ಮೌಲ್ಯ ಮಾಪಕರ ಎಡವಟ್ಟು : ವಿದ್ಯಾರ್ಥಿಗಳ ಅಂಕಕ್ಕೆ ಆಪತ್ತು

ಗುರುರಾಜ ದೇಸಾಯಿ

ಕಳೆದ ಏಪ್ರಿಲ್ ಮತ್ತು ಮೇ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನದಲ್ಲಿ ಮೌಲ್ಯಮಾಪಕರು ಮಾಡಿರುವ ಎಡವಟ್ಟು ಮತ್ತು ಬೇಜವಾಬ್ದಾರಿಯಿಂದಾಗಿ  ಬಹಳಷ್ಟು ವಿದ್ಯಾರ್ಥಿಗಳು ಆಪತ್ತಿಗೆ ಸಿಲುಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಪರೀಕ್ಷೆಗಳಲ್ಲಿ ಅಂಕಗಳು ಮುಖ್ಯವಲ್ಲ ಎಂದು ಅನೇಕ ತಜ್ಞರು ಹೇಳುತ್ತಾ ಬಂದರೂ, ಇವತ್ತಿನ ಸ್ಪಾರ್ಧಾತ್ಮಕ ಯುಗದಲ್ಲಿ ಒಂದೊಂದು ಅಂಕವೂ ಮುಖ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪರೀಕ್ಷಾ ಫಲಿತಾಂಶ ಬಹು ಮುಖ್ಯವಾಗಿರುತ್ತದೆ. ಮುಂದಿನ ತರಗತಿಗಳಿಗೆ ಸೇರಿಕೊಳ್ಳಲು ಅಂಕಗಳಿಗೆ ಪ್ರಾಮುಖ್ಯತೆ ಸಿಗುವ ಕಾರಣ ವರ್ಷಪೂರ್ತಿ ಕಷ್ಟಪಟ್ಟು ಹೋಗಿ ಪರೀಕ್ಷೆ ಬರೆದಿರುತ್ತಾರೆ. ಆದರೆ ಕೆಲವೊಬ್ಬರು ಮೌಲ್ಯಮಾಪಕರು ಮಾಡುವ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು ಪರಿತಪಿಸುವಂತಾಗುತ್ತದೆ. ಅಂಥದೇ ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ ಎಂಬ ಮಾಹಿತಿ ಲಭ್ಯವಾಗಿದೆ. ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 8 ಅಂಕಗಳ ಹೆಚ್ಚಳವನ್ನು ಕಂಡಿದ್ದಾರೆ.

ಇದಕ್ಕೆ ಸಾಕ್ಷಿಯೆಂಬಂತೆ ಮರುಮೌಲ್ಯಮಾಪನ ಬಳಿಕ ನೂರಾರು ವಿದ್ಯಾರ್ಥಿಗಳು ಎರಡಂಕಿ (ಡಬ್ಬಲ್‌ ಡಿಜಿಟ್‌) ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ. ತಾವು ಪಡೆದ ಅಂಕಗಳ ಬಗ್ಗೆ ತೃಪ್ತಿ ಹೊಂದದ ಸಾವಿರಾರು ವಿದ್ಯಾರ್ಥಿಗಳು ಅಂಕಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಭಾನುವಾರ ಫಲಿತಾಂಶ ಪ್ರಕಟಿಸಿದೆ. ಇದನ್ನು ಸಮಗ್ರವಾಗಿ ಪರಿಶೀಲಿಸಿದಾಗ ಮೌಲ್ಯಮಾಪಕರು ಮಾಡಿರುವ ಎಡವಟ್ಟು ಬೆಳಕಿಗೆ ಬಂದಿದೆ. ವ್ಯತ್ಯಾಸವಾಗಿರುವ ಅಂಕಗಳನ್ನು ಗಮನಿಸಿದರೆ ಬೇಜವಾಬ್ದಾರಿಯಾಗಿ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿರುವುದು ಕಂಡುಬಂದಿದೆ. ಮರುಮೌಲ್ಯ ಮಾಪನದ ವೇಳೆ 15ರಿಂದ 20 ಅಂಕ ಹೆಚ್ಚಾಗಿ ಪಡೆದವರ ದೊಡ್ಡ ಪಟ್ಟಿಯೇ ಇದ್ದು, ಮೌಲ್ಯಮಾಪನ ಸಮರ್ಪಕವಾಗಿ ನಡೆದಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ. ಕನ್ನಡ, ಇಂಗ್ಲಿಷ್‌ನಂತಹ ವಿಷಯಗಳಲ್ಲಿ ಸ್ವಲ್ಪ ಅಂಕ ವ್ಯತ್ಯಾಸವಾಗಿದ್ದರೆ ಕಣ್ತಪ್ಪಿನಿಂದ ಆಗಿರಬಹುದು ಎನ್ನಬಹುದಿತ್ತು. ಆದರೆ ಗಣಿತ, ರಸಾಯನ ಶಾಸ್ತ್ರ, ಭೌತಶಾಸ್ತ್ರ ವಿಷಯಗಳಲ್ಲೂ 15 ರಿಂದ 20 ಅಂಕಗಳ ವ್ಯತ್ಯಾಸವಿರುವುದು ವಿದ್ಯಾರ್ಥಿಗಳು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಂಕಗಳ ವ್ಯತ್ಯಾಸವಾದ ಕೆಲ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಹಲವು ಆಘಾತಕಾರಿ ವಿಚಾರಗಳು ಹೊರಬಿದ್ದಿವೆ.  ಆ ಅಂಶಗಳನ್ನು ನೋಡುವುದಾದರೆ, ಕೊಟ್ಟೂರಿನ ಜಿ.ಎ. ಅಲಿ (ಹೆಸರು ಬದಲಿಸಿದೆ) ಎಂಬ ವಿದ್ಯಾರ್ಥಿ ಜೀವಶಾಸ್ತ್ರ ವಿಷಯದಲ್ಲಿ 14 ಪುಟಗಳ ಉತ್ತರ ಬರೆದು, ಅದನ್ನು ಮುಖಪುಟದಲ್ಲಿ ವಿದ್ಯಾರ್ಥಿ ನಮೂದಿಸಿದ್ದಾನೆ. ಕೊನೆಯ ಪುಟದಲ್ಲಿ ಪರೀಕ್ಷೆ ಕೇಂದ್ರದ ಮೇಲ್ವಿಚಾರಕ ಸಹಿಯೂ ಮಾಡಿದ್ದಾರೆ. ಮೊದಲ ನಾಲ್ಕು ಪುಟಗಳಲ್ಲಿ ಜೀವಶಾಸ್ತ್ರದ ಉತ್ತರ ಬರೆದಿರುವ ವಿದ್ಯಾರ್ಥಿ, ಎರಡು ಪುಟಗಳನ್ನು ಖಾಲಿ ಬಿಟ್ಟು, ನಂತರದ ಎಂಟು ಪುಟಗಳಲ್ಲಿ ಉತ್ತರ ಬರೆದಿದ್ದಾನೆ. ಆದರೆ, ಸಹಾಯಕ ಮೌಲ್ಯಮಾಪಕ ನಾಲ್ಕು ಪುಟಗಳನ್ನಷ್ಟೇ ಮೌಲ್ಯಮಾಪನ ಮಾಡಿ, 21 ಅಂಕ ನೀಡಿ ಮುಕ್ತಾಮಾಡಿದ್ದಾರೆ. ಉಳಿದ 10 ಪುಟಗಳನ್ನು ಕಣ್ಣೆತ್ತಿಯೂ ನೋಡಿಲ್ಲ. ಇದನ್ನು ಉಪ ಮುಖ್ಯ ಮೌಲ್ಯಮಾಪಕರೂ ಪರಿಶೀಲಿಸಿಲ್ಲ. ಕೇವಲ 21 ಅಂಕ ಬಂದಿದ್ದನ್ನು ನೋಡಿ ಗಾಭರಿಯಾದ ಅಲಿ, ಇಲಾಖೆಯಿಂದ ನಕಲು ಉತ್ತರ ಪತ್ರಿಕೆ ತರಿಸಿಕೊಂಡಾಗ ವಿಷಯ ಗೊತ್ತಾಗಿದೆ.  ಮರುಮೌಲ್ಯಮಾಪನ ಮಾಡಲು ಕೋರಿದ ನಂತರ ಅವರು ಉತ್ತೀರ್ಣರಾಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಚಳ್ಳಕೆರೆಯ ಡಿ. ಸೌಮ್ಯ (ಹೆಸರು ಬದಲಿಸಿದೆ)  ಎಂಬವರು ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ 15 ಪುಟಗಳಷ್ಟು ಉತ್ತರ ಬರೆದಿದ್ದರು. ಆದರೆ ಮೌಲ್ಯಮಾಪಕರು ಕೇವಲ ಎರಡು ಪುಟಗಳನ್ನಷ್ಟೇ ಮೌಲ್ಯಮಾಪನ ಮಾಡಿ 15 ಅಂಕ ನೀಡಿದ್ದಾರೆ. ತಮ್ಮ ಉತ್ತರ ಪತ್ರಿಕೆಯನ್ನು ಸೌಮ್ಯ ಅವರು ಪಡೆದುಕೊಂಡ ವೇಳೆ ಉಳಿದ 13 ಪುಟಗಳಲ್ಲಿದ್ದ ಉತ್ತರವನ್ನು ಮೌಲ್ಯಮಾಪಕರು ಗಮನಿಸಿಯೆ ಇಲ್ಲಎಂಬ ಸಂಗತಿ ಬೆಳಕಿಗೆ ಬಂದಿದೆ. ಮರು ಮೌಲ್ಯಮಾಪನದ ನಂತರ ಸೌಮ್ಯ ಉತ್ತೀರ್ಣರಾಗಿದ್ದಾರೆ.

