ಬೆಂಗಳೂರು ರಾಜಕಾಲುವೆ ಒತ್ತುವರಿ ಕುರಿತು ಈಗಾಗಲೇ ಎರಡು ವರದಿ ಕೊಟ್ಟಿದ್ದೇನೆ: ನ್ಯಾ. ಸಂತೋಷ ಹೆಗಡೆ

ಧಾರವಾಡ : ಬೆಂಗಳೂರು ನಗರದಲ್ಲಿ ಅಧಿಕ ಮಳೆಯಿಂದಾಗಿ ಪ್ರದೇಶಗಳು ಜಲಾವೃತವಾಗುತ್ತಿದ್ದು, ಮತ್ತೊಂದೆಡೆ ರಾಜಕಾಲುವೆಗಳು ಒತ್ತುವರಿಯಾಗಿರುವುದು ಕಂಡುಬಂದಿದ್ದರೂ ಸರ್ಕಾರ ಕ್ರಮಗಳು ನಿಧಾನಗತಿಯಾಗುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಹಿಂದೆಯೇ ನಾನು ಎರಡು ವರದಿ ಕೊಟ್ಟಿದ್ದೇನೆ. ಎನ್ ಜಿ ಟಿ ಹಾಗೂ ಸರ್ಕಾರಕ್ಕೆ ವರದಿ ಕೊಟ್ಟಿದ್ದೆ. ಮಹಾರಾಜರು ಹಿಂದೆ ನೂರಾರು ಕೆರೆ ಕಟ್ಟಿಸಿದ್ದರು. ಇವು ಮಳೆ ನೀರನ್ನು ಸಂಗ್ರಹಿಸುವ‌ ಕೆರೆಗಳಾಗಿದ್ದವು. ಅಂದು ಸುಮಾರು 200 ಕೆರೆಗಳಿದ್ದವು, ಮಳೆ ಬಂದಾಗ ನೀರು ಕೆರೆಗಳಿಗೆ ಹೋಗುತಿತ್ತು. ಭಾಷಾವಾರು ಪ್ರಾಂತ ಆದಾಗ ಬೆಂಗಳೂರನ್ನು ರಾಜಧಾನಿ ಮಾಡಲಾಯಿತು. ಆಗ ಇಲ್ಲಿ ದಿಢೀರಾಗಿ ಜನಸಂಖ್ಯೆ ಹೆಚ್ಚಾಯಿತು. ಆಗ ಸರ್ಕಾರ ಯೋಜನೆ ಮಾಡಿ ಜಾಗ‌ ಕೊಡುವುದನ್ನು ಬಿಟ್ಟು ರಾಜಕಾಲುವೆ ಒತ್ತುವರಿ ಮಾಡಲು ಬಿಟ್ಟರು. ಈಗ ಅಲ್ಲಿ ನೀರು ಹೋಗುವ ರಾಜಕಾಲುವೆ‌ ಇಲ್ಲ. ಒತ್ತುವರಿ ಮಾಡಿ‌ ಮನೆ ಕಟ್ಟಿದ್ದಾರೆ‌ ಎಂದು ಹೇಳಿದರು.

ಈಗ ಮಳೆ ಸುರಿದರೆ ನೀರು ಹೋಗಲು ಜಾಗವೇ ಇಲ್ಲವಾಗಿದೆ. ಕೆಲವರು ತಮ್ಮ ಲಾಭಕ್ಕಾಗಿ ಒತ್ತುವರಿ ಮಾಡಿದ್ದು, ಈಗಿನ ಸುಭಾಷನಗರ ಬಸ್ ನಿಲ್ದಾಣ ಹಿಂದೆ ಕೆರೆಯಾಗಿತ್ತು. ಸಂಪಂಗಿಯಲ್ಲಿ ಕೆರೆಯನ್ನು ಕ್ರೀಡಾಂಗಣ ಮಾಡಿದ್ದಾರೆ. ಅಕ್ಕಿ ತಿಮ್ಮನ ಹಳ್ಳಿಯಲ್ಲಿ ಹಾಕಿ ಕ್ರೀಡಾಂಗಣ ಮಾಡಿದ್ದಾರೆ. ಎಲ್ಲ ಕೆರೆಗಳು ಬಿಡಿಎ ಮುಖಾಂತರ ಲಾಭಕ್ಕೆ ಬಳಕೆಯಾಗಿವೆ ಎಂದರು.

