ರಾಯಚೂರು : ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳ ವಿರುದ್ಧ ಸಿಡಿದೆದ್ದು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಸದಸ್ಯ ವಿ.ಎಸ್. ಅಭಿಷೇಕ್ ನಾಯ್ಡು ನಿನ್ನೆ ದಿಢೀರ್ ಆಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎದುರು ಪ್ರತ್ಯಕ್ಷವಾಗಿದ್ದಾರೆ. ಕಾಂಗ್ರೆಸ್ ‘ಭಾರತ್ ಜೋಡೋ’ ಯಾತ್ರೆಯನ್ನ ನಡೆಸ್ತಿದೆ. ನಿನ್ನೆ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡಿರುವ ಅಭಿಷೇಕ್ ಅವರು, ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿರೋದು ಅವರ ಫೆಸ್ಬುಕ್ ಪುಟದಿಂದ ಸ್ಪಷ್ಟವಾಗಿದೆ.
ವರದಿಗಳ ಪ್ರಕಾರ, ಅಭಿಷೇಕ್ ಅವರು ರಾಹುಲ್ ಗಾಂಧಿಯನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಅಭಿಷೇಕ್ ನಾಯ್ಡು ರಾಹುಲ್ ಗಾಂಧಿಯ ಕೈಯನ್ನ ಹಿಡಿದುಕೊಂಡು ಪಾದಯಾತ್ರೆಯಲ್ಲಿ ಹೆಜ್ಜೆ ಇಡುತ್ತಿರೋದನ್ನ ಕಾಣಬಹುದಾಗಿದೆ.
ಅಭಿಷೇಕ್ ಅವರು ಇತ್ತೀಚಿಗೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಬೇಸರಗೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ವಿ.ಎಸ್ ಅಭಿಷೇಕ್ ನಾಯ್ಡು, ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಸಹ ಪ್ರಭಾರಿಯಾಗಿದ್ದರು. ತೆಲಂಗಾಣ ಮತ್ತು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು. ಇದೀಗ ದಿಢೀರ್ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.