ಕಾಂತಾರದ ಅಂತರಂಗ

ರಾಜೇಂದ್ರ ಉಡುಪ

ಇದು ಕಾಂತಾರ ದ ಚಿತ್ರ ವಿಮರ್ಶೆ ಅಲ್ಲ. ಅದು ಕಮರ್ಶಿಯಲ್ ಯಶಸ್ಸಿಗೆ ಬೇಕಾದ ಎಲ್ಲಾ ಫಾರ್ಮುಲಾಗಳನ್ನು (ಪ್ರೇಮ, ಫೈಟಿಂಗ್, ಹಿಂಸಾಚಾರ, ಸ್ಥಳೀಯ ವಿಶೇಷ ಆಚರಣೆಗಳು) ಒಳಗೊಂಡ ಒಂದು ಚಿತ್ರ. ಆದರೆ ಅದು ಅದಕ್ಕಿಂತ ಹೆಚ್ಚಿನ ‘ಕಲಾತ್ಮಕತೆ’ಯ, ‘ಸದಭಿರುಚಿ’ಯ, ರ‍್ಯಾಡಿಕಲ್ ರಾಜಕೀಯ ಧೋರಣೆ’ಯ ಚಿತ್ರ ಆಗಿರುವ ಪೋಸ್ ಕೊಡುತ್ತದೆ. ಅದು ನಿಜವಲ್ಲ ಎಂದು ವಾದಿಸುವ, ಪ್ರಮುಖವಾಗಿ ಅದರ ʻಹುಸಿ ರ‍್ಯಾಡಿಕಲ್ ರಾಜಕೀಯ ಧೋರಣೆ’ಯನ್ನು ಬಯಲುಗೊಳಿಸುವ ವಿಶ್ಲೇಷಣೆಯಿದು.

ಕಾಂತಾರ ಸಿನೇಮಾದ ವಿಚಾರದಲ್ಲಿ ಬಿಸಿ ಬಿಸಿ ಚರ್ಚೆಗಳು ಇನ್ನೂ ನಡೆಯುತ್ತಿವೆ. ಅನೇಕರು ಇದನ್ನು ಕ್ರಾಂತೀಕಾರೀ ವರ್ಗ ಹೋರಾಟದ ಕಲಾತ್ಮಕ ರೂಪ ಎಂದೂ, ವೈದಿಕ ಸಂಸ್ಕೃತಿಗೆ ಸೆಡ್ಡು ಹೊಡೆದು ನಿಂತ ಕರಾವಳಿಯ ನೆಲ ಮೂಲ ಸಂಸ್ಕೃತಿಯ ಉತ್ತಮ ಚಿತ್ರಣ ಎಂದೂ, ನಿರೂಪಣೆ ಮಾಡಿದ್ದನ್ನು ನೋಡಿದ್ದೇವೆ. ಆದರೆ ಅದರ ಆಳದಲ್ಲಿ ಹುದುಗಿದ ಪ್ರತಿಗಾಮಿ ತತ್ವವನ್ನು ಗಮನಿಸದೇ, ಮಾನಸಿಕ ಉದ್ವೇಗಕ್ಕೊಳಗಾಗಿ ಮಾಡುವ ಈ ನಿರೂಪಣೆಗಳು ಹಾದಿ ತಪ್ಪಿಸುತ್ತಿವೆ.

