ʻಕಾಶ್ಮೀರ್‌ ಫೈಲ್ಸ್‌ʼ ನಂತಹ ಕಳಪೆ ಆಯ್ಕೆಗೆ ಜೂರಿ ಅಸಮಧಾನ ಮಹತ್ವದ್ದು

ಕೆ. ಫಣಿರಾಜ್

ಅಂತರಾಷ್ಟ್ರೀಯ ಸಿನೆಮಾ ಉತ್ಸವಗಳಲ್ಲಿ ನಿರ್ಣಯಕ ಮಂಡಳಿಯ ಅಭಿಪ್ರಾಯಗಳು, ಸಿನೆಮಾ ಕಲೆಯ ಕುರಿತ ಅವರ ಕಣ್ಣೋಟ ಹಾಗು ಸಂವೇದನೆಯ ರುಚಿಯನ್ನು ಅವಲಂಬಿಸಿರುತ್ತದೆ. ಅದೇ ಕಣ್ಣೋಟ, ಸಂವೇದನೆಯ ರುಚಿಗಳು ಮತ್ತೊಂದು ನಿರ್ಣಯಕರ ತಂಡಕ್ಕೆ ಇರಬೇಕಿಲ್ಲ. ಆದರೆ ಸ್ಪರ್ಧೆಗೆ ಬಂದ ಸಿನೆಮಾಗಳನ್ನು ಸೋಸಿ, ಅಂತಿಮ ಆಯ್ಕೆ ಪಟ್ಟಿ ತಯಾರಿಸುವ ಮಂದಿಗೆ ಇರುವ ಅರಿವು, ಸಂವೇದನೆಗಳೂ ಬಹಳ ಮುಖ್ಯವಾಗಿರುತ್ತವೆ.

ಕನಿಷ್ಟ ಸಿನೆಮಾ ಕಲೆಗೆ ಗೌರವ ತರುವಂಥ ಕೃತಿಗಳನ್ನು ಆಯ್ದು ಅಂತಿಮ ಸ್ಪರ್ಧ ಪಟ್ಟಿ ತಯಾರಿಸುವ ಜನ ‘ಕಾಶ್ಮೀರ್ ಫೈಲ್ಸ್’ ನಂಥ ಸಿನೆಮಾವನ್ನು ಆಯ್ದು ಕೊಟ್ಟರೆಂದರೆ, ಅಲ್ಲಿಗೆ ಅರ್ಧ ಕಲೆಗೆ ಅಪಚಾರವಾಗಿ ಹೋಗಿದೆ ಎಂದೇ ಅರ್ಥ. ಹೀಗೆ ಆಯ್ದ ಪಟ್ಟಿಯಿಂದ ಪ್ರಶಸ್ತಿಗೆ ಆಯ್ಕೆಯಾಗುವ ಸಿನೆಮಾಗಳನ್ನು ಕಂಡಾಗ, ಕಣ್ಣೋಟ-ಸಂವೇದನೆಗಳ ಭಿನ್ನಮತವನ್ನು ಸಹಿಸಿಕೊಳ್ಳಬಹುದು.

IFFIಯಲ್ಲಿ ಸಿನೆಮಾ ನೋಡಲು ಆಯ್ದುಕೊಳ್ಳುವಾಗ ನಾವು ಖ್ಯಾತ ಸಿನೆಮ ಉತ್ಸವಗಳಲ್ಲಿ ಪ್ರಶಸ್ತಿ ಪಡೆದು, ಇಲ್ಲಿ ಪ್ರದರ್ಶಿತವಾಗುತ್ತಿರುವ ಸಿನೆಮಾಗಳನ್ನು ಮೊದಲ ಆಯ್ಕೆಯಾಗಿ ಇಟ್ಟುಕೊಂಡಿರುತ್ತೇವೆ. ಆ ಸಿನೆಮಾಗಳನ್ನು ಕಂಡ ನಂತರ, ‘ಇದಕ್ಕೆ ಕೊಟ್ಟಿರುವುದು ಶೇ.100 ಸರಿಯಾಗಿದೆ’ / ‘ಇದಕ್ಕೆ ಪ್ರಶಸ್ತಿ ಕೊಟ್ರಾ’!? ಅನಿಸುವುದುಂಟು.

ಬರ್ಲಿನ್ ನಲ್ಲಿ ಅತ್ಯುತ್ತಮ ಸಿನೆಮಾವೆಂದು ಪ್ರಶಸ್ತಿ ಪಡೆದ ‘ಅಲ್ಕಾರಸ್’ ನನಗೆ ತುಂಬಾ ಹಿಡಿಸಿತು. ಆದರೆ ಕ್ಯಾನ್ಸ್‌ ನಲ್ಲಿ ಪ್ರಶಸ್ತಿ ಪಡೆದ ‘ ಟ್ರಯಾಂಗಲ್ ಆಫ್ ಸ್ಯಾಡ್ನೆಸ್’ ಅರ್ಹವಲ್ಲದ ಸಾಧಾರಣ ಸಿನೆಮಾ ಅನಿಸಿತು.

53ನೇ IFFIಯಲ್ಲಿ ಪ್ರಶಸ್ತಿ ಪಡೆದ ‘I have Electric Dreams’ ನೋಡಿದಾಗ ನನಗೆ ನೋಡಲೇ ಬೇಕಾದ ಸಿನೆಮಾ ಅನಿಸಲಿಲ್ಲ-ತುಂಬಾ ಜಾಳಾಗಿದೆ ಎಂಬ ಅಸಂತುಷ್ಟಿಯನ್ನೂ ಉಳಿದವರ ಜೊತೆ ಹಂಚಿಕೊಂಡೆ. ಆದರೆ ಇವೆಲ್ಲ, ನಾವ್ ಲಾಪಿಡ್ ಹೇಳಿದ ಹಾಗೆ ‘ ಸಾಮಾನ್ಯ ಸಿನೆಮಾ ಕಲೆಯ ಘನತೆಯುಳ್ಳ, ಆಳ ಚರ್ಚೆಗೆ ಒಳಗಾಗಬೇಕಾದ ಸಿನೆಮಾಗಳಾಗಿದ್ದವು’ – ಭಿನ್ನಮತಗಳ ನಡುವೆಯೂ ಪ್ರಶಸ್ತಿ ಪಡೆಯಬಹುದಾದ ಅರ್ಹತೆ ಇಟ್ಟುಕೊಂಡವು. ಅದಕ್ಕಾಗಿಯೇ ನಾವ್, ‘ಕಾಶ್ಮೀರ್ ಫೈಲ್ಸ್’ನಂಥ ಕಳಪೆ ಆಯ್ಕೆಯ ಬಗ್ಗೆ ಅಸಮಧಾನ ಸೂಚಿಸಿರುವುದು ಬಹಳ ಮಹತ್ವದ್ದು. ಎಡವಾದರೂ-ಬಲವಾದರೂ, ಕಲೆಯ ಘನತೆಯ ವಿಷಯದಲ್ಲಿ ರಾಜಿ ಸಲ್ಲದು ಎಂದು ನಾವ್ ಸೂಚಿಸುತ್ತಿದ್ದಾರೆ ಎನ್ನುವುದನ್ನು ನಾವು ಗಮನಿಸಬೇಕು.

Donate Janashakthi Media

Leave a Reply

Your email address will not be published. Required fields are marked *