ಮತ್ತೊಂದು ಪ್ರಕರಣವನ್ನು ನೋಡುವುದಾದರೆ ಸಾಗರದ ವಿದ್ಯಾರ್ಥಿಯೊಬ್ಬ ಬರೆದಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅರ್ಥಶಾಸ್ತ್ರ ವಿಷಯದಲ್ಲಿ ಪರೀಕ್ಷ ಮೌಲ್ಯಮಾಪಕರು ಉತ್ತರ ಬರೆದ 9 ಪುಟಗಳ ಮೌಲ್ಯಮಾಪನವನ್ನೇ ಮಾಡದೆ ಇರುವ ವಿಚಿತ್ರ ಘಟನೆ ನಡೆದಿದೆ. . ಮೌಲ್ಯಮಾಪಕರು ಮೊದಲ ಆರು ಪುಟಗಳನ್ನಷ್ಟೇ ಮೌಲ್ಯಮಾಪನ ಮಾಡಿ ಕೇವಲ 23 ಅಂಕ ನೀಡಿದ್ದರಿಂದ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಾನೆ! ವಿದ್ಯಾರ್ಥಿಯ ಪೋಷಕರು ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿಕೊಂಡ ಹಿನ್ನೆಲೆಯಲ್ಲಿ  ಮೌಲ್ಯಮಾಪನ ಕಾರ್ಯ ಅಪೂರ್ಣವಾಗಿರುವುದು ಗಮನಕ್ಕೆ ಬಂದಿದೆ.

ಒಟ್ಟು 58 ಪ್ರಶ್ನೆಗಳಿಗೆ ಆ ವಿದ್ಯಾರ್ಥಿ ಉತ್ತರ ಬರೆದಿದ್ದಾನೆ. ಆದರೆ 9 ಪುಟಗಳ ಮೌಲ್ಯ ಮಾಪನ ಕಾರ್ಯ ಆಗಿಲ್ಲ. ಸುಮಾರು 8 ಪ್ರಶ್ನೆಗಳನ್ನು ಸಹಾಯಕ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿ, ಸೂಕ್ತ ಅಂಕಗಳನ್ನು ನೀಡಿಲ್ಲ. 4, 6 ಮತ್ತು 5 ಅಂಕಗಳ ಪ್ರಾಜೆಕ್ಟ್ ಅವಲಂಬಿತ 2 ಪ್ರಶ್ನೆಗಳನ್ನು ಮೌಲ್ಯಮಾಪನ ಮಾಡಲಾಗಿಲ್ಲ. ಈ ಪ್ರಶ್ನೆಗಳಿಗೆ ಉತ್ತರಿಸುವ ವಿದ್ಯಾರ್ಥಿ ಸುಮಾರು 30 ಅಂಕಗಳಿಸುವ ಸಾಧ್ಯತೆ ಇತ್ತು. ಇದನ್ನು  ಗಮನಿಸಿದ ವಿದ್ಯಾರ್ಥಿ ಉಪನ್ಯಾಸಕರ ಬಳಿ ಚರ್ಚಿಸಿ ಮರು ಮೌಲ್ಯಮಾಪನಕ್ಕೆ ಹಾಕಿದ್ದರಿಂದ ಈಗ ಉತ್ತೀರ್ಣರಾಗಿದ್ದಾರೆ.  ಇವು ಕೇವಲ ಮೂರು ಘಟನೆಗಳಷ್ಟೆ, ಈ ರೀತಿಯ ಸಂಕಷ್ಟಗಳನ್ನು ಬಹಳಷ್ಟು ವಿದ್ಯಾರ್ಥಿಗಳು ಎದುರಿಸಿದ್ದಾರೆ. ಮೌಲ್ಯಮಾಪಕರು ಮಾಡಿದ ಎಡವಟ್ಟು ವಿದ್ಯಾರ್ಥಿಗಳನ್ನು ಪೇಚಿಗೆ ಸಿಲುಕಿಸಿದೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಈ ಲಿಂಕ್ ಬಳಸಿ

