ವಚನ ಪಾಲಿಸದೇ ದ್ರೋಹವೆಸಗಿದ ಕೇಂದ್ರ ಸರ್ಕಾರದ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕ ಧರಣಿ

ಬೆಂಗಳೂರು: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ರೈತರಿಗೆ ನೀಡಿದ ವಚನ ಪಾಲಿಸದೇ ದ್ರೋಹವೆಸಗಿರುವುದು ಮತ್ತು ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿ, ಸಂಪೂರ್ಣ ಸಾಲ ಮನ್ನಾ ಸೇರಿದಂತೆ ಮತ್ತಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಂಯುಕ್ತ ಹೋರಾಟ – ಕರ್ನಾಟಕ ವತಿಯಿಂದ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.

ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ಒಳಗೊಂಡಿರುವ ಸಂಯುಕ್ತ ಹೋರಾಟ – ಕರ್ನಾಟಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಕೇಂದ್ರವು ಜಾರಿಗೊಳಿಸಲು ಹೊರಟ್ಟಿದ್ದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಸತತ ಒಂದು ವರ್ಷ ಭಾರೀ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದವು. ಹೋರಾಟದ ತೀವ್ರತೆಗೆ ಮಣಿದ ಕೇಂದ್ರ ಸರ್ಕಾರ

ರೈತ ಹೋರಾಟವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾವು ಕಳೆದ ವರ್ಷ ನವೆಂಬರ್ 21ರಂದು ಕೇಂದ್ರ ಸರ್ಕಾರಕ್ಕೆ ಬರೆದು ಬಾಕಿ ಇರುವ ಆರು ಬೇಡಿಕೆಗಳನ್ನು ಪ್ರಸ್ತಾಪಿ ಅವುಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ 9 ಡಿಸೆಂಬರ್ 2021ರಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಸಂಯುಕ್ತ ಕಿಸಾನ್ ಮೋರ್ಚಾಗೆ ಪತ್ರ ಬರೆದು, ಹಲವು ಸಮಸ್ಯೆಗಳ ಬಗ್ಗೆ ಸರ್ಕಾರದ ಪರವಾಗಿ ಭರವಸೆ ನೀಡಿ, ಚಳವಳಿ ಹಿಂಪಡೆಯುವಂತೆ ವಿನಂತಿಸಿದರು.

ಸರ್ಕಾರದ ಈ ಪತ್ರದ ಭರವಸೆಯಂತೆ ಸಂಯುಕ್ತ ಕಿಸಾನ್ ಮೋರ್ಚಾವು 11 ಡಿಸೆಂಬರ್ 2021ರಂದು ದೆಹಲಿ ಗಡಿಗಳಲ್ಲಿನ ಎಲ್ಲಾ ಪ್ರತಿಭಟನಾ ಪ್ರದರ್ಶನಗಳನ್ನು ನಿಲ್ಲಿಸಲು ನಿರ್ಧರಿಸಿತು. ಇದಾಗಿ ಸುಮಾರು ವರ್ಷಗಳು ಸಮೀಪಿಸುತ್ತಿದ್ದರೂ ಕೇಂದ್ರ ಸರ್ಕಾರ, ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಇಂದು ದೇಶದ ಎಲ್ಲೆಡೆ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಲಾಗಿದೆ.

ಪ್ರಮುಖ ಬೇಡಿಕೆಯಾದ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಸಿ2 + 50 ಶೇಕಡಾ ಸೂತ್ರದ ಪ್ರಕಾರ ಎಲ್ಲಾ ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಅಂಗೀಕರಿಸಬೇಕು. ಎಂಎಸ್‌ಪಿ ಕುರಿತಂತೆ ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ಮತ್ತು ಅದರ ಹೇಳಿಕೆಯ ಕಾರ್ಯಸೂಚಿಯು ರೈತರ ಆಗ್ರಹಗಳಿಗೆ ವಿರುದ್ಧವಾಗಿದೆ. ಈ ಸಮಿತಿಯನ್ನು ವಜಾಗೊಳಿಸಬೇಕು ಮತ್ತು ಎಂಎಸ್‌ಪಿ ಕಾನೂನು ಖಾತರಿಗಾಗಿ ಕೇಂದ್ರ ಸರ್ಕಾರದ ಭರವಸೆಯಂತೆ ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿನಿಧಿಗಳನ್ನು ಸೇರಿಸುವ ಮೂಲಕ ರೈತರಿಗೆ ಆಗ್ರಹಗಳಿಗೆ ಸರಿ ಹೊಂದುವ ಹೊಸ ಸಮಿತಿಯನ್ನು ರಚನೆ ಮಾಡಬೇಕು ಆಗ್ರಹಿಸಲಾಗಿದೆ.

ಕೃಷಿಯಲ್ಲಿ ಹೆಚ್ಚುತ್ತಿರುವ ಲಾಗುವಾಡು ವೆಚ್ಚಗಳು ಮತ್ತು ಬೆಳೆಗಳಿಗೆ ಲಾಭದಾಯಕ ಬೆಲೆಗಳು ಸಿಗದ ಕಾರಣ ಶೇಕಡಾ 80 ಹೆಚ್ಚು ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ರೈತರ ಎಲ್ಲಾ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಪ್ರತಿಭಟನಾ ಆಗ್ರಹಿಸಿದರು.

ವಿದ್ಯುತ್ ತಿದ್ದುಪಡಿ ಮಸೂದೆ-2022 ಅನ್ನು ಹಿಂಪಡೆಯಬೇಕು. ಕೇಂದ್ರ ಸರ್ಕಾರವು “ಎಸ್.ಕೆ.ಎಂ. ನೊಂದಿಗೆ ಚರ್ಚಿಸಿದ ನಂತರವೇ ಈ ವಿಷಯದಲ್ಲಿ ಮುಂದುವರೆಯಲಾಗುವುದು” ಎಂದು ಲಿಖಿತ ಭರವಸೆ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಯಾವುದೇ ಚರ್ಚೆಯಿಲ್ಲದೆ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ.

ಲಖಿಂಪುರ ಖೇರಿ ಜಿಲ್ಲೆಯ ಟಿಕೋನಿಯಾದಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತರ ಹತ್ಯೆಯ ಪ್ರಮುಖ ಸಂಚುಕೋರ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಲಾಯಿತು.

ಲಖೀಂಪುರ ಖೇರಿ ಹತ್ಯಾಕಾಂಡದಲ್ಲಿ ಬಂಧಿಸಲ್ಪಟ್ಟ ಅಮಾಯಕ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ಹುತಾತ್ಮ ರೈತರ ಕುಟುಂಬಗಳಿಗೆ ಹಾಗೂ ಗಾಯಗೊಂಡ ರೈತರಿಗೆ ಪರಿಹಾರ ನೀಡುವ ಭರವಸೆಯನ್ನು ಸರಕಾರ ಈಡೇರಿಸಬೇಕು.

ಅನಾವೃಷ್ಟಿ, ಅತಿವೃಷ್ಟಿ, ಬೆಳೆ ರೋಗಗಳು ಇತ್ಯಾದಿಗಳಿಂದಾದ ನಷ್ಟವನ್ನು ಸರಿದೂಗಿಸಲು ಸರ್ಕಾರವು ಎಲ್ಲಾ ಬೆಳೆಗಳಿಗೆ ಸಮಗ್ರ ಮತ್ತು ಪರಿಣಾಮಕಾರಿ ಬೆಳೆ ವಿಮೆಯನ್ನು ಜಾರಿಗೊಳಿಸಬೇಕು. ಎಲ್ಲಾ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಮಾಸಿಕ ರೂ. 5,000 ರೈತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು.

ರೈತ ಚಳವಳಿಯ ಸಂದರ್ಭದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ಇತರ ರಾಜ್ಯಗಳಲ್ಲಿ ರೈತರ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು. ರೈತ ಚಳವಳಿಯಲ್ಲಿ ಹುತಾತ್ಮರಾದ ಎಲ್ಲಾ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ಹುತಾತ್ಮರ ಕುಟುಂಬದ ಪುನರುಜ್ಜೀವನಕ್ಕೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸಿಂಘು ಗಡಿಯಲ್ಲಿ ಹುತಾತ್ಮ ರೈತರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಯಿತು.

ಸಂವಿಧಾನ ದಿನದ ಅಂಗವಾಗಿ ಇಂದು ಭಾರತದಾದ್ಯಂತ ರೈತರು, ಎಲ್ಲಾ ರಾಜ್ಯಗಳ ರಾಜ್ಯಪಾಲರ ಮೂಲಕ, ಕೇಂದ್ರ ಸರ್ಕಾರವು ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ತನ್ನ ಲಿಖಿತ ಭರವಸೆಗಳನ್ನು ನೆನಪಿಸಲು ಮತ್ತು ಸಂಪೂರ್ಣ ಸಾಲ ಪರಿಹಾರ, ಬೆಳೆ ವಿಮೆ ಮತ್ತು ರೈತ ಪಿಂಚಣಿಗಾಗಿ ದೇಶದ ರೈತರ ಆಗ್ರಹಗಳನ್ನು ಸಾಧ್ಯವಾದಷ್ಟು ಬೇಗ ಈಡೇರಿಸುವಂತೆ ಆಗ್ರಹಿಸಲಾಗಿದೆ. ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ರೈತರ ತಾಳ್ಮೆಗೆ ಸವಾಲು ಹಾಕುವುದನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕೆಂದು ವಿನಂತಿಸಲಾಗಿದೆ. ಸರಕಾರ ರೈತರ ಬಗೆಗಿನ ಭರವಸೆಗಳು ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವುದನ್ನು ಮುಂದುವರಿಸಿದರೆ, ರೈತರಿಗೆ ಆಂದೋಲನವನ್ನು ತೀವ್ರಗೊಳಿಸುವುದಾಗಿ ಸಂಯುಕ್ತ ಹೋರಾಟ – ಕರ್ನಾಟಕ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *