ಅಸ್ಪೃಶ್ಯರು ರಸ್ತೆಯ ಮೇಲೆ ನಡೆಯುವುದಕ್ಕೆ ನಿಷೇಧ ವಿದ್ದ ದಿನಗಳಲ್ಲಿ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿ, ತಾನೇ ಎಲ್ಲ ನಿಷೇಧಗಳನ್ನು ಉಲ್ಲಂಘಿಸಿ, ರಸ್ತೆಯ ಮೇಲೆ ದಿಟ್ಟತನದಿಂದ ನಡೆದು, ಎಲ್ಲ ರಸ್ತೆಗಳನ್ನು ಅಸ್ಪೃಶ್ಯರಿಗೆ ತೆರೆಸಿ, ಅಸ್ಪೃಶ್ಯರನ್ನು ರಸ್ತೆಯ ಮೇಲೆ ನಡೆಸಿ, ಆ ಹಕ್ಕಿಗಾಗಿ ಸಾವಿರಾರು ಜನರೊಂದಿಗೆ ಹೋರಾಟ ಮಾಡಿ, ಸವರ್ಣಿಯರು ಒಡೆದ ಹೊಡೆತಗಳಿಗೆ ನೆತ್ತರು ಸುರಿಯುತ್ತಿದ್ದರೂ ರಸ್ತೆಯ ಮೇಲೆ ನಡೆಯುವ ಹಕ್ಕನ್ನು ಉಳಿಸಿಕೊಂಡವರು ಅಯ್ಯನ್ ಕಾಳಿ.
ಅಸ್ಪೃಶ್ಯತಾಚರಣೆ ವ್ಯಾಪಕವಾಗಿದ್ದ ಕೇರಳದಲ್ಲಿ ದಲಿತರ ಸ್ವಾತಂತ್ರ್ಯ, ಸಮಾನತೆ, ಸ್ವಾಭಿಮಾನ ಹಾಗೂ ಸಾಮಾಜಿಕ ನ್ಯಾಯ, ಮಾನವ ಹಕ್ಕಿನ ಪರ ವೈಚಾರಿಕ ಕ್ರಾಂತಿಯನ್ನು ಹುಟ್ಟುಹಾಕಿದ ಅಯ್ಯನ್ಕಾಳಿ ಅವರು, ಕೇರಳದ ತಿರುವನಂತಪುರದ 13 ಕಿ.ಮೀ ದೂರದಲ್ಲಿ ವೆಂಗನೂರು ಎಂಬ ಹಳ್ಳಿಯಲ್ಲಿ ಅಯ್ಯನ್ ಮತ್ತು ಮಾಲ ದಂಪತಿಗಳಿಗೆ 1863ರ ಆಗಸ್ಟ್ 28ರಂದು ಅಯ್ಯನ್ ಕಾಳಿ ಜನಿಸಿದರು. ಅಂದಿನ ತಿರುವಾಂಕೂರ್‌ಗೆ ವೆಂಗನೂರು ಸೇರಿತ್ತು. ‘ಪುಲಯ’ ಜಾತಿಗೆ ಸೇರಿದ ಅಯ್ಯನ್ ಕುಟುಂಬದ ಏಳುಮಂದಿ ಮಕ್ಕಳಲ್ಲಿ ಕಾಳಿ ಒಬ್ಬ. ಮಾರ್ಶಲ್ ಆರ್ಟ್ಸ್ ಹಾಗೂ ಫುಟ್ಬಾಲ್ ಕ್ರೀಡೆಯಲ್ಲಿ ನಿಪುಣರಾಗಿದ್ದ ಕಾಳಿ ಅವರು, 1888ರಲ್ಲಿ ಚೆಲ್ಲಮ್ಮಳನ್ನು ಮದುವೆಯಾದರು.
ಸ್ವತಃ ಕಲಾವಿದರಾಗಿದ್ದ ಅಯ್ಯನ್ ಕಾಳಿ ಅವರು ಹರಿಶ್ಚಂದ್ರ ನಾಟಕದಲ್ಲಿ ಅಭಿನಯಿಸುತ್ತಿದ್ದರು. ಶೋಷಿತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸ್ವತಃ ತಾವೇ ನಾಟಕ ರಚಿಸಿ ಪ್ರದರ್ಶಿಸುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೆ ಸಮಾಜದಲ್ಲಿನ ಅಸ್ಪೃಶ್ಯತೆ, ಅಸಮಾನತೆ, ಶೋಷಣೆಗಳನ್ನು ತೀವ್ರವಾಗಿ ಪ್ರಶ್ನಿಸಿದ ಅಯ್ಯನ್‌ಕಾಳಿ ಅವರು ಆ ಸಂಬಂಧವಾಗಿ ಹಲವಾರು ಮಹತ್ವದ ಹೋರಾಟಗಳನ್ನು ರೂಪಿಸಿದರು. ಈ ಕಾರಣದಿಂದಾಗಿಯೇ ಅನೇಕ ಬಾರಿ ದೈಹಿಕ ಹಲ್ಲೆ, ಕೊಲೆಯ ಸಂಚನ್ನು ಎದುರಿಸಬೇಕಾಯಿತು.
