ಪ್ರಕಾಶ್ ಕಾರಟ್
ಜನತೆಗೆ ರಾಜಕೀಯ ಪಕ್ಷಗಳು ಕೊಡುವ ಆಶ್ವಾಸನೆಯಲ್ಲಿ ಆಯೋಗದ ಈ ಹಸ್ತಕ್ಷೇಪವು ರಾಜಕೀಯ ಪಕ್ಷವೊಂದರ ನೀತಿಯನ್ನು ನಿಯಂತ್ರಿಸುವ ಸ್ಪಷ್ಟ ಪ್ರಯತ್ನವಾಗಿದೆ. ಕೆಲವೇ ತಿಂಗಳ ಹಿಂದೆ ತಳೆದಿದ್ದ ನಿಲುವಿಗೆ ಪೂರ್ಣ ವಿರುದ್ಧ ಧೋರಣೆ ತಾಳುವ ಮೂಲಕ ಚುನಾವಣೆ ಆಯೋಗ, ಪ್ರಧಾನ ಮಒತ್ರಿಯ ಆದೇಶಗಳನ್ನು ಪಾಲಿಸುವ ಸಂಸ್ಥೆ ಎಂಬ ಆರೋಪಕ್ಕೆ ತನ್ನನ್ನು ತಾನು ಒಡ್ಡಿಕೊಂಡಿದೆ. 2000 ರೂಪಾಯಿಗಿಂತ ಕಡಿಮೆ ಮೊತ್ತದ ದೇಣಿಗೆಯ ಅನಾಮಿಕ ಮೂಲದ ಬಗ್ಗೆ ಅತೀವ ಆಸಕ್ತಿ ತಳೆದಿರುವ ಆಯೋಗ, ಚುನಾವಣಾ ಬಾಂಡ್ನಿಂದ ಅನಾಮಿಕ ದೇಣಿಗೆಗಳಿಂದ ಬರುವ ಕೋಟ್ಯಂತರ ರೂಪಾಯಿಗಳ ಬಗ್ಗೆ ಜಾಣ ಕುರುಡು ನಿಲುವು ತಳೆದಿದೆ.
ಭಾರತ ಚುನಾವಣೆ ಆಯೋಗ (ಇಸಿಐ) ಇತ್ತೀಚೆಗೆ ಕೈಗೊಂಡ ಕೆಲವು ನಿರ್ಧಾರಗಳು ಮತ್ತು ಕ್ರಮಗಳು ಇದೊಂದು ನಿಷ್ಪಕ್ಷಪಾತ ಸಂಸ್ಥೆ ಹಾಗೂ ಭಾರತೀಯ ಸಂವಿಧಾನ ಕೊಡಮಾಡಿರುವ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಪಾತ್ರ ವಹಿಸುವ ಸಂಸ್ಥೆಯೆಂಬ ಗೌರವಕ್ಕೆ ತಕ್ಕುದಾಗಿಲ್ಲ. ಕಳೆದ ಕೆಲವು ವರ್ಷಗಳಲ್ಲಿ, ಅದರಲ್ಲೂ ಮೋದಿ ಸರಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಆಯೋಗವು ಹೆಚ್ಚೆಚ್ಚಾಗಿ ಸರಕಾರದ ಇಷ್ಟಾನಿಷ್ಟಗಳಿಗೆ ಅನುಗುಣವಾಗಿ ವರ್ತಿಸುತ್ತಿದೆ ಹಾಗೂ ಈ ಹಿಂದೆ ಅನುಸರಿಸುತ್ತಿದ್ದ ಸ್ವತಂತ್ರ ಧೋರಣೆಗಳಿಂದ ಹಿಂದೆ ಸರಿದಿದೆ. ಈಚಿನ ಕೆಲವು ಪ್ರಕರಣಗಳು ಈ ದುರದೃಷ್ಟಕರ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಚುನಾವಣಾ ಆಶ್ವಾಸನೆಗಳು ಮತ್ತು ಚುನಾವಣೆ ಸಂದರ್ಭದಲ್ಲಿ ಉಚಿತ ಕೊಡುಗೆಗಳ (ಫ್ರೀಬೀ) ಆಫರ್ ನೀಡಬಹುದೇ ಎಂಬ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಆಯೋಗ ಒಂದು ನಿಲುಮೆಯನ್ನು ತಾಳಿತ್ತು. ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಆಯೋಗ ಹೇಳಿತ್ತು. ರಾಜಕೀಯ ಪಕ್ಷಗಳು ಮತ್ತು ಮತದಾರರಿಗೆ ಸಂಬಂಧಿಸಿದ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನವು `ಅಧಿಕಾರದ ಹದ್ದು ಮೀರಿದಂತಾಗುತ್ತದೆ’ ಎಂದು ಆಯೋಗ ಹೇಳಿತ್ತು.
