ಸಟ್ಟಾಕೋರರ ಖಯಾಲಿ-ಬಡಾಯಿಗಳಿಗೆ ದುಡಿಯುವ ಜನರ ಬದುಕುಗಳು ಬಲಿ

ಪ್ರೊ. ಪ್ರಭಾತ್ ಪಟ್ನಾಯಕ್
ಅನುವಾದ: ಕೆ.ಎಂ. ನಾಗರಾಜ

ನವ ಉದಾರವಾದಿ ಬಂಡವಾಳಶಾಹಿಯ ಒಂದು ವಿಶಿಷ್ಟ ಲಕ್ಷಣವೆಂದರೆ ಬಹುಪಾಲು ದುಡಿಯುವ ಜನ ಸಮೂಹಗಳ ಜೀವನ ಪರಿಸ್ಥಿತಿಗಳನ್ನು ಹಿಡಿಯಷ್ಟು ಹಣಕಾಸು ಸಟ್ಟಾಕೋರರ ಖಯಾಲಿಗಳು ಮತ್ತು ಬಡಾಯಿಗಳು ನಿರ್ಧರಿಸುತ್ತವೆ. ಹಣದುಬ್ಬರದ ಏರುಗತಿ ಮತ್ತು ತದನಂತರದ ಪರಿಸ್ಥಿತಿಗಳು ಈ ಸಟ್ಟಾಕೋರರಲ್ಲಿ ಉಂಟು ಮಾಡುವ ಕಳವಳಗಳು ತೃತೀಯ ಜಗತ್ತಿನ ದುಡಿಯುವ ಜನರಿಗೆ ತೀವ್ರ ಸಂಕಷ್ಟಗಳನ್ನು ತರುತ್ತವೆ. ಈ ದೇಶಗಳ ಪಾವತಿ ಶೇಷದ ತೊಂದರೆಗಳಿಂದಾಗಿ ಈ ದೇಶಗಳ ಮೇಲೆ ಕರಾಳ ಮಿತವ್ಯಯದ ಕ್ರಮಗಳನ್ನು ಹೇರಲಾಗುತ್ತದೆ. ಇದೀಗ ನವ ಉದಾರವಾದದ ಉಬ್ಬರದಿಂದ ಯಾವುದೇ ಪ್ರಯೋಜನಗಳನ್ನು ಪಡೆಯದ ಜನರೇ ಅದರ ಅವನತಿಯ ಬಲಿಪಶುಗಳಾಗುವ ಕಠೋರ ವ್ಯಂಗ್ಯ.

ಪ್ರಸ್ತುತ ವಿಶ್ವ ಆರ್ಥಿಕ ಪರಿಸ್ಥಿತಿಯ ಎರಡು ಲಕ್ಷಣಗಳನ್ನು ಕಾಣಬಹುದು – ಅವು ಪ್ರಸ್ತುತ ಪರಿಸ್ಥಿತಿಯನ್ನು ನಿರೂಪಿಸುವುದರೊಂದಿಗೆ ಭವಿಷ್ಯದ ಮುನ್ಸೂಚನೆಯನ್ನೂ ಕೊಡುತ್ತವೆ. ಇವುಗಳಲ್ಲಿ ಮೊದಲನೆಯದು, ವ್ಯಾಪಕವಾದ ಎಡೆಬಿಡದ ಹಣದುಬ್ಬರಕ್ಕೆ ಪ್ರತಿಕ್ರಿಯೆಯಾಗಿ ವಿಶ್ವಾದ್ಯಂತ ಬಡ್ಡಿದರಗಳಲ್ಲಿ ಹೆಚ್ಚಳವಾಗಿರುವುದು; ಈ ಬಗ್ಗೆ ಬಹಳಷ್ಟು ಚರ್ಚೆ ನಡೆದಿದೆ. ಇದು ಖಂಡಿತವಾಗಿಯೂ ಹಿಂಜರಿತ ಮತ್ತು ನಿರುದ್ಯೋಗವನ್ನು ಉಂಟುಮಾಡುತ್ತದೆ, ಹಾಗಾಗುವುದಿಲ್ಲ ಎಂದು ಎಷ್ಟೇ ಹೇಳಿಕೊಂಡರೂ. ಅದೇ ಅದರ ಹಿಂದಿನ ನಿಜವಾದ ಉದ್ದೇಶ ತಾನೇ?

