ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಉನ್ನತ ಮಟ್ಟದ ಜೀವನದ ಭಾಗವಾಗಿ ಆಹಾರ ಧಾನ್ಯಗಳ ಬಳಕೆಯನ್ನು ಇಚ್ಛಾನುಸಾರವಾಗಿ ಕಡಿಮೆ ಮಾಡಿಕೊಳ್ಳಲಾಗಿರುವುದರಿಂದ ತಲಾ ಆಹಾರಧಾನ್ಯಗಳ ಬಳಕೆಯಲ್ಲಿ ಇಳಿಕೆಯಾಗಿರಬಹುದು, ಆದ್ದರಿಂದ ಇದು ಜೀವನಮಟ್ಟ ಸುಧಾರಣೆಯಾಗುತ್ತಿರುವುದರ ಲಕ್ಷಣವೇ ವಿನಃ ಜೀವನ ಮಟ್ಟ ಹದಗೆಡುತ್ತಿರುವುದರ ಲಕ್ಷಣವಲ್ಲ. ಆದ್ದರಿಂದ, ಮೇಲ್ನೋಟದಲ್ಲಿ ಹಸಿವು ಹೆಚ್ಚುತ್ತಿರುವುದಾಗಿ ತೋರುತ್ತಿರುವ ಕಾರಣದ ಮೇಲೆ ಬಡತನದ ಹೆಚ್ಚಳದ ಬಗ್ಗೆ ತೀರ್ಮಾನಕ್ಕೆ ಬರುವುದು ತರವಲ್ಲ. ಬಡತನದ ವ್ಯಾಪ್ತಿ ಹೆಚ್ಚುತ್ತಿಲ್ಲ; ಅದು ಇಳಿಯುತ್ತಿದೆ ಎಂಬೊಂದು ವಾದವಿದೆ. ಭಾರತ ಸರ್ಕಾರ ಮತ್ತು ವಿಶ್ವ ಬ್ಯಾಂಕ್ ಇದನ್ನೇ ಹೇಳುತ್ತಿವೆ. ಆದರೆ ಉನ್ನತ ಬೆಳವಣಿಗೆಯ ದೇಶಗಳು ಎಂದು ಹೇಳಲಾಗುವ ಒಂದೇ ಒಂದು ದೇಶವೂ ಸಹ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಇಳಿದಿರುವ ಸ್ಥಾನದ ಹತ್ತಿರದಲ್ಲಿಯೂ ಇಲ್ಲದಿರುವುದು, ಬದಲಿಗೆ ಸಾಮಾನ್ಯವಾಗಿ ಬಡ ದೇಶಗಳೆಂದೇ ಪರಿಗಣಿಸಲ್ಪಟ್ಟ ದೇಶಗಳ ಜತೆಗಿರುವುದು ಇಂತಹ ವಾದಗಳ ವಿಚಾರಶೂನ್ಯತೆಯನ್ನು ತೋರಿಸುತ್ತದೆ. ಬಡತನದ ಅಂದಾಜುಗಳ ಅಪ್ರಾಮಾಣಿಕತೆಯನ್ನು ಜಾಗತಿಕ ಹಸಿವು ಸೂಚ್ಯಂಕವು ಬಹಿರಂಗಪಡಿಸಿದೆ.
ಜಾಗತಿಕ ಹಸಿವಿನ ಸೂಚ್ಯಂಕವನ್ನು ಸಿದ್ಧಪಡಿಸಿ ವರ್ಷ ವರ್ಷವೂ ಪ್ರಕಟಿಸುವ ವಾಡಿಕೆಯಂತೆ 2022ರ ಜಾಗತಿಕ ಹಸಿವು ಸೂಚ್ಯಂಕವು ಹೊರಬಂದಿದೆ. 121 ದೇಶಗಳನ್ನು ಒಳಗೊಂಡ ಈ ಸೂಚ್ಯಂಕದಲ್ಲಿ (ಹಸಿವೆಯು ಒಂದು ಸಮಸ್ಯೆಯಾಗಿಲ್ಲದ ದೇಶಗಳನ್ನು ಹೊರಗಿಡಲಾಗಿದೆ) 29.1 ಅಂಕಗಳನ್ನು ಪಡೆದ ಭಾರತವು 107ನೇ ಶ್ರೇಯಾಂಕದಲ್ಲಿದೆ. 2014ರ ಸೂಚ್ಯಂಕದಲ್ಲಿ ಪಡೆದಿದ್ದ 28.2 ಅಂಕಗಳಿಗೆ ಹೋಲಿಸಿದರೆ 2022ರಲ್ಲಿ ದೇಶವು ಹೀನಾಯವಾಗಿ ಕೆಳಗಿಳಿದಿದೆ (ಸಂಖ್ಯೆಯು ಪಟ್ಟಿಯಲ್ಲಿ ಎಷ್ಟು ಕೆಳಗಿನದೊ ಹಸಿವೆಯ ಮಟ್ಟವು ಅಷ್ಟು ಕೀಳಾಗಿದೆ ಎಂದರ್ಥ). ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಅರ್ಥವ್ಯವಸ್ಥೆಗಳಲ್ಲಿ ಭಾರತವೂ ಒಂದು; ಉದಯೋನ್ಮುಖ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಜಿಡಿಪಿಯು 5 ಟ್ರಿಲಿಯನ್ ಡಾಲರ್ ಮಟ್ಟವನ್ನು ಬೇಗನೆ ತಲುಪಲಿದೆ ಎಂಬುದಾಗಿ ಇತ್ತೀಚಿನ ದಿನಗಳಲ್ಲಿ ಎಡೆಬಿಡದೆ ಹೊಮ್ಮಿಸುತ್ತಿರುವ ಬಣ್ಣದ ಮಾತುಗಳಿಗೆ ಮರುಳಾಗುತ್ತಿದ್ದವರನ್ನು ಜಾಗತಿಕ ಹಸಿವಿನ ಸೂಚ್ಯಂಕವು ಕಣ್ಣು ತೆರೆಯುವಂತೆ ಮಾಡಿದೆ. ವಿಪರ್ಯಾಸವೆಂದರೆ, ಈ ಸೂಚ್ಯಂಕದಲ್ಲಿ ಭಾರತಕ್ಕಿಂತ ಕೆಳಗಿನ ಸ್ಥಾನದಲ್ಲಿರುವ ಇಡೀ ದಕ್ಷಿಣ ಏಷ್ಯಾದ ಏಕೈಕ ದೇಶವೆಂದರೆ ಯುದ್ಧದಿಂದ ವಿಪರೀತ ಹಾನಿಗೊಳಗಾದ ಅಫ್ಘಾನಿಸ್ತಾನ (109ನೇ ಸ್ಥಾನ) ಮಾತ್ರ. ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ 64ನೇ ಸ್ಥಾನದಲ್ಲಿದ್ದರೆ, ನೇಪಾಳ 81, ಬಾಂಗ್ಲಾದೇಶ 84 ಮತ್ತು ಪಾಕಿಸ್ತಾನ 99ನೇಸ್ಥಾನದಲ್ಲಿವೆ.
ಈ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ. ದೇಶದಲ್ಲಿ ಹಸಿವೆಯು ಹೆಚ್ಚುತ್ತಿರುವುದನ್ನು ಮತ್ತು ಹೊಟ್ಟೆಗಿಲ್ಲದವರ ಸಂಖ್ಯೆ ಬೆಳೆಯುತ್ತಿರುವುದನ್ನು ಹಲವಾರು ಪರಿಣತರು ಹೇಳುತ್ತಲೇ ಬಂದಿದ್ದಾರೆ. ದೈನಂದಿನ ಕ್ಯಾಲೋರಿ ಸೇವನೆಯ ತಲಾ ಪ್ರಮಾಣ ಮತ್ತು ವಾರ್ಷಿಕ ಆಹಾರ ಧಾನ್ಯಗಳ ತಲಾ ಲಭ್ಯತೆಯ ದತ್ತಾಂಶವನ್ನು ಆಧರಿಸಿ ಲೆಕ್ಕ ಹಾಕಿರುವ ಪರಿಣತರು ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆದರೆ, ಹಾಡಿ ಹೊಗಳಿದ ಜಿಡಿಪಿ ಬೆಳವಣಿಗೆಯ ಹೊರತಾಗಿಯೂ, ಹಸಿವೆ ಮತ್ತು ಬಡತನಗಳು ಹೆಚ್ಚುತ್ತಿವೆ. ಹಸಿವೆಯ ತೀವ್ರತೆಯು ಹೆಚ್ಚುತ್ತಿರುವ ಬಡತನದ ಲಕ್ಷಣವಾಗಿರುವುದರಿಂದ ಮತ್ತು ಈ ಪ್ರತಿಪಾದನೆಯನ್ನು ಯೋಜನಾ ಆಯೋಗವು ಮೂಲತಃ ಒಪ್ಪಿಕೊಂಡಿರುವುದರಿಂದ, ನವ-ಉದಾರವಾದದ ಅವಧಿಯು, ಹಸಿವೆಯ ಹೆಚ್ಚಳದ ಮತ್ತು ಅಬಾಧಿತವಾಗಿ ಬೆಳೆದ ಬಡತನದ ಅವಧಿಯಾಗಿರಲೇಬೇಕೆಂದು ಮತ್ತು ಈ ವಿದ್ಯಮಾನವು ಈ ವರ್ಷದ ಹಸಿವಿನ ಸೂಚ್ಯಂಕದಲ್ಲಿ ಪರಾಕಾಷ್ಠೆಯನ್ನು ತಲುಪಿದೆ ಎಂದೂ ಪರಿಣತರು ವಾದಿಸುತ್ತಾರೆ.
ನವ-ಉದಾರವಾದಿ ಆಳ್ವಿಕೆಯ ಕಾಲದಲ್ಲಿ ಹೆಚ್ಚುತ್ತಾ ಬಂದ ಹಸಿವೆಯ ಬಗ್ಗೆ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆಯ “ದೊಡ್ಡ ಮಾದರಿ” ಸರ್ವೆಯ ಅಂಕಿ ಅಂಶಗಳನ್ನು ಪುರಾವೆಯಾಗಿ ಉಲ್ಲೇಖಿಸಬಹುದು. “ದೊಡ್ಡ ಮಾದರಿ” ಸರ್ವೆ ಎಂದರೆ, ಹಲವು ಸಾವಿರ ಕುಟುಂಬಗಳನ್ನು ಐದು ವರ್ಷಕ್ಕೊಮ್ಮೆ ವ್ಯವಸ್ಥಿತವಾಗಿ ಸಂದರ್ಶಿಸಿ ಅವರು ಸೇವಿಸುವ ಆಹಾರದ ವಿವರ ಮತ್ತು ಅವರ ಖರ್ಚಿನ ವಿವರಗಳನ್ನು ಆಧರಿಸಿ ಅವರ ಆಹಾರ ಸೇವನೆಯ ಕ್ಯಾಲೊರಿ ಪ್ರಮಾಣವನ್ನು ನಿರ್ಧರಿಸುವ ಕ್ರಮ. ವಿಶ್ವದಲ್ಲೇ ಅತಿ ದೊಡ್ಡ ಸ್ಯಾಂಪಲ್ ಸರ್ವೆ ಎನಿಸಿದ್ದ ಈ ಸರ್ವೆಯ ವಿವರಗಳು ಲಭ್ಯವಿರುವ ಇತ್ತೀಚಿನ ವರ್ಷವೆಂದರೆ 2011-12 ಮಾತ್ರ. ನವ-ಉದಾರವಾದಿ ಆಳ್ವಿಕೆಯ ಆರಂಭದ ನಂತರ ನಡೆಸಿದ ಮತ್ತು ದತ್ತಾಂಶಗಳನ್ನು ಸರ್ಕಾರವು ಬಿಡುಗಡೆ ಮಾಡಿದ ಮೊದಲ “ದೊಡ್ಡ ಮಾದರಿ” ರಾಷ್ಟ್ರೀಯ ಸರ್ವೆಯ ವರ್ಷವೆಂದರೆ (NSS “large sample” year)1993-94. ಎರಡನೆಯ ಹಾಗೂ ಕೊನೆಯ “ದೊಡ್ಡ ಮಾದರಿ” ರಾಷ್ಟ್ರೀಯ ಸರ್ವೆಯ ವರ್ಷವೆಂದರೆ 2011-12. ಬಡತನದ ಮಟ್ಟವನ್ನು ನಿರ್ಧರಿಸಲು ನಿಗದಿಪಡಿಸಿದ ಕ್ಯಾಲೋರಿ ಮಾನದಂಡದ ಪ್ರಕಾರ, ಈ ಎರಡು ಸರ್ವೆಗಳ ನಡುವಿನ ಅವಧಿಯಲ್ಲಿ, ಗ್ರಾಮೀಣ ಭಾರತದಲ್ಲಿ ದಿನಕ್ಕೆ ತಲಾ 2200 ಕ್ಯಾಲೋರಿಗಳಿಗಿಂತ ಕಡಿಮೆ ಆಹಾರ ಸೇವಿಸುತ್ತಿದ್ದ ಜನಸಂಖ್ಯೆಯ ಅನುಪಾತವು ಶೇ. 58ರಿಂದ ಶೇ. 68ಕ್ಕೆ ಏರಿತ್ತು. ಅದೇ ರೀತಿಯಲ್ಲಿ, ನಗರ ಭಾರತದಲ್ಲಿ 2100 ಕ್ಯಾಲೋರಿಗಳಿಗಿಂತ ಕಡಿಮೆ ತಲಾ ಆಹಾರ ಸೇವಿಸುತ್ತಿದ್ದ ಜನಸಂಖ್ಯೆಯ ಅನುಪಾತವು ಶೇ. 57ರಿಂದ ಶೇ. 65ಕ್ಕೆ ಏರಿತ್ತು. 2017-18ರ “ದೊಡ್ಡ ಮಾದರಿ” ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಅಂಕಿಅಂಶಗಳು ಎಷ್ಟು ದಿಗಿಲುಗೊಳಿಸುವಂತಿದ್ದವು ಎಂದರೆ, ಸರ್ಕಾರವು ಅವುಗಳನ್ನು ಬಚ್ಚಿಟ್ಟಿತು ಮತ್ತು ಈ “ದೊಡ್ಡ ಮಾದರಿ” ಸರ್ವೆಯನ್ನೇ ನಿಲ್ಲಿಸಿತು. ಮಾಧ್ಯಮಗಳಲ್ಲಿ ಸೋರಿಕೆಯಾದ ಈ ಸರ್ವೆಯ ವರದಿಯ ಪ್ರಕಾರ. 2011-12 ಮತ್ತು 2017-18ರ ನಡುವೆ ಗ್ರಾಮೀಣ ಭಾರತದಲ್ಲಿ ತಲಾ ನೈಜ ವೆಚ್ಚವು ಶೇ. 9ರಷ್ಟು ಕುಸಿದಿದೆ.
ಹೆಚ್ಚುತ್ತಿರುವ ಹಸಿವೆ ಹದಗೆಡುತ್ತಿರುವ ಪರಿಸ್ಥಿತಿಯ ಪುರಾವೆ ಅಲ್ಲ?
ಕಾಲಕ್ರಮೇಣ ಹೆಚ್ಚುತ್ತಿರುವ ಹಸಿವೆಯನ್ನು ಹದಗೆಡಲಿರುವ ಪರಿಸ್ಥಿತಿಯ ಪುರಾವೆಯಾಗಿ ತೆಗೆದುಕೊಳ್ಳಬಾರದು ಎಂದು ಅನೇಕ ಸಂಶೋಧಕರು ವಾದಿಸಿದ್ದಾರೆ. ಈ ವಾದದಲ್ಲಿ ಎರಡು ಎಳೆಗಳಿವೆ. ಯಾಂತ್ರೀಕರಣವು ಸರ್ವವ್ಯಾಪಿಯಾಗಿರುವ ಕಾರಣದಿಂದಾಗಿ, ಕೆಲಸದ ದೈಹಿಕ ಶ್ರಮವು ಕಾಲಕ್ರಮೇಣ ಕ್ಷೀಣಿಸಿದೆ. ಹಾಗಾಗಿ, ಇಂದಿನ ದಿನಗಳಲ್ಲಿ ದುಡಿಯುವ ಜನರಿಗೆ ಮೊದಲಿನಷ್ಟು ಕ್ಯಾಲೊರಿಗಳ ಅಗತ್ಯವಿಲ್ಲ. ಅವರು ಆಹಾರಕ್ಕಾಗಿ ಮೊದಲಿಗಿಂತ ಕಡಿಮೆ ಖರ್ಚು ಮಾಡುತ್ತಾರೆ ಮತ್ತು ಇತರ ಉದ್ದೇಶಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುತ್ತಾರೆ ಎಂಬುದಾಗಿ ವಾದದ ಒಂದು ಎಳೆ ಹೇಳುತ್ತದೆ. ಎರಡನೆಯ ಎಳೆಯ ವಾದವು, ಮೈಮುರಿಯುವ ಶ್ರಮದ ಇಳಿಕೆಯಾಗಿರುವ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಆದರೆ ಜನರು ಆಹಾರ ಧಾನ್ಯಗಳ ಮೇಲೆ ಮಾಡುವ ಖರ್ಚಿಗಿಂತಲೂ ಹೆಚ್ಚಾಗಿ, ಸಂಸ್ಕರಿಸಿದ ಮತ್ತು ರುಚಿ ರುಚಿಯಾದ ಆಹಾರದ ಮೇಲೆ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಆರೋಗ್ಯ ರಕ್ಷಣೆಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ ಎಂದು ಸರಳವಾಗಿ ಹೇಳುತ್ತದೆ.
ಈ ಎರಡೂ ಎಣಿಕೆಗಳ ಪ್ರಕಾರ, ತಲಾ ಆಹಾರಧಾನ್ಯಗಳ ಬಳಕೆಯಲ್ಲಿನ ಇಳಿಕೆಯು (ಉನ್ನತ ಮಟ್ಟದ ಜೀವನದ ಭಾಗವಾಗಿ ಆಹಾರ ಧಾನ್ಯಗಳ ಬಳಕೆಯನ್ನು ಇಚ್ಛಾನುಸಾರವಾಗಿ ಕಡಿಮೆ ಮಾಡಿಕೊಳ್ಳಲಾಗಿದೆ) ಜೀವನಮಟ್ಟ ಸುಧಾರಣೆಯಾಗುತ್ತಿರುವುದರ ಲಕ್ಷಣವೇ ವಿನಃ ಜೀವನ ಮಟ್ಟ ಹದಗೆಡುತ್ತಿರುವುದರ ಲಕ್ಷಣವಲ್ಲ. ಆದ್ದರಿಂದ, ಮೇಲ್ನೋಟದಲ್ಲಿ ಹಸಿವು ಹೆಚ್ಚುತ್ತಿರುವುದಾಗಿ ತೋರುತ್ತಿರುವ ಕಾರಣದ ಮೇಲೆ ಬಡತನದ ಹೆಚ್ಚಳದ ಬಗ್ಗೆ ತೀರ್ಮಾನಕ್ಕೆ ಬರುವುದು ತರವಲ್ಲ. ಬಡತನದ ವ್ಯಾಪ್ತಿ ಹೆಚ್ಚುತ್ತಿಲ್ಲ; ಅದು ಇಳಿಯುತ್ತಿದೆ ಎಂಬುದನ್ನೇ ಸರ್ಕಾರ ಹೇಳುತ್ತದೆ ಮತ್ತು ವಿಶ್ವ ಬ್ಯಾಂಕ್ ಸಹ ಹೇಳುತ್ತದೆ. (ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಬಡತನದ ಹೆಚ್ಚಳವಾಗಿತ್ತು ಎಂದು ವಿಶ್ವ ಬ್ಯಾಂಕ್ ಇತ್ತೀಚೆಗೆ ಹೇಳಿದೆ).
ವಿಷಯವನ್ನು ಮತ್ತೊಮ್ಮೆ ಹೇಳುವುದಾದರೆ, ನೇರ ಮತ್ತು ಪರೋಕ್ಷ (ಸಂಸ್ಕರಿಸಿದ ಆಹಾರಗಳು ಮತ್ತು ಪಶು ಆಹಾರಗಳು ಪರೋಕ್ಷ ಬಳಕೆಯಲ್ಲಿ ಸೇರಿವೆ) ಬಳಕೆ ಎರಡನ್ನೂ ಒಟ್ಟಿಗೆ ತೆಗೆದುಕೊಂಡಾಗ, ಭಾರತದಲ್ಲಿ ಆಹಾರ ಧಾನ್ಯಗಳ ತಲಾ ಬಳಕೆಯು ಇಳಿಕೆಯಾಗಿದೆ ಎಂಬ ಅಂಶದ ಬಗ್ಗೆ ವಿವಾದವಿಲ್ಲ. ತಲಾ ಕ್ಯಾಲೋರಿ ಸೇವನೆಯ ಇಳಿಕೆಯ ಬಗ್ಗೆಯೂ ವಿವಾದವಿಲ್ಲ. ಭಿನ್ನಾಭಿಪ್ರಾಯವೆಂದರೆ, ಇದು ಬೆಳೆಯುತ್ತಿರುವ ಬಡತನವನ್ನು ಸೂಚಿಸುತ್ತದೆಯೊ ಅಥವಾ ಬಡತನದ ಇಳಿಕೆಯ ಲಕ್ಷಣವೆನಿಸಿದ ಧಾನ್ಯಗಳಿಂದ ದೂರವಾದ ಬಳಕೆಯ ವೈವಿಧ್ಯತೆಯನ್ನು ಸೂಚಿಸುತ್ತದೆಯೊ ಎಂಬುದರ ಬಗ್ಗೆ. ಬಡತನದ ಹೆಚ್ಚಳವು ಹಸಿದವರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಸಮಸ್ಯೆ ಎಂದರೆ, ಆಹಾರ ಧಾನ್ಯಗಳ ಸೇವನೆಯ ಇಳಿಕೆಯ ಅಂಶವನ್ನು ಹೆಚ್ಚುತ್ತಿರುವ ಬಡತನದ ಪುರಾವೆಯಾಗಿ ತೆಗೆದುಕೊಳ್ಳಬಹುದೇ ಎಂಬುದು. ಜಾಗತಿಕ ಹಸಿವಿನ ಸೂಚ್ಯಂಕವು ಉಪಯುಕ್ತವಾಗುವುದು ಇಲ್ಲಿಯೇ.
ಆಹಾರ ಸೇವನೆಯ ಇಳಿಕೆಯೇ ನಿಜಕ್ಕೂ ಜೀವನ ಮಟ್ಟದ ಸುಧಾರಣೆಯ ಒಂದು ಲಕ್ಷಣವಾಗಿದ್ದರೆ, ಬೆಳವಣಿಗೆ ದರ ಉನ್ನತವಾಗಿ ತೋರುವ ಇನ್ನೂ ಅನೇಕ ದೇಶಗಳು ಭಾರತದೊಂದಿಗೆ ಜಾಗತಿಕ ಹಸಿವಿನ ಸೂಚ್ಯಂಕ ಕೋಷ್ಟಕದ ಕೆಳಭಾಗದಲ್ಲಿರುತ್ತಿದ್ದವು. ಆದರೆ, ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ 107ನೇ ಸ್ಥಾನದಲ್ಲಿರುವ ಭಾರತದ ಶ್ರೇಯಾಂಕದ ಹತ್ತಿರ ಹತ್ತಿರದ ಸ್ಥಾನಗಳಲ್ಲಿ ರುವಾಂಡಾ (102ನೇ ಸ್ಥಾನದಲ್ಲಿ), ನೈಜೀರಿಯಾ (103), ಇಥಿಯೋಪಿಯಾ (104), ರಿಪಬ್ಲಿಕ್ ಆಫ್ ಕಾಂಗೋ (105), ಸುಡಾನ್ (106), ಜಾಂಬಿಯಾ (108), ಅಫ್ಘಾನಿಸ್ತಾನ (109) ಮತ್ತು ತಿಮೋರ್-ಲೆಸ್ಟೆ (110) ದೇಶಗಳಿವೆ. ಸಾಮಾನ್ಯವಾಗಿ ಬಡ ದೇಶಗಳೆಂದೇ ಪರಿಗಣಿಸಲ್ಪಟ್ಟ ಈ ದೇಶಗಳು ಕೋಷ್ಟಕದ ಕೆಳಭಾಗದಲ್ಲಿರುವುದು ಆಶ್ಚರ್ಯವಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ಆರ್ಥಿಕ ಅಭಿವೃದ್ಧಿಯನ್ನು ನಾವು ಹೋಲಿಕೆ ಮಾಡಬಯಸುವ ಚೀನಾದಂತಹ ದೇಶಗಳು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ. ಸೂಚ್ಯಂಕ ಪಟ್ಟಿಯಲ್ಲಿ ಚೀನಾ ಅಗ್ರ 17 ದೇಶಗಳ ಗುಂಪಿನಲ್ಲಿದೆ. ಈ ಹದಿನೇಳೂ ದೇಶಗಳು ಪ್ರತ್ಯೇಕ ಶ್ರೇಯಾಂಕ ಹೊಂದಿರದೆ, ಸಾಮೂಹಿಕವಾಗಿ ಒಂದೇ ಶ್ರೇಯಾಂಕವನ್ನು ಹೊಂದಿವೆ. ಐದಕ್ಕಿಂತ ಕಡಿಮೆ ಅಂಕ ಗಳಿಸಿದ ಚೀನಾ, 29.1ಅಂಕಗಳನ್ನು ಗಳಿಸಿದ ಭಾರತಕ್ಕಿಂತ ಬಹಳ ದೂರದಲ್ಲಿದೆ.
‘ಅಭಿರುಚಿ’ಯ ಬದಲಾವಣೆ ಕಾರಣವಲ್ಲ
ಉನ್ನತ ಬೆಳವಣಿಗೆಯ ದೇಶಗಳು ಎಂದು ಹೇಳಲಾಗುವ ಒಂದೇ ಒಂದು ದೇಶವೂ ಸಹ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಪಡೆದ ಕೆಳಗಿನ ಸ್ಥಾನದ ಹತ್ತಿರದಲ್ಲಿಲ್ಲದ ಅಂಶವು, ಅಭಿರುಚಿಯ ಬದಲಾವಣೆಯ (ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಆಸಕ್ತಿ) ಅಂಶದ ಮೂಲಕ ಅಥವಾ ಮೈಮುರಿಯುವ ಕೆಲಸಗಳ ಇಳಿಕೆಯ (ಯಾಂತ್ರೀಕರಣದ ಮೂಲಕ) ಅಂಶದ ಮೂಲಕ ಧಾನ್ಯ ಸೇವನೆಯ ಇಳಿಕೆಯನ್ನು ಸಮರ್ಥಿಸುವ ವಾದಗಳ ವಿಚಾರ ಶೂನ್ಯತೆಯನ್ನು ತೋರಿಸುತ್ತದೆ. ಯಾಂತ್ರೀಕರಣದಿಂದಾಗಿ ಮೈಮುರಿಯುವ ಕೆಲಸಗಳ ಇಳಿಕೆ ಅಥವಾ ಮಕ್ಕಳ ಶಿಕ್ಷಣದ ಬಯಕೆ, ಇವೇನೂ ಭಾರತದ ಜನರಿಗೆ ಮಾತ್ರ ನಿರ್ದಿಷ್ಟವಾದ ಗುಣಲಕ್ಷಣಗಳಲ್ಲ. ಅವು ಸಾರ್ವತ್ರಿಕ ವಿದ್ಯಮಾನಗಳು. ಆದ್ದರಿಂದ, ಉನ್ನತ ಬೆಳವಣಿಗೆಯ ದೇಶಗಳ ಪೈಕಿ ಭಾರತ ಮಾತ್ರ ಸೂಚ್ಯಂಕ ಪಟ್ಟಿಯಲ್ಲಿ ತೀರಾ ಕೆಳಮಟ್ಟದ ಸ್ಥಾನ ಪಡೆದಿದೆ, ಏಕೆ?
ಮಕ್ಕಳ ಶಿಕ್ಷಣ ಮತ್ತು ಸರಿಯಾದ ಆರೋಗ್ಯ ರಕ್ಷಣೆಯ ಬಯಕೆ, ಇವು ಎಲ್ಲ ದೇಶದ ಜನರಿಗೂ ಸಾಮಾನ್ಯವಾಗಿರುವ ಅಂಶಗಳೇ. ಈ ಸೇವೆಗಳು ಭಾರತದಲ್ಲಿ ದುಬಾರಿಯಾಗಿದ್ದರೆ, ಚೀನಾದಲ್ಲಿ ಅವು ಅಗ್ಗವಾಗಿರಬಹುದು ಎಂದು ವಾದಿಸಬಹುದು. ಈ ಕಾರಣದಿಂದಾಗಿ, ಭಾರತದಲ್ಲಿ ತಮ್ಮ ಮಕ್ಕಳನ್ನು ದುಬಾರಿ ಶುಲ್ಕದ ಶಾಲೆಗಳಿಗೆ ಸೇರಿಸುವ ಪೋಷಕರು ತಮ್ಮ ಆಹಾರ ಸೇವನೆಯನ್ನು ಕಡಿತಗೊಳಿಸಬೇಕಾಗಬಹುದು. ಆದರೆ ಚೀನಾದಲ್ಲಿ ಶಾಲಾ ಶಿಕ್ಷಣದ ಖರ್ಚುಗಳು ಕಡಿಮೆ ಇರುವುದರಿಂದ, ಮಕ್ಕಳ ಶಿಕ್ಷಣಕ್ಕಾಗಿ ಆಹಾರ ಸೇವನೆಯನ್ನು ಅವರು ಕಡಿತಗೊಳಿಸಬೇಕಾಗಿಲ್ಲ.
ಈ ಬಗ್ಗೆ ನಮ್ಮ ಅಭಿಪ್ರಾಯವೂ ಸಹ ಇದೇ ಆಗಿದೆ ಮತ್ತು ಅದು “ಅಭಿರುಚಿಯ ಬದಲಾವಣೆ”ಯೊಂದಿಗೆ ಸಂಬಂಧ ಹೊಂದಿಲ್ಲ. ಎಲ್ಲೆಡೆಯೂ, ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಉತ್ಸುಕರಾಗಿರುತ್ತಾರೆ. ಆದರೆ ಒಂದು ನಿರ್ದಿಷ್ಟ ದೇಶದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಆಹಾರವನ್ನು ತ್ಯಜಿಸಬೇಕಾದ ಅಗತ್ಯವಿದ್ದರೆ, ಆ ರೀತಿಯ ತ್ಯಾಗವು ಬಡತನ ಹೆಚ್ಚಳದ ಲಕ್ಷಣವಾಗಿರುತ್ತದೆ. ಇದು ಏನನ್ನು ಸೂಚಿಸುತ್ತದೆ ಎಂದರೆ, ಜನರು ಬಳಸುವ ಸರಕುಗಳ ಬುಟ್ಟಿಯಲ್ಲಿ ಒಂದು ಸರಕಿನ ಬೆಲೆಯಲ್ಲಿ ಹೆಚ್ಚಳವಾದರೂ ಅದು ಜೀವನ ವೆಚ್ಚದ ಹೆಚ್ಚಳವನ್ನು ಸೂಚಿಸುತ್ತದೆ. ಜೀವನ ವೆಚ್ಚದಲ್ಲಾಗುವ ಹೆಚ್ಚಳಗಳಿಗೆ ಅನುಗುಣವಾಗಿ ಹಣ ಆದಾಯದ ಹೆಚ್ಚಳ ಇರುವುದಿಲ್ಲ ಮತ್ತು ಅದು ಆಹಾರ ಧಾನ್ಯಗಳ ಬಳಕೆಯ ಇಳಿಕೆಗೆ ಕಾರಣವೂ ಆಗುತ್ತದೆ. ಈ ಇಳಿಕೆಯ ಅರ್ಥವೆಂದರೆ ಅದು ಹಸಿವಿನ ಹೆಚ್ಚಳವೇ. ಈ ವಿದ್ಯಮಾನವು ಜೀವನ ನಿರ್ವಹಣಾ ವೆಚ್ಚದ ಏರಿಕೆಯನ್ನು ಮತ್ತು ನಿಜ ಆದಾಯದ ಇಳಿಕೆಯನ್ನು ಬಿಂಬಿಸುತ್ತದೆ. ಅದನ್ನೇ ಬಡತನದ ಹೆಚ್ಚಳ ಎನ್ನುವುದು.
ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಜ ಆದಾಯದ ಹೆಚ್ಚಳವು ಅದನ್ನು ಖರ್ಚು ಮಾಡುವ ಸರಕುಗಳ ಬಳಕೆಯ ಬುಟ್ಟಿಯಲ್ಲಿರುವ ಪ್ರತಿಯೊಂದು ಸರಕಿನ (ಅಥವಾ ಅವುಗಳಲ್ಲಿ ಒಂದಕ್ಕೆ ಬದಲಾಗಿ ಮತ್ತೊಂದರ) ಬಳಕೆಯ ಮಟ್ಟವನ್ನು ಸ್ವಲ್ಪವಾದರೂ ಹೆಚ್ಚಿಸಬೇಕು. ನಿಜ ಆದಾಯದ ಹೆಚ್ಚಳವು ಆಹಾರ ಧಾನ್ಯಗಳ ಬಳಕೆಯ (ನೇರ ಮತ್ತು ಪರೋಕ್ಷ ಬಳಕೆಯ) ಹೆಚ್ಚಳದಲ್ಲಿ ಪರಿಣಮಿಸುತ್ತದೆ ಎಂಬುದನ್ನು ಭಾರತದ ಎಲ್ಲ ಜನ ವಿಭಾಗಗಳ ಮತ್ತು ದೇಶ ದೇಶಗಳ ದತ್ತಾಂಶಗಳು ತೋರಿಸುತ್ತವೆ. ಆದರೆ, ಭಾರತದಲ್ಲಿ ಆಗಿರುವಂತೆ, ಆಹಾರ ಧಾನ್ಯಗಳ ಒಟ್ಟು (ಪ್ರತ್ಯಕ್ಷ ಮತ್ತು ಪರೋಕ್ಷ) ಸೇವನೆಯು ಒಂದು ವೇಳೆ ಇಳಿಮುಖವಾಗಿದ್ದರೆ, ಜನಸಂಖ್ಯೆಯ ಹೆಚ್ಚು ಭಾಗದ ಜನರ ನಿಜ ಆದಾಯವು ಕುಸಿದಿರುತ್ತದೆ ಮತ್ತು ಈ ಕುಸಿತದಿಂದಾಗಿ ಬಡತನದ ಹೆಚ್ಚಳವಾಗಿರುತ್ತದೆ. ಆದ್ದರಿಂದ, ಹೆಚ್ಚುತ್ತಿರುವ ಹಸಿವು ಮತ್ತು ಹೆಚ್ಚುತ್ತಿರುವ ಬಡತನದ ನಡುವಿನ ಸಂಬಂಧವು ತರ್ಕಬದ್ಧವಾಗಿ ಉಳಿಯುತ್ತದೆ.
ಬಡತನವನ್ನು ಅಳೆಯಲು ನಿಗದಿಪಡಿಸಿದ “ಬಡತನ ರೇಖೆ”ಯ ಪ್ರಕಾರ ಒಂದು ನಿರ್ದಿಷ್ಟ ತಲಾದಾಯ ಮಟ್ಟದ ಕೆಳಗಿರುವ ಜನರನ್ನು ಬಡವರೆಂದು ಪರಿಗಣಿಸಲಾಗುತ್ತದೆ. ಜೀವನ-ವೆಚ್ಚ-ಸೂಚ್ಯಂಕವನ್ನು ಬಳಸಿಕೊಂಡು, ಈ “ಬಡತನದ ರೇಖೆ”ಯನ್ನು ಆಗಾಗ ಪರಿಷ್ಕರಿಸಲಾಗುತ್ತದೆ. ಆದರೆ, ಭಾರತದಲ್ಲಿ ಸಂಯೋಜಿಸಿರುವ ಜೀವನ-ವೆಚ್ಚ-ಸೂಚ್ಯಂಕವು ಶಿಕ್ಷಣ ಮತ್ತು ಆರೋಗ್ಯದಂತಹ ಸೇವೆಗಳ ಖಾಸಗೀಕರಣದಿಂದಾಗಿ ಉದ್ಭವವಾಗುವ ಜೀವನ ವೆಚ್ಚದ ಹೆಚ್ಚಳವನ್ನು ಪರಿಗಣಿಸುವುದಿಲ್ಲ. ಅಂದರೆ, ನಿಜ ಜೀವನದಲ್ಲಿ ಆಗುವ ಖರ್ಚುಗಳ ಏರಿಕೆಯನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಹಾಗಾಗಿ, ಜೀವನ-ವೆಚ್ಚ-ಸೂಚ್ಯಂಕವನ್ನು ಬಳಸಿಕೊಂಡು ಪರಿಷ್ಕರಿಸಿದ “ಬಡತನ ರೇಖೆ”ಯು ಯಾವ ಮಟ್ಟದಲ್ಲಿ ಇರಬೇಕಿತ್ತೊ ಅದಕ್ಕಿಂತಲೂ ಕೆಳಗಿನ ಮಟ್ಟದಲ್ಲೇ ಇರುತ್ತದೆ, ಯಾವಾಗಲೂ, ಮತ್ತು ಕೆಳಗಿಳಿಯುತ್ತಲೇ ಇರುತ್ತದೆ. ಈ ರೀತಿಯಲ್ಲಿ ಬಡತನದ ಅಗಾಧತೆಯನ್ನು ಕೀಳಂದಾಜು ಮಾಡಲಾಗುತ್ತದೆ. ಗಣ್ಯರು ಈ ಅಂದಾಜನ್ನು ಮತ್ತು ಇಳಿಕೆಯಾಗಿದೆ ಎಂದು ಹೇಳಲಾದ ಬಡತನದ ಅನುಪಾತವನ್ನು ಹಾಗೆಯೇ ಒಪ್ಪಿಕೊಳ್ಳುತ್ತಾರೆ. ಬಡತನದ ಅಂದಾಜುಗಳ ಈ ಅಪ್ರಾಮಾಣಿಕತೆಯನ್ನು ಜಾಗತಿಕ ಹಸಿವು ಸೂಚ್ಯಂಕವು ಬಹಿರಂಗಪಡಿಸಿದೆ.