ಈ ವರ್ಷದ ಏಪ್ರಿಲ್ನಲ್ಲಿ ಈ ಮಹತ್ವದ ನಿಲುವು ತಳೆದಿದ್ದ ಚುನಾವಣೆ ಆಯೋಗ, ಪ್ರಧಾನಿ ಮೋದಿ ಜುಲೈನಲ್ಲಿ `ರೇವ್ಡಿ’ ಸಂಸ್ಕೃತಿಯನ್ನು ಟೀಕಿಸಿ ಜನರಿಗೆ ಫ್ರೀಬೀ ಆಫರ್ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ನಂತರ ತನ್ನ ನಿಲುವನ್ನು ಬದಲಾಯಿಸಿಕೊಂಡಿತು. ಮಾದರಿ ನೀತಿ ಸಂಹಿತೆಗೆ ತಿದ್ದುಪಡಿ ತರುವುದಾಗಿ ಹಾಗೂ ಚುನಾವಣೆ ಆಶ್ವಾಸನೆಗಳ ವಿವರ ಹಾಗೂ ಅವುಗಳ ಆರ್ಥಿಕ ಪರಿಣಾಮಗಳಿಗೆ ಸಂಬಂಧಿಸಿದ ವಿವರಗಳ ಮಾದರಿ ಪತ್ರವೊಂದನ್ನು (ಪ್ರೊಫಾರ್ಮಾ) ಜಾರಿಗೆ ತರುವುದಾಗಿ ಅಕ್ಟೋಬರ್ನಲ್ಲಿ ಆಯೋಗ ಹೇಳಿದೆ. ಜನತೆಗೆ ರಾಜಕೀಯ ಪಕ್ಷಗಳು ಕೊಡುವ ಆಶ್ವಾಸನೆಯಲ್ಲಿ ಆಯೋಗದ ಈ ಹಸ್ತಕ್ಷೇಪವು ರಾಜಕೀಯ ಪಕ್ಷವೊಂದರ ನೀತಿಯನ್ನು ನಿಯಂತ್ರಿಸುವ ಸ್ಪಷ್ಟ ಪ್ರಯತ್ನವಾಗಿದೆ. ಕೆಲವೇ ತಿಂಗಳ ಹಿಂದೆ ತಳೆದಿದ್ದ ನಿಲುವಿಗೆ ಪೂರ್ಣ ವಿರುದ್ಧ ಧೋರಣೆ ತಾಳುವ ಮೂಲಕ ಚುನಾವಣೆ ಆಯೋಗ, ಪ್ರಧಾನ ಮಂತ್ರಿಯ ಆದೇಶಗಳನ್ನು ಪಾಲಿಸುವ ಸಂಸ್ಥೆ ಎಂಬ ಆರೋಪಕ್ಕೆ ತನ್ನನ್ನು ತಾನು ಒಡ್ಡಿಕೊಂಡಿದೆ.