ಸರ್ಕಾರದ ಕಾರ್ಯವೈಖರಿಗಳಷ್ಟೇ ಅಲ್ಲ. ಇದರಲ್ಲಿ ಜನರ ದುರಾಸೆಯೂ ಇದೆ. ಅಧಿಕಾರದಲ್ಲಿ ಇದ್ದವರ ಹಾಗೂ ಇಲ್ಲದವರ‌ ದುರಾಸೆಯೂ ಇದೆ. ಐಟಿ ಕಂಪನಿಗಳ ಕೈವಾಡವೂ ಇದೆ. ಆಗರ್ಭ ಶ್ರೀ ಮಂತರಿಗೆ ಕಟ್ಟಿದ ಕಟ್ಟಡದಲ್ಲಿ ಕೂಡಾ ಒತ್ತುವರಿಯಾಗಿದೆ. ಈ ಹಿಂದೆ ಕೂಡಾ ಇದೇ ರೀತಿ ಭಾರೀ‌ ಮಳೆ ಬೆಂಗಳೂರಿನಲ್ಲಿ ಆಗಿದೆ, ಇದೇ‌‌ ಮೊದಲಲ್ಲ. ಹಿಂದೆ ಕೆರೆ ನೀರು ಹೋಗಲು ಒಂದು ವ್ಯವಸ್ಥೆಗಳು ಇದ್ದವು. ಬೆಂಗಳೂರನ್ನು ಗಾರ್ಡನ್ ಸಿಟಿ, ಏರ್‌ ಕಂಡೀಷನ್ ಸಿಟಿ ಎಂದೆಲ್ಲ ಕರೆಯುತ್ತಿದ್ದರು. 70ರ ದಶಕದವರೆಗೆ ಆರ್ಮಿ ಅವರಿಗೆ ಫ್ಯಾನ್ ಇರಲಿಲ್ಲ. ಅಷ್ಟು ತಣ್ಣನೆಯ ಗಾಳಿ ಇತ್ತು. ಇವತ್ತು ಬಿಸಿಲು ಜಾಸ್ತಿಯಾಗಿದೆ. ಇದು ಮನುಷ್ಯನ ದುರಾಸೆಯ ಪ್ರತಿಫಲ. ಬೆಂಗಳೂರು ಜನಸಂಖ್ಯೆ ಜಾಸ್ತಿ ಇದೆ. ಬಡಾವಣೆಯೂ ಜಾಸ್ತಿಯಾಗಿವೆ ಎಂದು ಹೇಳಿದರು.

ಲೋಕಾಯುಕ್ತಕ್ಕೆ ಸೂಕ್ತ ಅಧಿಕಾರಿಗಳನ್ನು ನೀಡಿ

ಲೋಕಾಯುಕ್ತದ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್‌ ಹೆಗಡೆ ಅವರು, ಲೋಕಾಯುಕ್ತಕ್ಕೆ ಪುನಃ ಅಧಿಕಾರ ಒದಗಿದೆ. ಸರ್ಕಾರ ಸೂಕ್ತ ಸಿಬ್ಬಂದಿ ಕೊಡಬೇಕು. ಸೂಕ್ತ ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ನಾ ಸಲಾಂ ಹೇಳುವೆ. ಲೋಕಾಯುಕ್ತಕ್ಕೆ ಮಾತ್ರ ಈಗ ಭಷ್ಟಾಚಾರ ವಿರುದ್ಧದ ವಿಚಾರಣೆ ಮಾಡುವ ಅಧಿಕಾರ ಇದೆ. ಆದರೆ ಅದಕ್ಕೆ ಬೇಕಾದ ಸಿಬ್ಬಂದಿಗಳ ಕೊರತೆ ಇದೆ. ಇದರೊಂದಿಗೆ ಕೆಲವು ಲೋಕಾಯುಕ್ತ ಕಾಯಿದೆಗಳಿಗೆ ತಿದ್ದುಪಡಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ ಇದ್ದ ಅಧಿಕಾರವನ್ನು ಪುನಃ ಕೊಡಬೇಕು. ನಾನು ಪುನಃ ಲೋಕಾಯುಕ್ತಕ್ಕೆ ಬರೋದಿಲ್ಲ. ನನ್ನ‌ ಕರ್ತವ್ಯ ನಾನು ಐದು ವರ್ಷ ಮಾಡಿದ್ದೇನೆ. ನನಗೆ ಈಗ 83 ವರ್ಷ ವಯಸ್ಸಾಯಿತು. ಹೀಗಾಗಿ ನನಗೆ ಈಗ ಯಾವುದೇ ಅಧಿಕಾರ ಬೇಡ. ಯಾವ ಹುದ್ದೆ, ಅಧಿಕಾರಕ್ಕೆ ನಾನು ಈಗ ಕಾಯೋದಿಲ್ಲ. ಲೋಕಾಯುಕ್ತ ತಿದ್ದುಪಡಿಗೆ ಸಲಹೆ ಕೇಳಿದರೆ ಕೊಡುವೆ ಆದರೆ ಅವರು ಕೇಳೋದಿಲ್ಲ ಕೇಳಿದರೆ ಕೊಡುವೆ ಎಂದರು.

1983ರಲ್ಲಿ ಜನತಾ ಪಕ್ಷ ಲೋಕಾಯುಕ್ತವನ್ನು ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಅಂದು ಬಲಿಷ್ಠವಾದ ಲೋಕಾಯುಕ್ತ ಸಂಸ್ಥೆ ಕಟ್ಟಿದ್ದರು. ಆದರೆ ಮೊದಲಿನ ಹತ್ತು ವರ್ಷ ಏನೂ ನಡೆದಿರಲಿಲ್ಲ. ಎನ್‌. ವೆಂಕಟಾಚಲಯ್ಯ ಲೋಕಾಯುಕ್ತದ ಶಕ್ತಿಯನ್ನು ತೋರಿಸಿದ್ದರು. ಆ ಬಳಿಕ ನಾನು ಅವರ ಕೆಲಸ ಮುಂದುವರೆಸಿಕೊಂಡು ಹೋಗಿದ್ದೆ. ಹೀಗಾಗಿ ಲೋಕಾಯುಕ್ತ ಅಧಿಕಾರ ಕಿತ್ತುಕೊಂಡು ದುರ್ಬಲಗೊಳಿಸಲು ಪ್ರಯತ್ನ ಮಾಡಿದರು. ಯಾಕಂದ್ರೆ ಮುಚ್ಚುವ ಧೈರ್ಯ ಸರ್ಕಾರಕ್ಕೆ ಇರಲಿಲ್ಲ. ಹೀಗಾಗಿ ದುರ್ಬಲಗೊಳಿಸುವ ಯತ್ನ ಮಾಡಿದರು ಎಂದರು.

ಆದರೆ ಅದು ಸಫಲವಾಗಲಿಲ್ಲ. ಆಗ ಭ್ರಷ್ಟ ಅಧಿಕಾರಿಗಳನ್ನೇ ಅಧಿಕಾರಕ್ಕೆ ತಂದಿಟ್ಟಿದ್ದರು. ಆದೂ ಆಗದೇ ಇದ್ದಾಗ ಎಸಿಬಿ ಕಟ್ಟಿದ್ದರು. ಎಸಿಬಿ ಸೃಷ್ಟಿ ಮಾಡಿದ್ದೇ ಭ್ರಷ್ಟಾಚಾರ ವಿರುದ್ಧದ ಹೋರಾಟ ಅಂತ್ಯಗೊಳಿಸಲು. ಆದರೆ ಈಗ ಎಸಿಬಿ ಹೋಗಿ ಪುನಃ ಲೋಕಾಯುಕ್ತ ಬಂದಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *