ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದ ಆಲೂರಿನಲ್ಲಿ ದಸರಾ ರಜೆಯಲ್ಲಿ ನಡೆದ ಮಕ್ಕಳ ಶಿಬಿರವು ಬೇರೆ ಬೇರೆ ಆಯಾಮಗಳಲ್ಲಿ ವಿಶಿಷ್ಟವಾಗಿದೆ. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮತ್ತು ಸಮುದಾಯ ಕುಂದಾಪುರ ಸಹಭಾಗಿತ್ವದಲ್ಲಿ ನಡೆದ ಕೊರಗ ಮಕ್ಕಳ ರಂಗ ತರಬೇತಿ ಶಿಬಿರ ಸಾಮಾಜಿಕವಾಗಿ ಒಂದಿಷ್ಟು ಚಿಂತನೆಗಳಿಗೆ ಗ್ರಾಸವಾಯಿತು.
ಕೊರಗರು ಎಂದು ಕರೆಯಲ್ಪಡುವ ಆದಿವಾಸಿ ಬುಡಕಟ್ಟು ಜನತೆ ಕರಾವಳಿ ಜಿಲ್ಲೆಗಳಲ್ಲಿ ಬಹು ಸಂಖ್ಯೆಯಲ್ಲಿದ್ದು ಬೇರೆ ಬೇರೆ ಕಾರಣಗಳಿಂದ ಅವರ ಜನಸಂಖ್ಯೆ ಕಡಿಮೆಯಾಗುತ್ತಾ ಬಂದಿರುವುದನ್ನು ನಮ್ಮ ದೇಶದ ಜನಗಣತಿ ಅಂಕಿ ಅಂಶಗಳು ತಿಳಿಸುತ್ತವೆ . ಅವನತಿಯ ಅಂಚಿಗೆ ಸಾಗಿರುವ ಪ್ರಪಂಚದ 51 ಬುಡಕಟ್ಟು ಜನಾಂಗಗಳಲ್ಲಿ ಕೊರಗ ಜನಾಂಗವು ಮುಂಚೂಣಿಯಲ್ಲಿದೆ ಎಂದು ವಿಶ್ವಸಂಸ್ಥೆ ಕೂಡ ಗುರುತಿಸಿದೆ.
1991ರ ಜನಗಣತಿ ಸಂದರ್ಭದಲ್ಲಿ 22,000 ಕೊರಗರಿದ್ದರೆ 2021 ರಲ್ಲಿ ಆ ಸಂಖ್ಯೆ 4,400ಕ್ಕೆ ಇಳಿಯುತ್ತದೆ. ಇದು ತುಂಬಾ ಆತಂಕ ಕಾರ್ಯ ಆದ ವಿಚಾರ. ಶಿಬಿರಕ್ಕೆ ಭೇಟಿ ಕೊಟ್ಟಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಂದಾಳು ಕೃಷ್ಣಪ್ಪ ಕೊಂಚಾಡಿ ಅವರೊಂದಿಗೆ ಕೊರಗ ಸಮುದಾಯದ ಮುಖ್ಯಸ್ಥರು ಮಾತನಾಡುತ್ತಿದ್ದಾಗ ತಮ್ಮ ಸಮುದಾಯದಲ್ಲಿ ಇತ್ತೀಚೆಗೆ “ಮದುವೆಗಳು ನಡೆಯುತ್ತಿಲ್ಲ “ಎಂಬ ವಿಚಾರವನ್ನು ಹೊರಗೆಡವಿದರು! ಈ ಕಾರಣದಿಂದಲೇ ಸಂತತಿ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದನಿಸುತ್ತದೆ.
ಇನ್ನೂ ಒಂದು ಆತಂಕದ ವಿಚಾರವಿದೆ ಅದು ಕೊರಗರ ಭಾಷೆಗೆ ಸಂಬಂಧಪಟ್ಟದ್ದು ದ್ರಾವಿಡ ಭಾಷಾ ಪ್ರಭೇದದಲ್ಲಿರುವ ಕೊರಗ ಭಾಷೆ ತನ್ನದೇ ಆದ ಮಾಧುರ್ಯವನ್ನು ಹೊಂದಿರುವಂತಹದು. ತುಳು ಭಾಷೆಯೊಂದಿಗೆ ನೇರ ಸಂಬಂಧ ಹೊಂದಿರುವಂತಿದೆಯಾದರೂ ತುಳುವರಿಗೂ ಅದು ಅರ್ಥವಾಗದು. ಈ ಶಿಬಿರದಲ್ಲಿ ಭಾಗವಹಿಸಿದ 35 ಮಕ್ಕಳಲ್ಲಿ ಕೇವಲ ಮೂರು ನಾಲ್ಕು ಮಕ್ಕಳಿಗೆ ಮಾತ್ರ ತಮ್ಮ ಮಾತೃಭಾಷೆ ಬರುತ್ತಿತ್ತು. ಅಂದರೆ ಜನಾಂಗದೊಂದಿಗೆ ಅದರ ಭಾಷೆ ಕೂಡ ನಾಶಗೊಳ್ಳುತ್ತಿರುವ ಉದಾಹರಣೆ ಇದು.
ಕಾಡನ್ನೇ ಆಶ್ರಯಿಸಿ ಜೀವನ ಕಟ್ಟಿಕೊಂಡಿದ್ದ ಜನ ನಾಡಿಗೆ ಪಲ್ಲಟಗೊಂಡಾಗ ನಾಗರಿಕತೆಯ ಸೋಂಕನ್ನು ತನ್ನದಾಗಿಸಿಕೊಳ್ಳುತ್ತಾ ತನ್ನ ಮೂಲ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಾ ಸಾಗುತ್ತದೆ. ಆದರೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವಾಗ ಅತಂತ್ರ ಸ್ಥಿತಿಯೊಂದು ನಿರ್ಮಾಣವಾಗುತ್ತದೆ. ಶಿಬಿರದ ಸಮಾರೋಪ ಭಾಷಣ ಮಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾಕ್ಟರ್ ಎಸ್ ವೈ ಗುರು ಶಾಂತ್ ಕೊರಗರ ಬದುಕು ಮತ್ತು ವಾಸ್ತವ ಪರಿಸ್ಥಿತಿಗಳ ಕುರಿತು ವಿದ್ವತ್ಪೂರ್ಣವಾಗಿ ಮಾತನಾಡುತ್ತಾ ಒಂದು ಪ್ರಭುತ್ವ ಸಂಸ್ಕೃತಿಯ ಹರಿಕಾರರು ಮೂಲೆಗುಂಪಾಗುತ್ತಾ ಸಾಗುತ್ತಿರುವುದರ ಕುರಿತು ಆತಂಕವನ್ನು ವ್ಯಕ್ತಪಡಿಸುತ್ತಾ ಆಡಳಿತದ ಬೆಂಬಲ ದೂರಗಾಮಿ ಯೋಜನೆಗಳು ಮತ್ತು ಸಾರ್ವಜನಿಕ ಕಳಕಳಿ ಮಾತ್ರ ಇಂತಹ ಜನಾಂಗಗಳನ್ನು ಉಳಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು .ಸರಕಾರಗಳು ತಮ್ಮ ಬಜೆಟ್ಗಳಲ್ಲಿ ಇಂತಹ ಜನಾಂಗಗಳ ಅಭಿವೃದ್ಧಿಗೆಂದು ಕೋಟಿ ಕೋಟಿ ಹಣವನ್ನು ಮೀಸಲಿಟ್ಟರೂ ಅದು ಸಂಬಂಧಪಟ್ಟವರಿಗೆ ತಲುಪದೇ ಇರುವ ದುರಂತದ ಬಗ್ಗೆ ಅವರು ಖೇದ ವ್ಯಕ್ತಪಡಿಸಿದರು.
ಕಾಡಿನ ಮಕ್ಕಳ ಬಣ್ಣದ ಹೆಜ್ಜೆಯ ಈ ಶಿಬಿರದ ಕೊನೆಯ ದಿನ ಕೊರಗ ಮಕ್ಕಳ ರಂಗ ತರಬೇತಿಯಲ್ಲಿ ಪಾಲ್ಗೊಂಡ ಮಕ್ಕಳಿಂದ ಕೊರಗ ಸಮುದಾಯಕ್ಕೆ ಸಂಬಂಧಪಟ್ಟ “ಹುಭಾಷಿಕ” ಎಂಬ ರಂಗ ಪ್ರಯೋಗ ಪ್ರದರ್ಶನವಾಯಿತು . ನೀನಾಸಂ ಕಲಾವಿದ ವಾಸುದೇವ ಗಾಂಗೆರ ಮಕ್ಕಳನ್ನು ನಿರ್ದೇಶಿಸಿದ್ದರು.
ಶಿಬಿರದ ಏಳು ದಿನಗಳಲ್ಲಿ ಕೊರಗರೊಂದಿಗಿನ ಸಹಭೋಜನದ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ಪಾಲ್ಗೊಂಡಿರುವುದು ಗಮನ ಸೆಳೆದಿತ್ತು. ಶಿಬಿರದ ಸಂಚಾಲಕರಾದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ವಿಭಾಗದ ಪ್ರಮುಖರಾದ ಶ್ರೀಧರ ನಾಡ ಹೊಸ ಆಲೋಚನೆಯೊಂದನ್ನು ಸಮುದಾಯದಲ್ಲಿ ಬಿತ್ತಿದರು.
ವರದಿ : ರಮೇಶ ಗುಲ್ವಾಡಿ