ಇದೇ ಸರ್ಕಾರ ಮೊದಲ ಬಾರಿಗೆ ಚುನಾವಣಾ ಬಾಂಡ್ ವಿಚಾರ ಪ್ರಸ್ತಾಪಿಸಿದಾಗ ಆಯೋಗ ಅದನ್ನು ದೃಢವಾಗಿ ವಿರೋಧಿಸಿತ್ತು. ಈ ಅಪಾರದರ್ಶಕ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇಂಥ ಅನಾಮಿಕವಾದ ನಿಧಿ ಸಂಗ್ರಹ ವಿಧಾನವು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವುದಕ್ಕೆ ಅಡ್ಡಿಯಾಗಲಿದೆ ಎಂದು ಹೇಳಿತ್ತು. ಅದು 2018ರಲ್ಲಿ ಹೇಳಿದ್ದ ವಿಚಾರವಾಗಿದೆ. ಅದಾದ ನಂತರ ಆಯೋಗ ಇದುವರೆಗೂ ಈ ವಿಷಯದಲ್ಲಿ ಗಂಭೀರವಾದ ಫಾಲೋಅಪ್ ಮಾಡಿಲ್ಲ. ಚುನಾವಣೆ ಬಾಂಡ್ ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ ಮುಂದೆ ಬಂದಾಗ ಕೇಂದ್ರ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಚುನಾವಣೆಗಳಿಗೆ ಅನಾಮಿಕ ಮೂಲಗಳಿಂದ ಹಣ ಹರಿದು ಬರುವುದನ್ನು ತಡೆಯಲು ಗಂಭೀರ ಮಾರ್ಗೋಪಾಯ ಹುಡುಕುವ ಬದಲು ಆಯೋಗವು ರಾಜಕೀಯ ಪಕ್ಷಗಳು ಪಡೆಯುವ ಸಣ್ಣ ದೇಣಿಗೆಗಳನ್ನು ಪತ್ತೆ ಮಾಡುವಲ್ಲಿಯೇ ಹೆಚ್ಚು ಉತ್ಸುಕವಾಗಿದೆ. ಪ್ರಸಕ್ತ ಕಾನೂನಿನ ಪ್ರಕಾರ, 20,000 ರೂಪಾಯಿಗಿಂತ ಹೆಚ್ಚಿನ ದೇಣಿಗೆಯ ಮೂಲವನ್ನು ರಾಜಕೀಯ ಪಕ್ಷಗಳು ತಿಳಿಸಬೇಕಾಗುತ್ತದೆ. ಆಯೋಗ ಇದೇ ವರ್ಷ ಸೆಪ್ಟೆಂಬರ್ನಲ್ಲಿ ಕಾನೂನು ಸಚಿವಾಲಯಕ್ಕೆ ಪತ್ರ ಬರೆದು 2,000 ರೂಪಾಯಿ ದೇಣಿಗೆಯನ್ನೂ ಪಕ್ಷಗಳು ಘೋಷಿಸಬೇಕೆಂದು ಕಾಯ್ದೆಗೆ ತಿದ್ದುಪಡಿ ತರುವ ಮಾತನಾಡಿದೆ. 2,000 ರೂಪಾಯಿಗಿಂತ ಕಡಿಮೆ ಮೊತ್ತದ ದೇಣಿಗೆಯ ಅನಾಮಿಕ ಮೂಲದ ಬಗ್ಗೆ ಅತೀವ ಆಸಕ್ತಿ ತಳೆದಿರುವ ಆಯೋಗ, ಚುನಾವಣಾ ಬಾಂಡ್ನಿಂದ ಅನಾಮಿಕ ದೇಣಿಗೆಗಳಿಂದ ಬರುವ ಕೋಟ್ಯಂತರ ರೂಪಾಯಿಗಳ ಬಗ್ಗೆ ಜಾಣ ಕುರುಡು ನಿಲುವು ತಳೆದಿದೆ. ಈ ವರ್ಷ ಅಕ್ಟೋಬರ್ನಲ್ಲಿ ಚುನಾವಣಾ ಬಾಂಡ್ನ 22ನೇ ಕಂತು ಬಿಡುಗಡೆ ಮಾಡಿದ ನಂತರ, ಈ ಅನಾಮಿಕ ಮಾರ್ಗದಿಂದ ಒಟ್ಟು 10,791 ಕೋಟಿ ರೂಪಾಯಿ ಹರಿದು ಬಂದಿದೆ. ಅದರಲ್ಲಿ ಸಿಂಹಪಾಲು ಬಂದಿರುವುದು ಆಳುವ ಬಿಜೆಪಿ ಪಕ್ಷಕ್ಕೇ. ಆಳುವ ಪಕ್ಷದ ಪ್ರತೀ ಮಾತಿಗೆ ತಲೆದೂಗುವ ಕಾರ್ಪೊರೇಟ್ ಮತ್ತು ಶಂಕಾಸ್ಪದ ವರ್ತಕರಿಂದ ಅಪಾರ ಪ್ರಮಾಣದ ಹಣ ಮಾಡಿಕೊಳ್ಳ ಬಹುದೆಂಬುದು ಬಿಜೆಪಿಯ ಅಭಿಪ್ರಾಯವಾಗಿದೆ.
ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸದಿದ್ದರೆ ಚುನಾವಣೆಗಳಲ್ಲಿ ಸಮಾನವಾಗಿ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ ಮತ್ತು ಲೆಕ್ಕವಿಲ್ಲದ ಹಣವನ್ನು ಚುನಾವಣೆ ಉದ್ದೇಶಕ್ಕೆ ಬಳಸುವುದಕ್ಕೆ ಕಡಿವಾಣ ಹಾಕಲೂ ಆಗುವುದಿಲ್ಲ. ಆದರೆ, 2,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಸಣ್ಣ ಡೊನೇಶನ್ಗಳಿಗೆ ಹೊಣೆಗಾರಿಕೆ ನಿಗದಿಪಡಿಸುವಲ್ಲಿ ಆಯೋಗ ಸಮಾಧಾನ ಪಡುತ್ತಿದೆ.
ಗುಜರಾತ್ ಅಸೆಂಬ್ಲಿ ಚುನಾವಣೆ ನಡೆಸುವಲ್ಲಿ ಹೊಸ ಮಾನದಂಡಗಳನ್ನೇ ಸ್ಥಾಪಿಸಲು ಚುನಾವಣೆ ಆಯೋಗ ಹೊರಟಂತಿದೆ. ಮೊದಲನೆಯದಾಗಿ, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳನ್ನು ಪ್ರಕಟಿಸಿದ ನಂತರ ತುಂಬಾ ವಿಳಂಬವಾಗಿ ಗುಜರಾತ್ ಚುನಾವಣೆಗಳನ್ನು ಆಯೋಗ ಘೋಷಿಸಿತು. ಈ ಹೆಚ್ಚುವರಿ ದಿನಗಳನ್ನು ಗುಜರಾತ್ನಲ್ಲಿ ಯೋಜನೆಗಳನ್ನು ಉದ್ಘಾಟಿಸಲು ಅಥವಾ ಆರಂಭಿಸಲು ಪ್ರಧಾನ ಮಂತ್ರಿ ಹೇಗೆ ಬಳಸಿಕೊಂಡರು ಎನ್ನುವುದನ್ನು ಎಲ್ಲರೂ ನೋಡಿದ್ದೇವೆ.
