ಡಿಸೆಂಬರ್ 6 ರಂದು ಸರ್ವೋಚ್ಚ ನ್ಯಾಯಾಲಯ ಜನವರಿ 2018ರಲ್ಲಿ ಆರಂಭಿಸಿದ ಚುನಾವಣಾ ಬಾಂಡ್ ಗಳ ಅಪಾರದರ್ಶಕ ವ್ಯವಸ್ಥೆಗೆ ಸವಾಲು ಹಾಕಿರುವ ಅರ್ಜಿಗಳನ್ನು ಕೊನೆಗೂ ವಿಚಾರಣೆಗೆ ಎತ್ತಿಕೊಳ್ಳಲಿದೆ. ಈ ನಡುವೆ 22 ಹಂತಗಳಲ್ಲಿ ರಾಜಕೀಯ ಪಕ್ಷಗಳು ಈ ಬಾಂಡ್‍ಗಳ ಮೂಲಕ 10,791.50 ಕೋಟಿ ರೂಪಾಯಿಗಳಷ್ಟು ಅನಾಮಧೇಯ ದಾನಿಗಳಿಂದ ಸಂಗ್ರಹಿಸಿವೆ ಎಂದು ಮಾಹಿತಿ ಹಕ್ಕು ಅರ್ಜಿ ಮೂಲಕ ಸಿಕ್ಕಿರುವ ಮಾಹಿತಿ ತೋರಿಸುತ್ತದೆ.
ಅಲ್ಲದೆ, ಈ ಅಪಾರದರ್ಶಕ ಬಾಂಡ್‍ಗಳನ್ನು ಮುದ್ರಿಸಲು ಮತ್ತು ಕಮಿಷನ್ ಕೊಡಲು ಕೇಂದ್ರ ಸರಕಾರವೇ ಸುಮಾರು 9.5 ಕೋಟಿ ರೂ. ವೆಚ್ಚ ಮಾಡಿದೆ. ಇದು ತೆರಿಗೆದಾರರ ಹಣ ಎಂದು ಬೇರೆ ಹೇಳಬೇಕಾಗಿಲ್ಲ. ಇದು ಆರ್.ಟಿ.ಐ. ಕಾರ್ಯಕರ್ತ ಕಮೊಡೋರ್ (ನಿವೃತ್ತ) ಲೋಕೇಶ್ ಕೆ ಬಾತ್ರಾ ಅವರು ಸಲ್ಲಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಸಿಕ್ಕ ಉತ್ತರದಿಂದ ತಿಳಿದು ಬಂದಿರುವ ಸಂಗತಿ.
ವಿಪರ್ಯಾಸವೆಂದರೆ, ಇತರ ವ್ಯವಹಾರಗಳಂತೆ ಈ ಬಾಂಡ್‍ಗಳನ್ನು ಖರೀದಿಸುವ ‘ದಾನಿ’ಗಳು ಯಾವುದೇ ಶುಲ್ಕವನ್ನು (ಕಮಿಷನ್), ಇವುಗಳನ್ನು ವಿತರಿಸಲು ಅಧಿಕಾರ ಹೊಂದಿರುವ ಏಕೈಕ ಬ್ಯಾಂಕ್ -ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಪಾವತಿಸುವ ಅಗತ್ಯವಿಲ್ಲ. ಇವನ್ನು ವಿತರಿಸುವ ಕೆಲಸ ಮಾಡಿದಕ್ಕಾಗಿ ಬ್ಯಾಂಕಿಗೆ ಕಮಿಷನನ್ನು ಕೇಂದ್ರ ಸರಕಾರವೇ ಪಾವತಿ ಮಾಡುತ್ತದೆ ಮತ್ತು ಅವನ್ನು ಮುದ್ರಿಸುವ ವೆಚ್ಚವನ್ನೂ ಭರಿಸುತ್ತವೆ. ಅಂದರೆ ಅಂತಿಮವಾಗಿ, ತೆರಿಗೆದಾರರೇ ಈ ವೆಚ್ಚವನ್ನು ಭರಿಸುತ್ತಾರೆ.