ಕರಾವಳಿ ಜನ ಸಾಮಾನ್ಯರಲ್ಲಿ ಒಂದು (ಮೂಢ) ನಂಬಿಕೆ ಇದೆ. `ಗೂಳಿಗ ಭೂತ ಹೇಳಿದಂತೆ ಕೇಳಿ, ಹಾಗೇ ನಡೆಯಿರಿ. ಇಲ್ಲವಾದರೆ ರಕ್ತಕಾರಿ ಸಾಯುತ್ತೀರಿ. ಇದು ಗೂಳಿಗನ ಕಾರಣಿಕ’. ಕಾಂತಾರದ ಕಥೆಯಲ್ಲಿ ಮುಂಬೈಯಿಂದ ಬಂದ ನವಯುವಕನೊಬ್ಬ ನೆಲೊಡೆತನದ ಸಮಸ್ಯೆಯ ಪರಿಹಾರಕ್ಕೆ ಭೂತದ ವಾಕ್ಕನ್ನು ಧಿಕ್ಕರಿಸಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಇದರ ಪರಿಣಾಮವಾಗಿ ರಕ್ತಕಾರಿ ಸಾಯುತ್ತಾನೆ. ಕಥೆಯ ಈ ತುಣಕನ್ನು ಸಿನೇಮಾದ ಮೊದಲ ಹಂತದಲ್ಲೇ ತುರುಕಲಾಗಿದೆ.

`ಸಂವಿಧಾನ ಬದ್ಧ ನ್ಯಾಯ ತೀರ್ಮಾನ ಗೌಣ ಹಾಗೂ ಅಸಮರ್ಪಕ, ಆದುದರಿಂದ ನೆಲಮೂಲ ಸಂಸ್ಕೃತಿಯಿಂದ ಬಂದ ಭೂತದ ನ್ಯಾಯ (ಇಲ್ಲವೇ ಧರ್ಮಸ್ಥಳದ ನ್ಯಾಯ) ವೇ ನಿಜವಾದ ಪರಿಹಾರ’ ಎಂಬ ಸಂವಿಧಾನ ವಿರೋಧಿ ನಿಲುವು ಕಳೆದ ಮೂರುನಾಲ್ಕು ದಶಕಗಳಿಂದ ಚಲಾವಣೆಯಲ್ಲಿರುವುದನ್ನು ನಾವು ನೋಡಿದ್ದೇವೆ. ಕಾಂತಾರದ ಪ್ರಾಥಮಿಕ ಸೂಚನೆಯೂ ಅದೇ ಆಗಿದೆ. ಕಾಂತಾರ ಸಿನೇಮಾ ಭೂಮಿ ಪ್ರಶ್ನೆ ಕೇಂದ್ರಿತವಾದ ವರ್ಗ ದ್ವಂದ್ವವನ್ನು ಗುರುತಿಸಿದೆ. ಅದು ಸರಿಯಾಗಿ ಇದೆ, ಆದರೆ ಅದಕ್ಕೆ ಸಂವಿಧಾನಾತ್ಮಕ ಹೋರಾಟದ ಮಾರ್ಗವನ್ನು ಅಲ್ಲಗೆಳೆಯುತ್ತದೆ ಮತ್ತು ಸಮಸ್ಯೆಯ ಪರಿಹಾರವನ್ನು ಮೌಢ್ಯದ ಭ್ರಮಾ ಲೋಕಕ್ಕೆ ಕೊಂಡೊಯ್ಯುತ್ತದೆ.

ಕಾಂತಾರ ಸಿನೇಮಾ ಅತೀ ಮಾನುಷ ಶಕ್ತಿ ಹೀರೊನಿಂದ ಅರ್ಥಹೀನ ಹಿಂಸೆಯನ್ನು ದಾಖಲಿಸುತ್ತದೆ ಮತ್ತು ಹಿಂಸೆಯ ಪ್ರಕ್ರಿಯೆ ಕ್ಯಾಮರಾದ ಸನಿಹದಲ್ಲೇ ನಡೆಯುತ್ತದೆ. ಇದು ಹಿಂಸೆಯ ವಿಜೃಂಭಣೆ.