ಗುಜರಾತ್ನ ಸಾವಿರಕ್ಕೂ ಅಧಿಕ ಕಾರ್ಪೋರೇಟ್ ಸಂಸ್ಥೆಗಳ ಜೊತೆ ಚುನಾವಣೆ ಆಯೋಗ ಒಪ್ಪಂದವೊಂದಕ್ಕೆ ಸಹಿ ಹಾಕಿದ ಅಸಹಜ ಕ್ರಮವನ್ನೂ ದೇಶ ಗಮನಿಸಿದೆ. ಈ ಕಂಪನಿಗಳ ಉದ್ಯೋಗಿಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವುದರ ಮೇಲೆ ಕಣ್ಗಾವಲು ಇಡುವುದು ಹಾಗೂ ಚುನಾವಣೆಯಲ್ಲಿ ಮತದಾನ ಮಾಡದ ನೌಕರರ ಹೆಸರುಗಳನ್ನು ತಮ್ಮ ವೆಬ್ಸೈಟ್ಗಳು ಅಥವಾ ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸುವ ಯೋಜನೆ ಇದಾಗಿದೆ. ಇದು ಹೆಚ್ಚು ಕಮ್ಮಿ ಬಲವಂತದಿಂದ ಮತದಾನ ಮಾಡಿಸುವ ಅಪಾಯಕ್ಕೆ ಸನಿಹವಾಗಿದೆ. ಆಯಾ ಕಂಪನಿಗಳ ದುಡಿಯಯುವ ವರ್ಗ ಮತದಾನ ಮಾಡುವುದನ್ನು ಖಾತರಿಪಡಿಸುವ ಜವಾಬ್ದಾರಿಯನ್ನು ಕಂಪನಿಗಳ ಆಡಳಿತ ವರ್ಗಗಳ ಮೇಲೆ ಹೊರಿಸಲಾಗಿದೆ. ಹೇಗೆ ಮತದಾನ ಮಾಡಬೇಕೆಂದು ಕಾರ್ಮಿಕರಿಗೆ ಸಲಹೆ ನೀಡುವುದು ಬಹುಶಃ ಮುಂದಿನ ಹೆಜ್ಜೆಯಾಗಿದೆ.
ಚುನಾವಣೆ ಆಯೋಗ ತುಂಬಾ ಅಮೂಲ್ಯವಾದುದು. ನಮ್ಮ ಪ್ರಜಾಪ್ರಭುತ್ವಕ್ಕೆ ಮಹತ್ವದ ಸಂಸ್ಥೆಯಾಗಿದೆ. ಒಂದು ಸರ್ವಾಧಿಕಾರಿ ಸರಕಾರದಿಂದ ಅದರ ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆ ಕುಸಿಯಲು ಬಿಡಬಾರದು. ಚುನಾವಣೆ ಆಯೋಗದಲ್ಲಿ ಸುಧಾರಣೆ ತರಲು ಇದು ಸಕಾಲವಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕರನ್ನೂ ಒಳಗೊಂಡ ಸಮಿತಿಯೊಂದು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ವ್ಯವಸ್ಥೆಯೊಂದಿಗೆ ಈ ಸುಧಾರಣೆ ಆರಂಭವಾಗಬೇಕಿದೆ. ಹಾಲಿ, ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವುದು ಸಂಪೂರ್ಣವಾಗಿ ಕಾರ್ಯಾಂಗದ, ಅಂದರೆ ಸರಕಾರದ ಕೈಯಲ್ಲಿದೆ. ಎರಡನೆಯದಾಗಿ, ಆಯುಕ್ತರು ನಿವೃತ್ತರಾದ ನಂತರ ಯಾವುದೇ ಅಧಿಕೃತ ಹುದ್ದೆ ಹೊಂದಬಾರದು ಅಥವಾ ಯಾವುದೇ ರಾಜಕೀಯ ಪಕ್ಷದಿಂದ ಸಂಸತ್ತು ಅಥವಾ ರಾಜ್ಯ ಶಾಸನಸಭೆಗಳ ಸದಸ್ಯರಾಗಿ ನೇಮಕಗೊಳ್ಳಬಾರದು.