“ಆದರೆ ನೀವು ಗೋದೀ ಮೀಡಿಯಾದ ಗುಲಾಮಿಕೆಯಿಂದ ಹೊರ ಬಂದೇ ಬರುತ್ತೀರಾ, ಇದು ಎಲ್ಲರ ಲಡಾಯಿ”
“ಪ್ರಸ್ತುತ ಸನ್ನಿವೇಶದಲ್ಲಿ ಕುರ್ಚಿಯಲ್ಲಿ ಕೂತಿರುವ ಪಾತ್ರಧಾರಿಗಳ ಕನಸುಗಳು ಮುರಿಯುವದನ್ನು ನೋಡಿದ್ದೇನೆ, ಎಲ್ಲರೂ ನೋಡಿದ್ದೀರಾ; ಸಂಸ್ಥೆಗಳು ಧ್ವಂಸವಾಗುವತ್ತಿರುವುದನ್ನು ನೀವೂ ನೋಡಿದ್ಧೀರಾ; ದ್ವೇಷದ ಸುಂಟರಗಾಳಿಯಲ್ಲಿ ಜನಗಳು ದಾರಿಗಾಣದಾಗಿರುವುದನ್ನು ನೋಡಿದ್ದೀರಾ. ಆದರೆ ಇದೇ ಸಮಯದಲ್ಲಿ ಹಲವು ಹೊಸ ಸಂಸ್ಥೆಗಳು ಹುಟ್ಟಿಕೊಂಡಿರುವುದನ್ನೂ ನೋಡಿದ್ದೇನೆ- ಶಾಹೀನ್ ಬಾಗ್ನಲ್ಲಿ, ರೈತರ ಹೋರಾಟದಲ್ಲಿ… ಜನತೆಯ ಸಂಸ್ಥೆಗಳು, ದರ್ಶಕರ ಸಂಸ್ಥೆಗಳು ಮೂಡಿ ಬರುವುದನ್ನು …ಇವೇ ನನ್ನನ್ನು ಬೆಂಬಲಿಸಿದವುಗಳು, ವಿಶ್ವಾಸ ಉಳಿಸಿದವುಗಳು, ಇವುಗಳ ಸಂಖ್ಯೆ ಕಡಿಮೆಯಿರಬಹುದು, ಆದರೆ ಇವು ಜನತೆಯೆಂಬ ಹೆಸರಿನ ಮರ ಒಣಗಿ ಹೋಗದಂತೆ ನೋಡಿಕೊಂಡಿವೆ”
“ಆದರೆ ನೀವು ಗೋದೀ ಮೀಡಿಯಾದ ಗುಲಾಮಿಕೆಯಿಂದ ಹೊರ ಬಂದೇ ಬರುತ್ತೀರಾ, ಇದು ಎಲ್ಲರ ಲಡಾಯಿ”
ಕೊನೆಗೂ ‘ಮುಖ್ಯಧಾರೆ’ಯರಾಷ್ಟ್ರೀಯ ವಾಹಿನಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಸ್ತುನಿಷ್ಟತೆಯನ್ನು, ಸ್ವಂತಿಕೆಯನ್ನು ಉಳಿಸಿ ಕೊಂಡಿದ್ದ ಎನ್ಡಿಟಿವಿ ದೇಶದ ಸೂಪರ್ ಶ್ರೀಮಂತ ಅದಾನಿಯ ಪಾಲಾಗುತ್ತಿದೆ. ಈ ಚಾನಲ್ನ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ಎನ್ಡಿಟಿವಿಯ ಪ್ರಾಯೋಜಕ ಸಂಸ್ಥೆ ಆರ್ಆರ್ಪಿಆರ್ ನ ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯ ಹಿಂದೆಯೇ ಈ ಗುಂಪಿನ ಹಿಂದಿ ಚಾನೆಲ್ ಎನ್ಡಿಟಿವಿ ಇಂಡಿಯಾದ ಹಿರಿಯ ಕಾರ್ಯಕಾರೀ ಸಂಪಾದಕರ ಸ್ಥಾನಕ್ಕೆ ಪ್ರಸಿದ್ಧ ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ ನೀಡಿರುವ ಸುದ್ದಿಯೂ ಬಂದಿದೆ.
ಅವರು ತನ್ನ ಯೂ ಟ್ಯೂಬ್ನಲ್ಲಿ ಇಂದು ಅಪ್ಲೋಡ್ ಮಾಡಿರುವ ವೀಡಿಯೋದಲ್ಲಿ ಇದನ್ನು ಪುಷ್ಟೀಕರಿಸಿದ್ದಾರೆ ಮತ್ತು ತನ್ನ ರಾಜೀನಾಮೆಗೆ ಕಾರಣಗಳನ್ನು ಕೊಡುತ್ತ ಕಾರ್ಪೊರೇಟ್ ಮಾಧ್ಯಮಗಳ ಈಗಿನ ಶೋಚನೀಯ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದ್ದಾರೆ.
ಇಂತಹದೊಂದು ದಿನ ಬರಲೇಬೇಕಾಗಿತ್ತು ಎನ್ನುವ ಅವರು, ದೇಶದಲ್ಲೀಗ ಬೇರೆ ಬೇರೆ ಹೆಸರಿನಲ್ಲಿ ಬಹಳಷ್ಟು ಚಾನಲ್ಗಳಿವೆ. ಆದರೆ ಎಲ್ಲವೂ ಗೋದೀ ಮೀಡಿಯಾಗಳು, ಮಡಿಲ ಮಾಧ್ಯಮಗಳು. ಅವು ಪತ್ರಿಕಾವೃತ್ತಿಯಲ್ಲಿರುವುದಾಗಿ ಹೇಳುತ್ತವೆ, ಆದರೆ ಪತ್ರಿಕಾವೃತ್ತಿಯಲ್ಲಿ ಇರುವುದೆಲ್ಲವನ್ನೂ ಮುಗಿಸಿ ಬಿಟ್ಟಿವೆ, ಮೂಲಭೂತ ನೀತಿಧರ್ಮಗಳನ್ನು ಕೂಡ ಎಂದು ಖೇದ ವ್ಯಕ್ತಪಡಿಸಿದರು.
“ಭಾರತದ ಪತ್ರಿಕೋದ್ಯೋಗದಲ್ಲಿ ಸುವರ್ಣಯುಗ ಎಂಬುದಿರಲಿಲ್ಲ, ನಿಜ. ಆದರೆ ಭಸ್ಮಯುಗವೂ ಇರಲಿಲ್ಲ. ಭಸ್ಮಯುಗ ಎಂದರೆ ನನ್ನ ಪ್ರಕಾರ ಪತ್ರಿಕಾವೃತ್ತಿಯಲ್ಲಿದ್ದ ಒಳ್ಳೆಯ ಅಂಶಗಳೆಲ್ಲವನ್ನೂ ವೇಗವಾಗಿ ಭಸ್ಮ ಮಾಡಲಾಗುತ್ತಿದೆ. ಈ ಮಡಿಲ ಮಾಧ್ಯಮಗಳು ಮತ್ತು ಸರಕಾರ ಪತ್ರಿಕೋದ್ಯಮದ ಕುರಿತ ತಮ್ಮ ಅರ್ಥವನ್ನು ನಿಮ್ಮ ಮೇಲೆ ಹೇರುತ್ತಿದ್ದಾರೆ” ಎಂದ ಅವರು ತನಗೆ ಇದೊಂದು ಎಂತಹ ಸಂಜೆಯೆಂದರೆ ಹಕ್ಕಿಗೆ ತನ್ನ ಗೂಡು ಕಾಣಿಸುತ್ತಿಲ್ಲ, ಬೇರೆ ಯಾರೋ ಅದನ್ನು ಒಯ್ದಿದ್ದಾರೆ, ಆದರೆ ಕಣ್ಣು ದಣಿಯುವವರೆಗೂ ವಿಸ್ತಾರವಾದ ಆಕಾಶ ಕಾಣುತ್ತಿದೆ ಎಂದು ನೋವಿನಿಂದ, ಆದರೆ ತನ್ನ ಎಂದಿನ ನಗುಮುಖದಿಂದಲೇ ಅವರು ಹೇಳುತ್ತಾರೆ.
26-27 ವರ್ಷಗಳ ಹಿಂದೆ ದರ್ಶಕರ ಪತ್ರಗಳನ್ನು ಓದಿ ಆ ಬಗ್ಗೆ ಆಂಕರುಗಳಿಗೆ, ಸುದ್ದಿ ತಯಾರಿಸುವರಿಗೆ ವರದಿ ತಯಾರಿಸುವ ಕೆಲಸದಿಂದ ಆರಂಭಿಸಿ , ನಂತರ ಅನುವಾದಕನಾಗಿ, ವರದಿಗಾರನಾಗಿ , ಕೊನೆಗೆ ಹಿರಿಯ ಕಾರ್ಯಕಾರಿ ಸಂಪಾದಕನ ಹುದ್ದೆಏರಿದ, ಈಗ ಅದರಿಂದ ಹೊರಬರಬೇಕಾಗಿರುವ ತನ್ನ ಬಗ್ಗೆ ಸಹಾನುಭೂತಿಯ ದನಿ ಬೇಡ ಎಂದು ಕೇಳಿಕೊಂಡಿದ್ದಾರೆ:
“ ಕೆಳಗಿಳಿಯುವುದು ವಿಮಾನದಿಂದ , ಆದರೆ ಮಾತು ಆರಂಭಿಸುವುದು ನಾನು ಚಾಯ್ವಾಲಾ ಎಂದು. ನನಗೆ ಇಂತಹ ಸಹಾನುಭೂತಿ ಕೇಳುವುದು, ಸಂಘರ್ಷವನ್ನು ಮಹಾನ್ಗೊಳಿಸುವುದು ಇಷ್ಟವಾಗವುದಿಲ್ಲ. ಈ ದೇಶದಲ್ಲಿ ಪ್ರತಿಯೊಬ್ಬನೂ ಬೆಟ್ಟ ಹತ್ತಲೇಬೇಕಾಗಿದೆ. ಏಮ್ಸ್ ಹೊರಗೆ ಕುಳಿತಿರುವ ತಮ್ಮ ಬಾಂಧವರ ಚಿಕಿತ್ಸೆಗೆ ಬಂದವರು ಎಂತಹ ಸವಾಲುಗಳನ್ನು ಎದುರಿಸಿದ್ದಾರೆ ಕೇಳಿದ್ದೀರಾ.. “
ಬಹಳ ದಿನ ದ್ವೇಷಕ್ಕೆ ಗುಲಾಮರಾಗಿರರು
“ಪ್ರಸ್ತುತ ಸನ್ನಿವೇಶದಲ್ಲಿ ಕುರ್ಚಿಯಲ್ಲಿ ಕೂತಿರುವ ಪಾತ್ರಧಾರಿಗಳ ಕನಸುಗಳು ಮುರಿಯುವದನ್ನು ನೋಡಿದ್ದೇನೆ, ಎಲ್ಲರೂ ನೋಡಿದ್ದೀರಾ; ಸಂಸ್ಥೆಗಳು ಧ್ವಂಸವಾಗುವತ್ತಿರುವುದನ್ನು ನೀವೂ ನೋಡಿದ್ಧೀರಾ; ದ್ವೇಷದ ಸುಂಟರಗಾಳಿಯಲ್ಲಿ ಜನಗಳು ದಾರಿಗಾಣದಾಗಿರುವುದನ್ನು ನೋಡಿದ್ದೀರಾ. ಆದರೆ ಇದೇ ಸಮಯದಲ್ಲಿ ಹಲವು ಹೊಸ ಸಂಸ್ಥೆಗಳು ಹುಟ್ಟಿಕೊಂಡಿರುವುದನ್ನೂ ನೋಡಿದ್ದೇನೆ- ಶಾಹೀನ್ ಬಾಗ್ನಲ್ಲಿ, ರೈತರ ಹೋರಾಟದಲ್ಲಿ… ಜನತೆಯ ಸಂಸ್ಥೆಗಳು, ದರ್ಶಕರ ಸಂಸ್ಥೆಗಳು ಮೂಡಿ ಬರುವುದನ್ನು …ಇವೇ ನನ್ನನ್ನು ಬೆಂಬಲಿಸಿದವುಗಳು, ವಿಶ್ವಾಸ ಉಳಿಸಿದವುಗಳು, ಇವುಗಳ ಸಂಖ್ಯೆ ಕಡಿಮೆಯಿರಬಹುದು, ಆದರೆ ಇವು ಜನತೆಯೆಂಬ ಹೆಸರಿನ ಮರ ಒಣಗಿ ಹೋಗದಂತೆ ನೋಡಿಕೊಂಡಿವೆ”ಎಂದು ಅವರು ಈ ಬಗ್ಗೆ ನೆನಪಿಸಿಕೊಳ್ಳುತ್ತ ಹೇಳಿದರು.
ನಿಜ, ಇಂದು ಆಳುವವರು ಇಡೀ ವ್ಯವಸ್ಥೆ ನಮ್ಮ ಕೈಲ್ಲಿದೆ, ಜನತೆಗೇನೂ ಬೆಲೆಯಿಲ್ಲ, ಮಾಧ್ಯಮಗಳು, ಜನತೆ, ವಿಪಕ್ಷ ಎಲ್ಲವನ್ನೂ ಮುಗಿಸಿಬಿಟ್ಟಿದ್ದೇವೆ ಎಂದು ಬೀಗಬಹುದು. ಅದು ನಿಜವೂ ಕೂಡ. ಆದರೆ ಇದು ಶಾಶ್ವತವಲ್ಲ. ಒಂದಿಲ್ಲೊಂದು ದಿನ ಜನ ಈ ದ್ವೇಷದಿಂದ ಜರ್ಝರಿತರಾಗಿ ಹೊಸ ನೆಲೆ ಹುಡುಕಲಾರಂಭಿಸುತ್ತಾರೆ, ಆಗ ನೀವು ಇಂತಹ ಪತ್ರಕರ್ತರನ್ನು ನೆನಪಿಸಿಕೊಳ್ಳಿ. ದ್ವೇಷಕ್ಕೆ ಗುಲಾಮರಾಗಿರುವ ಜನರು ಅದರಿಂದ ಹೊರಬರುತ್ತಾರೆ, ಹೊರಬರಲೇ ಬೇಕಾಗುತ್ತದೆ ಎಂಬ ಆಶಾಭಾವನೆಯನ್ನೂ ಅವರು ವ್ಯಕ್ತಗೊಳಿಸುತ್ತಾರೆ.
ಇದನ್ನೂ ಓದಿ : ಎನ್ಡಿಟಿವಿಗೆ ರಾಜೀನಾಮೆ ನೀಡಿದ ಹಿರಿಯ ಪತ್ರಕರ್ತ ರವೀಶ್ ಕುಮಾರ್
ಭಯವಿಲ್ಲ ಎಂದು ಸಾರಿ ಹೇಳಿ
ಭಾರತದ ಮಾಧ್ಯಮ ದೃಶ್ಯ ಬದಲಾಗಿದೆ. ಹಲವಾರು ಯುವಜನರು ಲಕ್ಷಾಂತರ ರೂಪಾಯಿ ಖರ್ಚುಮಾಡಿ ಪತ್ರಕರ್ತರಾಗ ಬಯಸುತ್ತಿದ್ದಾರೆ. ಆದರೆ ಅವರು ಪತ್ರಕರ್ತರಾಗುವ ಬದಲು ದಲ್ಲಾಳಿಗಳಾಗಬೇಕಾಗುತ್ತದೆ. ಏಕೆಂದರೆ ಪತ್ರಕರ್ತರಾಗುವ ಸಾಂಸ್ಥಿಕ ಅವಕಾಶ ಉಳಿದಿಲ್ಲ. ಈಗಾಗಲೇ ಈ ರಂಗದಲ್ಲಿರುವವರದ್ದೂ ಅದೇ ಸ್ಥಿತಿಯಿದೆ. ಕೆಲವರು ಈ ವೃತ್ತಿ ಬಿಟ್ಟು ಹೋಗುತ್ತಿದ್ದಾರೆ. ಒಂದು ಸಂಬಳದ ಉದ್ಯೋಗ ಬಿಟ್ಟು ಈ ವೃತ್ತಿಯಲ್ಲಿ ಬೇರೇನೂ ಉಳಿದಿಲ್ಲ. ಉತ್ಸಾಹವೇ ಇಲ್ಲದ ಸನ್ನಿವೇಶದಲ್ಲಿ ನಾವಿದ್ದೇವೆ. ಎಷ್ಟೆಂದರೆ ಒಬ್ಬ ನ್ಯಾಯಾಧೀಶರಿಗೆ ಜಾಮೀನು ಕೊಡಲೂ ಭಯವಾಗುತ್ತದೆಯಂತೆ, ತಮ್ಮನ್ನು ಟಾರ್ಗೆಟ್ ಮಾಡಬಹುದು ಎಂದು. ಇಂತಹ ಸನ್ನಿವೇಶದಲ್ಲಿ ನನಗೆ ಭಯವಿಲ್ಲ ಎಂದು ಹೇಳುವುದೂ ಅಪರಾಧ! ಆದರೆ ಒಬ್ಬ ಭಯಗ್ರಸ್ತ ಪತ್ರಕರ್ತ ನರಸತ್ತ ನಾಗರಿಕನನ್ನು ಮಾತ್ರ ರೂಪಿಸಲು ಸಾಧ್ಯ. ನೀವು ಬ್ರಿಟಿಶ್ ಸಾಮ್ರಾಜ್ಯಶಾಹಿಯನ್ನು ಬರಿಗಾಲಲ್ಲಿ ಮೊಣಕಾಲೂರುವಂತೆ ಮಾಡಿದ ದೇಶದವರು. ನಮಗೆ ಭಯವಿಲ್ಲ ಎಂದು ಹೇಳಿಕೊಳ್ಳಿ. ಮಡಿಲ ಮಾಧ್ಯಮಗಳ ಗುಲಾಮಿಕೆಯೂ ಕೊನೆಗೊಳ್ಳಲೇ ಬೇಕು, ನೀವು ಈ ಗುಲಾಮಿಕೆಯಿಂದ ಹೊರಗೆ ಬಂದೇ ಬರುತ್ತೀರ. ಇದು ಎಲ್ಲರ ಹೋರಾಟ. ಈ ಹೋರಾಟವಿಲ್ಲದಿದ್ದರೆ ಸ್ವತಂತ್ರ ದೇಶದಲ್ಲಿ ಮಡಿಲ ಮಾಧ್ಯಮಗಳ ಗುಲಾಮರೆಂಬ ಕಳಂಕದಲ್ಲಿರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೀಗ ಕಾನೂನಿನ ಹೆಸರಿನಲ್ಲಿ ಅಧಿಕಾರಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುತ್ತಿರುವ, ಅಕ್ರಮ ಕೆಲಸಗಳು ಸಕ್ರಮ ಎಂದು ಸಾರುತ್ತಿರುವ ಸಮಯ ಎನ್ನುತ್ತ “ಮುಂದಿನ ಮಾರ್ಗ ಸ್ಪಷ್ಟವಾಗಿಲ್ಲ, ಆದರೆ ವಿಶ್ವಾಸ ಉನ್ನತ ಮಟ್ಟದಲ್ಲಿದೆ. ಒಂದು ಯೂ ಟ್ಯೂಬ್ ಮಾಡಿದ್ದೇನೆ, ಫೇಸ್ಬುಕ್ ಪೇಜ್ ತೆರೆದಿದ್ದೇನೆ. ನಾನಿನ್ನು ಈ ಟ್ಯೂಬ್ನಲ್ಲೇ ಕಾಣಿಸಿಕೊಳ್ಳುತ್ತೇನೆ. ಕೆಂಪು ಮೈಕ್ ನನ್ನ ಕೈಲಿರುವುದಿಲ್ಲ. ನಾನು ರಾಜೀನಾಮೆ ಕೊಟ್ಟಿದ್ದೇನೆ. ನಮಸ್ಕಾರ ನಾನು ರವೀಶ್ ಕುಮಾರ್ ಎಂಬ ದನಿ ಚಾನಲ್ನಲ್ಲಿ ಇನ್ನು ಕೇಳುವುದಿಲ್ಲ, ನಮಸ್ಕಾರ ನಾನು ರವೀಶ್ ಕುಮಾರ್” ಎಂದು ಈ ವೀಡಿಯೋ ಮುಕ್ತಾಯಗೊಳ್ಳುತ್ತದೆ.