ಕರಾವಳಿಯ ಭೂತಗಳು (ನಾಗನನ್ನು ಸೇರಿಸಿ) ವೈದಿಕೀಕರಣಗೊಂಡ ದುರಂತವನ್ನು ನಾವು ನೋಡಿದ್ದೇವೆ. ಇದರಲ್ಲಿ ಪುರೋಹಿತರು, ಜ್ಯೋತಿಷಿಗಳು, ಕವಡೆ ಎಸೆಯುವವರು, ಅಷ್ಟ ಮಂಗಳದವರು, ತಾಂಬೂಲ ನೋಡುವವರು ಭಾಗಿಯಾಗಿರುತ್ತಾರೆ. ಇದರೊಂದಿಗೆ ಭೂತಗಳು ವ್ಯಾಪಾರೀಕರಣಕ್ಕೂ ಒಳಗಾಗಿವೆ. ಇದಕ್ಕಾಗಿ ಕರಾವಳಿ ಹೊರಗಿನಿಂದ ಅಗಾಧ ಬಂಡವಾಳ ಹರಿದು ಬರುತ್ತದೆ. ಹೊರಗಿನಿಂದ ಹರಿದು ಬರುವ ಬಂಡವಾಳದ ನಡೆಯ ಮೂಲ ಗುಟ್ಟಾಗಿ ಏನು ಉಳಿದಿಲ್ಲ. ವ್ಯಾಪಾರೀಕರಣದ ಸ್ಪರ್ಧೆಯಲ್ಲಿ ಮುಂದಿರುವ ಕೆಲವು ದೈವ ದೇವರುಗಳು, ಕಾರ್ಪೊರೇಟಿಕರಣಕ್ಕೆ ಒಳಗಾದದ್ದನ್ನು ನೋಡಿದ್ದೇವೆ. ಶಬರಿ ಮಲೈ, ಧರ್ಮಸ್ಥಳ, ತಿರುಪತಿ ಕೆಲವು ಉದಾಹರಣೆಗಳು. ಕಾಂತಾರದ ಜನಪ್ರಿಯತೆಯನ್ನು ನೋಡಿದರೆ ಪಂಜುರ್ಲಿ ಭೂತವೋ (ಇಲ್ಲ ಅಣ್ಣಪ್ಪ ಭೂತವೋ) ಕಾರ್ಪೊರೇಟಿಕರಣಗೊಳ್ಳುವುದರಲ್ಲಿ ಅನುಮಾನವಿಲ್ಲ. ಕಾಂತಾರ ಸಿನೇಮಾ ಹಾಕಿದ ಬಂಡವಾಳಕ್ಕೆ ಅಗಾಧ ಲಾಭ ತಂದು ಕೊಟ್ಟಿದೆ, ಮುಂದೆ ಭೂತಕ್ಕೂ ಅಗಾಧ ಲಾಭ ಬರಬಹುದು.

ಭೂಮಾಲಕನ ತೈನಾತಿ ಆಗಿದ್ದ, ಕಾಡಿನ ಮರಕಡಿಯುವ, ಕಾನೂನಿಗೆ ವಿರುದ್ಧವಾಗಿ ಕಾಡುಪ್ರಾಣಿಗಳನ್ನು ಕೊಲ್ಲುವ, ಅತಿಯಾದ ಕುಡಿತದ ಚಟ ಹಚ್ಚಿಕೊಂಡ ಒಬ್ಬನನ್ನು ಅವನ ಅತಿಮಾನುಷ ಪೌರುಷ, ದುಃಸಾಹಸ, ಹಿಂಸೆಗಳಿಂದ ಹೀರೊ ಆಗಿ ರೂಪಿಸುವುದು ಸಿನೇಮಾ ಪ್ರಪಂಚದಲ್ಲಿ ಹೊಸದೇನು ಅಲ್ಲ. ಇತ್ತೀಚೆಗೆ ಹಿಂಸೆಯ ವೈಭವೀಕರಣದ ಚಿತ್ರಗಳು ಬಂದಿರುವುದನ್ನು ಗಮನಿಸಿದ್ದೇವೆ. ಇವೆಲ್ಲವೂ ಸಂಘ ಪರಿವಾರದ ಬತ್ತಳಿಕೆಯನ್ನು ಸೇರಿದ್ದನ್ನೂ ನೋಡಿದ್ದೇವೆ. ಕಾಂತಾರದಲ್ಲಿ ದಟ್ಟವಾಗಿ ಹರಡಿದ ರಾಜಕೀಯ ಛಾಯೆಯನ್ನು ಅಲಕ್ಷಿಸುವುದು ದಡ್ಡತನವಾಗುತ್ತದೆ.

ಸಂವಿಧಾನಾತ್ಮಕ ಹೋರಾಟದ ಆಯುಧಗಳನ್ನು ಬಿಟ್ಟು ಹಿಂಸೆಯನ್ನೆ ಪ್ರಾಥಮಿಕವಾಗಿಸಿದ್ದರಿಂದ ಹೋರಾಟದಲ್ಲಿ ಹೆಂಗಸರ ಸ್ಥಾನ ಗೌಣವಾಗುತ್ತದೆ. ಮಾತ್ರವಲ್ಲ, ಇತರ ಕಮರ್ಶಿಯಲ್ ಸಿನೆಮಾಗಳಂತೆ ಕೀಳುರುಚಿಯ ಅಂಗಪ್ರಧಾನ ಅಪಹಾಸ್ಯ ಮಾಡಲಾದೆ. ಇದರಿಂದಾಗಿ ಕಾಂತಾರ ಪುರುಷ ಪ್ರಧಾನ ಪ್ರಕಾರದಲ್ಲಿ ಸೇರಿ ಸೊರಗಿದೆ.

ಕಾಂತಾರದ ಕೊನೆಯ ದೃಶ್ಯದಲ್ಲಿ ಭೂತದ ಹಣತಿಗೆ ಅಡ್ಡ ವಿಭೂತಿನಾಮ, ಮಧ್ಯೆ ಶಿವನ ಮೂರನೇ ಕಣ್ಣಿನ ಚಿತ್ರ, ಶಿವನೊಡನೆ ಗೂಳಿಗನನ್ನು ಐಕ್ಯಗೊಳಿಸುವ ಹಾಗೂ ವಿಷ್ಣುವಿನ ಅವತಾರವನ್ನು ನೆನಪಿಸುವ `ವರಾಹ ರೂಪಂ’ ಎನ್ನುವ ಸಂಗೀತ ಇವು ಸ್ಥಳೀಯ ಸಂಸ್ಕೃತಿಯ ಚಿತ್ರಣವಂತೂ ಅಲ್ಲ. ಭೂತಕೋಲ ಸನಾತನ ಹಿಂದೂ ವೈದಿಕ ಪದ್ಧತಿ ಎಂದು ಘೋಷಿಸಲು ಸಂಘ ಪರಿವಾರದ ಕೈಯಲ್ಲೊಂದು ಅಸ್ತ್ರ ಕೊಡುವ ಪ್ರಯತ್ನ. ಇದು ಸಂಘಪರಿವಾರವನ್ನು ಸಹಜವಾಗಿಯೇ ಹುಚ್ಚಿಗೆಬ್ಬಿಸಿದೆ.

ಕಾಡಿನಲ್ಲಿ ಬಾಳುವ ಜನರು, ಭೂಮಾಲಕರು, ಭೂತ ಪ್ರಾತ್ರಗಳು ಇವರೆಲ್ಲ ಅಮೂರ್ತರೂಪಗಳೆ? ಅವರಿಗೆ ಜಾತಿಗಳಿಲ್ಲವೆ? ಸಂದರ್ಭಾನುಸಾರವಾಗಿ ಜಾತಿಯನ್ನು ಅಂದಾಜಿಸಬಹುದಾದರೂ ಸಿನೇಮಾದಲ್ಲಿ ಅದನ್ನು ಮುಚ್ಚಿಟ್ಟ ಕಾರಣವೇನು?

ಕಾಂತಾರದಲ್ಲಿ ಒಂದು ಕಡೆ ಕಾಡಿನ ಬುಡಕಟ್ಟು ಜನರಿಗೂ ಪ್ರಭುತ್ವಕ್ಕೂ ಹಾಗೂ ಇನ್ನೊಂದು ಕಡೆ ಕಾಡಿನ ಬುಡಕಟ್ಟು ಜನರಿಗೂ ಭೂಮಾಲಕರಿಗೂ ಇರುವ ವೈರುಧ್ಯವನ್ನು ತೋರಿಸಿದ್ದಾರೆ. ಆದರೆ ಕೊನೆಗೂ ಪ್ರಭುತ್ವದ ಹೃದಯವಂತಿಕೆಯಿಂದಾಗಿ ಆ ವೈರುಧ್ಯವೂ ಕೊನೆಗೊಳ್ಳುವ, ಭೂಮಾಲಿಕನ ದೌರ್ಜನ್ಯದ ವಿರುದ್ಧ ಜನ ಮತ್ತು ಪ್ರಭುತ್ವ ಒಂದಾಗಿ ಹೋರಾಡುವ ‘ದಂತಕತೆ’ ಧ್ವನಿಸುವ ರಾಜಕೀಯ ಧೋರಣೆಯೇನು? ಇದು ವಾಸ್ತವದಲ್ಲಿ ನೆಲೆಯಿರುವ ರ‍್ಯಾಡಿಕಲ್ ಧೋರಣೆಯಂತೂ ಖಂಡಿತ ಅಲ್ಲ. ಮಾತ್ರವಲ್ಲ, ಇಂದಿನ ಪ್ರಭುತ್ವದ ಇಲ್ಲದ ‘ಹೃದಯವಂತಿಕೆ’ಯನ್ನು ಎತ್ತಿ ಹಿಡಿಯುವ ಪ್ರಯತ್ನವಲ್ಲವೇ?

ಕಾಡಿನ ಜನರು ‘ಹೀರೊ’ ನಾಯಕತ್ವದಲ್ಲೇ ನಡೆಸುವ ಸಾಮುದಾಯಿಕ ಹೋರಾಟ ಹೀರೊ ಬಂಧನವಾದ ಕೂಡಲೇ ನಿಂತು ಹೋಗುತ್ತದೆ. ಜೈಲಿನಿಂದ ಬಂದ ಹೀರೊ ಗೆ ತನ್ನ ಸೋದರನ ಕೊಲೆಗೆ ಪ್ರತೀಕಾರ ಮಾತ್ರ ಮುಖ್ಯವಾಗುತ್ತದೆ. ಹೀರೋ ನನ್ನು ಅತಿಮಾನುಷ ದೈವವಾಗಿಸಿ ಕೈತೊಳೆದುಕೊಳ್ಳಲಾಗುತ್ತದೆ. ಕಾಡಿನ ಜನರು ಒಂದು ಕಡೆ, ಭೂಮಾಲಕರು ಕಾಂಟ್ರಾಕ್ಟರುಗಳು ಮತ್ತು ಅವರ ಬೆಂಬಲಕ್ಕಿರುವ ಪ್ರಭುತ್ವದ ಬಲ ಇನ್ನೊಂದು ಕಡೆ, ಇಂದಿನ ಕಟು ವಾಸ್ತವವಾಗಿರುವಾಗ ‘ಹೃದಯವಂತ’ ಪ್ರಭುತ್ವದ ‘ದಂತಕತೆ’ಯ ಉದ್ದೇಶ ಸ್ಪಷ್ಟವಲ್ಲವೇ? ಹೆಚ್ಚಿನ ದೈವಗಳು, ಭೂತಗಳು ವಾಸ್ತವವಾಗಿ ತಮ್ಮ ಕಾಲದ ಯಜಮಾನ ವರ್ಗಗಳ ಮತ್ತು ಪ್ರಭುತ್ವದ ದಮನ ಹಿಂಸಾಚಾರದ ವಿರುದ್ಧ ಹೋರಾಡಿ ಹುತಾತ್ಮರಾದವರು. ಅವರ ‘ನಿಜಕತೆ’ಯನ್ನು ಮರೆಸಲು ಅಲ್ಲವೇ ಈ ದಂತಕತೆ?

`ನಿಮ್ಮ ಭೂಮಿಯ ಸ್ವಾಧೀನತೆ ಪಟ್ಟವನ್ನು ಮಾಡಿಕೊಡುತ್ತೇವೆ. ಕಾಡುತ್ಪತ್ತಿಯನ್ನು ಅನುಭವಿಸುವ ಹಕ್ಕನ್ನು ಕೊಡುತ್ತೇವೆ…’ ಎಂದು ಅರಣ್ಯಾಧಿಕಾರಿ ಜನರಿಗೆ ಭರವಸೆ ಕೊಡುತ್ತಾನೆ. ಇದರಿಂದಾಗಿ ಕಾಡಿನ ಜನ ಅರಣ್ಯಾಧಿಕಾರಿ ಸೇರಿಕೊಳ್ಳುತ್ತಾರೆ. ಅರಣ್ಯಾಧಿಕಾರಿಯ ಭರವಸೆ ಶೂನ್ಯದಿಂದೇನು ಹುಟ್ಟಿ ಬರಲಿಲ್ಲ. ಅದು ದಂತ ಕಥೆಯ ಭಾಗವಲ್ಲ. ಈ ಕಾಯಿದೆ ಬಂದದ್ದು 2006ನೇ ಇಸವಿಯಲ್ಲಿ. ಇದಕ್ಕಾಗಿ ಅನೇಕ ವರ್ಷಗಳ ಪ್ರಜಾಸತ್ತಾತ್ಮಕ ಹೋರಾಟ ನಡೆದಿತ್ತು. ಸದನದ ಒಳಗೆ ಕಾಂ.ಬೃಂದಾ ಕಾರಟ್‌ರ ನೇತೃತ್ವದಲ್ಲಿ ನಡೆದ ಹೋರಾಟವನ್ನು ನೆನೆಸಿಕೊಳ್ಳುವುದು ಸೂಕ್ತ. ಆದರೆ ಈ ಕಾನೂನುಬದ್ಧ ಸಂವಿಧಾನಬದ್ಧ ‘ಭರವಸೆ’ಯನ್ನು ಹಿಂತೆಗೆದುಕೊಳ್ಳುವ ಹುನ್ನಾರವನ್ನು ಇಂದಿನ ಪ್ರಭುತ್ವ ನಡೆಸುತ್ತಿರುವಾಗ ಈ ದಂತಕತೆ ಅದನ್ನು ಮುಚ್ಚಿಕೊಳ್ಳಲು ಅಲ್ಲವೇ? ‘ಕಾಂತಾರ’ ನಿಜವಾದ ಪ್ರಜಾಸತ್ತಾತ್ಮಕ ಆಶಯಗಳನ್ನು ಹೋರಾಟವನ್ನು ಗೌಣಗೊಳಿಸುತ್ತದೆ ಮತ್ತು ಭ್ರಮಾತ್ಮಕ ಮಿಥ್ಯೆಯನ್ನು ವೈಭವೀಕರಿಸುತ್ತದೆ.

ಕಾಂತಾರ ಬಿತ್ತುವ ಒಟ್ಟಾರೆ ಧೋರಣೆಯಾದರೂ ಏನು? `ಹೋರಾಟ ಮಾಡಬೇಡಿ, ಹೋರಾಟ ಹಿಂಸೆಯಲ್ಲೂ, ಸಾವು ನೋವಿನಲ್ಲೂ ಕೊನೆಗೊಳ್ಳುತ್ತದೆ. ಹೋರಾಟವನ್ನು ಬಿಟ್ಟು ಭೂತವನ್ನು ನಂಬಿ. ಹೃದಯವಂತ ಪ್ರಭುತ್ವವೂ ನಿಮ್ಮ ಬೆನ್ನಿಗಿದೆ. ಅದಕ್ಕೆ ಕೈ ಮುಗಿದು ನಿಂತು ನಿರಾಳರಾಗಿ.’ ಇದನ್ನು ಕಾಂತಾರ ಸಿನೆಮಾದಲ್ಲಿ ನವಿರಾಗಿ ಹೆಣೆಯಲಾಗಿದೆ.

Donate Janashakthi Media

Leave a Reply

Your email address will not be published. Required fields are marked *