ಸಿಂಹಪಾಲು 1 ಕೋಟಿ ರೂ. ಬಾಂಡ್‍ಗಳದ್ದು
ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಇವುಗಳಲ್ಲಿ 93.67% ಬಾಂಡುಗಳು ತಲಾ 1 ಕೋಟಿ ರೂ.ಯವು. ಅಂದರೆ 1 ಕೋಟಿ ರೂ. ಅದಕ್ಕಿಂತ ಹೆಚ್ಚು ಕೊಡುವ ಈ ‘ದಾನಿ’ಗಳು ಯಾರಿರಬಹುದು ಎಂದು ಯಾರಾದರೂ ಊಹಿಸಿಕೊಳ್ಳಬಹುದು.. ಈ ಬಾಂಡ್‍ಗಳನ್ನು 1000ರೂ., 10,000ರೂ., 1ಲಕ್ಷ ರೂ ಮತ್ತು 10ಲಕ್ಷ ರೂ. ಮುಖಬೆಕೆಯಲ್ಲೂ ಮುದ್ರಿಸಲಾಗುತ್ತದೆ. ಆದರೆ ಖರೀದಿಯಾಗುವುದು 1 ಕೋಟಿ ರೂ. ಅಥವ ಕೆಲವು 10 ಲಕ್ಷ ರೂ.ಗಳ ಮುಖಬೆಲೆಗಳದ್ದು ಮಾತ್ರ ಎಂದು ಹೇಳಲಾಗಿದೆ.
ಇದನ್ನು ಮುಂಗಂಡೇ ಈ ಅಪಾರದರ್ಶಕ ವ್ಯವಸ್ಥೆಗೆ ಭಾರೀ ವಿರೋಧ ಬಂದಿತ್ತು. ಆದರೂ ನಾಲ್ಕು ವರ್ಷಗಳ ನಂತರ ಇದರ ವಿಚಾರಣೆ ಡಿಸೆಂಬರ್ 6 ರಂದು ಆರಂಭವಾಗುತ್ತಿದೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್), ಸಿಪಿಐ(ಎಂ) ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಹೇಳಿದೆ.
ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಅಕ್ಟೋಬರ್ 1 ಮತ್ತು 10 ರ ನಡುವೆ ಈ ಬಾಂಡುಗಳ 22 ನೇ ಮಾರಾಟದಲ್ಲಿ ರಾಜಕೀಯ ಪಕ್ಷಗಳು 545 ಕೋಟಿ ರೂಪಾಯಿಗಳನ್ನು ಪಡೆದಿವೆ, ಇದಕ್ಕೆ ಮೊದಲು ಜುಲೈ ಮಾರಾಟದಲ್ಲಿ ಪಡೆದ ಹಣ 389.50 ಕೋಟಿ ರೂ. ಎಂದು ಬಾತ್ರಾ ಅವರು ಎಸ್‍ಬಿಐನಿಂದ ಪಡೆದ ಈ ಹಿಂದಿನ ಆರ್‌ಟಿಐ ಉತ್ತರ ತೋರಿಸಿತ್ತು.
10,791 ಕೋಟಿ ರೂ.ಗಳಲ್ಲಿ ರೂ. 10,767.88 ಕೋಟಿ ಮೌಲ್ಯದ ಬಾಂಡ್‌ಗಳನ್ನು ನಗದೀಕರಿಸಲಾಗಿದೆ, ಉಳಿದ ರೂ. 23.59 ಕೋಟಿಯನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ. ಇದರಲ್ಲಿ ದೆಹಲಿ (285.15 ಕೋಟಿ ರೂ.) ಅಗ್ರಸ್ಥಾನದಲ್ಲಿದ್ದರೆ, ಕೋಲ್ಕತ್ತಾ (ರೂ. 143.10 ಕೋಟಿ) ಮತ್ತು ಹೈದರಾಬಾದ್ (ರೂ. 67 ಕೋಟಿ) ನಂತರದ ಸ್ಥಾನದಲ್ಲಿವೆ. ಗ್ಯಾಂಗ್ಟಾಕ್ (2 ಕೋಟಿ ರೂ.), ಚೆನ್ನೈ (ರೂ. 10 ಕೋಟಿ) ಮತ್ತು ಭುವನೇಶ್ವರ (ರೂ. 35 ಕೋಟಿ) ನಲ್ಲಿರುವ ಎಸ್‌ಬಿಐ ಶಾಖೆಗಳಿಂದ ಈ ಬಾಂಡ್‍ಗಳ ನಗದೀಕರಣ ನಡೆದಿದೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ 2019-20ರಲ್ಲಿ ಕೇಂದ್ರದಲ್ಲಿ ಮತ್ತು ಬಹಳಷ್ಟು ರಾಜ್ಯಗಳಲ್ಲಿ ಆಳುವ ಬಿಜೆಪಿ 75% ಕ್ಕಿಂತ ಹೆಚ್ಚು ಬಾಂಡ್‌ಗಳನ್ನು ಗಿಟ್ಟಿಸಿಕೊಂಡಿದೆ.
ಗುಜರಾತಿನಲ್ಲಿ 94% ಬಿಜೆಪಿಗೆ
ಎ.ಡಿ.ಆರ್. ಕಲೆ ಹಾಕಿದ ಮಾಹಿತಿಗಳ ಪ್ರಕಾರ, ಮಾರ್ಚ್ 2018ರಿಂದ ಅಕ್ಟೋಬರ್ 2022ರ ನಡುವೆ ಸುಮಾರು 5 ವರ್ಷಗಳಲ್ಲಿ ಗುಜರಾತಿನಲ್ಲಿ ಸಂಗ್ರಹವಾದ 1571 ಬಾಂಡ್ ಕೊಡುಗೆಗಳ ಮೊತ್ತ 174 ಕೋಟಿ ರೂ. ಇದರಲ್ಲಿ 163 ಕೋಟಿ ರೂ. ಮೊತ್ತದ 1519 ಬಾಂಡ್‍ಗಳು ಬಿಜೆಪಿಗೆ ದಕ್ಕಿವೆ. ಅಂದರೆ 94% ದಷ್ಟು!
ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸಿಗೆ ಸಿಕ್ಕಿರುವುದು ,10.5 ಕೋಟಿ ರೂ. ಮತ್ತು ನಂತರದ ಸ್ಥಾನದಲ್ಲಿರುವ ಎಎಪಿಗೆ 32ಲಕ್ಷ ರೂ. ಇತರ ಎಲ್ಲ ಪಕ್ಷಗಳಿಗೆ ಸೇರಿ ಸಿಕ್ಕಿದ್ದು ಕೇವಲ 20 ಲಕ್ಷರೂ.
ರಾಷ್ಟ್ರೀಯ ಮಟ್ಟದಲ್ಲಿ 2017-18ರಿಂದ ಖರೀದಿಯಾದ ಚುನಾವಣಾ ಬಾಂಡುಗಳಲ್ಲಿ ಕನಿಷ್ಟ 65%ದಷ್ಟು ಬಿಜೆಪಿಗೆ ಸಿಕ್ಕಿದೆ ಮತ್ತು ಅದರಲ್ಲಿ ಅರ್ಧಕ್ಕೂ ಹೆಚ್ಚು ಒಂದೇ ಚುನಾವಣಾ ಟ್ರಸ್ಟಿನಿಂದ ಸಿಕ್ಕಿದೆ ಎಂಧು ಹೇಳಲಾಗಿದೆ.