ಹೆಚ್ಚೇನೂ ಚರ್ಚೆಯಾಗದ ಎರಡನೆಯ ಲಕ್ಷಣವೆಂದರೆ, ಪ್ರಪಂಚದ ಬೇರೆಡೆಗಳಿಂದ ಅಮೆರಿಕ ಸಂಯುಕ್ತ ಸಂಸ್ಥಾನ(ಯುಎಸ್)ದತ್ತ ಹಣಕಾಸಿನ ಹೊರಹರಿವು; ವಾಸ್ತವಿಕವಾಗಿ ರಷ್ಯಾದ ರೂಬಲ್ ಬಿಟ್ಟು ಇತರೆಲ್ಲ ಕರೆನ್ಸಿಗಳಿಗೆ ಎದುರಾಗಿ ಡಾಲರ್ ಅನ್ನು ಬಲಪಡಿಸಲು ಇದು ಕೊಡುಗೆ ನೀಡುತ್ತಿದೆ. ರೂಬಲ್ ಇದಕ್ಕೆ ಹೊರತಾಗಿರುವುದು ಒಂದು ವಿಡಂಬನೆಯೇ ಸರಿ. ಯೂರೋ ಮತ್ತು ಪೌಂಡ್-ಸ್ಟರ್ಲಿಂಗ್ ಸೇರಿದಂತೆ ಎಲ್ಲಾ ಪ್ರಮುಖ ಕರೆನ್ಸಿಗಳು ಡಾಲರ್ ಎದುರು ದುರ್ಬಲಗೊಳ್ಳುತ್ತಿವೆಯಾದರೂ, ವಿಶೇಷವಾಗಿ ನಮಗೆ ಇಲ್ಲಿ ಕಾಳಜಿ ಉಂಟುಮಾಡುವ ವಿಷಯವೆಂದರೆ ಮೂರನೇ ವಿಶ್ವದ ಕರೆನ್ಸಿಗಳು ದುರ್ಬಲಗೊಳ್ಳುತ್ತಿರುವುದು – ಇದರಲ್ಲಿ ರೂಪಾಯಿ ಒಂದು ಪ್ರಧಾನ ಉದಾಹರಣೆಯಾಗಿದೆ.

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಅಂದಾಜು 200 ಶತಕೋಟಿ ಡಾಲರ್ ಈಗಾಗಲೇ ಭಾರತದಿಂದ ಹೊರಹೋಗಿದೆ, ಇದು ಭಾರತದ ವಿನಿಮಯ ಮೀಸಲುಗಳ ಮೂರನೇ ಒಂದು ಭಾಗವಾಗಿದೆ. ಈ ಮೀಸಲುಗಳಲ್ಲಿ 100 ಶತಕೋಟಿ ಡಾಲರಿಗೂ ಹೆಚ್ಚು ಮೊತ್ತ ಡಾಲರ್ ಎದುರು ರೂಪಾಯಿಯನ್ನು ಗಟ್ಟಿಗೊಳಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಯತ್ನದಲ್ಲಿ ಕಡಿಮೆಯಾಗಿದೆ; ಆದಾಗ್ಯೂ ರೂಪಾಯಿ ಮೌಲ್ಯವು ಸುಮಾರು 10 ಶೇ.ದಷ್ಟು ಕುಸಿದಿದೆ.

ಬಡ್ಡಿದರಗಳು ಮತ್ತು ಹಣದ ಹರಿವು

ರಾಷ್ಟ್ರಗಳಾದ್ಯಂತ ಹಣಕಾಸಿನ ಹರಿವುಗಳನ್ನು ಪ್ರಾಥಮಿಕವಾಗಿ ಬಡ್ಡಿದರದ ವ್ಯತ್ಯಾಸಗಳು ನಿರ್ಧರಿಸುತ್ತವೆ ಎಂಬ ನಂಬಿಕೆ ಇದೆ, ಅಂದರೆ ಯು.ಎಸ್.ಗೆ ಪ್ರಸ್ತುತ ಒಳಹರಿವು ಅದು ಇತರ ದೇಶಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತನ್ನ ಬಡ್ಡಿದರಗಳನ್ನು ಹೆಚ್ಚಿಸಿದ ಪರಿಣಾಮವಾಗಿದೆ. ಇದರರ್ಥ ಇತರ ದೇಶಗಳು ತಮ್ಮ ಬಡ್ಡಿದರಗಳನ್ನು ಯು.ಎಸ್. ಮಾಡಿದಷ್ಟು ಹೆಚ್ಚಿಸಿದಾಗ, ಅವು ಇನ್ನು ಮುಂದೆ ಅಂತಹ ಬಂಡವಾಳದ ಹೊರಹರಿವುಗಳನ್ನು ಎದುರಿಸಬೇಕಾಗುವುದಿಲ್ಲ ಎಂದಾಗುತ್ತದೆ. ಆದರೆ ಇದು ನಿಜವಲ್ಲ. ಬಡ್ಡಿದರದ ವ್ಯತ್ಯಾಸಗಳು ನಿಸ್ಸಂದೇಹವಾಗಿ ಹಣಕಾಸಿನ ಹರಿವಿನ ಮೇಲೆ ಪರಿಣಾಮ ಬೀರುತ್ತವೆಯಾದರೂ, ಅಂತಹ ಹರಿವಿನ ಮೇಲೆ ಪ್ರಭಾವ ಬೀರುವ ಇನ್ನೂ ಹೆಚ್ಚು ಮೂಲಭೂತ ಅಂಶವಿದೆ. ಅದೆಂದರೆ, ಹಣಕಾಸುದಾರರ ನಡುವೆ ಭಾವೋನ್ಮಾದದ ಸ್ಥಿತಿ. ಅವರ ನಿರೀಕ್ಷೆಗಳು ಉತ್ಸಾಹಭರಿತವಾದಾಗ, ಅವರು ಅಂಚಿನಲ್ಲಿರುವ ದೇಶಗಳಿಗೆ ತೆರಳುತ್ತಾರೆ (ಎಲ್ಲಾ ಅಲ್ಲ, ಕೆಲವು ದೇಶಗಳಿಗೆ); ಆದರೆ ಅವರ ನಿರೀಕ್ಷೆಗಳು ಮಬ್ಬಾದಾಗ ಅವರು ತಮ್ಮ ನೆಲೆಯಾದ ಯು.ಎಸ್.ಗೆ ಮರಳುವುದಕ್ಕೆ ಆದ್ಯತೆ ನೀಡುತ್ತಾರೆ. ಇಲ್ಲಿ ಅವರ ಉತ್ಸುಕತೆ ಅಥವಾ ಖಿನ್ನತೆಯ ಮೇಲೆ ಪರಿಣಾಮ ಬೀರುವ ಒಂದು ನಿರ್ಣಾಯಕ ಅಂಶವೆಂದರೆ ಯು.ಎಸ್. ಬಡ್ಡಿದರಗಳ ಮಟ್ಟ.

ಅಮೇರಿಕನ್ ಬಡ್ಡಿದರಗಳು ಕೆಳಮಟ್ಟದಲ್ಲಿರುವಾಗ, ಅದರಿಂದಾಗಿಯೇ ಸಂಪೂರ್ಣ ವ್ಯವಸ್ಥೆ ಅಗ್ಗದ ಹಣದ ಲಭ್ಯತೆಯಿಂದ ತುಂಬಿ ತುಳುಕುತ್ತದೆ, ಅದು ಲಾಭದಾಯಕ ನಿಯೋಜನೆಗಾಗಿ ಅವಕಾಶಗಳ ಹುಡುಕಾಟದಲ್ಲಿ ಪ್ರಪಂಚದಾದ್ಯಂತ ಹೋಗುತ್ತದೆ; ಆದರೆ ಯು.ಎಸ್. ತನ್ನ ಬಡ್ಡಿದರಗಳನ್ನು ಹೆಚ್ಚಿಸಿದಾಗ, ಹಣದ ಹರಿವು ಕಠಿಣಗೊಳ್ಳುತ್ತದೆ ಮತ್ತು ವಿಶ್ವ ಆರ್ಥಿಕ ಹಿಂಜರಿತದ ಭಯ ಉಂಟಾಗುತ್ತದೆ. ಆಗ ಹಣಕಾಸು ತನ್ನ ಮೂಲ ನೆಲೆಗೆ ಹಿಂತಿರುಗುತ್ತದೆ. ಯು.ಎಸ್. ಬಡ್ಡಿದರವು ಶೂನ್ಯಕ್ಕೆ ಹತ್ತಿರದಲ್ಲಿದೆ ಮತ್ತು ಭಾರತದಲ್ಲಿ ಶೇ,3 ರಷಿರುತ್ತದೆ ಎಂದಿಟ್ಟುಕೊಳ್ಳೋಣ. ಭಾರತಕ್ಕೆ ಹಣಕಾಸಿನ ಹರಿವು, ಯುಎಸ್ ಬಡ್ಡಿದರವು ಶೇ.6 ರ ಸಮೀಪ ಮತ್ತು ಭಾರತದ್ದು ಶೇ.9 ರ ಸಮೀಪವಿರುವಾಗ ಬರುವ ಹಣಕಾಸಿನ ಹರಿವಿಗಿಂತ ಹೆಚ್ಚಿರುತ್ತದೆ-ಎರಡೂ ಸಂದರ್ಭಗಳಲ್ಲಿ ಬಡ್ಡಿದರಗಳ ವ್ಯತ್ಯಾಸವು ಒಂದೇ ಆಗಿದ್ದರೂ ಸಹ.

