ಕಲ್ಪನಾ, ವಕೀಲರು
ಪ್ರಪಂಚದಾದ್ಯಂತ ಮಹಿಳೆಯರ ಮತು ಹೆಣ್ಣು ಮಕ್ಕಳ ಮೂಲಭೂತ ಹಕ್ಕು ಮಹಿಳಾ ಹಕ್ಕುಗಳಾಗಿವೆ. ಸುಮಾರು 70 ವರ್ಷಗಳ ಹಿಂದೆಯೇ ವಿಶ್ವ ಸಂಸ್ಥೆಯ ಪ್ರತಿಯೊಬ್ಬ ಮನುಷ್ಯನಿಗೂ ಪ್ರತಿಷ್ಠಾಪನೆ ಮಾಡಿದೆ.
ಮಹಿಳಾ ಹಕ್ಕುಗಳಲ್ಲಿ ಕೂಡ ಸಮಾನ ವೇತನದಿಂದ ಹಿಡಿದು ಶಿಕ್ಷಣದ ಹಕ್ಕಿನವರೆಗೆ ಆನೇಕ ರೀತಿಯ ವಿಷಯಗಳನ್ನು ಒಳಗೊಂಡಿದ್ದಾಗಿದೆ. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬಂತೆ, ಹೆಣ್ಣು ಓದುತ್ತಿದ್ದರೆ ಬಹುಶಃ ತನ್ನ ಗುರಿಯನ್ನ ತಾನೇ ಸಾಧಿಸಬಲ್ಲಳು. ಭಾರತದಲ್ಲಿ ಹಾಗೇ ಹಳ್ಳಿಗಳಲ್ಲಿ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊಂದಿರುವುದಿಲ್ಲ. ಕೆಲವರಲ್ಲಿ ತಿಳಿದಿದ್ದರೂ ಸಹ ಅದನ್ನು ಚಲಾಯಿಸುವಲ್ಲಿ ಹಿಂಜರಿಕೆ ಇರುತ್ತದೆ.
ಪ್ರತಿಯೊಬ್ಬ ಮಹಿಳೆಯರಿಗೂ ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ಬಹಳ ಮುಖ್ಯವಾಗಿರುತ್ತದೆ. ಕೇವಲ ಮಹಿಳೆಗೆ ಅಲ್ಲದೆ ಪ್ರತಿಯೊಬ್ಬ ಸದಸ್ಯರಿಗೂ ಪ್ರಯೋಜನ ನೀಡುತ್ತದೆ. ಮಹಿಳೆಯರು ಸಮಾನ ಹಕ್ಕನ್ನು ಹೊಂದಿದಾಗ ಅಥವಾ ಪಡೆದಾಗ ಸಮಾಜದಲ್ಲಿ ಅಗತ್ಯ ಪಾತ್ರ ವಹಿಸಲು ಸಾಧ್ಯವಾಗುತ್ತದೆ. ಹಾಗೆ ಯಾವುದೇ ಮಹಿಳಾ ಹಕ್ಕುಗಳಿಲ್ಲದ ಪಕ್ಷದಲ್ಲಿ ಮಹಿಳೆಯರಿಗೆ ಮತ ನೀಡುವ ಮೂಲಭೂತ ಹಕ್ಕೇ ಇರುತ್ತಿರಲಿಲ್ಲ.
ಭಾರತದಲ್ಲಿ ಮಹಿಳೆಯರಿಗೆ ಕಾನೂನಿನ ಕೊರತೆ ಇಲ್ಲ. ನಮ್ಮ ಭಾರತದ ಸಂವಿಧಾನದಲ್ಲಿ ಮಹಿಳೆಯರಿಗೆ ಅವರ ರಕ್ಷಣೆ ಮತ್ತು ಅಭಿವೃಧ್ಧಿಗೆ ವಿಶೇಷ ಹಕ್ಕುಗಳನ್ನು ನೀಡಿದೆ. ಮಹಿಳೆಯರು ಮೂಲಭೂತ ಹಕ್ಕುಗಳಾದ ಆಹಾರ, ವಸತಿ, ಶಿಕ್ಷಣ, ಆರೋಗ್ಯ ಸೌಲಭ್ಯಗಳು ಇತ್ಯಾದಿಯಾಗಿವೆ.
ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ-1973 ಸೆಕ್ಷನ್ 125, ಹೆಂಡತಿ ವ್ಯಭಿಚಾರದಲ್ಲಿ ಅಥವಾ ಯಾವುದೋ ವ್ಯತಿರಿಕ್ತ ಕಾರಣವಿಲ್ಲದೆ ಪತಿಯೊಂದಿಗೆ ಜೀವನ ನಡೆಸಲು ನಿರಾಕರಿಸಿದಾಗ ಪತಿಯಿಂದ ಜೀವನಾಂಶವನ್ನು ಪಡೆಯಲು ಅರ್ಹತೆ ಇರುತ್ತದೆ. ಯಾವುದೇ ಭಾರತೀಯ ಮಹಿಳೆ ತನ್ನ ಜಾತಿ, ಧರ್ಮ ಲೆಕ್ಕಿಸದೆ ಜೀವನಾಂಶವನ್ನು ತನ್ನ ಗಂಡನಿಂದ ಪಡೆಯಬಹುದು.
ಹಿಂದೂ ವಿವಾಹ ಕಾಯ್ದೆ-1955 ರಲ್ಲಿ ಸಹ ನಿರ್ವಹಣೆಯನ್ನು ಒದಗಿಸಿದೆ, ಆದರೆ ಕಾಯ್ದೆ -1955 ಹಿಂದೂ ಮಹಿಳೆಯರಿಗೆ ಮಾತ್ರ ಸೀಮಿತವಾಗಿದೆ. ಮುಸ್ಲಿಂ ಮಹಿಳೆಯರಿಗೆ ಕಾಯ್ದೆ -1939 ಒಳಗೊಂಡಿದೆ. ಒಂದು ಗಂಡು ಹೆಣ್ಣು ಒಂದೇ ರೀತಿಯ ಕೆಲಸಕ್ಕೆ ಒಂದೇ ರೀತಿಯ ವೇತನವನ್ನು ಹೊಂದುವ ಅರ್ಹತೆ ಕೂಡ ಇದೆ. ಸಮಾನ ರೀತಿಯ ವೇತನ ಕಾಯ್ದೆ ಇದೆ. ನೇಮಕಾತಿ ಸಂದರ್ಭದಲ್ಲಿ ಲಿಂಗದ ಆಧಾರದ ಮೇಲೆ ಯಾವುದೇ ತಾರತಮ್ಯ ಇರುವುದಿಲ್ಲ.
ಭಯ, ಬಲವಂತ, ಹಿಂಸೆ ಮತ್ತು ತಾರತಮ್ಯದಿಂದ ಮುಕ್ತವಾಗಿ ಒಂದು ರೀತಿಯ ಸಮಾನ ಘನತೆಯಿಂದ ಬದುಕುವ ಹಕ್ಕು ಪ್ರತಿಯೊಬ್ಬ ಮಹಿಳೆಗೂ ಇದೆ. ಕಾನೂನಿನ ರೀತಿಯಲ್ಲಿ ಮಹಿಳೆ ಅಪರಾಧದ ಆರೋಪಿಯಾದಾಗ ಬಂಧಿಸಲ್ಪಟ್ಟರೆ, ಆಕೆಯನ್ನು ಸಭ್ಯತೆಯಿಂದ ವರ್ತಿಸಿ ವ್ಯವಹರಿಸಬೇಕಾಗುತ್ತದೆ. ಎಲ್ಲಾ ರೀತಿಯಲ್ಲೂ ಅಂದರೆ ವೈದ್ಯಕೀಯಲ್ಲಿಯೂ ಮಹಿಳಾ ವೈದ್ಯಾಧಿಕಾರಿ ಮೇಲ್ವಿಚಾರಣೆಯಲ್ಲಿಯೇ ನಡೆಯಬೇಕಾಗುತ್ತದೆ.
2005ರಲ್ಲಿ ಕೌಟಂಬಿಕ ಹಿಂಸಾಚಾರದಿಂದ ಮುಕ್ತವಾಗಲು ಮಹಿಳೆಯರಿಗೆ ಸಂರಕ್ಷಣಾ ಕಾಯ್ದೆಯನ್ನು ಸಹ ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬ ಮಹಿಳೆಯು ತನ್ನೊಂದಿಗೆ ಕೌಟಂಬಿಕ ಹಿಂಸಾಚಾರದ ವಿರುದ್ಧ ತನ್ನ ಹಕ್ಕನ್ನು ಚಲಾಯಿಸುವುದು. ಕೌಟಂಬಿಕ ಹಿಂಸಾಚಾರದ ಪ್ರಕರಣವು ಸ್ವಭಾವತಃ ಪೊಲೀಸರು ಎಫ್.ಐ.ಆರ್. ದಾಖಲಿಸಲು ಮತ್ತು ಅದರ ಬಗ್ಗೆ ತನಿಖೆ ಮಾಡಲು ಬದ್ಧರಾಗಿರುತ್ತಾರೆ. ಒಂದು ವೇಳೆ ಎಸ್.ಪಿ. ಕೂಡ ನಿಮ್ಮ ದೂರನ್ನು ನಿರಾಕರಿಸಿದರೆ, ನೀವು ನೇರವಾಗಿ ನಿಮ್ಮ ಪ್ರದೇಶದ ನ್ಯಾಯ ವ್ಯಾಪ್ತಿಗೆ ಬರುವಂತಹ ಮ್ಯಾಜಿಸ್ಟ್ರೇಟ್ ರವರನ್ನು ಸಂಪರ್ಕಿಸಿ ನಿಮ್ಮ ಅರ್ಜಿಯನ್ನು ನೀಡಬಹುದು.
ಭಾರತೀಯ ದಂಡ ಸಂಹಿತೆಯು ಕೌಟಂಬಿಕ ಹಿಂಸಾಚಾರಕ್ಕೊಳಗಾದಂತಹ ಮಹಿಳೆಯರು ಸೆಕ್ಷನ್ -498 ಎ ಅಡಿಯಲ್ಲಿ ಪತಿ ಅಥವಾ ಅವನ ಸಂಬಂಧಿಕರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ನೀಡುವ ಮೂಲಕ ಮಹಿಳೆಯರಿಗೆ ರಕ್ಷಣೆ ನೀಡುತ್ತದೆ. ಇದಲ್ಲದೆ ಕೆಲಸ ಮಾಡುವ ಮಹಿಳೆಯರಿಗೆ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದಿಂದ ರಕ್ಷಣೆಗೆ ಸರ್ಕಾರ 2013ರಲ್ಲಿ ವಿಶೇಷ ಕಾನೂನು ಜಾರಿಗೊಳಿಸಿದೆ. ಹಾಗೆಯೇ 1961 ರಲ್ಲಿ ವರದಕ್ಷಣೆ ನಿಷೇಧ ಕಾಯ್ದೆಯನ್ನು ಸಹ ಜಾರಿಗೊಳಿಸಿದೆ. ವರದಕ್ಷಿಣೆ ನೀಡುವುದು ತೆಗೆದುಕೊಳ್ಳುವುದು ಎಂದೂ ಸಹ ಅಪರಾಧವಾಗಿದೆ.
ನೊಂದ ಮಹಿಳೆಯರಿಗಾಗಿ 1987ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆಯಡಿಯಲ್ಲಿ ಉಚಿತ ಕಾನೂನು ಸೇವೆಯನ್ನು ಸಹ ಪಡೆಯಬಹುದು. ಮಹಿಳೆಯ ಹಕ್ಕುಗಳ ಹೋರಾಟದಲ್ಲಿ ನಾವೆಲ್ಲರೂ ಭಾಗವಹಿಸಬಹುದು ಮತು ಮೊದಲನೆಯದಾಗಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಅತ್ಯಗತ್ಯವಾಗಿದೆ. ಮಹಿಳೆಯರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸ್ವಲ್ಪ ಸದ್ದು ಮಾಡಬೇಕಾಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಮಹಿಳೆಯರು ತಮ್ಮ ಹಕ್ಕುಗಳಿಗೆ ಸಂಪೂರ್ಣ ಪ್ರವೇಶ ಪಡೆದಾಗ ಮಾತ್ರ ಸ್ವಾತಂತ್ರ್ಯದ ಜೀವನವನ್ನು ಆನಂದಿಸಲು ಸಾಧ್ಯವಾಗುತ್ತದೆ. ಮಹಿಳೆಯರು ಮತ್ತು ಸಾಮಾನ್ಯ ಮೂಲಭೂತ ಹಕ್ಕುಗಳ ಬಗ್ಗೆ ಬಲ್ಲವಳಾಗಿದ್ದರೆ ಆ ಮಹಿಳೆಗೆ ಯಾವುದೇ ಆಯುಧ ಬೇಕಾಗಿಲ್ಲ. ಅವರ ಹಕ್ಕುಗಳ ಬಗ್ಗೆ ಅರಿವಿದ್ದರೆ ಮಾತ್ರ ಮನೆಯಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ಹಾಗೂ ಸಮಾಜದಲ್ಲಿ ಯಾವುದೇ ಅನ್ಯಾಯದ ವಿರುದ್ಧ ಹೋರಾಡಬಹುದು.
ಮಹಿಳೆಯರೇ ದಮನಕ್ಕೆ ಒಳಗಾಗದೆ ನಿಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಅವುಗಳನ್ನು ಪಡೆದುಕೊಳ್ಳಿ. ಏಕೆಂದರೆ ಒಬ್ಬ ಮಹಿಳೆ ತನ್ನ ಪರವಾಗಿ ನಿಂತಾಗ ಅವಳು ಎಲ್ಲಾ ಮಹಿಳೆಯರ ಪರವಾಗಿ ನಿಲ್ಲಲು ಮುಂದಾಗುತ್ತಾಳೆ.