20 ಸಾವಿರ ಶಾಲೆಗಳು ಮುಚ್ಚಲ್ಪಟ್ಟಿವೆ: ಕೇಂದ್ರ ಶಿಕ್ಷಣ ಸಚಿವಾಲಯ ವರದಿ ಬಹಿರಂಗ

ನವದೆಹಲಿ: 2020-21ರ ಸಾಲಿನಲ್ಲಿ ಶಾಲಾ ಶಿಕ್ಷಣದಲ್ಲಿ ಶ್ರೇಷ್ಠ ನಿರ್ವಹಣೆಯನ್ನು ಪ್ರದರ್ಶಿಸಿರುವ  ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸ್ಥಿತಿಗತಿಗಳ ಬಗ್ಗೆ ಪಟ್ಟಿಯನ್ನು ಬಿಡುಗಡೆಗೊಳಿಸಿರುವ ಕೇಂದ್ರ ಶಿಕ್ಷಣ ಸಚಿವಾಲಯವು ದೇಶದಲ್ಲಿರುವ ಶಾಲೆಗಳ ಸಂಖ್ಯೆ, ಮಕ್ಕಳ ಶಾಲಾ ದಾಖಲಾತಿ ಪ್ರಮಾಣ, ಶಿಕ್ಷಕರ ಸಂಖ್ಯೆ, ಶಾಲೆಗಳ ಕಾರ್ಯಕ್ಷಮತೆಯ ಬಗೆಗಿನ ಸೂಚ್ಯಂಕಗಳ ವರದಿಯನ್ನು ಬಿಡುಗಡೆಗೊಳಿಸಿದೆ.

ಶಾಲೆಗಳ ಸ್ಥಿತಿಗತಿ ಕುರಿತ ‘ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ-2021-22′ ವರದಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯದ ʻಎಜುಕೇಷನ್+’ ಬಿಡುಗಡೆ ಮಾಡಿದೆ. ಕೋವಿಡ್‌ ನಂತರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆದ ಬದಲಾವಣೆಗಳು ಈ ವರದಿಯಲ್ಲಿ ಉಲ್ಲೇಖಗೊಂಡಿವೆ.

ಕಳೆದ 2021-22ನೇ ಸಾಲಿನಲ್ಲಿ ದೇಶದಲ್ಲಿ ಒಟ್ಟು 20 ಸಾವಿರಕ್ಕೂ ಹೆಚ್ಚಿನ ಶಾಲೆಗಳು ಮುಚ್ಚಲ್ಪಟ್ಟಿವೆ ಎಂದು ಗುರುತಿಸಲಾಗಿದ್ದು, ಮುಚ್ಚಲ್ಪಟ್ಟ ಬಹುತೇಕ ಶಾಲೆಗಳು ಖಾಸಗಿ ಶಾಲೆಗಳಾಗಿವೆ ಎಂದು ಉಲ್ಲೇಖಿಸಲಾಗಿದೆ. 2020-2021ರಲ್ಲಿ 15.09 ಲಕ್ಷದಷ್ಟು ಇದ್ದ ಶಾಲೆಗಳ ಸಂಖ್ಯೆ 2021-22ನೇ ಇಸವಿಯಲ್ಲಿ 14.89ಕ್ಕೆ ಇಳಿಕೆ ಕಂಡಿದೆ ಎಂದು ವರದಿ ಮಾಡಿದೆ.

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂದು ಶೇ 73ರಷ್ಟು ಪೋಷಕರು ಸಮೀಕ್ಷೆಯೊಂದರಲ್ಲಿ ಅಭಿಪ್ರಾಯ ವ್ಯಪ್ತಪಡಿಸಿದ್ದಾರೆ. ಶೇ 12ರಷ್ಟು ಪೋಷಕರು ಇಂಗ್ಲಿಷ್‌ ಮಾಧ್ಯಮ ಬೇಕು ಹಾಗೂ ಶೇ 10ರಷ್ಟು ಪೋಷಕರು ಸರ್ಕಾರಿ ಶಾಲೆಯ ಲಭ್ಯತೆ ಇಲ್ಲ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ತೆರೆದಿರುವ 10 ಶಾಲೆಗಳಲ್ಲಿ 7 ಶಾಲೆಗಳು ಖಾಸಗಿ ಶಾಲೆಗಗಳಾಗಿದ್ದು, ದಕ್ಷಿಣ ಏಷ್ಯಾ ದೇಶಗಳಲ್ಲಿ ಯುನೆಸ್ಕೊ ಸಮೀಕ್ಷೆಗಳನ್ನು ನಡೆಸಿ, ವರದಿ ಸಿದ್ಧಪಡಿಸಿದೆ ಪೋಷಕರ ಆಕಾಂಕ್ಷೆಗಳ ಮಟ್ಟಕ್ಕೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ದೊರೆಯದಿರುವ ಕಾರಣಕ್ಕೆ ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುತ್ತಿವೆ ಎಂದು ಯುನೆಸ್ಕೊ ತನ್ನ ಗ್ಲೋಬಲ್‌ ಎಜುಕೇಷನ್‌ ಮೊನಿಟರಿಂಗ್‌ ರಿಪೋರ್ಟ್‌ 2022ರಲ್ಲಿ ವರದಿ ಮಾಡಿದೆ.

ಶಾಲೆಗಳ ಕಾರ್ಯಕ್ಷಮತೆ ಶ್ರೇಯಾಂಕ

ಕಲಿಕಾ ಫಲಿತಾಂಶ ಹಾಗೂ ಶಾಲಾಡಳಿತ ನಿರ್ವಹಣೆಗೆ ಸಂಬಂಧಿಸಿದ 70 ಸೂಚಕಗಳನ್ನು ಆಧರಿಸಿ ಶಾಲಾ ಶಿಕ್ಷಣದ ನಿರ್ವಹಣಾ ಶ್ರೇಯಾಂಕವನ್ನು ನಿಗದಿಪಡಿಸಲಾಗಿದೆ. ಅದರಂತೆ, ಕೇರಳ, ಚಂಡೀಗಢ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ಎರಡು ವರ್ಗಗಳಾಗಿ ವಿಂಗಡಣೆ ಮಾಡಿ, ಫಲಿತಾಂಶ ಮತ್ತು ಆಡಳಿತ ನಿರ್ವಹಣೆ ಎಂದು ಗುರುತಿಸಿ ಪ್ರತ್ಯೇಕಿಸಲಾಗಿದ್ದು, ಇವುಗಳನ್ನು ಮತ್ತೆ ಐದು ಅಂಶಗಳಲ್ಲಿ ವಿಭಾಗ ಮಾಡಲಾಗಿತ್ತು. ಅವುಗಳೆಂದರೆ, ಕಲಿಕೆ ಫಲಿತಾಂಶ, ಮೂಲಭೂತ ಸೌಕರ್ಯ ಮತ್ತು ಸೌಲಭ್ಯ, ಆಡಳಿತ ಪ್ರಕ್ರಿಯೆ ಹಾಗೂ ಅವಕಾಶ ಇವುಗಳಿಗೆ 1000 ಅಂಕಗಳನ್ನು ನಿಗದಿ ಮಾಡಲಾಗಿತ್ತು.

950ರಿಂದ 1000 ಸಾವಿರ ಒಳಗೆ ಅಂಕಗಳನ್ನು ಪಡೆದ ರಾಜ್ಯಗಳು, ಕೇಂದ್ರಾಡಳಿತಗಳನ್ನು 1ನೇ ಸ್ತರದಲ್ಲಿ  ಇರಿಸಲಾಗುತ್ತದೆ. 551ಕ್ಕಿಂತ ಕಡಿಮೆ ಅಂಕಗಳಿಗೆ ಅತ್ಯಂತ ಕನಿಷ್ಠ ಅಂದರೆ 10ನೇ ಸ್ತರವನ್ನು ನೀಡಲಾಗುತ್ತದೆ.

ಕಳೆದ ಬಾರಿನಂತೆಯೇ ಕೇರಳ, ಪಂಜಾಬ್ ಹಾಗೂ ಮಹಾರಾಷ್ಟ್ರ ಗರಿಷ್ಠ 927 ಅಂಕಗಳನ್ನು ಪಡೆದಿವೆ. ಉಳಿದಂತೆ ಈ ಸಲವೂ ಚಂಡೀಗಡ, ಗುಜರಾತ್ ರಾಜಸ್ಥಾನ ಹಾಗೂ ಆಂಧ್ರಪ್ರದೇಶ ಕ್ರಮವಾಗಿ 927, 903, 903 ಹಾಗೂ 902 ಅಂಕಗಳನ್ನು ಪಡೆದಿವೆ.

ದೆಹಲಿ, ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಹರ್ಯಾಣ, ಪುದುಚೇರಿ, ಲಕ್ಷದ್ವೀಪ, ಅಂಡಮಾನ್-ನಿಕೋಬಾರ್,ದಾದ್ರಾ-ನಗರಹವೇಲಿ ಹಾಗೂ ದಾಮನ್-ದಿಯು 851 ಹಾಗೂ 900 ಅಂಕಗಳೊಂದಿಗೆ ಮೂರನೇ ಸ್ತರ (ಲೆವೆಲ್ 3) ಪಡೆದಿವೆ.

ಅಸ್ಸೋಂ, ಛತ್ತೀಸ್‌ಗಢ, ಜಮ್ಮುಕಾಶ್ಮೀರ, ಜಾರ್ಖಂಡ್, ಲಡಾಖ್ ಹಾಗೂ ತ್ರಿಪುರಾ ರಾಜ್ಯಗಳು 4ನೇ ಸ್ತರ (801ರಿಂದ 850 ಅಂಕಗಳು) ಹಾಗೂ 5ನೇ ಸ್ತರಗಳನ್ನು  ಸಾಧಿಸಿವೆ.

ಬಿಹಾರ, ಗೋವಾ, ಮಧ್ಯಪ್ರದೇಶ, ಮಿಝೊರಾಂ, ಸಿಕ್ಕಿಂ ಹಾಗೂ ತೆಲಂಗಾಣ ರಾಜ್ಯಗಳು 5ನೇ ಸ್ತರವನ್ನು ಪಡೆದಿವೆ. ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಹಾಗೂ ಉತ್ತರಾಖಂಡ 6ನೇ ಸ್ತರದಲ್ಲಿವೆ (701ರಿಂದ 750 ಅಂಕಗಳು), ಅರುಣಾಚಲ ಪ್ರದೇಶ  ಅತ್ಯಂತ ಕಳಪೆ ಸಾಧನೆ ಮಾಡಿದ್ದು 669 ಅಂಕಗಳೊಂದಿಗೆ 7ನೇ ಸ್ತರದಲ್ಲಿವೆ.

ಕಲಿಕಾ ಫಲಿತಾಂಶದಲ್ಲಿ ರಾಜಸ್ಥಾನ ಗರಿಷ್ಠ ಅಂಕಗಳನ್ನು ಪಡೆದಿದ್ದು, ಕರ್ನಾಟಕ, ಚಂಡೀಗಡ, ಜಾರ್ಖಂಡ್ ಕ್ರಮವಾಗಿ ಆನಂತರದ ಸ್ಥಾನದಲ್ಲಿವೆ. ಕಲಿಕಾ ಲಭ್ಯತೆಯಲ್ಲಿ ಕೇರಳ, ಪಂಜಾಬ್, ದೆಹಲಿ ಹಾಗೂ ತಮಿಳುನಾಡು ಅಗ್ರಸ್ಥಾನಗಳಲ್ಲಿವೆ.

ಒಂದೇ ಲಿಂಕ್‌ನಲ್ಲಿ ಜನಶಕ್ತಿ ಮೀಡಿಯಾದ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ನ್ನು ನೋಡಬಹುದು

Donate Janashakthi Media

Leave a Reply

Your email address will not be published. Required fields are marked *