ಮಹಿಳೆಯರ ದೈಹಿಕ ಸ್ವಾಯತ್ತತೆಯ ಹಕ್ಕುಗಳಿಗೆ ಅನುವು ಮಾಡಿಕೊಡುವ ಸುಪ್ರಿಂ ಕೋರ್ಟ್‍ ತೀರ್ಪು: ಎಐಡಿಡಬ್ಲ್ಯುಎ

ಮಹಿಳೆಯರ ಗರ್ಭಪಾತ ಹಕ್ಕುಗಳಿಗೆ ಸಂಬಂಧಪಟ್ಟಂತೆ ಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠದ ತೀರ್ಪನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯುಎ) ಸ್ವಾಗತಿಸಿದೆ. ಈ ತೀರ್ಪು ಮಹಿಳೆಯರ ದೈಹಿಕ ಸ್ವಾಯತ್ತತೆಯ ಹಕ್ಕುಗಳನ್ನು ಮತ್ತು ಸುರಕ್ಷಿತ ಗರ್ಭಪಾತವನ್ನು ಲಭ್ಯಗೊಳಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿರುವ ಅದು, ಸುರಕ್ಷಿತ ಗರ್ಭಪಾತಕ್ಕೆ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಮೂಲಸೌಕರ್ಯಗಳನ್ನು ಒದಗಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರೆ ನೀಡಿದೆ, ಇಲ್ಲವಾದಲ್ಲಿ  ಈ ಹಕ್ಕನ್ನು ಲಭ್ಯಗೊಳಿಸಿಕೊಳ್ಳುವಲ್ಲಿ ಮಹಿಳೆಯರು ಅಪಾಯಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂದು ಅದು ಹೇಳಿದೆ.

ಅವಿವಾಹಿತ ಮಹಿಳೆಯರು, ವಿವಾಹಿತ ಮಹಿಳೆಯರಂತೆ ತಮ್ಮ ಭೌತಿಕ ಸಂದರ್ಭಗಳಲ್ಲಿ ಬದಲಾವಣೆಯನ್ನು ಎದುರಿಸಿದರೆ, ಗರ್ಭಧಾರಣೆಯ ಇಪ್ಪತ್ತರಿಂದ ಇಪ್ಪತ್ನಾಲ್ಕು ವಾರಗಳ ನಡುವೆ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತವನ್ನು ಲಭ್ಯಗೊಳಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ ಎಂದು ಈ ತೀರ್ಪು ಹೇಳಿದೆ. ಈ ಮೊದಲು ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ‘ವೈದ್ಯಕೀಯ ಗರ್ಭಧಾರಣೆ ಮುಕ್ತಾಯ’ (ಎಂಟಿಪಿ)ಕಾಯಿದೆ, 1971, ಸೆಕ್ಷನ್ 3(2)(b) ಮತ್ತು ‘ವೈದ್ಯಕೀಯ ಗರ್ಭಧಾರಣೆ ಮುಕ್ತಾಯ’ (ಎಂಟಿಪಿ)ನಿಯಮಗಳು, 2003 ರ ನಿಯಮ 3B ( ಎಂಟಿಪಿ ನಿಯಮಗಳು) ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ, ಏಕೆಂದರೆ ಅರ್ಜಿದಾರ ಗರ್ಭಿಣಿ ಮಹಿಳೆ ಅವಿವಾಹಿತಳಾಗಿದ್ದಳು ಮತ್ತು ಆಕೆಯ ಗರ್ಭಧಾರಣೆಯು ಸಮ್ಮತಿಯ ಸಂಬಂಧದಿಂದ ಉಂಟಾಗಿದೆ ಎಂದು ಹೇಳಿತ್ತು.

ಎಂಟಿಪಿ ಕಾಯಿದೆ, 1971 ರ ಸೆಕ್ಷನ್ 3(2)(ಬಿ), ಅದು ಸೂಚಿಸಿರುವ ನಿರ್ದಿಷ್ಟ ವಿಧಗಳ ಮಹಿಳೆಯರು ಗರ್ಭಾವಸ್ಥೆಯ ಅವಧಿಯು ಇಪ್ಪತ್ತರಿಂದ ಇಪ್ಪತ್ತನಾಲ್ಕು ವಾರಗಳ ನಡುವೆ, ಗರ್ಭಾವಸ್ಥೆಯ ಮುಕ್ತಾಯಕ್ಕೆ ಅಂದರೆ ಗರ್ಭಪಾತಕ್ಕೆ ಅನುಮತಿ ಕೊಡುತ್ತದೆ. ಗರ್ಭಿಣಿ ಮಹಿಳೆಯು ಅಂತಹ ಮುಕ್ತಾಯಕ್ಕೆ ಅರ್ಹತೆ ಪಡೆಯಲು, ಕನಿಷ್ಟ ಇಬ್ಬರು ನೋಂದಾಯಿತ ವೈದ್ಯಕೀಯ ವೃತ್ತಿ ನಡೆಸುವವರು, ಗರ್ಭಾವಸ್ಥೆಯು ಮುಂದುವರೆದರೆ  ಮಹಿಳೆಯ ಜೀವ, ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಅಪಾಯವಿರುತ್ತದೆ ಅಥವ ಹುಟ್ಟಲಿರುವ ಮಗುವು ಗಂಭೀರ ಮಾನಸಿಕ ಅಥವಾ ದೈಹಿಕ ಅಸಹಜತೆಗಳಿಂದ ಬಳಲುತ್ತಿರುವ ಗಣನೀಯ ಅಪಾಯವಿದೆ ಎಂದು ಅಭಿಪ್ರಾಯಪಟ್ಟಿರಬೇಕು. ಎಂಟಿಪಿ ನಿಯಮಗಳ 3B ನಿಯಮವು  ಎಂಟಿಪಿ ಕಾಯಿದೆಯ ಸೆಕ್ಷನ್ 3(2)(b) ಅಡಿಯಲ್ಲಿ ಗರ್ಭಪಾತಕ್ಕೆ ಅರ್ಹರಾಗುವ ಮಹಿಳೆಯರ ವಿಧಗಳನ್ನು ನಮೂದಿಸಿದೆ.

ನಿಯಮ 3B ವಿವಾಹಿತ ಮಹಿಳೆಯರಿಗೆ ಮಾತ್ರ ಸೀಮಿತಗೊಂಡಿದೆ ಎಂಬ ಸಂಕುಚಿತ ವ್ಯಾಖ್ಯಾನವು ಅವಿವಾಹಿತ ಮಹಿಳೆಯರಿಗೆ ತಾರತಮ್ಯ ಮಾಡುತ್ತದೆ ಮತ್ತು ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಅನುಚ್ಛೇದ 21 ರ ಅಡಿಯಲ್ಲಿ ಸಂತಾನೋತ್ಪತ್ತಿ ಸ್ವಾಯತ್ತತೆ, ಘನತೆ ಮತ್ತು ಗೌಪ್ಯತೆಯ ಹಕ್ಕು ಅವಿವಾಹಿತ ಮಹಿಳೆಗೆ ವಿವಾಹಿತ ಮಹಿಳೆಯಂತೆಯೇ ಮಗುವನ್ನು ಹೊಂದಬೇಕೆ ಅಥವಾ ಬೇಡವೇ ಎಂಬ ಆಯ್ಕೆಯ ಹಕ್ಕನ್ನು ನೀಡುತ್ತದೆ ಎಂದು ಅದು ಹೇಳಿದೆ.

ಈ ತೀರ್ಪು “ಸಿಸ್ಜೆಂಡರ್”(ಆಜನ್ಮ-ಅಂದರೆ ಲಿಂಗ ಗುರುತಿಸುವಿಕೆ ಮತ್ತು ಅಭಿವ್ಯಕ್ತಿಗೂ ಹಾಗೂ ಜನಿಸಿದಾಗ ನಿಯೋಜಿಸಲಾದ ಜೈವಿಕ ಲಿಂಗಕ್ಕೂ ಹೊಂದಿಕೆಯಿರುವ ವ್ಯಕ್ತಿಗಳು) ಮಹಿಳೆಯರಿಗೆ ಮಾತ್ರವಲ್ಲ, ಸುರಕ್ಷಿತ ಗರ್ಭಪಾತದ ಲಭ್ಯತೆ ಅಗತ್ಯವಿರುವ ಎಲ್ಲ ವ್ಯಕ್ತಿಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಿಯಮ 3B ಅಡಿಯಲ್ಲಿ ಉಲ್ಲೇಖೀಸಿರುವ ವಿಧಗಳು ಸಮಗ್ರವಾಗಿಲ್ಲ, ಇದು “ಭೌತಿಕ ಸಂದರ್ಭಗಳ ಬದಲಾವಣೆಗೆ ಒಳಗಾಗುವ ಎಲ್ಲಾ ಮಹಿಳೆಯರಿಗೆ ವಿಸ್ತಾರಗೊಳ್ಳುತ್ತದೆ” ಎಂದು ಅರ್ಥೈಸಿಕೊಳ್ಳಬೇಕು ಎಂದು ಅದು ಹೇಳಿದೆ. ಈ ತೀರ್ಪಿನ ಸಂದರ್ಭದಲ್ಲಿ, ಸುರಕ್ಷಿತ ಗರ್ಭಪಾತದ ಅಗತ್ಯವಿರುವ ಇತರ ವ್ಯಕ್ತಿಗಳು ಜನ್ಮದಲ್ಲಿ “ಸ್ತ್ರೀ” ಲೈಂಗಿಕತೆಯನ್ನು ನಿಯೋಜಿಸಿದ (ಮತ್ತು ಸ್ತ್ರೀ ಲೈಂಗಿಕ ಅಂಗಗಳನ್ನು ಹೊಂದಿರುವ) ಆದರೆ ಲಿಂಗ ಗುರುತನ್ನು “ಪುರುಷ” ನೊಂದಿಗೆ ಗುರುತಿಸುವ ವಿಶೇಷಲಿಂಗಿ( ಟ್ರಾನ್ಸ್ ಜೆಂಡರ್) ಪುರುಷರನ್ನು ಒಳಗೊಳ್ಳಬಹುದು.

‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012’ (“ಪೋಕ್ಸೊ ಕಾಯಿದೆ”) ಅಪ್ರಾಪ್ತ ವಯಸ್ಕರ ನಡುವಿನ ಲೈಂಗಿಕ ಚಟುವಟಿಕೆಗಳನ್ನು (ಸಮ್ಮತಿಯ ಮತ್ತು ಸಮ್ಮತಿಯಿಲ್ಲದ) ಅಪರಾಧೀಕರಿಸುತ್ತದೆ. ಈ ಕಾಯಿದೆಯ ಸೆಕ್ಷನ್ 19 (1) ರ ಅಡಿಯಲ್ಲಿ ಕಡ್ಡಾಯವಾಗಿ  ವರದಿ ಮಾಡಬೇಕೆಂದು ವಿಧಿಸಿರುವ ಸಂದರ್ಭಗಳಲ್ಲಿ, ಅಪ್ರಾಪ್ತ ವಯಸ್ಕರು ಸಂತಾನೋತ್ಪತ್ತಿ ಆರೋಗ್ಯಪಾಲನೆಯನ್ನು ಪಡೆಯುವುದನ್ನು ಈ ಸೆಕ್ಷನ್  ತಡೆಯುತ್ತದೆ, , ಅಪ್ರಾಪ್ತ ವಯಸ್ಕರ ಮತ್ತು ಅಪ್ರಾಪ್ತ ವಯಸ್ಕರ ಪಾಲಕರ ಕೋರಿಕೆಯ ಮೇರೆಗೆ ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ(ಗರ್ಭಪಾತ)ವನ್ನು ನಡೆಸುವ ನೋಂದಾಯಿತ ವೈದ್ಯಕೀಯ ವೃತ್ತಿಯಲ್ಲಿರುವವರು, ಅಪ್ರಾಪ್ತರ ಗುರುತು ಮತ್ತು ಇತರ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಲು ಬಾಧ್ಯರಾಗಿರುವುದಿಲ್ಲ ಎಂದು ತೀರ್ಪು ಹೇಳಿದೆ. ಇದಲ್ಲದೆ, ಅವರು ಇದರಿಂದ ಉದ್ಭವಿಸಬಹುದಾದ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಅಪ್ರಾಪ್ತರ ಗುರುತನ್ನು ಬಹಿರಂಗಪಡಿಸಬೇಕಾಗಿಲ್ಲ.

ಸಂವಿಧಾನದ ಅಡಿಯಲ್ಲಿ ಮಹಿಳೆಯರ ಸಮ್ಮತಿ ಮತ್ತು ಸ್ವಾಯತ್ತತೆಯ ಪ್ರಾಮುಖ್ಯತೆಯನ್ನು ಗುರುತಿಸುವ ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು, ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಲು ವಿಫಲವಾದ ದೆಹಲಿ ಹೈಕೋರ್ಟಿನ ವಿಭಜಿತ ತೀರ್ಪಿನ ವಿಷಯದಲ್ಲಿ ಈಗಾಗಲೇ ಸುಪ್ರಿಂ ಕೋರ್ಟಿನಲ್ಲಿ ಮೇಲ್ಮನವಿ  ಸಲ್ಲಿಸಿರುವ ತಾನು  ಸ್ವಾಗತಿಸುವುದಾಗಿ ಎಐಡಿಡಬ್ಲ್ಯುಎ ಹೇಳಿದೆ. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಎಂಟಿಪಿ ನಿಯಮಗಳ ನಿಯಮ 3B ಅಡಿಯಲ್ಲಿ “ಅತ್ಯಾಚಾರ” ಎಂಬ ನಿರೂಪಣೆ  ವೈವಾಹಿಕ ಅತ್ಯಾಚಾರವನ್ನು ಸಹ ಒಳಗೊಂಡಿದೆ ಎಂದು ಹೇಳಿದೆ- ಏಕೆಂದರೆ ಒಪ್ಪಿಗೆ ಅಥವಾ ಇಚ್ಛೆಯಿಲ್ಲದ ಲೈಂಗಿಕ ಸಂಭೋಗವು, ಅದು ಮದುವೆಯ ಪರಿಧಿಯಲ್ಲಿ ಸಂಭವಿಸಿದ್ದರೂ ಬಲವಂತದ ಸಂಭೋಗ ಅಥವಾ ಅತ್ಯಾಚಾರವಾಗಿದೆ, ವಿವಾಹಿತ ಮತ್ತು ಒಂಟಿ ಮಹಿಳೆಯರ ನಡುವಿನ ಕೃತಕ ವ್ಯತ್ಯಾಸವು ಸಾಂವಿಧಾನಿಕವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯವು ಗಮನಿಸಿದೆ.

ಎಐಡಿಡಬ್ಲ್ಯುಎ 90 ರ ದಶಕದಿಂದಲೂ ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದೇ ಪರಿಗಣಿಸಬೇಕು ಎಂದು ಅಭಿಯಾನವನ್ನು ನಡೆಸುತ್ತಿದೆ ಮತ್ತು ಭಾರತೀಯ ದಂಡ ಸಂಹಿತೆಯಲ್ಲಿ  ವೈವಾಹಿಕ ಅತ್ಯಾಚಾರಕ್ಕೆ ಕೊಡಲಾಗಿರುವ ವಿನಾಯಿತಿಯನ್ನು ತೆಗೆದುಹಾಕಲು ಸರ್ಕಾರಕ್ಕೆ ವಿವಿಧ ಮನವಿಗಳನ್ನು ಸಲ್ಲಿಸಿದೆ ಎಂಬುದನ್ನು ನೆನಪಿಸುತ್ತ,  ಈ ತೀರ್ಪು ಮಹಿಳೆಯರ ದೈಹಿಕ ಸ್ವಾಯತ್ತತೆಯ ಹಕ್ಕುಗಳನ್ನು ಮತ್ತು ಸುರಕ್ಷಿತ ಗರ್ಭಪಾತವನ್ನು ಲಭ್ಯಗೊಳಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಆಶಾಭಾವನೆಯನ್ನು ಅದು ವ್ಯಕ್ತಪಡಿಸಿದೆ.

ಸುರಕ್ಷಿತ ಗರ್ಭಪಾತಕ್ಕೆ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಮೂಲಸೌಕರ್ಯಗಳನ್ನು ಒದಗಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು  ಎಐಡಿಡಬ್ಲ್ಯುಎ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರೆ ನೀಡಿದೆ, ಇಲ್ಲವಾದಲ್ಲಿ  ಈ ಹಕ್ಕನ್ನು ಲಭ್ಯಗೊಳಿಸಿಕೊಳ್ಳುವಲ್ಲಿ ಮಹಿಳೆಯರು ಅಪಾಯಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂದು ಅದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *