ಹರ್ ಘರ್ ತಿರಂಗಾ ಮತ್ತು ನಮ್ಮೂರ ಸೊಸೈಟಿ ಶಿವಪ್ಪನ ಝಂಡಾ

ಮಲ್ಲಿಕಾರ್ಜುನ ಕಡಕೋಳ

ಪ್ರತಿ ವರುಷದಂತೆ ಈ ವರುಷವೂ ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವದ ಸಖತ್ ಸಂಭ್ರಮ. ಈ ಬಾರಿ “ಹರ್ ಘರ್ ತಿರಂಗಾ” ಝಂಡಾದ ವಿಶೇಷ ಸಡಗರ. ಅದನ್ನು ಈ ಸಲ ಮನೆ ಮನೆಯಲ್ಲೂ ಆಚರಿಸಲು ಸರಕಾರವೇ ಕರೆ ಕೊಟ್ಟಿದೆ. ಮತ್ತೊಂದು ವಿಶೇಷವೆಂದರೆ ಎಪ್ಪತ್ತೈದು ವರುಷಗಳು ತುಂಬುತ್ತಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಪರೂಪದ ಸಂದರ್ಭವಿದು. ಮನೆ ಮನೆಗಳಲ್ಲೂ ತ್ರಿವರ್ಣ ಧ್ವಜ ಅನಾವರಣ ಮಾಡುವ ಉಮೇದು. ಯಾಕೋ ನನಗಿದು ಹೊಸದೆನಿಸಲಿಲ್ಲ. ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಸೊಸಾಯಿಟಿ ಶಿವಪ್ಪನೆಂಬ ಕಟ್ಟಾ ಕಾಂಗ್ರೆಸ್ಸಿಗ ಇದ್ದರು. ಆತನೊಂದು ಪತರಾಸು ಹಾಕಿದ ಪುಟ್ಟದಾದ ಚಹದಂಗಡಿ ಇಟ್ಟುಕೊಂಡಿದ್ದ.

ಆತ ಪ್ರತಿ ವರ್ಷವೂ ಸ್ವಾತಂತ್ರ್ಯ ದಿನೋತ್ಸವದಂದು ತಗಡಿನ ಮೇಲ್ಛಾವಣಿಯುಳ್ಳ ತನ್ನ ಚಹದಂಗಡಿಯ ಮೇಲೆ ಬೆಳಗ್ಗೆ ಏಳು ಗಂಟೆಗೆ ಧ್ವಜಾರೋಹಣ ಮಾಡಿ ತಪ್ಪದೇ ತನ್ನ ಸ್ವಾತಂತ್ರ್ಯೋತ್ಸವ ಪ್ರೀತಿ ಮತ್ತು ದೇಶಭಕ್ತಿ ಸಮರ್ಪಿಸುತ್ತಿದ್ದ. ತಾನೇ ಖುದ್ದಾಗಿ ಝಂಡಾ ಏರಿಸಿ ‘ಜನಗಣಮನ’ ಹಾಡಿ ಧ್ವಜ ವಂದನೆ ಮುಗಿದಾದ ಮೇಲೆ ನಮಗೆಲ್ಲ ತಿನ್ನಲು ನಿಂಬೆಹುಳಿ ಪೆಪ್ಪರ್ಮೆಂಟು ಕೊಡುತ್ತಿದ್ದ. ಅಲ್ಲಿ ನೆರೆದಿದ್ದ ದೊಡ್ಡವರಿಗೆ ಮಂಡಾಳ ಹಂಚುತ್ತಿದ್ದ. ಆ ದಿನದಂದು ಆತ ಶುಭ್ರ ಹತ್ತಿಅರಳೆಯ ಗಾಂಧಿ ಟೊಪ್ಪಿಗೆ, ಅಚ್ಚ ಬಿಳಿಯ ಖಾದಿ ಅಂಗಿ, ಧೋತರ ಧರಿಸಿರುತ್ತಿದ್ದ. ಆದರೆ ಅದೇಕೋ ಬಾಕಿ ದಿನಗಳಲ್ಲಿ ಮಾತ್ರ ಆತ ರಟ್ಟಿನ ಕರಿಟೊಪ್ಪಿಗೆ ಧರಿಸುತ್ತಿದ್ದ‌.

ಪ್ರಾಯಶಃ ನಮ್ಮೂರ ಸೊಸಾಯಿಟಿ ಶಿವಪ್ಪ ಅರ್ಧ ಶತಮಾನದಷ್ಟು ಹಿಂದೆ ಆಚರಿಸುತ್ತಿದ್ದ ಸ್ವಾತಂತ್ರ್ಯ ದಿನಾಚರಣೆ ನೆನಪಿನ ದೆಸೆಯಿಂದಾಗಿ ಮೋದಿಯವರ ಈಗಿನ “ಮನ್ಕೀ ಬಾತ್” ಭಾಷಣದ ಹರ್ ಘರ್ ತಿರಂಗಾ ನನಗೆ ಹೊಸದೆನಿಸಲಿಲ್ಲ. ಪಕ್ಕಾ ಕಾಂಗ್ರೆಸ್ಸಿಗನಾದ ನಮ್ಮೂರಿನ ಶಿವಪ್ಪನಿಗಾದರೂ ಝಂಡಾ ಹಾರಿಸಲು ತಗಡಿನ ಸಣ್ಣದಾದ ಮನೆಯೆಂಬ ಜಾಗೆ ಇತ್ತು. ಈ ದೇಶದಲ್ಲಿ ಮನೆಯೇ ಇಲ್ಲದ, ನಿವೇಶನವೂ ಇಲ್ಲದ ಲಕ್ಷಾಂತರ ಮಾತ್ರವಲ್ಲ ಕೋಟಿ, ಕೋಟಿ ದೇಶಪ್ರೇಮಿ ಜನರಿದ್ದಾರೆ. ಮನೆಯೇ ಇಲ್ಲದ ಅವರು ಝಂಡಾ ಹಾರಿಸುವುದು ಎಲ್ಲಿ ಮತ್ತು ಹೇಗೆ.? ಅಷ್ಟೇಯಾಕೆ ಬಾಡಿಗೆ ಮನೆಯಲ್ಲಿರುವ ನನ್ನಂಥವರು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ. ನಮ್ಮಂಥವರು ಬಾಡಿಗೆ ಮನೆಯಲ್ಲೇ ಕಿರಾಯ್ ಘರ್  ಸ್ವಾತಂತ್ರ್ಯೋತ್ಸವ ಆಚರಿಸಬೇಕು ಅಲ್ಲವೇ.? ಅದೂ ಬಾಡಿಗೆ ಮನೆ ಮಾಲೀಕರ ಮರ್ಜಿ ಪಡೆದಲ್ಲವೇ.?

ರಾಜ್ಯದ ಅತ್ಯಂತ ವಿಶ್ವಾಸಾರ್ಹ ದೈನಿಕವೊಂದರ ಹಿರಿಯ ಉಪ ಸಂಪಾದಕಿಯಾಗಿರುವ ನನ್ನ ಮಗಳ ಮನೆಗೆ ಒಂದೆರಡು ದಿನಗಳ ಮಟ್ಟಿಗೆ ಇರಲು ಬೆಂಗಳೂರಿಗೆ ಬಂದಿದ್ದೇನೆ. ಅದೂ ಬಾಡಿಗೆಮನೆ. ಅವರ ಮನೆಯಲ್ಲಿ ಕಸಗೂಡಿಸುವ ಕೆಲಸಕ್ಕೆ ಬರುವ ಶೋಭಿತಾ ಎನ್ನುವ ನೇಪಾಳಿ ಮಹಿಳೆಗೆ ನನ್ನ ಕಲಬುರ್ಗಿ ದಖನಿ ಮಿಶ್ರಿತ ಉರ್ದುವಿನಲ್ಲೇ ಕೇಳಿದೆ. ಅದೇನೆಂದರೆ ಹರ್ ಘರ್ ತಿರಂಗಾ ಮತ್ತು ಸ್ವಾತಂತ್ರ್ಯ ಉತ್ಸವ ಕುರಿತು ಅವಳ ಅಭಿಪ್ರಾಯ ಏನೆಂದು.? ಅದಕ್ಕೆ ಅವಳು ಹೇಳಿದ್ದಿಷ್ಟು. “ಮೈ ಮೋದೀಜೀ ಕೋ ಪೇಹಚಾನ್ತೀ ಹ್ಞೂಂ. ಮಗರ್ ಬಾಕೀ ಕುಛ್ ನಹೀ ಪೇಹಚಾನ್ತೇ” ಅಂದರೆ ಅವಳಿಗೆ ಮೋದಿ ಗೊತ್ತು. ಈ ದೇಶದ ಸ್ವಾತಂತ್ರ್ಯ ಉತ್ಸವದ ಪರಿಚಯವೇ ಇಲ್ಲ.

ನನ್ನ ಹುಟ್ಟೂರಲ್ಲಿದ್ದ ಮುತ್ತಾತನ ಕಾಲದ ಗುಂಡುಗಲ್ಲುಗಳ ಗುಹಾಕಾರದ ನಮ್ಮ ಮನೆ ದಶಕಗಳ ಹಿಂದೆ ಲಾತೂರು ಭೂಕಂಪ ಕಾಲದಲ್ಲೇ ಬಿದ್ದು ಹೋಯಿತು. ಮತ್ತೆ ಮನೆ ಕಟ್ಟಿಸಲಾಗಲಿಲ್ಲ. ಅಜಮಾಸು ನೂರು ವರುಷಗಳ ಕಾಲ ಅಪ್ಪ ಅವ್ವ ಅವರ ಪೂರ್ವಿಕರು ಅಲ್ಲಿ ವಾಸವಾಗಿದ್ದರು. ನನಗೆ ಬುದ್ಧಿಬಂದ ಮೇಲೆ ಅಪ್ಪನ ಕಾಲದ ಅವನ ಸರೀಕರ ಅನೇಕರೊಂದಿಗೆ ಝಂಡಾ ಮೆರೆಸುವ ಸ್ವಾತಂತ್ರ್ಯ ಉತ್ಸವ ಕುರಿತು ಹಲವು ಸಲ ತಾಸುಗಟ್ಟಲೇ ಕುಂತು ಚರ್ಚಿಸಿದ್ದೇನೆ. ಈ ಸ್ವಾತಂತ್ರ್ಯ ಉತ್ಸವ ನಿಮಗೆ ಏನನಸಿದೆ. ಇದರ ಅರ್ಥ ಏನು? ಈ ಆಚರಣೆ ಕುರಿತು ವಿವರವಾಗಿ ಅನೇಕರನ್ನು ಪ್ರಶ್ನಿಸಿದ್ದೇನೆ. ಖಂಡಿತವಾಗಿ ಅವರಿಗೆ ಇದರ ಸಂಪೂರ್ಣ ಅರ್ಥವೇ ತಮಗೆ ಗೊತ್ತಿಲ್ಲ ಎಂದೇ ಹೇಳುತ್ತಿದ್ದರು.

ಹೋಗಲಿ ಅವರು ನಿಜಾಮನ ರಾಜ್ಯದ ಮೊಗಲಾಯಿ ಮಂದಿ, ಅದರ ದರ್ದು ಏನೆಂದು ಗೊತ್ತಿಲ್ಲದಿರಬಹುದು. ಏಕೆಂದರೆ ಒಂದು ವರ್ಷ ತಡವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ನನಗೆ ನಾನೇ ಸಮಾಧಾನ ಹೇಳಿ ಕೊಳ್ಳುತ್ತಿದ್ದೆ. ನಮ್ಮೂರಿನಿಂದ ನಾವು ಎಡವಿ ಬಿದ್ದರೆ ಇಂಗ್ರೇಜಿ ನಾಡಿನ ಮುಂಬಯಿ ಕರ್ನಾಟಕದ ವಿಜಯಪುರ ಜಿಲ್ಲೆಯ ಸುಂಗಠಾಣದಲ್ಲೇ ಬೀಳುತ್ತೇವೆ. ಆ ಭಾಗದ ಬಹಳಷ್ಟು ಮಂದಿಗೂ ಅವರ ಸ್ವಾತಂತ್ರ್ಯ ಉತ್ಸವದ ಪರಿಕಲ್ಪನೆ ಅಥವಾ ತಿಳಿವಳಿಕೆ ಬಗ್ಗೆ ಪ್ರಶ್ನೆ ಹಾಕಿದ್ದೇನೆ. ಅವರ ಉತ್ತರವೂ ನಮ್ಮ ಮೊಗಲಾಯಿ ಮಂದಿಗಿಂತ ಫರಕು ಏನಿರಲಿಲ್ಲ. ಅಂದರೆ ಸ್ವಾತಂತ್ರ್ಯದ ಅಗತ್ಯತೆ ಅದರ ಪ್ರಸ್ತುತತೆ ಕುರಿತು ನಮ್ಮವರಿಗೆ ಯಾಕೆ ಖಬರು ಇಲ್ಲ.? ಅದಕ್ಕೆಲ್ಲ ಮುಗ್ದತೆ ಇಲ್ಲವೇ ಅಜ್ಞಾನ ಕಾರಣವೇ.? ನಮ್ಮ ಹೈದರಾಬಾದ್ ಕರ್ನಾಟಕ ರಾಜ್ಯದ ಮಂದಿ ಪಾಲಿಗಾದರೆ “ಜಾಂದೇ ಚೋಡೋ” ಎಂದು ಸುಮ್ಮನಾಗಬಹುದು. ಮುಂಬೈ ಕರ್ನಾಟಕದ ಶ್ಯಾಣೇರ ಪಾಲಿಗೂ ಅದೇ ಎಂದು ಸುಮ್ಮನಾಗಲಾಗದು.

ಅದಕ್ಕೆಲ್ಲ ನಮ್ಮ ಆರೋಗ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನೇ ಹೊಣೆಯಾಗಿಸಬೇಕಿದೆ. ಇವತ್ತಿಗೂ ನಮ್ಮೂರಲ್ಲಿ ಶೇಕಡಾ ತೊಂಬತ್ತರಷ್ಟು ಬಯಲೇ ಶೌಚಾಲಯ. ಅದರಲ್ಲಂತೂ ಮಹಿಳೆಯರ ಸ್ಥಿತಿ ಕರುಣಾಜನಕ. ಎಷ್ಟೋ ಬಾರಿ ಸೂರ್ಯ ಮುಳುಗಿ ಕತ್ತಲಾಗೋವರೆಗೂ ಮಹಿಳೆಯರು ಮಲವಿಸರ್ಜನೆ ಮಾಡಲು ಕಾಯಬೇಕು. ಇದು ಕೇವಲ ನನ್ನೂರ ದುಃಸ್ಥಿತಿ ಮಾತ್ರವಲ್ಲ. ಕಲ್ಯಾಣ ಕರ್ನಾಟಕದ ಸಹಸ್ರಾರು ಹಳ್ಳಿಗಳ ದುಃಸ್ಥಿತಿಯ ಪಾರಮ್ಯ. ಇವತ್ತಿಗೂ ನಮ್ಮಕಡೆ ದನಗಳು ಮತ್ತು ಮನುಷ್ಯರು ಕುಡಿಯುವ ನೀರೊಂದೇ. ವಚನಕಾರರ ನುಡಿಗಡಣದ ಶೌಚಾಚಮನಕ್ಕೆ ನೀರೊಂದೇ ಎಂಬಂತೆ. ಎಪ್ಪತ್ತೈದು ವರುಷಗಳಾದರೂ ಕುಡಿಯಲು ಪರಿಶುದ್ಧ ನೀರಿನ ಪೂರೈಕೆಯ ಪರಿಚಯವೇ ನಮಗಿಲ್ಲ. ನಮ್ಮೂರು ಗ್ರಾಮ ಪಂಚಾಯತಿ ಕೇಂದ್ರವೇ ಆಗಿದ್ದರೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸೌಲಭ್ಯವಿಲ್ಲ. ಹೀಗೆ ಹೇಳುತ್ತಾ ಹೋದರೆ ಕನಿಷ್ಠ ನಾಗರಿಕ ಸವಲತ್ತುಗಳಿಲ್ಲದ ಸಾಲು ಸಾಲು ಅಪಸವ್ಯಗಳ ಸರಮಾಲೆ. ಹಾಗೆಂದು ಏನೇನೂ ಅಭಿವೃದ್ಧಿಯೇ ಆಗಿಲ್ಲವೆಂಬ ವೃಥಾರೋಪ ನನ್ನದಲ್ಲ.

ಹೌದು ಎಪ್ಪತ್ತೈದು ವರ್ಷಗಳು ಕಳೆದರೂ ಏನೇನೂ ಆಗಿಲ್ಲ ಎಂಬಂತೆ ಕೆಲವರು ಗುನುಗುತ್ತಿರುತ್ತಾರೆ. ಅದು ಕೂಡಾ ಸಂಪೂರ್ಣ ನಿಜವಲ್ಲ. ಅದು ಕೆಲವರ ಗೀಳುರೋಗ. ದೇಶ ಕೆಲವು ಹಂತದಲ್ಲಿ ಅಭಿವೃದ್ಧಿಗೊಂಡಿರುವುದನ್ನು ಖಂಡಿತವಾಗಿ ಯಾರೂ ಅಲ್ಲಗಳೆಯಲಾಗದು. ಅದಕ್ಕೆಲ್ಲ ಆಳುವ ಮತ್ತು ಆಳಿ ಹೋದ ರಾಜಕೀಯ ಪಕ್ಷಗಳು ಕಾರಣವೆಂದು ಆಯಾ ಕಾಲದ ಆಳುವ ಪಕ್ಷಗಳು ಹೇಳುವ ಆತ್ಮರತಿಯ ಮಾತುಗಳು ಸಹ ಅಷ್ಟೇ ಸತ್ಯ. ಅದನ್ನು ಸಾರಾಸಗಟಾಗಿ ತಳ್ಳಿಹಾಕಲಾಗದು. ಅದು ಆಯಾ ಕಾಲಘಟ್ಟದ ಪಕ್ಷ ರಾಜಕಾರಣದ ವರಸೆಗಳೆಂದು ಸುಮ್ಮನಾಗಬೇಕಷ್ಟೇ. ದಿಲ್ಲಿಯ ಕೆಂಪುಕೋಟೆಯ ಮೇಲೆ ಝಂಡಾ ಹಾರಿಸುವ ಉಮೇದುಗಳು. ಅಂತೆಯೇ ಅವೆಲ್ಲ ಕಾಲೋಚಿತ ಪ್ರಚಾರಗಳ ಸಹಜ ಸಂಗತಿಗಳು. ಯಾವುದೇ ದೇಶದ ಅಭಿವೃದ್ಧಿ ಅಲ್ಲಿನ ಶೋಷಿತರ, ಬಡವರ ಬದುಕಿನ ಅಳತೆಗೋಲಾಗಬೇಕು. ಅದು ನಮ್ಮ ಅಪ್ಪ ಅಮ್ಮ ಅವರಂಥವರ ಕಾಲದ ಅಸ್ಮಿತೆ, ಅವರ ಕನಸು ಮತ್ತು ಕಣ್ಣೀರು. ಏಕೆಂದರೆ ದೇಶವೆಂದರೆ ಕೇವಲ ಭೌಗೋಳಿಕ ಮಿತಿಯ ಮಣ್ಣಲ್ಲ, ಮನುಷ್ಯರು.

ಹಾಗೆ ನೋಡಿದರೆ ನಮಗೆ ಸ್ವಾತಂತ್ರ್ಯ ದಿನಾಚರಣೆ ಎಂಬುದು ಯುಗಾದಿ, ದೀವಳಿಗೆ ಇತರೆ ಹಬ್ಬ, ಊರ ಜಾತ್ರೆಗಳು ತಂದುಕೊಡುವ ಸಂತಸ, ಸಂಭ್ರಮ ತಂದು ಕೊಡುತ್ತಿಲ್ಲ ಯಾಕೆ.? ಸ್ವಾತಂತ್ರ್ಯ ಉತ್ಸವಕ್ಕಾಗಿ ನಾವು ಹೊಸಬಟ್ಟೆ ಉಟ್ಟು, ಹೋಳಿಗೆ ಉಂಡು ಸಂತಸ ಪಡುತ್ತಿಲ್ಲ ಯಾಕೆ.? ನಿತ್ಯದ ಇತರೆ ನಾಡಹಬ್ಬಗಳಿಗೆ ತಿಂಗಳುಗಟ್ಟಲೇ ಮುಂಚಿತವಾಗಿ ಸಾಲ ಸೋಲ ಮಾಡಿಕೊಂಡು ತಯಾರಿ ನಡೆಸುವ ರೀತಿಯಲ್ಲಿ ನಾವೆಲ್ಲ ಸಿದ್ಧಗೊಳ್ಳುತ್ತಿಲ್ಲ ಯಾಕೆ.? ಅದೊಂದು ಸರಕಾರಿ ದಿನಾಚರಣೆ ಎಂಬಂತೆ ಆದೇಶ ಪಾಲನೆ ಆಗುತ್ತಲಿದೆ. ಅದು ನಮಗೆಲ್ಲ ನಮ್ಮೂರ ಜಾತ್ರೆ, ಇತರೆ ಹಬ್ಬಗಳಂತೆ ಖುಷಿಯ ಹಬ್ಬ, ಜಾತ್ರೆ ಆಗುವುದು ಯಾವಾಗ.?

*******

ಆದರೆ ನಾವು ಸಣ್ಣ ಚುಕ್ಕೋಳಿದ್ದಾಗ ಸ್ವಾತಂತ್ರ್ಯ ದಿನಾಚರಣೆ ‌ದಿನಕ್ಕೆ ಸಿದ್ಧಗೊಳ್ಳುವುದೇ ನಮಗೆ ದೊಡ್ಡ ಸಂಭ್ರಮ ಆಗಿರ್ತಿತ್ತು. ಯಡ್ರಾಮಿ ಸಾಲಿಗುಡಿಯಂಗಳದಲ್ಲಿ ಆಚರಿಸುವ  ಝಂಡಾ ಮೆರವಣಿಗೆಯ ಸ್ವಾತಂತ್ರ್ಯೋತ್ಸವ ಸಡಗರಕ್ಕೆ ಹಿಂದಿನ ದಿನದಿಂದಲೇ ನನ್ನದು ಭರಪೂರ ತಯಾರಿ.

ಸಣ್ಣ ಹರಳುಪ್ಪಿನಂತಹ ಸವುಳು ಪುಡಿಯಿಂದ ಜಳಜಳ ಒಗೆದ ಬಿಳಿಅಂಗಿ ಖಾಕಿಚಣ್ಣಗಳು. ಒಣಗಿದ ಅಂಗಿ ಚಣ್ಣ ಇಸ್ತ್ರಿ ಮಾಡುವುದೇ ನನಗೆ ದಿನಪೂರ್ತಿಯ ಕಾರ್ಯಕ್ರಮ. ಇದ್ದಲಿಯ ಕೆಂಡದುಂಡೆಗಳನ್ನು ತಾಮ್ರದ ತಂಬಿಗೆಯಲ್ಲಿ ತುಂಬಿ ದಪ್ಪನೆಯ ಬಟ್ಟೆಯಿಂದ ತಂಬಿಗೆಯನ್ನು ಬಲಗೈ ಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಕೊಂಡು  ಅಂಗಿ, ಚಣ್ಣಗಳಿಗೆ ರಾತ್ರಿಯ ತಾಸೊಪ್ಪತ್ತು ಒತ್ತಿ ಒತ್ತಿ ಶ್ರದ್ಧೆಯಿಂದ ಇಸ್ತ್ರಿ ಮಾಡ್ತಿದ್ದೆ. ಮಡಿಕೆಗಳು ಹಾಳಾಗದಂತೆ ಅಂಗಿ ಚಣ್ಣ ರಾತ್ರಿಯಿಡೀ ತಲೆದಿಂಬಿನಡಿ ಇಟ್ಟುಕೊಂಡು ನಾನು ಮಲಗುತ್ತಿದ್ದೆ. ಆಗ ಅವಕ್ಕೆ ಬರೋಬ್ಬರಿ ಇಸ್ತ್ರಿ ಮಡಿಕೆ ಬೀಳುತ್ತಿತ್ತು.

ಬೆಳಗಿನ ಜಾವದ ಕಲ್ಲುಸಕ್ಕರೆಯಂತಹ ನಿದ್ರೆಯ ಭಂಗ. ನಸುಕಿನ ನಾಕೈದು ಗಂಟೆಗೇ ಅವ್ವ ನನ್ನನ್ನು ಎಚ್ಚರಗೊಳಿಸುತ್ತಿದ್ದಳು. ಬೆಚ್ಚಗೆ ಹಿತವೆನಿಸುವ ಬಿಸಿನೀರಿನ ‌ಜಳಕ. ನಾನೇ ಮಾಡಿಟ್ಟ ಇಸ್ತ್ರಿ ಉಡುಪು ಧಾರಣೆ. ಅದರಲ್ಲಿ ನಾನು ಕಂಡುಕೊಳ್ಳುವ ಆನಂದಕ್ಕೆ ಎಣೆಯೇ ಇರ್ತಿರಲಿಲ್ಲ.

ನಮ್ಮೂರಿಂದ ದೀಡು ಹರದಾರಿ ದೂರದ ಯಡ್ರಾಮಿಗೆ ದೀಡು ತಾಸಿನ ಕಾಲ್ನಡಿಗೆ ಪಯಣ. ರಸ್ತೆಯುದ್ದಕ್ಕು ನಡಕೊಂಡು ಹೋಗುವಾಗ ಇಸ್ತ್ರಿ ಮಾಡಿದ ಶುಭ್ರವಸ್ತ್ರದ ಮಡಿಕೆ ಕೆಡದಂತಹ ಕಟ್ಟೆಚ್ಚರ. ಯಡ್ರಾಮಿ ನಡೂರಿನ ಶಾಲೆಯ ಝಂಡಾ ಕಟ್ಟೆಯಿಂದ ಹಿಡಿದು ಊರಿನ ಗಲ್ಲಿ ಗಲ್ಲಿಗಳಲ್ಲಿ ಪ್ರಭಾತಫೇರಿ. ಜೈ ಜೈಕಾರಗಳ ಮಹಾಮಳೆ.

ಬೋಲೋ ಭಾರತ್ ಮಾತಾಕಿ ಜೈಕಾರ. ಮಹಾತ್ಮಾ ಗಾಂಧಿತಾತ ಸೇರಿದಂತೆ ಲಾಲ್ ಬಹದ್ದೂರ ಶಾಸ್ತ್ರೀ, ನೆಹರೂ ಇನ್ನೂ ಅನೇಕ ನಾಯಕರಿಗೆ ಜೈಕಾರ. ಗಾಂಧಿ ಫೋಟೋ ಪೂಜೆ. ಊದುಕಡ್ಡಿ, ಕಾಯಿಕರ್ಪೂರ ಅರ್ಪಣೆ. ತಿನ್ನಲು ನಿಂಬೆಹುಳಿ ಪೆಪ್ಪರ್ಮೆಂಟ್, ಬೊಗಸೆ ತುಂಬಾ ಚುರುಮುರಿ ಮಂಡಾಳ, ಬೆಲ್ಲದ ಸಣ್ಣ ಸಣ್ಣ ತುಣುಕುಗಳು, ತೆಂಗಿನಕಾಯಿ ಹೋಳುಗಳು. ಆಹಾ! ನಮ್ಮ ಸಂಭ್ರಮೋಲ್ಲಾಸಕ್ಕೆ ಎಣೆಯೇ ಇರುತ್ತಿರಲಿಲ್ಲ.

ಹೌದು ಅವು ನಮಗೆಲ್ಲ ಆ ಕಾಲದ ಖಂಡುಗ ಖುಷಿಯ ಖಾದ್ಯವೇ ಹೌದು. ಯಾಕೆಂದರೆ ಯಾರಾದರೂ ದೂರದ ಊರಿಂದ ಮನೆಗೆ ಬೀಗರು ಬಂದಾಗ ಮಾತ್ರ ಚುರುಮುರಿ ಸೂಸ್ಲಾ, ಅಂದ್ರೇ ಮಂಡಕ್ಕಿ ಉಸುಳಿ ತಿಂಡಿಯ ರುಚಿ ಕಾಣುತ್ತಿದ್ದೆವು. ಹೀಗಾಗಿ ಕರಂಕುರುಂ ಘಾಟದ ಮಂಡಾಳದ ಜತೆ ಹಸೀ ಕೊಬ್ಬರಿ ತುಂಡು ಬೆಲ್ಲದಚ್ಚು ತಿನ್ನುವ ಬಲುದೊಡ್ಡ ಅವಕಾಶವೆಂದರೆ ನಮಗೆ ಖರೇ, ಖರೇ ಹಬ್ಬದ ಸ್ವಾತಂತ್ರ್ಯೋತ್ಸವ. ಕಡೆಯಪಕ್ಷ ನನ್ನ ಬಾಲ್ಯಕಾಲದ ಇಂತಹದ್ದೊಂದು ಸ್ವಾತಂತ್ರ್ಯದ ಜವಾರಿ ಸಂಭ್ರಮ, ಸಂತಸ  ಏನೆಲ್ಲ ಖುಷಿ ಇವತ್ತಿನ ಮಕ್ಕಳಿಗೆ ದಕ್ಕುತ್ತಿಲ್ಲ ಯಾಕೆ.?

Donate Janashakthi Media

Leave a Reply

Your email address will not be published. Required fields are marked *