ಹಣಕಾಸು ವಲಯಗಳಲ್ಲಿ ವಿಶ್ವ ಆರ್ಥಿಕ ಹಿಂಜರಿತ ಉಂಟಾದರೆ ಏನಾಗಬಹುದು ಎಂಬಿತ್ಯಾದಿ ಯಾವುದೇ ಕಳವಳ, ಹಣಕಾಸನ್ನು ತನ್ನ ತವರು ನೆಲೆಯಾದ ಯು.ಎಸ್.ನತ್ತ ಅಟ್ಟುತ್ತದೆ ಎಂಬ ಅಂಶ 2008 ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಣ ಬಂತು. ಯು.ಎಸ್. ಆ ಬಿಕ್ಕಟ್ಟಿನ ಕೇಂದ್ರಬಿಂದುವಾಗಿತ್ತು, ಅದರ ಹಣಕಾಸಿನ ವ್ಯವಸ್ಥೆಯು “ವಿಷಕಾರಿ” ಸ್ವತ್ತುಗಳಿಂದ ತುಂಬಿತ್ತು, ಅಂದರೆ ಮರುಪಾವತಿಸಲು ಸಾಧ್ಯವಾಗದ ಸಾಲಗಾರರಿಗೆ ಕೊಡಮಾಡಿದ ಸಾಲಗಳನ್ನು ಹೊಂದಿತ್ತು; ಆದಾಗ್ಯೂ ಹಣಕಾಸು ಬಿಕ್ಕಟ್ಟು, ಯು.ಎಸ್.ನಿಂದ ಹೊರಕ್ಕೆ ಹಣಕಾಸು ಹರಿದು ಹೋಗಲು ಕಾರಣವಾಗುವ ಬದಲು, ತಕ್ಷಣವೇ ಜಗತ್ತಿನ ಎಲ್ಲೆಡೆಗಳಿಂದ ಹಣಕಾಸು ಮರಳಿ ಯು.ಎಸ್.ಗೆ ಹರಿದು ಹೋಗಲು ಕಾರಣವಾಯಿತು; ಭಾರತದಂತಹ ಯಾವುದೇ ‘ವಿಷಕಾರಿ’ ಆಸ್ತಿಗಳಿಗೆ ತೆರೆದುಕೊಂಡಿರದ ದೇಶಗಳಿಂದಲೂ ಹರಿದು ಹೋಯಿತು.

ವಿಶ್ವ ಬಂಡವಾಳಶಾಹಿಯ ಸಂಪೂರ್ಣವಾಗಿ ಹೊಸದಾದ ಹಂತ

ಯುಎಸ್‌ನಲ್ಲಿ ಡಾಲರ್ ಅನ್ನು ಬಲಪಡಿಸುವ, ಪ್ರಸ್ತುತ ಹಣಕಾಸಿನ ಒಳಹರಿವಿಗೆ ಪ್ರಧಾನ ಕಾರಣ ಸಹಜವಾಗಿಯೇ ಯುಎಸ್ ಬಡ್ಡಿದರಗಳ ಏರಿಕೆಯಲ್ಲಿ ಅಡಗಿದೆ. ಆದರೆ ಈ ಏರಿಕೆಯು ಅಷ್ಟೊಂದು ಮುಖ್ಯವಾಗುವುದಿಲ್ಲ. ಏಕೆಂದರೆ ಇದು ಆರ್ಥಿಕ ನಿಯೋಜನೆಗಾಗಿ ಯು.ಎಸ್.ನ್ನು ಹೆಚ್ಚು ಲಾಭದಾಯಕ ತಾಣವನ್ನಾಗಿ ಮಾಡುತ್ತದೆ; ಅದಕ್ಕಿಂತ ಮುಖ್ಯವಾದುದೆಂದರೆ, ಇದು ವಿಶ್ವ ಆರ್ಥಿಕ ಹಿಂಜರಿತದ ಅವಧಿಯ ಮುನ್ಸೂಚನೆಯಾಗಿರಬಹುದು ಎಂಬುದು ಹಣಕಾಸು ಬಂಡವಾಳವನ್ನು ಕಳವಳಕ್ಕೆ ಈಡು ಮಾಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವಿಶ್ವ ಬಂಡವಾಳಶಾಹಿಯು ಸಂಪೂರ್ಣವಾಗಿ ಹೊಸ ಹಂತವೊಂದನ್ನು ಪ್ರವೇಶಿಸುತ್ತಿದೆ, ಇದರಲ್ಲಿ ಮೂರನೇ ವಿಶ್ವದ ಅರ್ಥವ್ಯವಸ್ಥೆಗಳು ತಮ್ಮ ಬಡ್ಡಿದರಗಳನ್ನು ಅಮೇರಿಕನ್ ದರಗಳ ಜೊತೆ-ಜೊತೆಯಲ್ಲಿ ಹೆಚ್ಚಿಸಿದರೂ ಸಹ, ಹಣಕಾಸಿನ ನಿರಂತರ ಹೊರಹರಿವನ್ನು ಕಾಣಬೇಕಾಗುತ್ತದೆ.

ಇದು ಸಮೀಪಿಸುತ್ತಿರುವ ಬಿಕ್ಕಟ್ಟು ಈ ದೇಶಗಳನ್ನು ಇನ್ನಷ್ಟು ತೀವ್ರವಾಗಿ ತಟ್ಟುವಂತೆ ಮಾಡುತ್ತದೆ. ಅವು ಏರಿದ ಆಂತರಿಕ ಮತ್ತು ವಿದೇಶಿ ಬಡ್ಡಿದರಗಳು ಉಂಟುಮಾಡುವ ಹಿಂಜರಿತದ ಪರಿಣಾಮಗಳಿಂದ ಬಳಲುತ್ತವೆಯಷ್ಟೇ ಅಲ್ಲ, ಅವರ ಸಾಲದ ಮರುಹೊಂದಿಕೆಯು ಹೆಚ್ಚು ದುಬಾರಿಯಾಗುತ್ತದೆ ಮತ್ತು ಪಾವತಿಶೇಷ(ಬ್ಯಾಲನ್ಸ್ ಆಫ್ ಪೇಮೆಂಟ್ಸ್)ದಲ್ಲಿ ಅವರ ಚಾಲ್ತಿ ಖಾತೆಯ ಕೊರತೆಯನ್ನು ತುಂಬುವುದು ಹೆಚ್ಚು ಕಷ್ಟಕರವಾಗುತ್ತದೆ. ಇವೆಲ್ಲವೂ ಈ ದೇಶಗಳು ಅನಿವಾರ್ಯವಾಗಿ ‘ಸಹಾಯ’ ಕೇಳಲು ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನಂತಹ ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಕಾವಲುಭಟರ ಬಳಿಗೆ ಹೋಗುವಂತೆ ಮಾಡುತ್ತವೆ ಮತ್ತು ಅವರ ಕಠಿಣವಾದ “ಮಿತವ್ಯಯ” ಕ್ರಮಗಳಿಗೆ ಅವನ್ನು ಈಡು ಮಾಡುತ್ತವೆ.

ಕೃಪೆ: ಡೈಲಿ ನ್ಯೂಸ್‍ ಇಜಿಪ್ಟ್

ವಿಶ್ವ ಬಂಡವಾಳಶಾಹಿಯ ಈ ಹೊಸ ಹಂತವು ಭಾರತದಂತಹ, ಇತರ ಮೂರನೇ ವಿಶ್ವದ ದೇಶಗಳಂತೆ ವಿದೇಶಿ ಸಾಲದಾತರಿಗೆ ಹೆಚ್ಚಿನ ಮಟ್ಟದಲ್ಲಿ ಸಾಲಗ್ರಸ್ತವಾಗಿರದ ದೇಶಗಳನ್ನು ಕೂಡ ಪ್ರತಿಕೂಲವಾಗಿ ತಟ್ಟುತ್ತದೆ. ಭಾರತಕ್ಕೆ ಇಲ್ಲಿಯವರೆಗೆ ನವ ಉದಾರವಾದಿ ವ್ಯವಸ್ಥೆಯಲ್ಲ್ಲ ತನ್ನ ಚಾಲ್ತಿ ಖಾತೆ ಕೊರತೆಯನ್ನು ನಿರ್ವಹಿಸಲು ಬಾಹ್ಯ ಹಣಕಾಸು ಸುಲಭವಾಗಿ ಲಭ್ಯವಾಗಿತ್ತು. “ಉದಾರೀಕರಣ”ವನ್ನು ಆರಂಭಿಸಿದ ತಕ್ಷಣದ ಅವಧಿಯಲ್ಲಿ ಇದು ಸಾಧ್ಯವಾದದ್ದು, ಅದುವರೆಗೆ ಹಣಕಾಸಿನ ಒಳಹರಿವಿಗೆ “ಮುಚ್ಚಿದ್ದ” ದೇಶದ ಅರ್ಥವ್ಯವಸ್ಥೆ ಜಾಗತೀಕರಣದೊಂದಿಗೆ ತೆರೆದುಕೊಂಡಾಗ ಅದು ಒದಗಿಸಿದ ವಿವಿಧ ಅವಕಾಶಗಳನ್ನು ಪಡೆಯಲು ಜಾಗತಿಕ ಹಣಕಾಸು ಆತುರದಿಂದಿತ್ತು ಎಂಬ ಕಾರಣದಿಂದಾಗಿ. ತರುವಾಯ, ಹಣಕಾಸು ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳಲು ಅಮೆರಿಕದ ಬಡ್ಡಿದರಗಳನ್ನು ಶೂನ್ಯಕ್ಕೆ ಇಳಿಸಿದಾಗ, ಹಣಕಾಸು, ಭಾರತ ಮತ್ತು ಇತರ ಮೂರನೇ ಪ್ರಪಂಚದ ದೇಶಗಳಿಗೆ, ಅವು ನೀಡುವ ಹೆಚ್ಚಿನ ಪ್ರತಿಫಲದಿಂದಾಗಿ ಹರಿದು ಬಂದದ್ದರಲ್ಲಿ ಆಶ್ಚರ್ಯವೇನಿಲ್ಲ.

ಇದರ ಪರಿಣಾಮವಾಗಿ, ಹಿಂದಿನ ‘ನಿಯಂತ್ರಣ’ಗಳ ಅವಧಿಗೆ ಹೋಲಿಸಿದರೆ ಈ ಶತಮಾನದ ಆರಂಭದಲ್ಲಿ ಕಂಡ ಭಾರತದ ಜಿಡಿಪಿ ಬೆಳವಣಿಗೆಯ ದರಗಳಲ್ಲಿನ ಏರಿಕೆಯನ್ನು ಪಾವತಿ ಶೇಷದ ಕಡೆಯಿಂದ ಯಾವುದೇ ನಿರ್ಬಂಧಗಳು ಉಂಟಾಗದೆ ಉಳಿಸಿಕೊಳ್ಳಲು ಸಾಧ್ಯವಾಯಿತು. ವಾಸ್ತವವಾಗಿ 2002 ಮತ್ತು 2012 ರ ನಡುವೆ ಸುಮಾರು ಒಂದು ದಶಕದ ವರೆಗೆ, ದೇಶವು ಜಿಡಿಪಿ ಬೆಳವಣಿಗೆ ದರದಲ್ಲಿ ಅಭೂತಪೂರ್ವ ಏರಿಕೆಯನ್ನು ಅನುಭವಿಸುತ್ತಿದ್ದಾಗಲೂ ಡಾಲರ್‌ಗೆ ಹೋಲಿಸಿದರೆ ರೂಪಾಯಿಯ ವಿನಿಮಯ ಮೌಲ್ಯವು ಗಮನಾರ್ಹವಾಗಿ ಸ್ಥಿರವಾಗಿತ್ತು. ಈ ಏರಿಕೆಯು ದುಡಿಯುವ ಜನರ ಜೀವನ ಪರಿಸ್ಥಿತಿಗಳಲ್ಲಿ ಯಾವುದೇ ಸುಧಾರಣೆಯನ್ನು ತರಲಿಲ್ಲ ಎಂಬುದು ಬೇರೆ ಮಾತು. ಆದರೆ ಅದರ ಪರಿಣಾಮಗಳನ್ನು ಯಾವುದೇ ಪಾವತಿ ಶೇಷದ ತೊಂದರೆಗಳು ನಿರ್ಬಂಧಿಸಲಿಲ್ಲ. ವಾಸ್ತವವಾಗಿ, ಇದಕ್ಕೆ ವಿರುದ್ಧವಾಗಿ, ಚಾಲ್ತಿ ಖಾತೆ ಕೊರತೆಗೆ ಸಾಪೇಕ್ಷವಾಗಿ ಹಣಕಾಸಿನ ಒಳಹರಿವಿನ ಪ್ರಮಾಣವು ಎಷ್ಟೊಂದು ದೊಡ್ಡ ಪ್ರಮಾಣದಲ್ಲಿತ್ತೆಂದರೆ ರೂಪಾಯಿ ಮೌಲ್ಯ ಏರಿಕೆಯನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಿದೇಶಿ ವಿನಿಮಯ ಸಂಗ್ರಹಕ್ಕೆ ಸೇರಿಸಬೇಕಾಗಿ ಬಂತು. ಅಂತಹ ಮೌಲ್ಯವರ್ಧನೆಯು ಸಂಪೂರ್ಣವಾಗಿ ಅನಪೇಕ್ಷಿತವಾದ “ಸಾಲ-ಹಣಕಾಸಿನಿಂದ ವಿಕೈಗಾರಿಕೀಕರಣ” ವನ್ನು ಉಂಟುಮಾಡಬಹುದಾಗಿತ್ತು- ಅಂದರೆ, ವಿದೇಶಿ ಹಣಕಾಸುದಾರರಿಗೆ ದೇಶದ ಬಾಹ್ಯ ಋಣಭಾರವು ಹೆಚ್ಚುತ್ತಿರುವಂತೆಯೇ, ರೂಪಾಯಿ ಮೌಲ್ಯವರ್ಧನೆಯ ಕಾರಣದಿಂದಾಗಿ ದೇಶೀಯ ಉತ್ಪಾದಕರು ವಿದೇಶಿ ಪೂರೈಕೆದಾರರಿಂದ ಸ್ಪರ್ಧೆ ಎದುರಿಸಲಾಗದ ಸ್ಥಿತಿ ಉಂಟಾಗುತ್ತಿತ್ತು.

ನವ ಉದಾರವಾದದ ಆ ಹಂತ ಈಗ ಮುಗಿದಿದೆ. ದೇಶದೊಳಗೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅಸಮಾನತೆಗಳ ಬೃಹತ್ ಬೆಳವಣಿಗೆಯಿಂದ ಉಂಟಾಗುವ ಬೇಡಿಕೆಯ ನಿರ್ಬಂಧದಿಂದಾಗಿ ಭಾರತವು ಇನ್ನು ಮುಂದೆ ಆ ಪ್ರಮಾಣದ ಜಿಡಿಪಿ ಬೆಳವಣಿಗೆಯನ್ನು ಅನುಭವಿಸುವುದಿಲ್ಲ; ಇದು ಈಗಾಗಲೇ ಸ್ವಲ್ಪ ಸಮಯದಿಂದ ಸ್ಪಷ್ಟವಾಗಿದೆ. ಆದರೆ ಅದಷ್ಟೇ ಅಲ್ಲ, ಈ ಜಿಡಿಪಿ ಬೆಳವಣಿಗೆಯ ಈ ಕಡಿಮೆ ದರವೂ ಸಹ ಬೇಡಿಕೆ-ನಿರ್ಬಂಧದ ಕಾರಣದಿಂದಾಗಿ ಪಾವತಿ ಶೇಷದ ತೊಂದರೆಗಳಿಂದಾಗಿ ಸುಸ್ಥಿರವಾಗಿರುವುದಿಲ್ಲ.

ಶ್ರೀಲಂಕಾದ ಜ್ವಲಂತ ಉದಾಹರಣೆ

ಪಾವತಿ ಶೇಷದ ತೊಂದರೆಗಳು ಎಂತಹ ಅಸಾಧಾರಣ ವೇಗದಿಂದ ಒಂದು ದೇಶವನ್ನು ಮೊಣಕಾಲೂರುವಂತೆ ಮಾಡಬಹುದು ಎಂಬುದಕ್ಕೆ ಭಾರತದ ನೆರೆಹೊರೆಯಲ್ಲಿಯೇ, ಶ್ರೀಲಂಕಾ ಒಂದು ಜ್ವಲಂತ ಉದಾಹರಣೆಯನ್ನು ನೀಡುತ್ತಿದೆ. ಇತ್ತೀಚೆಗಷ್ಟೇ ಕಡಿಮೆ ಆದಾಯದ ಸ್ಥಿತಿಯಿಂದ ಬಡ್ತಿ ಪಡೆದು “ಮಧ್ಯಮ ಆದಾಯದ ದೇಶ” ಎಂದು ಪರಿಗಣಿಸಲ್ಪಟ್ಟ ಅದರ ಅರ್ಥವ್ಯವಸ್ಥೆಯನ್ನು ಈಗ ಹೆಚ್ಚುತ್ತಿರುವ ವಿದೇಶಿ ಸಾಲ ಮತ್ತು ವಿದೇಶಿ ವಿನಿಮಯದ ತೀವ್ರ ಕೊರತೆ ಆವರಿಸಿಕೊಂಡಿದೆ, ಅದನ್ನು ‘ಮಿತವ್ಯಯ’ವೆಂಬ ಗುರುತರವಾದ ಶರತ್ತುಗಳನ್ನು ವಿಧಿಸುವ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಂದೆ ಭಿಕ್ಷಾಪಾತ್ರೆಯನ್ನು ಒಡ್ಡುವಂತೆ ಮಾಡಿದೆ. ಇವೆಲ್ಲ ತೃತೀಯ ಜಗತ್ತಿನ “ಸಿರಿಯಿಂದ ಚಿಂದಿಯತ್ತ” ಇಳಿಯುವ ಕಥೆಗಳು, ಇವಕ್ಕೆ ಮುಖ್ಯ ಕಾರಣ ಸ್ಥಳೀಯ ಭ್ರಷ್ಟಾಚಾರ ಮತ್ತು ರಾಜಪಕ್ಷೆಯಂತಹವರ ಕುಹಕಗಳು ಎಂದು ಸಾಮ್ರಾಜ್ಯಶಾಹಿ ಪ್ರಚಾರ ಮಾಡುತ್ತದೆ. ಈ ಕುಹಕಿಗಳು ಖಂಡಿತವಾಗಿಯೂ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಆದರೆ ಅದರ ಮೇಲಷ್ಟೇ ಗಮನ ಕೇಂದ್ರೀಕರಿಸಿ, ನವ ಉದಾರವಾದವು ಉಂಟು ಮಾಡಿರುವ ಸಂರಚನಾತ್ಮಕ ನಿಶ್ಶಕ್ತಿಗಳನ್ನು ಕಾಣದಿರುವುದು ಮೂರ್ಖತನದ ಪರಮಾವಧಿಯಾಗುತ್ತದೆ.

ನವ ಉದಾರವಾದಿ ಬಂಡವಾಳಶಾಹಿಯ ಒಂದು ವಿಶಿಷ್ಟ ಲಕ್ಷಣವೆಂದರೆ ಬಹುಪಾಲು ದುಡಿಯುವ ಜನ ಸಮೂಹಗಳ ಜೀವನ ಪರಿಸ್ಥಿತಿಗಳನ್ನು ಹಿಡಿಯಷ್ಟು ಹಣಕಾಸು ಸಟ್ಟಾಕೋರರ ಖಯಾಲಿಗಳು ಮತ್ತು ಬಡಾಯಿಗಳು ನಿರ್ಧರಿಸುತ್ತವೆ. ಹಣದುಬ್ಬರದ ಏರುಗತಿ ಮತ್ತು ತದನಂತರದ ಪರಿಸ್ಥಿತಿಗಳು ಈ ಸಟ್ಟಾಕೋರರಲ್ಲಿ ಉಂಟು ಮಾಡುವ ಕಳವಳಗಳು ತೃತೀಯ ಜಗತ್ತಿನ ದುಡಿಯುವ ಜನರಿಗೆ ತೀವ್ರ ಸಂಕಷ್ಟಗಳನ್ನು ತರುತ್ತವೆ. ಈ ದೇಶಗಳ ಪಾವತಿ ಶೇಷದ ತೊಂದರೆಗಳಿಂದಾಗಿ ಈ ದೇಶಗಳ ಮೇಲೆ ಕರಾಳ ಮಿತವ್ಯಯದ ಕ್ರಮಗಳನ್ನು ಹೇರಲಾಗುತ್ತದೆ. ಇದೀಗ ನವ ಉದಾರವಾದದ ಉಬ್ಬರದಿಂದ ಯಾವುದೇ ಪ್ರಯೋಜನಗಳನ್ನು ಪಡೆಯದ ಜನರೇ ಅದರ ಅವನತಿಯ ಬಲಿಪಶುಗಳಾಗುವ ಕಠೋರ ವ್ಯಂಗ್ಯ.

Donate Janashakthi Media

Leave a Reply

Your email address will not be published. Required fields are marked *