆಗೆ ಅಡ್ಡಿಯಾಗುತ್ತಿದೆ. ಹಾಗಾಗಿ ದಾಖಲಾತಿ ಪುಸ್ತಕ ಅಥವಾ ಮೊಬೈಲ್ ಪೋನ್ ಯಾವುದಾದರು ಒಂದು ವಿಧಾನದಲ್ಲಿ ಮಾತ್ರ ಮಾಹಿತಿಗಳನ್ನು ದಾಖಲಿಸುವ ನಿಯಮ ಮಾಡಿ ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.