ಬೆಂಗಳೂರು : ಡಾಲಿ ಧನಂಜಯ್ ನಟನೆಯ ಮತ್ತು ನಿರ್ಮಾಣದ ಹೆಡ್ ಬುಶ್ ಚಿತ್ರ ಈಗಾಗಲೇ ರಾಷ್ಟ್ರಾದ್ಯಂತ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ. ಅಗ್ನಿ ಶ್ರೀಧರ್ ಬರೆದ ಕಥೆಯನ್ನು ಅಧರಿಸಿ ಡಾನ್ ಜಯರಾಜ್ ಕುರಿತು ಈ ಸಿನಿಮಾ ತಯಾರಿಸಲಾಗಿತ್ತು. ಇದೀಗ ಈ ಸಿನಿಮಾದ ಕುರಿತು ಬಲಪಂಥೀಯರು ಹಾಗೂ ಹಿಂದುತ್ವ ಸಂಘಟನೆಗಳು ವಿವಾದವೆಬ್ಬಿಸಿವೆ. ಹೆಡ್‌ಬುಶ್ ಚಿತ್ರದಲ್ಲಿ ಬೆಂಗಳೂರು ಕರಗಕ್ಕೆ ಮತ್ತು ವೀರಗಾಸೆ ನೃತ್ಯಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಹಲವಾರು ಮಂದಿ ಬಲಪಂಥೀಯರು ಸಾಮಾಜಿಕ ತಾಣದಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರದಲ್ಲಿ ವೀರಗಾಸೆ ನೃತ್ಯಗಾರನಿಗೆ ಹೊಡೆಯುವ ದೃಶ್ಯವಿದೆ ಮತ್ತು ಬೆಂಗಳೂರು ಕರಗಕ್ಕೆ ಅವಮಾನವಾಗುವಂತೆ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ನಡುವೆ ಹಲವಾರು ಸಿನಿಮಾಭಿಮಾನಿಗಳು ಧನಂಜಯ್ ಬೆಂಬಲಕ್ಕೆ ನಿಂತಿದ್ದು, #WeStandWithDhananjay ಮತ್ತು #IStandWithDhananjay ಹ್ಯಾಶ್‌ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಹಿಂದುತ್ವ ಸಂಘಟನೆಗಳು ವಿವಾದವೆಬ್ಬಿಸುತ್ತಿದ್ದಂತೆಯೇ ಹಲವಾರು ಕನ್ನಡ ಸಿನಿಮಾಭಿಮಾನಿಗಳು ಧನಂಜಯ್ ಬೆಂಬಲಕ್ಕೆ ನಿಂತಿದ್ದು, “ಮಾನವೀಯತೆಯ ಮಾತುಗಳನ್ನಾಡುವುದು ತಪ್ಪು ಹೇಗಾಗುತ್ತದೆ” ಎಂದು ಪ್ರಶ್ನಿಸಿದ್ದಾರೆ. “ಅವರು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾಜವಾದ ಮತ್ತು ಜಾತ್ಯತೀತತೆಯನ್ನು ನಂಬುತ್ತಾರೆ. ನಾನು ಡಾಲಿ ಜೊತೆ ನಿಲ್ಲುತ್ತೇನೆ, ಹೆಡ್‌ಬುಶ್ ಸಿನಿಮಾವನ್ನು ಬೆಂಬಲಿಸುತ್ತೇನೆ” ಎಂದು ಹಲವರು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದ ಧನಂಜಯ್ “ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ” ಎಂದು ತಾವು ಮಾತನಾಡುವ ವೀಡಿಯೊದ ಲಿಂಕ್ ಅನ್ನು ಪೋಸ್ಟ್ ಮಾಡಿದ್ದರು.
ಈ ಕುರಿತು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿರುವ ಸಿನಿಮಾ ಗೀತೆ ರಚನೆಕಾರ ಕವಿರಾಜ್, “ಯಶ್ , ರಿಷಭ್ ಶೆಟ್ಟಿ ಅವರಂತೆ ಡಾಲಿ ಧನಂಜಯ್ ಕೂಡಾ ಇಡೀ ಸಿನಿಮಾ ಉದ್ಯಮಕ್ಕೆ ತಿರುವು ಕೊಡಬಲ್ಲ ತುಡಿತ ಮತ್ತು ಸಾಮರ್ಥ್ಯವಿರುವ ಕ್ರಿಯಾಶೀಲ, ಸೃಜನಶೀಲ ಯುವ ನಟ . ಈಗಾಗಲೇ ಉದ್ಯಮಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಅವಕಾಶ ನೀಡುವ ಹೆಜ್ಜೆಯಿಟ್ಟಿದ್ದಾರೆ. ಇದೀಗ ಪ್ರದರ್ಶನ ಗೊಳ್ಳುತ್ತಿರುವ ಅವರ ಹೆಡ್ ಬುಷ್ ಚಿತ್ರವು ಉತ್ತಮವಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ವೀರಗಾಸೆ ಕುಣಿತದವರ ಮಾರುವೇಷದಲ್ಲಿ ಬಂದವರನ್ನು ಥಳಿಸುವ ದೃಶ್ಯಗಳ ಕುರಿತು ಧನಂಜಯ್ ಅವರ ವಿವರಣೆಯು ಸಮಂಜಸವಾಗಿದೆ. ಯಾವುದೋ ಪರಭಾಷಾ ಹಾಡಿನ ಟ್ಯೂನಿಗೆ ಹೋಲಿಕೆ ಇರುವ ಕಾರಣಕ್ಕೆ ಕಾಂತಾರ ಚಿತ್ರದ ಹಾಡಿಗೆ ಅಪಪ್ರಚಾರ ಮಾಡುತ್ತಿರುವವರಿಗೂ ಇದೇ ಮಾತು ಅನ್ವಯಿಸುತ್ತೆ . ಆ ಹಾಡುಗಳಲ್ಲಿ ಕೆಲವು ಸಾಮ್ಯತೆ ಇರಬಹುದೇ ಹೊರತು , ಇದು ಅದರ ನಕಲು ಖಂಡಿತಾ ಅಲ್ಲ ಎಂಬುದು ಎರಡು ದಶಕಕ್ಕು ಹೆಚ್ಚು ಕಾಲ ಒಬ್ಬ ಗೀತರಚನಾಕಾರನಾಗಿರುವ ನನ್ನ ಖಚಿತ ನಿಲುವು.
ಧನಂಜಯ್ ಕನ್ನಡ ಚಿತ್ರರಂಗದ ಆಸ್ತಿ. ಧನಂಜಯ್ ಸೂಕ್ಷ್ಮ ಸಂವೇದನೆಯುಳ್ಳ ವಿಚಾರಶೀಲ ,ಕಲಾ ಪ್ರೇಮಿ. ಅವರಿಂದ ಯಾವ ಕಲೆಗೂ ಅಪಚಾರ ಆಗಿಲ್ಲ ,ಆಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಅವರ ಮತ್ತು ಹೆಡ್ ಬುಷ್ ನಿರ್ದೇಶಕರ ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಸದಾ ಬೆಂಬಲಿಸುತ್ತೇನೆ.” ಎಂದು ಹೇಳಿದ್ದಾರೆ.
ನಿರ್ದೇಶಕ ಬಿ.ಎಂ.ಗಿರಿರಾಜ್ ಈ ಕುರಿತು ಫೇಸ್ ಬುಕ್ ನಲ್ಲಿ ಬರೆದಿದ್ದು, ಬಡವರ ಮಕ್ಕಳು ಹೀರೊ ಆಗ್ಲಿಕ್ಕೆ ಬಿಡ್ತಿರೇನ್ರೊ ನೀವು. ಹಿಂದಿಂದಲೇ ಹೊಡೆದು ಬಿಡ್ತೀರ ಎಂದು ಆಕ್ರೋಶ ತೋಡಿಕೊಂಡಿದ್ದಾರೆ.
ನೆಲದ ಬಗ್ಗೆ ಅಪಾರವಾದ ಕಾಳಜಿ, ಮನುಷ್ಯತ್ವ, ಮಾನವೀಯ ಕಾಳಜಿ ಇರುವ ಧನಂಜಯ್ ರವರಂತಹ ನಟರು ಕನ್ನಡ ಚಿತ್ರರಂಗಕ್ಕೆ ಹೆಚ್ಚೇ ಅವಶ್ಯಕವಾಗಿದ್ದಾರೆ. ಅವರೊಂದಿಗೆ ಕನ್ನಡ ಚಿತ್ರರಂಗ ನಿಲ್ಲಬೇಕು ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಭಿಪ್ರಾಯಪಟ್ಟಿದ್ದಾರೆ.