ರಾಜ್ಯದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮ ಬಯಲಿಗೆ : ಸ್ಮಾರ್ಟ್ ವಾಚ್ ಬಳಸಿದ್ದ ಅಭ್ಯರ್ಥಿ ಬಂಧನ

ಬೆಂಗಳೂರು : ಪಿಎಸ್ ಐ ಹಾಗೂ ಪದವಿ ಉಪನ್ಯಾಸಕರ ಅಕ್ರಮ ನೇಮಕಾತಿ ಬೆನ್ನಲ್ಲೇ ಈಗ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಲಿಖಿತ ಪರೀಕ್ಷೆ ವೇಳೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಗೋಕಾಕ್ ಪೊಲಿಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಭಾನುವಾರ 600 ಹುದ್ದೆಗಳಿಗೆ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆ ನಡೆದಿದ್ದು, ರಾಜ್ಯಾದ್ಯಂತ 3 ಲಕ್ಷ ಜನ‌ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಬಳಿಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಗೋಕಾಕ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಿಳಿದ ಪೊಲೀಸರು ಎರಡು ಪ್ರತ್ಯೇಕ ತಂಡಗಳಲ್ಲಿ ಕಾರ್ಯಾಚರಣೆ ನಡೆಸಿ ಸ್ಮಾರ್ಟ್ ವಾಚ್ ಬಳಸಿ ಪರೀಕ್ಷೆ ಬರೆದಿದ್ದ ಸಿದ್ಧಪ್ಪ ಮದಿಹಳ್ಳಿ (20) ಎಂಬಾತನನ್ನು ಬುಧವಾರ ಬಂಧಿಸಲಾಗಿದೆ.

‘ಆರೋಪಿಯು ಮೂಡಲಗಿ ತಾಲ್ಲೂಕಿನ ನಾಗನೂರು ಗ್ರಾಮದವನಾಗಿದ್ದು ಗೋಕಾಕ ನಗರದ ‍ಪರೀಕ್ಷಾ ಕೇಂದ್ರವೊಂದರಲ್ಲಿ ಈತ ಅಕ್ರಮ ಎಸಗಿದ್ದು ಖಾತ್ರಿಯಾಗಿದೆ. ಆಗಸ್ಟ್‌ 7ರಂದು ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲ ಅಭ್ಯರ್ಥಿಗಳು ಮಾಹಿತಿ ನೀಡಿದರು.

ಪರೀಕ್ಷಾ ಕೊಠಡಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಆರೋಪಿ ಕೈಯಲ್ಲಿ ಸ್ಮಾರ್ಟ್‌ವಾಚ್‌ ಇರುವುದು ಗೊತ್ತಾಗಿದೆ. ಆ ವಾಚ್‌ನಲ್ಲಿರುವ ಮಿನಿ ಕ್ಯಾಮೆರಾ ಬಳಸಿ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು ಹೊರಗೆ ರವಾನಿಸಿದ ಬಗ್ಗೆಯೂ ಮಾಹಿತಿ ಸಿಕ್ಕಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್‌ ಪಾಟೀಲ ಮಾಧ್ಯಮಗಳಿಗೆ ತಿಳಿಸಿದರು.

‘ಪ್ರಶ್ನೆ ಪತ್ರಿಕೆಯ ಫೋಟೊವನ್ನು ಯಾರಿಗೆ ಕಳುಹಿಸಿದ್ದ, ಎಲ್ಲಿಗೆ ಕಳುಹಿಸಿದ್ದ ಮತ್ತು ಅಲ್ಲಿಂದ ಮರಳಿ ಉತ್ತರಗಳನ್ನು ಹೇಗೆ ಪಡೆದುಕೊಂಡಿದ್ದಾನೆ ಎಂಬುದರ ಬಗ್ಗೆ ತಾಂತ್ರಿಕ ಪರಿಣತರಿಂದ ಪರಿಶೀಲನೆ ನಡೆದಿದೆ. ಜತೆಗೆ, ಈ ಅಕ್ರಮದಲ್ಲಿ ಸಿದ್ದಪ್ಪ ಒಬ್ಬನೇ ಇದ್ದಾನೋ ಅಥವಾ ಇತರರೂ ಇದೇ ಮಾರ್ಗ ಅನುಸರಿಸಿದ್ದಾರೋ ಎಂಬ ಬಗ್ಗೆಯೂ ನಿಖರ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಎಸ್ಪಿ ತಿಳಿಸಿದ್ದಾರೆ.

‘ಡಿವೈಎಸ್‌ಪಿ ನೇತೃತ್ವದಲ್ಲಿ ತಕ್ಷಣ ಎರಡು ತಂಡಗಳನ್ನು ರಚಿಸಲಾಗಿದೆ. ಮೂಲ ಎಲ್ಲಿದೆ ಎಂಬುದನ್ನೂ ಜಾಲಾಡಲಾಗುತ್ತಿದೆ. ಅಕ್ರಮ ಎಸಗಿದ ಯಾರನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದು ತಿಳಿಸಿದ್ದಾರೆ.

ಈ ಪರೀಕ್ಷೆಯಲ್ಲಿ ಇನ್ನಷ್ಟು ಅಕ್ರಮ ನಡೆದುರುವ ಬಗ್ಗೆಯೂ ಆರೋಪ ಕೇಳಿಬಂದಿದೆ. 545 ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ ಬಯಲಿಗೆ ಬಂದ ಬೆನ್ನಲ್ಲೇ ರಾಜ್ಯದಲ್ಲಿ ಒಂದೊಂದೇ ಪರೀಕ್ಷಾ ಅಕ್ರಮಗಳು ಹೊರಬರುತ್ತಿದ್ದು, ಇತ್ತೀಚೆಗೆ ನಡೆದ ಕೆಪಿಟಿಸಿಎಲ್ ಪರೀಕ್ಷೆಯಲ್ಲಿಯೂ ಭಾರಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

Donate Janashakthi Media

Leave a Reply

Your email address will not be published. Required fields are marked *