ನ್ಯೂಯಾರ್ಕ್​: ಭಾರತೀಯ ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ಹಲ್ಲೆ-ಸ್ಥಿತಿ ಗಂಭೀರ

ವಾಷಿಂಗ್ಟನ್‌: ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಶುಕ್ರವಾರ ಪಶ್ಚಿಮ ನ್ಯೂಯಾರ್ಕ್‌ ನಲ್ಲಿ ಉಪನ್ಯಾಸ ನೀಡಲು ಹೊರಡುವ ವೇಳೆ ವೇದಿಕೆಗೆ ನುಗ್ಗಿದ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದು, ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮಾರಣಾಂತಿಕ ಹಲ್ಲೆಗೊಳಗಾದ ಸಲ್ಮಾನ್​ ರಶ್ದಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕಣ್ಣು, ಯಕೃತ್​ಗೆ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.

ಹಲ್ಲೆ ಮಾಡಿದವನನ್ನು ನ್ಯೂಜೆರ್ಸಿಯ ಫೇರ್​ವ್ಯೂನ ಹದಿ ಮತರ್​(24) ಎಂಬಾತ ಎಂದು ಗುರುತಿಸಲಾಗಿದೆ. ದಾಳಿಕೋರ 75 ವರ್ಷದ ಸಲ್ಮಾನ್ ರಶ್ದಿಯವರಿಗೆ ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ದಾಳಿ ನಡೆದಿದೆ. ವ್ಯಕ್ತಿಯೋರ್ವ ವೇದಿಕೆ ಮೇಲೆ ಓಡಿ ಬಂದು ಚಾಕುವಿನಿಂದ ಇರಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ದಾಳಿ ನಡೆಸಿದ ಕೆಲವೇ ಹೊತ್ತಿ ಆತನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಷಟೌಕ್ವಾ ಇನ್‌ಸ್ಟಿಟ್ಯೂಟ್‌ ಆಯೋಜಿಸಿದ್ದ ಕಲೆ ಮತ್ತು ಸಾಹಿತ್ಯದ ಕಾರ್ಯಕ್ರಮದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆಯೋಜಕರು ಸಲ್ಮಾನ್ ರಶ್ದಿ ಅವರನ್ನು ಭಾಷಣಕ್ಕೆ ಆಹ್ವಾನಿಸಿದ್ದರು. ಅವರು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ವೇದಿಕೆಗೆ ನುಗ್ಗಿದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ತಕ್ಷಣವೇ ರಶ್ದಿ ನೆಲಕ್ಕೆ ಕುಸಿದುಬಿದ್ದಿದ್ದಾರೆ.

ಬರವಣಿಗೆಗಳ ಮೂಲಕ ಒಂದು ದಶಕಗಳಿಂದ ಖ್ಯಾತಿಯನ್ನು ಗಳಿಸಿದ ಜೀವ ಬೆದರಿಕೆ ಎದುರಿಸುತ್ತಿದ್ದ ಸಲ್ಮಾನ್​ ರಶ್ದಿ ದೇಹದ ಮೇಲೆ 12-14 ಕಡೆ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ಕಣ್ಣು, ಯಕೃತ್ತು ಭಾಗಕ್ಕೆ ಗಂಭೀರ ಗಾಯವಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಈವರೆಗೂ ಅವರು ಮಾತನಾಡುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಲೇಖಕ ರಶ್ದಿ ಅವರ ಮೇಲಾದ ದಾಳಿಗೆ ಸಾಹಿತ್ಯಲೋಕ ಭೀತಿಗೊಂಡಿದೆ. ಸಾಹಿತ್ಯದ ಮೂಲಕ ಅಭಿಪ್ರಾಯ ಹಂಚಿಕೊಳ್ಳುವದನ್ನೇ ವಿರೋಧಿಸಿ ಹತ್ಯೆ ಯತ್ನ ಮಾಡಿದ್ದಕ್ಕೆ ಸಾಹಿತಿಗಳು ಕಿಡಿಕಾರಿದ್ದಾರೆ.

ಯುಎಸ್ ಅಧ್ಯಕ್ಷರ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು “ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿ ಭಯಾನಕ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ. ದಾಳಿ ಬಳಿಕ ತಕ್ಷಣಕ್ಕೆ ಸ್ಪಂದಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಜನರಿಗೆ ಕೃತಜ್ಞರಾಗಿರುತ್ತೇವೆʼʼ ಎಂದು ಹೇಳಿದ್ದಾರೆ.

ದಿ ಸಟಾನಿಕ್ ವರ್ಸಸ್ ಕಾದಂಬರಿ ಬರೆದ ನಂತರ ಹಲವು ವರ್ಷಗಳ ಕಾಲ ಇವರು ಜೀವ ಬೆದರಿಕೆ ಎದುರಿಸುತ್ತಿದ್ದರು. ಪ್ರತಿಷ್ಟಿತ ಬೂಕರ್ ಪ್ರಶಸ್ತಿ ವಿಜೇತ ಅಹ್ಮದ್ ಸಲ್ಮಾನ್ ರಶ್ದಿ ಭಾರತ ಮೂಲದ ಬ್ರಿಟಿಷ್-ಅಮೆರಿಕನ್ ಕಾದಂಬರಿಕಾರ. ಇವರ ಮಿಡ್‌ನೈಟ್ಸ್ ಚಿಲ್ಡ್ರನ್ (1981)ಗೆ ಬೂಕರ್ ಪ್ರಶಸ್ತಿ ಬಂದಿತ್ತು. ಜೂನ್ 19, 1947 ರಂದು ಕಾಶ್ಮೀರಿ ಮುಸ್ಲಿಂ ಕುಟುಂಬದಲ್ಲಿ ಜನಿಸಿರುವ ಇವರು, ಕೇಂಬ್ರಿಡ್ಜ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ ಪ್ರಸಿದ್ಧ ಬರಹಗಾರರಾಗಿ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *