- ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ಸಂಪುಟದ ನಿರ್ಧಾರ
- ಸಿಂಗೇನ ಅಗ್ರಹಾರದಲ್ಲಿ 100 ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ
ಬೆಂಗಳೂರು: ಅತ್ಯಂತ ಹಳೆಯ ಮತ್ತು ಜನಪ್ರಿಯವಾದ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸ್ಥಳಾಂತರಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ. ಮಾರುಕಟ್ಟೆಯ ಸ್ಥಳಾಂತರಕ್ಕೆ ಕರ್ನಾಟಕ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಶೀಘ್ರದಲ್ಲಿ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಬೆಂಗಳೂರಿನ ಮಧ್ಯಭಾಗದಿಂದ ಸ್ಥಳಾಂತರಿಸುವ ನಿರೀಕ್ಷೆಯಿದೆ. ಬೆಂಗಳೂರಿನ ಸಿಂಗೇನ ಅಗ್ರಹಾರ ಹಣ್ಣಿನ ಮಾರುಕಟ್ಟೆಗೆ ಹೊಂದಿಕೊಂಡಿರುವ ಗೂಳಿಮಂಗಲ ಗ್ರಾಮದಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿರುವ ಎರಡು ಎಕರೆ 31 ಗುಂಟೆ ಭೂಮಿಯಲ್ಲಿ ಮಾರುಕಟ್ಟೆಯನ್ನು ಸ್ಥಾಪಿಸಲು ಆಡಳತಾತ್ಮಕ ಅನುಮೋದನೆ ನೀಡಿದೆ.
ಮಾರುಕಟ್ಟೆ ಸ್ಥಳಾಂತರಕ್ಕಾಗಿ 100 ಕೋಟಿ ರೂ, ಭೂಸ್ವಾಧೀನಕ್ಕೆ 48 ಕೋಟಿ ರೂ, ಮಾರುಕಟ್ಟೆ ಅಭಿವೃದ್ಧಿಗೆ 52 ಕೋಟಿ ರೂ ಬಳಕೆಯಾಗಲಿದೆ. ನಗರದ ನಾಲ್ಕು ಮೂಲೆಗಳಲ್ಲೂ ಮಾರುಕಟ್ಟೆ ಸ್ಥಾಪಿಸಲು ಸರ್ಕಾರ ಯೋಜನೆ ಆಕಿಕೊಂಡಿದೆ. ಇನ್ನು ಮೂರು ಮಾರುಕಟ್ಟೆಗಳನ್ನು ಭೂಮಿ ಲಭ್ಯತೆಯ ಆಧಾರದ ಮೇಲೆ ಅಭಿವೃದ್ಧಿ ಪಡೆಸುವ ಅವಶ್ಯಕತೆಯಿದೆ, ಇಲ್ಲಿನ ಭೂಮಿಯನ್ನು ಈ ಹಿಂದೆಯೇ ಸ್ವಾಧೀನ ಪಡೊಸಿಕೊಂಡಿರುವುದರಿಂದ ಇದನ್ನು ಮೊದಲು ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.
ಸಂಪುಟದ ಇನ್ನಿತರ ತೀರ್ಮಾನಗಳು
- ವೈಟ್ಫೀಲ್ಡ್ ಮತ್ತು ದೇವಂಗೊಂತಿ ನಡುವೆ ರೈಲ್ವೆ ಮೇಲು ಸೇತುವೆ ನಿರ್ಮಾಣ ಸಂಬಂಧ 24.47 ಕೋಟಿ ರೂ. ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ.
- ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಗ್ರಾಮದ ಸರ್ವೇ ನಂ.57ರಲ್ಲಿ 3 ಎಕರೆ ಸರಕಾರಿ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಶ್ರೀನಿವಾಸ ಎಜುಕೇಷನ್ ಟ್ರಸ್ಟ್ಗೆ ನೀಡಲು ನಿರ್ಧಾರ.
- ನಾಯಂಡಹಳ್ಳಿಯ ಪಂತರಪಾಳ್ಯದಲ್ಲಿ ಅಪೂರ್ಣವಾಗಿ ಉಳಿದಿದ್ದ 150 ಹಾಸಿಗೆಗಳ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು 32 ಕೋಟಿ ರೂ. ವೆಚ್ಚದಲ್ಲಿ 2 ಹಂತಗಳಲ್ಲಿ ಪೂರ್ಣಗೊಳಿಸಲು ನಿರ್ಧಾರ.