ಗುಣಮಟ್ಟದ ಮೌಲ್ಯಮಾಪಕರ ಕೊರತೆ : ಐವರು ಮೌಲ್ಯಮಾಪಕರ ಕಾರ್ಯವನ್ನು ಉಪ ಮುಖ್ಯ ಮೌಲ್ಯಮಾಪಕರು ಪರಿಶೀಲಿಸುತ್ತಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಹಾಗಾದರೆ ಇವರೂ ಸರಿಯಾಗಿ ಕರ್ತವ್ಯ ನಿರ್ವಹಿಸಲಿಲ್ಲವೇ ಎಂಬ ಅನುಮಾನ ಉಂಟಾಗಿದೆ.  ಉಪನ್ಯಾಸಕ ವೃತ್ತಿಯಲ್ಲಿ ಮೂರರಿಂದ ಐದು ವರ್ಷದ ಅನುಭವ ಇರುವ ಸರಕಾರಿ/ ಅನುದಾನಿತ/ ಖಾಸಗಿ ಕಾಲೇಜುಗಳ ಉಪನ್ಯಾಸಕರನ್ನು ಮೌಲ್ಯಮಾಕರನ್ನಾಗಿ ನೇಮಿಸಲಾಗುತ್ತದೆ. ಇದೇ ಈ ಎಡವಟ್ಟಿಗೆ ಕಾರಣ ಎಂಬ ಮಾಹಿತಿಗಳು ಪಿಯು ಮಂಡಳಿಯಲ್ಲಿ ಓಡಾಡುತ್ತಿವೆ. ಖಾಸಗಿ ಕಾಲೇಜಿನ ಉಪನ್ಯಾಸಕರು ತಾವೇ ಬುದ್ದಿವಂತರು ಎಂದು ಪೈಪೋಟಿಗೆ ಬಿದ್ದು ಈ ಎಡವಟ್ಟುಗಳಾಗುತ್ತಿವೆ ಎಂದು ಹೆಸರು ಹೇಳಲು ಇಚ್ಛಿಸದ ಸಹಾಯಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮರು ಮೌಲ್ಯಮಾಪನಕ್ಕೆ ದುಬಾರಿ ಹಣ : ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಬಂದಾಗ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುವ ಶುಲ್ಕವೂ ದುಬಾರಿ ಇದೆ. ಪ್ರತಿ ವಿಷಯದ ಸ್ಕ್ಯಾನ್ ಪ್ರತಿಗೆ 500 ರೂ ಮತ್ತು ಮರುಮೌಲ್ಯಮಾಪನಕ್ಕೆ 1600 ರೂ ಶುಲ್ಕ ಪಾವತಿಸಬೇಕಿದೆ.  ಆರ್ಥಿಕವಾಗಿ ಸ್ಥಿತಿವಂತರಿರುವ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಾರೆ. ಇಲ್ಲದವರು ಪೂರಕ ಪರೀಕ್ಷೆಯನ್ನು ಬರೆಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕನಿಷ್ಟ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿಯನ್ನಾದರೂ ಉಚಿತವಾಗಿ ನೀಡಬೇಕು ಎಂದು ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸುತ್ತಲೇ  ಬಂದಿವೆ. ಪ್ರತಿಬಾರಿಯೂ ಇಂತಹದ್ದೆ ಘಟನೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಂದ ಶುಲ್ಕ ಪಡೆದ ಇಲಾಖೆಯ ಖಜಾನೆಯನ್ನು ತುಂಬಿಸಿಕೊಳ್ಳಲು ಈ ರೀತಿ ಬೇಕಾಬಿಟ್ಟಿ ಮೌಲ್ಯಮಾಪನ ಮಾಡುತ್ತಾರಾ ಎಂಬ ಅನುಮಾನ ಕಾಡುತ್ತಿದೆ ಎಂದು ಪೋಷಕರ ಸಂಘಟನೆಯ ಹರೀಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.

ನಿಲ್ಲದ ಗೋಳು : ಕಳೆದ ನಾಲ್ಕು ವರ್ಷಗಳಿಂದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಐದು ಸಾವಿರ ವಿದ್ಯಾರ್ಥಿಗಳು ಮೌಲ್ಯಮಾಪನದಿಂದ ಸಂಕಷ್ಟ ಎದುರಿಸಿದ್ದಾರೆ ಎಂದು ಸರಕಾರದ ಅಂಕಿ ಅಂಶಗಳೇ ಹೇಳುತ್ತಿವೆ.  2019 ರಲ್ಲಿ, 1,008 ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳಲ್ಲಿ ಕನಿಷ್ಠ ಆರು ಅಂಕಗಳ ಹೆಚ್ಚಳವನ್ನು ಕಂಡಿದ್ದಾರೆ ಮತ್ತು 66 ವಿದ್ಯಾರ್ಥಿಗಳು ಮರುಮೌಲ್ಯಮಾಪನದ ನಂತರ ಆರು ಅಥವಾ ಅದಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದಾರೆ. 2020 ರಲ್ಲಿ, ಮರುಮೌಲ್ಯಮಾಪನದ ನಂತರ ಆರು ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ 1,540 ಆಗಿದ್ದರೆ, 124 ವಿದ್ಯಾರ್ಥಿಗಳು ಅಂಕಪಟ್ಟಿಯು ಆರು ಅಥವಾ ಅದಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದಾರೆ. 2021 ರಲ್ಲಿ, ಪರೀಕ್ಷೆಯನ್ನು ನಡೆಸದಿದ್ದರೂ ಹಿಂದಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಅಂಕಗಳನ್ನು ಘೋಷಿಸಿದಾಗ, ಮರುಮೌಲ್ಯಮಾಪನದ ನಂತರ 31 ವಿದ್ಯಾರ್ಥಿಗಳು ಆರು ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದರು ಮತ್ತು ಎಂಟು ವಿದ್ಯಾರ್ಥಿಗಳು ಆರು ಅಥವಾ ಕಡಿಮೆ ಅಂಕಗಳನ್ನು ಪಡೆದಿದ್ದಾರೆ. 2022 ರಲ್ಲಿ ಅಂದಾಜು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 8ಕ್ಕಿಂತ ಹೆಚ್ಚಿನ ಅಂಕ ಪಡೆದವರಾಗಿದ್ದಾರೆ.

ಸರಕಾರ ಹಾಗೂ ಪಿಯು ಮಂಡಳಿ ಇನ್ನಾದರೂ ಇಂತಹ ಎಡವಟ್ಟುಗಳನ್ನು ತಪ್ಪಿಸಬೇಕಿದೆ. ನಿರ್ಲಕ್ಷ್ಯ ವಹಿಸಿದ ಉಪನ್ಯಾಸಕರ ಮೇಲೆ ಕ್ರಮ ಜರುಗಿಸಬೇಕಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಅನುಭವ ಇರುವ ಮತ್ತು ವಿದ್ಯಾರ್ಥಿ ಸ್ನೇಹಿ ಹೊಂದಿರುವ ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ನೇಮಿಸಬೇಕಿದೆ. ಇಲ್ಲದೆ ಹೋದರೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡಿದಂತಾಗುತ್ತಿದೆ. ಆ ನಿಟ್ಟಿನಲ್ಲಿ ಸರಕಾರ ಮತ್ತು ಪಿಯು ಮಂಡಳಿ ಎಚ್ಚರಿಕೆ ವಹಿಸಬೇಕಿದೆ.

Donate Janashakthi Media

Leave a Reply

Your email address will not be published. Required fields are marked *