ಮುನೀರ್ ಕಾಟಿಪಳ್ಳ
ನರೇಂದ್ರ ಮೋದಿಯವರ ಮಂಗಳೂರು ಭೇಟಿಯ ಸಂದರ್ಭ ನಳಿನ್ ಕುಮಾರ್ ಕಟೀಲ್ ವಿರುದ್ದ ಅಭಿಯಾನ ನಡೆಸಲು ಬಿಜೆಪಿ ಕಾರ್ಯಕರ್ತ/ಬೆಂಬಲಿಗರ ಒಂದು ಗುಂಪು ಸಿದ್ದತೆ ನಡೆಸುತ್ತಿರುವುದು ಸುದ್ದಿಯಾಗುತ್ತಿದೆ. ಇದು “ಅನಿಷ್ಟಕ್ಕೆಲ್ಲ ಶನೀಶ್ವರನೆ ಕಾರಣ” ಎಂಬ ಮಾತಿನಂತೆ ತುಳುನಾಡಿನಲ್ಲಿ ಎದ್ದಿರುವ ಬಿಜೆಪಿಯ ವಿರುದ್ದದ ಜನಾಕ್ರೋಶವನ್ನು ನಳಿನ್ ಒಬ್ಬರ ವಿರುದ್ದ ತಿರುಗಿಸಿ ತಾನು ಬಚಾವಾಗುವ “ಪರಿವಾರದ” ನಾಜೂಕಿನ ತಂತ್ರವಲ್ಲದೆ ಮತ್ತೇನಲ್ಲ ಎಂದು ಡಿವೈಎಫ್ಐ ರಾಜ್ಯಾದ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ತುಳುನಾಡಿನ ವ್ಯವಸ್ಥೆ ಹಿಡಿತ ಬಿಜೆಪಿ, ಸಂಫ ಪರಿವಾರದ ಬಿಗಿ ಮುಷ್ಟಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲು ಧನಂಜಯ ಕುಮಾರ್, ಸದಾನಂದ ಗೌಡ ನಂತರ ನಳಿನ್ ಕುಮಾರ್ ಕಟೀಲ್. ಉಡುಪಿಯಲ್ಲಿ ಜಯರಾಮ ಶೆಟ್ಟಿ, ಮನೋರಮಾ ಮಧ್ವರಾಜ್, ಸದಾನಂದ ಗೌಡ, ಈಗ ಶೋಭಾ ಕರಂದ್ಲಾಜೆ (ನಡುವೆ ಅಲ್ಪ ಅವಧಿಗೆ ಕಾಂಗ್ರೆಸ್ ನಿಂದ ವಿನಯ ಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ ಅಪವಾದ ಎಂಬಂತೆ ಗೆದ್ದಿದ್ದರು.) ಸತತವಾಗಿ ಲೋಕಸಭೆ ಚುನಾವಣೆಯನ್ನು ಗೆಲ್ಲುತ್ತಾ ಬಂದಿದ್ದಾರೆ.
ರಾಜ್ಯದಲ್ಲಿ ಬೇರೆ ಪಕ್ಷಗಳ ಸರಕಾರ ಇದ್ದಾಗಲೂ ವ್ಯವಸ್ಥೆ ಅಂಜುತ್ತಿದ್ದದ್ದು ಅಥವಾ ವಿಧೇಯವಾಗಿದ್ದದ್ದು ಆರ್ಎಸ್ಎಸ್ ಪರಿವಾರಕ್ಕೆ ಎಂಬುದು ನಿರಾಕರಿಸಲಾಗದ ಸತ್ಯ. ಈಗಂತೂ ಪಂಚಾಯತ್ ನಿಂದ ಕೇಂದ್ರದವರಗೆ ಬಿಜೆಪಿಯ ವಿರೋಧವೇ ಇಲ್ಲದ ಆಡಳಿತ. ಆದರೆ ತುಳುನಾಡು ಮಾತ್ರ ವಿಚಿತ್ರವಾದ ಬಿಕ್ಕಟ್ಟುಗಳಿಗೆ ಸಿಲುಕಿ ನರಳುತ್ತಿದೆ. ನಡೆದಿರುವ ಅಭಿವೃದ್ದಿಯೂ ಜನರ ಪಾಲಿಗೆ ಶಾಪವಾಗಿದೆ. ಜಗಮಗಿಸುವ ಆರೋಗ್ಯ, ಶಿಕ್ಷಣ ಉಳ್ಳವರಿಗೆ ಮಾತ್ರ “ಸೇವೆ” ಒದಗಿಸುವ ಹೈಟೆಕ್ ವ್ಯಾಪಾರವಾಗಿದೆ. ಪರಿಸರ ನಾಶ, ನಿರುದ್ಯೋಗ, ಜಾತಿ, ಧರ್ಮಗಳ ತಾರತಮ್ಯ ಬಗೆಹರಿಸಲಾಗದ ಬಿಕ್ಕಟ್ಟಿಗೆ ಸಿಲುಕಿಸಿದೆ.
ಮೂರು ದಶಕದಿಂದ ಹಂತ ಹಂತವಾಗಿ ಬೆಳೆದು ಬಂದ ಅಗಾಧ ಸಮಸ್ಯೆ, ಅದರಿಂದ ಜನ ಸಮುದಾಯದಲ್ಲಿ ಉಂಟಾದ ಬೃಹತ್ ಪ್ರಮಾಣದ ಅತೃಪ್ತಿ ಮುಂದಿನ ಚುನಾವಣೆಯಲ್ಲಿ ಒಟ್ಟು ಬಿಜೆಪಿಯ ನಡುವನ್ನೇ ಮುರಿದು ಹಾಕುವ ಸನ್ನಿವೇಶ ನಿರ್ಮಾಣಗೊಂಡಿದೆ. ಅತೃಪ್ತಿಯ ತೀವ್ರತೆ ಬೆಳ್ಳಾರೆಯ ಬೀದಿಯಲ್ಲಿ ವ್ಯಕ್ತಗೊಂಡ ನಂತರ ಎಚ್ಚೆತ್ತುಕೊಂಡ ಪರಿವಾರ ಅಂತಹ ಬಿಕ್ಕಟ್ಟಿನಿಂದ ಪಾರಾಗಿ, ಮುಂದಿನ ಚುನಾವಣೆಯ ಸೋಲಿನಿಂದ ಪಾರಾಗಲು ಕಂಡುಕೊಂಡ ದಾರಿ ನಳಿನ್ ಕುಮಾರ್ ಕಟೀಲ್ ರನ್ನು ಬಲಿಗೊಡುವುದು. ಪ್ರಧಾನಿ ಮೋದಿ ಭೇಟಿಯ ಸಂದರ್ಭವನ್ನೇ ಅದಕ್ಕೆ ಸಮರ್ಥವಾಗಿ ಬಳಸಿಕೊಳ್ಳುವುದು. ಅದಕ್ಕಾಗಿ ನಳಿನ್ ವಿರುದ್ದ ಹೊಸದಾಗಿ ರೂಪುಗೊಂಡಿರುವ ಬಿಜೆಪಿ, ಪರಿವಾರದ ಮಹತ್ವಾಕಾಂಕ್ಷಿ ನಾಯಕ ಗಣ ವ್ಯವಸ್ಥಿತ ತಂತ್ರ ರೂಪಿಸಿರುವುದು ಬಿಜೆಪಿ ಒಳಗಡೆಯಿಂದಲೇ ಕೇಳಿ ಬರುತ್ತಿರುವ ಗುಸು ಗುಸು ಸುದ್ದಿ.
ನಳಿನ್ ಕುಮಾರ್ ಕಟೀಲ್ ವಿಫಲ ಸಂಸದರೇ ಇರಬಹುದು. ಆದರೆ ತುಳುನಾಡಿನ ಒಟ್ಟು ದುಸ್ಥಿತಿಗೆ ಅವರು ಒಬ್ಬರೇ ಕಾರಣರಲ್ಲ. ಅದು ಪರಿವಾರ ನಡೆಸಿದ ನಕಾರಾತ್ಮಕ ರಾಜಕಾರಣದ ಫಲ. ನಳಿನ್ ಒಬ್ಬರನ್ನು ಸೋಲಿಸಿ, ಮೂಲೆಗುಂಪು ಮಾಡಿದರೆ ತುಳುನಾಡು ಸಮಸ್ಯೆಗಳ ಸುಳಿಯಿಂದ ಹೊರಬರುವುದಿಲ್ಲ. ಒಟ್ಟು ಬಿಜೆಪಿಯನ್ನೇ ಸೋಲಿಸಬೇಕು, ಮತೀಯ ಸಂಘರ್ಷದಿಂದ ಹೊರ ಬರಬೇಕು. ನರೇಂದ್ರ ಮೋದಿ ಭೇಟಿಯ ಸಂದರ್ಭ ತುಳುನಾಡಿಗೆ ಆಗಿರುವ ಅನ್ಯಾಯದ ಕುರಿತು ಧ್ವನಿ ಎತ್ತಿ ಪ್ರತಿಭಟನೆಯ ಮಾತುಗಳನ್ನು ಆಡಬೇಕು. ನಳಿನ್ ರನ್ನು ಮಾತ್ರ ಗುರಿಯಾಗಿಸಿ ತೃಪ್ತರಾದರೆ ತುಳುನಾಡಿನ ಸೋಲು ಶಾಶ್ವತವಾಗುತ್ತದೆ.