ಬೆಂಗಳೂರು : ಮಂಗಳೂರಿನ ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರಿಗೆ ಪೊಲೀಸರು ಸಿಆರ್ಪಿಸಿ 107 ರಡಿಯಲ್ಲಿ ನೋಟಿಸ್ ನೀಡಿರುವುದು ವಿಧಾನಸಭೆಯ ನಡವಳಿಕೆ ಕಾರ್ಯವಿಧಾನ ನಿಯಮಾವಳಿಗಳು ಮತ್ತು ಹೈಕೋರ್ಟ್ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಆರೋಪಿಸಿದ್ದಾರೆ.
ಸುರತ್ಕಲ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಗೇಟ್ ಅಕ್ರಮ ಎಂದು ಆರೋಪಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದ ಟೋಲ್ ವಿರೋಧಿ ಹೋರಾಟ ಸಮಿತಿ ಹಲವು ಸಮಯಗಳಿಂದ ಕಾರ್ಯಾಚರಿಸುತ್ತಿದೆ. ಈ ಸಮಿತಿಯು ಈಗಾಗಲೇ ಹಲವಾರು ಸುತ್ತಿನ ಸಭೆಯನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದೆ.
ಸಿಆರ್ಪಿಸಿ 107 ಅಡಿಯಲ್ಲಿ ನೋಟಿಸ್ ನೀಡಬೇಕಾದರೆ ವ್ಯಕ್ತಿಯು ಸಮಾಜದ ಶಾಂತಿಗೆ ಭಂಗ ತರುವ ವ್ಯಕ್ತಿಯಾಗಿರಬೇಕು. ನೋಟಿಸ್ ನಲ್ಲಿ ಹೋರಾಟಗಾರರಿಗೆ ಏಕವಚನದ ಬಳಸಿದ್ದಲ್ಲದೆ ಶಾಂತಿಗೆ ಭಂಗ ತರುವ ಕಿಡಿಗೇಡಿ ಎಂದು ಉಲ್ಲೇಖಿಸಲಾಗಿದೆ. ಕಿಡಿಗೇಡಿ ಆಗಿದ್ದಲ್ಲಿ ನೋಟಿಸ್ ನೀಡುವ 24 ಗಂಟೆಗಳ ಮೊದಲು ಅದೇ ಹೋರಾಟಗಾರರ ಜೊತೆ ಸಭೆ ನಡೆಸಿದ್ದೇಕೆ? ಕಿಡಿಗೇಡಿಗಳಾಗಿದ್ದಲ್ಲಿ ಅವರ ಜೊತೆ ಟೀ ಕಾಫಿ ಜೊತೆ ಮಾತುಕತೆ ನಡೆಸಿ ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದೇಕೆ? ಎಂದು ನವೀನ್ ಸೂರಿಂಜೆ ಪ್ರಶ್ನಿಸಿದ್ದಾರೆ.
ಸಿಆರ್ಪಿಸಿ 107 ಕಲಂ ದುರುಪಯೋಗ ಆಗುತ್ತಿದೆ ಎಂದುಕೊಂಡೇ ಕರ್ನಾಟಕ ಹೈಕೋರ್ಟ್ 2018 ಜುಲೈ 28 ರಂದು ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದೆ. ರಾಜಾಜಿನಗರದ ಹೋರಾಟಗಾರ್ತಿ ಗೀತಾ ಮಿಶ್ರ ವಿರುದ್ದ ಪೊಲೀಸರು ಸಿಆರ್ಪಿಸಿ 107 ನೋಟಿಸ್ ನೀಡಿದಾಗ ಅವರು ಅದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದರು. ಈ ಸಂದರ್ಭ ಹೈಕೋರ್ಟ್ ನ್ಯಾಯಪೀಠವು “ಯಾವ್ಯಾವ ಸಂದರ್ಭಗಳಲ್ಲಿ ಸೆಕ್ಷನ್ 107 ಬಳಸಬಹುದು? ಹೇಗೆ ಬಳಸಬಹುದು? ಎಂಬ ಬಗ್ಗೆ ಸುತ್ತೋಲೆ ಹೊರಡಿಸುವಂತೆ ರಾಜ್ಯ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. ಜೊತೆಗೆ ಕಲಂ 107ನಂತೆ ಹೋರಾಟಗಾರರ ಮೇಲೆ ಎಫ್ಐಆರ್ ಹಾಕುವಂತಿಲ್ಲ ಎಂದು ಆದೇಶ ನೀಡಿ ಎಫ್ಐಆರ್ ಮತ್ತು ನೋಟಿಸನ್ನು ರದ್ದು ಮಾಡಿತ್ತು.
ಜನರ ಪರವಾಗಿನ ಹೋರಾಟವನ್ನು ಕಾನೂನು ಸುವ್ಯವಸ್ಥೆಗೆ ಅಡ್ಡಿ, ಶಾಂತಿ ಭಂಗ ಎಂದು ಕರೆಯಬಹುದೇ ? ಗೀತಾ ಮಿಶ್ರ ವರ್ಸಸ್ ಕರ್ನಾಟಕ ಸರ್ಕಾರ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ನಿರ್ದೇಶನದ ಪ್ರಕಾರ ಹೋರಾಟ ಎನ್ನುವುದು ಶಾಂತಿಭಂಗ ಆಗುವುದಿಲ್ಲ. ಆ ಕಾರಣಕ್ಕಾಗಿ ಹೊಸದಾಗಿ ಸುತ್ತೋಲೆ ಹೊರಡಿಸಲು ನಿರ್ದೇಶನ ನೀಡಿತ್ತು ಎಂದು ನವೀನ್ ಸೂರಿಂಜೆ ಅವರು ಸೆಕ್ಷನ್ 107 ದುರ್ಬಳಕೆಯಾಗುತ್ತಿರುವ ಬಗ್ಗೆ ಹೈಕೋರ್ಟ್ ತೀರ್ಪು ಉಲ್ಲೇಖಿದ್ದಾರೆ.
ಟೋಲ್ “ನಿಯಮ ಬಾಹಿರ” ಎಂದು ವಿಧಾನಸಭೆಯಲ್ಲಿ ಸರ್ಕಾರ ಅಧಿಕೃತವಾಗಿ ಸ್ಪಷ್ಟಪಡಿಸಿತ್ತು. ಲೋಕೋಪಯೋಗಿ ಸಚಿವರು ಉತ್ತರ ನೀಡಿ ಇದೊಂದು ನಿಯಮಬಾಹಿರ ಟೋಲ್ ಗೇಟ್ ಆಗಿದ್ದು ತೆರವುಗೊಳಿಸಲಾಗುವುದು ಎಂದಿದ್ದರು. ಸರ್ಕಾರ ವಿಧಾನಸಭೆಯಲ್ಲಿ ನೀಡಿದ ಭರವಸೆಯನ್ನು ಕರ್ನಾಟಕ ವಿಧಾನಸಭೆ ನಡವಳಿಕೆಗಳು ಮತ್ತು ಕಾರ್ಯವಿಧಾನ ನಿಯಮ 281 (ಎ) (ಬಿ) ಯಂತೆ ಶೀಘ್ರವಾಗಿ ಈಡೇರಿಸಬೇಕು. ಹಾಗೊಂದು ವೇಳೆ ಭರವಸೆಯನ್ನು ಈಡೇರಿಸದಿದ್ದರೆ ವಿಧಾನಸಭೆಯ ಭರವಸೆಯ ಸಮಿತಿ ವಿಚಾರಣೆ ನಡೆಸಿ ವಿಧಾನಸಭಾಧ್ಯಕ್ಷರಿಗೆ ವರದಿ ನೀಡಬೇಕು. ಹಾಗಾಗಿ ಹೋರಾಟಗಾರರಿಗೆ ನೀಡಲಾದ ನೋಟಿಸ್ಸಿನಲ್ಲಿ “ಸರ್ಕಾರದಿಂದ ಸ್ಥಾಪಿಸಲಾದ ಟೋಲ್ ಗೇಟ್ ಮತ್ತು ಸರ್ಕಾರದ ಆದೇಶಕ್ಕೆ ವಿರುದ್ದವಾಗಿ ನಡೆಯುತ್ತಿರುವ ಹೋರಾಟ” ಎಂದು ಉಲ್ಲೇಖಿಸಿರುವುದು ಸರಿಯಲ್ಲ. ವಿಧಾನಸಭೆಯಲ್ಲಿ ಸರ್ಕಾರ ಈ ಟೋಲ್ ಬಗ್ಗೆ ತಳೆದಿರುವ ನಿಲುವಿಗೆ ವಿರುದ್ದವಾಗಿ ಪೊಲೀಸರ ನಡವಳಿಕೆ ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರವನ್ನು ಪ್ರತಿನಿಧಿಸುವ ಯಾವುದೇ ಶಾಸಕರು “ವಿಧಾನಸಭೆಯಲ್ಲಿ ಸರ್ಕಾರ ನೀಡಿರುವ ಭರವಸೆ ತನ್ನ ಕ್ಷೇತ್ರದಲ್ಲಿ ಜಾರಿಯಾಗಿದೆಯೇ?” ಎಂದು ಪರಾಮರ್ಶಿಸಬೇಕು. ಶಾಸನ ರಚನಕಾರನ ಮೂಲಭೂತ ಕರ್ತವ್ಯವಿದು. ವಿಧಾನಸಭೆಯಲ್ಲಿ ಸರ್ಕಾರ ನೀಡಿದ ಭರವಸೆಯ ಜಾರಿಗೆ ಅಡ್ಡಿಯುಂಟು ಮಾಡುವವರ ವಿರುದ್ದ ಶಾಸಕರು ಹಕ್ಕುಚ್ಯುತಿ ಮಂಡಿಸಿ ಶಿಕ್ಷಿಸಬೇಕೇ ಹೊರತು ಜಾರಿಗೆ ಆಗ್ರಹಿಸುವವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗುವುದು ಜನವಿರೋಧಿ ಮಾತ್ರವಲ್ಲ ಪ್ರಜಾತಂತ್ರ ವಿರೋಧಿಯಾಗಿದೆ ಎಂದು ನವೀನ್ ಸೂರಿಂಜೆ ಅವರು ವಿವರಿಸಿದ್ದಾರೆ.