ಮುಂಬೈ: ಕ್ರಿಕೆಟ್ ರಂಗದಲ್ಲಿ ಒಂದು ಹಂತಕ್ಕೆ ತಲುಪಬೇಕು, ದೊಡ್ಡ ಸಾಧನೆ ಮಾಡುಬೇಕು ಎಂಬ ಕಾರಣದಿಂದ ಮನೆಯಿಂದ ದೂರವಿದ್ದು ಕಠಿಣ ಅಭ್ಯಾಸ ನಡೆಸಿದ್ದ ಬೌಲರ್ ಕುಮಾರ ಕಾರ್ತಿಕೇಯ ಸುಮಾರು ಒಂಬತ್ತು ವರ್ಷಗಳ ಬಳಿಕ ಮನೆಗೆ ಮರಳಿದ್ದಾರೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ಕ್ರಿಕೆಟ್ ಕ್ರೀಡಾ ಕ್ಷೇತ್ರದ ವೇಳಾಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸುತ್ತಿವೆ. ಇದರಿಂದಾಗಿ ಆಟಗಾರರು ಕುಟುಂಬದಿಂದ ಹತ್ತಾರು ತಿಂಗಳ ಕಾಲ ದೂರವಿರುವಂತಹ ಪರಿಸ್ಥಿತಿ ಎದುರಾಗಿದೆ. ಕೋವಿಡ್ ಹಾಗೂ ಬಯೋಬಬಲ್ ಯುಗದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಆಟಗಾರ ಕುಮಾರ್ ಕಾರ್ತಿಕೇಯ ಸುಮಾರು 9 ವರ್ಷಗಳು ತಮ್ಮ ಪೋಷಕರಿಂದ ದೂರ ಉಳಿದಿದ್ದರು.
ತಾಯಿಯನ್ನು ಭೇಟಿ ಮಾಡಿರುವ ಕುರಿತು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕುಮಾರ್ ಕಾರ್ತಿಕೇಯ, “9 ವರ್ಷ 3 ತಿಂಗಳ ನಂತರ ನನ್ನ ಕುಟುಂಬ ಹಾಗೂ ಅಮ್ಮನನ್ನು ಭೇಟಿಯಾದೆ. ಈ ವೇಳೆ ನನಗಾಗುತ್ತಿರುವ ಸಂತಸದಲ್ಲಿ ಮನದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ” ಎಂದು ಫೋಟೋವನ್ನು ಹಂಚಿಕೊಂಡಿದ್ದಾರೆ.
ಚಿಕ್ಕಂದಿನಲ್ಲೇ ಕುಮಾರ್ ಕಾರ್ತಿಕೇಯ ತಮ್ಮ ಮನೆ ತೊರೆದಿದ್ದರು. ದಿನಗೂಲಿಯಾಗಿ ಕೆಲಸ ಮಾಡುತ್ತಾ ಕ್ರಿಕೆಟ್ ಆಡುತ್ತಿದ್ದ ಇವರು ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ಸು ಸಿಕ್ಕ ಬಳಿಕ ಮನೆಗೆ ಮರಳುವುದಾಗಿ ಶಪಥಗೈದಿದ್ದರು.
ಉತ್ತರ ಪ್ರದೇಶ ಮೂಲದವರಾದ ಕುಮಾರ ಕಾರ್ತಿಕೇಯ ಒಂಬತ್ತು ವರ್ಷಗಳ ಹಿಂದೆ ದೆಹಲಿಯಲ್ಲಿ ಕ್ರಿಕೆಟ್ ಅಕಾಡೆಮಿ ಸೇರಿದ್ದರು. ನಂತರ ರಣಜಿ ಕ್ರಿಕೆಟ್ ಗೆ ಮಧ್ಯ ಪ್ರದೇಶ ರಾಜ್ಯವನ್ನು ಆಯ್ಕೆ ಮಾಡಿಕೊಂಡರು. ಮಧ್ಯ ಪ್ರದೇಶ ತಂಡ ಮೊದಲ ಬಾರಿ ರಣಜಿ ಕಪ್ ಗೆಲ್ಲುವಲ್ಲಿ ಕಾರ್ತಿಕೇಯ ಪ್ರಮುಖ ಪಾತ್ರ ವಹಿಸಿದ್ದರು.
ಕುಮಾರ್ ಕಾರ್ತಿಕೇಯ 11 ಪಂದ್ಯಗಳಿಂದ 32 ವಿಕೆಟ್ ಸಾಧನೆ ಮಾಡಿದ್ದಾರೆ. ಐಪಿಎಲ್ ಸಂದರ್ಭದಲ್ಲಿ, ಒಂಭತ್ತು ವರ್ಷಗಳ ಬಳಿಕ ಮನೆಗೆ ಮರಳಲು ಸಜ್ಜಾಗುತ್ತಿದ್ದೇನೆ ಎಂದು ಹೇಳಿದ್ದರು.
ಕುಮಾರ್ ಕಾರ್ತಿಕೇಯ ಹಂಚಿಕೊಂಡಿರುವ ಪೋಸ್ಟ್ ಅನ್ನು 18,000 ಲೈಕ್ಸ್ ಸಿಕ್ಕಿದ್ದು 900ಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ.