ಅರಿವು ಎಚ್ಚರಗಳ ನಡುವೆ ಮುಕ್ಕಾಗದ ದೃಶ್ಯಕಾವ್ಯ ಭಾಗೀರತಿ

ಸತೀಶ ಕುಲಕಣರ್ಿ, ಹಾವೇರಿ

ಸಂಪುಟ – 06, ಸಂಚಿಕೆ 27, ಜುಲೈ 01, 2012

13

ಬರಗೂರ ರಾಮಚಂದ್ರಪ್ಪನವರ ಸಿನೆಮಾಗಳೆಂದರೆ ಒಂದಿಷ್ಟು ನಿರೀಕ್ಷೆಗಳನ್ನು ಸಹಜವಾಗಿ ಅಪೇಕ್ಷಿಸುತ್ತವೆ. ನಾಲ್ಕು ದಶಕಗಳ ಕಾಲ ತಮ್ಮೆಲ್ಲ ನಂಬುಗೆಗಳನ್ನು ಮತ್ತು ತಾತ್ವಿಕ ನೆಲೆಗಳನ್ನು ಮತ್ತೆ ಮತ್ತೆ ಪರೀಕ್ಷೆಗೊಳಪಡಿಸಿ ಅವುಗಳನ್ನು ಬರಹದಲ್ಲಿ ಮಾತ್ರವಲ್ಲ ಚಿತ್ರ ಭಾಷೆಯಲ್ಲಿಯೂ ಆಚೀಚೆ ಒಪ್ಪಂದ ಮಾಡಿಕೊಳ್ಳದೆ ಬರಗೂರ ಶೈಲಿ ಮಾರ್ಗ ನಿಮರ್ಿಸಿಕೊಂಡವರು. ಈ ಸಾಲಿನಲ್ಲಿ ಕನ್ನಡದ ಅತ್ಯಂತ ಜನಪ್ರಿಯವಾದ ಕೆರೆಗೆಹಾರ ಖಂಡಕಾವ್ಯ ಚಿತ್ರವಾಗಿ ಬಂದಿದೆ. ಕೆರೆಗೆಹಾರ, ಪುಣ್ಯಕೋಟಿ ಕನ್ನಡ ಕಾವ್ಯ ಪರಂಪರೆಯಲ್ಲಿ ಅನೇಕ ಸಾರಿ ಚಚರ್ೆಗೆ ಒಳಪಟ್ಟ ಖಂಡಕಾವ್ಯಗಳು. ನಂಬುಗೆ ಮತ್ತು ಸವಾಲುಗಳನ್ನು ಒಂದರ್ಥದಲ್ಲಿ ಎದುರೆದುರು ಇಟ್ಟುಕೊಂಡು ಜನಮಾನ್ಯತೆ ಪಡೆದ ಕಾವ್ಯಗಳಿವು. ಖಂಡಿತವಾಗಿಯೂ ಎಂದಿಗೂ ತಿರಸ್ಕರಿಸಲ್ಪಟ್ಟಿಲ್ಲ.

ಬರಗೂರರ ಭಾಗೀರತಿ ಕೆರೆಗೆಹಾರ ಕಾವ್ಯದ ಜೀವಕೋಶಗಳ ಮೂಲಕ ಮಾರ್ಪಟ್ಟ ಚಿತ್ರ. ಅದರ ಮೂಲ ಆಶಯಗಳಿಗೆ ಧಕ್ಕೆ ತರದಂತೆ ಕಾವ್ಯದೊಳಗಿನ ಪಾತ್ರಗಳಿಗೆ ತಾಕಲಾಟ, ತಳಮಳ ಹಾಗೂ ಸಂಘರ್ಷದ ಕಿಡಿಗಳನ್ನು ಹೊತ್ತಿಸಿ ಮೂಲ ಕೆರೆಗೆಹಾರದ ಚೌಕಟ್ಟನ್ನು ಮಿಕ್ಕಿ ನಿಲ್ಲುವ ನಂಬುಗೆಯದ್ದು. ಇದು ಮೂಢನಂಬಿಕೆಯ ಕಥೆಯಾ ಮೆಡಂ ? ಎಂಬ ಪ್ರಶ್ನೆಯೊಂದಿಗೆ ಆರಂಭವಾಗುವ ಚಿತ್ರ ಕೊನೆಗೆ ಕೆರೆಗೆ ಕಲ್ಲೊಂದನ್ನು ಎಸೆಯುವ ಮೂಲಕ ಕೊನೆಗೊಳ್ಳುತ್ತದೆ. ಚಿತ್ರದೊಡಲಲ್ಲಿ ಪ್ರತಿಭಟನೆಯ ತಳಮಳಗಳು ಸಾಂಕೇತಿವಾಗಿ ಚಿತ್ರಿತಗೊಂಡಿದೆ.

ಕನರ್ಾಟಕದುದ್ದಗಲಕ್ಕೂ ಕೆರೆಗೆಹಾರ ಮಾದರಿಯ ಅನೇಕ ಖಂಡಕಾವ್ಯಗಳು ಸಿಗುತ್ತವೆ. ನೀರು ಮತ್ತು ನೆಲದ ಸಂಬಂಧದಂತೆ ಮನುಷ್ಯ ಮತ್ತು ನಂಬುಗೆಯ ಅರ್ಥದಲ್ಲಿ ಈ ಎಲ್ಲ ರಚನೆಗಳು ಜನರ ಮಧ್ಯ ಈಗಲೂ ಉಸಿರಾಡುತ್ತಿವೆ. ಬೆವರಿನ ಶ್ರಮವಿಲ್ಲದೆ ಕೆರೆ ಕಟ್ಟಲು ಸಾಧ್ಯವಿಲ್ಲ. ಇದನ್ನು ಜೀವ ಬಲಿದಾನಕ್ಕೂ ಮಿಗಿಲು ಕೆರೆಯೊಂದರ ಆದ್ಯತೆ ಎಂಬ ಅರ್ಥದಲ್ಲಿ ಸ್ವೀಕರಿಸಲಾಗಿದೆ. ಭಾವನಾತ್ಮಕ ತುಮುಲಗಳ ಕೆರೆಗೆಹಾರ ಪಠ್ಯ ಖಂಡಕಾವ್ಯದಲ್ಲಿ ಬಲಿದಾದ ಪ್ರಧಾನವಾದರೆ, ಬರಗೂರರ ಭಾಗೀರತಿಯಲ್ಲಿ ಅವಳ ಕಿಡಿ ಸ್ವರೂಪದ ತುಮುಲಗಳೆ ಪ್ರಧಾನವಾಗಿದೆ.

ಕಥಾನಕದ ಮೂಲ ಸಾರಕ್ಕೆ ಬರುವ ಮುಂಚೆ ಅನೇಕ ಮಾನವೀಕರಣ ಆಯಾಮಗಳನ್ನು ಕೂಡ ಬರಗೂರ ನೀಡಿದ್ದಾರೆ. ದಂಡಿನಲ್ಲಿರುವ ಕಥಾನಾಯಕ ಮಹಾದೇವ ಭಾಗೀರತಿಯ ಕೆರೆ ಕಟ್ಟಿಸು ಎಂಬ ಒಂದೇ ಪ್ರೀತಿಯ ನುಡಿಗೆ ರಾಜಪ್ರಭುತ್ವದ ತನಕ ಹೋಗಿ ಅದನ್ನೊಪ್ಪಿಸುವುದು, ರಾಜ ಸಿಂಹಾಸನದಿಂದ ಕೆಳಗಿಳಿದು ಕೆರೆಯ ಕಟ್ಟುವ ಕೆಲಸ ಆರಂಭವಾದಾಗ ನೆಲಕ್ಕೆ ಬರುವುದು, ಹಲವು ಸಂದರ್ಭಗಳಲ್ಲಿ ಮಹಾರಾಣಿ ಜನಸಾಮಾನ್ಯರ ಧ್ವನಿಯಾಗಿ ರಾಜನ ಅಂಹಕಾರವನ್ನು ಕೆಣಕಿ ಮಾತನಾಡುವುದು, ಭಾಗೀರತಿಯ ಅಕ್ಕ ತನ್ನೆಲ್ಲ ದುರಂತಗಳನ್ನು ಮರೆತು ಹೊಸ ಬದುಕಿನ ಸಾರಥ್ಯಕ್ಕೆ ಒಪ್ಪಿಗೆ ನೀಡುವುದು ಇವೆಲ್ಲ ಬರಗೂರರ ಭಾಗೀರತಿಯಲ್ಲಿ ಸಾಮಾಜಿಕ ಸಂಚಲನಗಳಾಗಿ ಸಿಗುತ್ತವೆ.

ಬರಗೂರರ ಚಿತ್ರವೀಕ್ಷಣೆಗಿಂತ ನಿರೀಕ್ಷೆಗಳನ್ನೇ ಹೆಚ್ಚಾಗಿ ಅಪೇಕ್ಷಿಸುವ ಪ್ರಜ್ಞಾವಂತ ಸಮುದಾಯ ತಾವೇ ಹಾಕಿಕೊಂಡ ನಿಷೇದಿತ ನಿಲುವುಗಳನ್ನು ಆಚೆ ನಿಂತು ನೋಡಿದರೆ, ಭಾಗೀರತಿಯ ಸಾರ್ಥಕತೆ ಕಾಣುವುದು. ಬರಹಗಾರನೊಬ್ಬ ತನ್ನ ಸ್ವಾತಂತ್ರ್ಯ ನಡುವೆ ಕಾವ್ಯ ಪರಂಪರೆಯನ್ನು ಗೌರವಿಸುವದನ್ನು ಮುಂದಿಟ್ಟುಕೊಂಡಾಗ ಭಾಗೀರತಿ ಹೆಚ್ಚು ಹತ್ತಿರವಾಗುತ್ತದೆ.

ಕಥೆ, ಕಥಾನಕ, ತಾತ್ವಿಕತೆ, ಸೈದ್ದಾಂತಿಕ ನಿಲುವುಗಳ ನೂರು ತಿಕ್ಕಾಟದಲ್ಲಿ ಚಿತ್ರ ದೃಶ್ಯಕಾವ್ಯದ ಸಮೃದ್ಧತೆಯನ್ನು ನಿರಾಕರಿಸುವಂತಾಗಬಾರದು. ಮುಖ್ಯವಾಗಿ ಸಿನಿಮಾ ಹೇಳುವ ಒಟ್ಟು ಸಂದೇಶದಷ್ಟೇ ಅದರ ಕಲಾತ್ಮಕತೆಯು ಮುಖ್ಯವಾಗಬೇಕು. ಭಾಗೀರತಿ ಅಂಥ ಅನೇಕ ವೈಭವಗಳಿಂದ ಮೆರೆದಿದೆ. ಮುಖ್ಯ ಪಾತ್ರಧಾರಿ ಕಿಶೋರರ ದೇಹಭಾಷೆ, ಭಾವನಾ ಮತ್ತು ತಾರಾ ನಟಿಯರ ಭಾವಚಯರ್ೆಗಳು ಅದ್ಬುತವಾಗಿವೆ. ಮೊದಲ ಬಾರಿ ಛಾಯಾಗ್ರಹಣ ನಿರ್ವಹಿಸಿದ ಹರೀಶ ಸೊಂಡೆಕೊಪ್ಪ ಛಾಯಾಗ್ರಹಣ ಮನಸೂರೆಗೊಳ್ಳುವಂತಹದ್ದು, ಚಿತ್ರ ರಂಗದ ಖ್ಯಾತರಾದ ಹರಣಿ,

ಪದ್ಮಾವಾಸಂತಿ, ಶ್ರೀನಾಥ ಅವರುಗಳು ಕಲಾತ್ಮಕ ಚಿತ್ರದಲ್ಲಿ ಬರುವುದು ಸ್ವಾಗತಾರ್ಹ. ಬಹಳ ಮುಖ್ಯವಾಗಿ ಬರಗೂರವರ ಚಿತ್ರ ಸಂಭಾಷಣೆ ಎಂದಿನಂತೆ ಭಾವನಾತ್ಮಕ ಮತ್ತು ವೈಚಾರಿಕ ನೆಲೆಗಳಿಂದ ತುಡಿಯುತ್ತವೆ. ಕೆರೆಯ ಅಗತ್ಯತೆಯನ್ನು ಮತ್ತು ಅದರ ಜೀವ ಸಂಬಂಧಿ ಸೂತ್ರಗಳನ್ನು ಎಲ್ಲ ದೃಶ್ಯಗಳಲ್ಲಿ ಮತ್ತೆ ಮತ್ತೆ ಬರಗೂರ ಮಾರ್ದನಿಸಿದ್ದಾರೆ. ಪ್ರೀತಿ, ಸಂಕಟ, ಮನುಷ್ಯ ತುಮುಲಗಳ ಹಾಗೂ ವಾಸ್ತವದಲ್ಲಿ ಕೆರೆಗಳ ಅಗತ್ಯವಾಗಿ ಹಾರಕ್ಕಿಂತ ಕೆರೆಯೇ ಪ್ರಧಾನವಾಗಿ ಮಂಡಿತವಾಗಿದೆ. ಅನೇಕ ಸಾಧ್ಯತೆಗಳಲ್ಲಿ ವಿಸ್ತಾರಗೊಂಡ ತನ್ನ ಶ್ರೀಮಂತ ಚಿತ್ರಿಕರಣದಿಂದ ಜನಪ್ರಿಯ ಸಿನಿಮಾದ ತೊಳೆಯನ್ನು ಕೂಡ ಚಪ್ಪರಿಸಿದ್ದು ಗಮನಾರ್ಹ.

0

Donate Janashakthi Media

Leave a Reply

Your email address will not be published. Required fields are marked *