ಅಸ್ಪೃಶ್ಯರಿಗಾಗಿ ದೇವಾಲಯದ ಬಾಗಿಲುಗಳನ್ನು ತೆರೆಸಿದ ಮೊದಲ ನಾಯಕ ಅಯ್ಯನ್ ಕಾಳಿ
ಆ ದಿನಗಳಲ್ಲಿ ದಲಿತರು ಸವರ್ಣೀಯರ ಮತ್ತು ಸಾರ್ವಜನಿಕ ಬೀದಿಗಳಲ್ಲಿ ಮುಕ್ತವಾಗಿ ನಡೆದಾಡುವ ಹಾಗಿರಲಿಲ್ಲ. ಇದನ್ನ ಮನಗಂಡ ಅಯ್ಯನ್‌ಕಾಳಿ ಅವರು ‘ಸ್ವಾತಂತ್ರ್ಯಕ್ಕಾಗಿ ನಡಿಗೆ’ ಎಂಬ ಹೋರಾಟ ಆರಂಭಿಸಿದರು. ಮೊಟ್ಟಮೊದಲಿಗೆ ತಮ್ಮ ಕಾರ್ಯಕರ್ತರೊಟ್ಟಿಗೆ ಬಲರಾಮಪುರದ ಚಳಿಯಾರ್ ಬಜಾರ್ ಪ್ರವೇಶಿಸಿ ಸವರ್ಣೀಯರ ಹಲ್ಲೆಗೆ ಗುರಿಯಾಗಬೇಕಾಯಿತು. ಎದೆಗುಂದದ ಅಯ್ಯನ್‌ಕಾಳಿ ಅವರು ಆ ತರುವಾಯದಲ್ಲಿ ಎಲ್ಲ ಬಗೆಯ ಹಿಂಸೆಯ ನಡುವೆಯೂ ಸಾರ್ವಜನಿಕ ಬಜಾರು, ಮಾರುಕಟ್ಟೆ, ಹೆದ್ದಾರಿಗಳನ್ನು ಪ್ರವೇಶಿಸುವ ಹೋರಾಟಗಳನ್ನು ನಿರಂತರವಾಗಿ ಹಮ್ಮಿಕೊಂಡರು.
ಶಾಲೆಗಳಿಗೆ ಪ್ರವೇಶವನ್ನು ಸಂಪಾದಿಸಿದಲ್ಲದೆ ಆತನೇ ಸ್ವತಃ ಪಾಠಶಾಲೆಗಳನ್ನು ಸ್ಥಾಪಿಸಿದ. ವಿಚಿತ್ರವೇನೆಂದರೆ ಆತ ಓದು ಬರಹ ಬಲ್ಲವನಲ್ಲ. ಆದರೆ ಶಿಕ್ಷಣದ ಮಹತ್ವವನ್ನು ಆತ ಅರಿತಿದ್ದರು.
ಅಂದಿನ ಕೇರಳದ ಜಾತಿನಿಷ್ಠ ಸಮಾಜವು ಸಾರ್ವಜನಿಕ ಶಾಲೆಗಳಿಗೆ ದಲಿತ ಮಕ್ಕಳ ಪ್ರವೇಶವನ್ನು ನಿರಾಕರಿಸಿತ್ತು. ಇದನ್ನು ತೀವ್ರವಾಗಿ ಖಂಡಿಸಿದ ಕಾಳಿ ಅವರು, ಮತ್ತೆ ಹೋರಾಟವನ್ನು ಆರಂಭಿಸಿದರು. 1904ರಲ್ಲಿಯೇ ಕಾಳಿಯವರು ಪುಲಯ(=ಹೊಲಯ, ದಲಿತ)ರಿಗಾಗಿ ಸ್ವಂತ ಶಾಲೆಯನ್ನು ಸ್ಥಾಪಿಸುವ ಆಲೋಚನೆಯನ್ನು ಮಾಡಿದರು. ವೆಂಗನೂರಿನಲ್ಲಿ ಇವರು ಸ್ಥಾಪಿಸಿದ ಶಾಲೆಯನ್ನು ಸವರ್ಣೀಯರು ಧ್ವಂಸ ಮಾಡಿದರು. ಮತ್ತೊಂದು ಕಡೆ ಸವರ್ಣೀಯರು ಶಾಲೆಯನ್ನು ಸುಟ್ಟುಹಾಕಿದಾಗ ಆ ಶಾಲೆಗೆ ‘ಸುಟ್ಟು ಹೋದ ಶಾಲೆ’ ಎಂದು ಮರುನಾಮಕರಣ ಮಾಡಿ ಮತ್ತೆ ಶಾಲೆಯನ್ನು ಆರಂಭಿಸಿದರು.
ಕೊಚ್ಚಿಯಲ್ಲಿ ಒಮ್ಮೆ ಅಯ್ಯನ್‌ಕಾಳಿಗೆ ಎಲ್ಲೂ ಸಮಾವೇಶವನ್ನು ನಡೆಸುವುದಕ್ಕೆ ಅಲ್ಲಿನ ರಾಜ ಅನುಮತಿ ನೀಡಲಿಲ್ಲ. ನೆಲದ ಮೇಲೆ ಎಲ್ಲೂ ಸಮ್ಮೇಳನ ನಡೆಸುವುದಕ್ಕೆ ಅವಕಾಶವಿಲ್ಲವೆಂದಿದ್ದಕ್ಕೆ ಪಕ್ಕದಲ್ಲೇ ಇದ್ದ ನದಿಯ ಮೇಲೆ ಸಾವಿರಾರು ತೆಪ್ಪ ಮತ್ತು ದೋಣಿ, ಮರದ ದಿಮ್ಮಿಗಳನ್ನು ಸೇರಿಸಿ ಕಟ್ಟಿ ನೀರಿನ ಮೇಲೆ ಸಮಾವೇಶ ನಡೆಸಿದ.
ಕಮ್ಯೂನಿಷ್ಟ್ ಚಳವಳಿ ಕೇರಳವನ್ನು ಪ್ರವೇಶಿಸುವ ಮೊದಲೇ, ಅಯ್ಯನ್‌ಕಾಳಿ ಅವರು ಕೂಲಿ ಆಳುಗಳ ಪರವಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ‘ಕೂಲಿಗಳ ವೇತನವನ್ನು ಹೆಚ್ಚಿಸಬೇಕು; ಕೆಲಸಗಳಿಲ್ಲದ ದಿನಗಳಿಗೂ ಅವರಿಗೆ ಕೂಲಿ ಕೊಡಬೇಕು; ಜಮೀನ್ದಾರರು ಕೂಲಿಗಳ ಮೇಲೆ, ಅವರ ಹೆಣ್ಣು ಮಕ್ಕಳ ಮೇಲೆ ನಡೆಸುವ ದೌರ್ಜನ್ಯ, ಅತ್ಯಾಚಾರಗಳನ್ನ ನಿಲ್ಲಿಸಬೇಕು; ಕೂಲಿ ಆಳುಗಳು ಎಲ್ಲಿಗಾದರು ಹೋಗುವುದಕ್ಕೆ ಸ್ವಾತಂತ್ರ್ಯ ಕೊಡಬೇಕು; ಅವರ ಮಕ್ಕಳನ್ನು ಶಾಲೆಗೆ ಸೇರಿಕೊಳ್ಳಬೇಕು; ಕೂಲಿಗಳ ಮೇಲೆ ವಿನಾಕಾರಣ ಕೇಸು ಹಾಕುವುದನ್ನು ನಿಲ್ಲಿಸಬೇಕು; ಕೂಲಿ ಕೆಲಸದ ಸಮಯವನ್ನು ನಿಗದಿಪಡಿಸಬೇಕು’ ಎಂಬ ಬೇಡಿಕೆಗಳನ್ನ ಇಟ್ಟು ಜಮಿನ್ದಾರರ ವಿರುದ್ಧ ಕಾಳಿ ಚಳವಳಿಯನ್ನು ರೂಪಿಸಿದರು. ಇದರಿಂದ ಕುಪಿತರಾದ ಭೂಮಾಲೀಕರು, ‘ಕಾಳಿಯನ್ನು ಜೀವಂತವಾಗಿ ಹಿಡಿದುಕೊಟ್ಟವರಿಗೆ ಎರಡು ಸಾವಿರ ರೂ. ಕೊಂದು ತಂದವರಿಗೆ ಒಂದು ಸಾವಿರ ರೂ. ಬಹುಮಾನ’ವೆಂದು ಪ್ರಕಟಿಸಿದರು.
ಅಯ್ಯನ್‌ಕಾಳಿ ಅವರ ಹೋರಾಟದ ಬಗೆಗೆ ಕೇಳಿ ತಿಳಿದಿದ್ದ ಗಾಂಧೀಜಿಯವರು ಅಯ್ಯನ್‌ಕಾಳಿಯವರನ್ನು ಭೇಟಿ ಮಾಡುವ ಸಲುವಾಗಿ 1937ರಲ್ಲಿ ವೆಂಗನೂರಿಗೆ ಬರುತ್ತಾರೆ. ಗಾಂಧೀಜಿಯವರು ಕಾಳಿಯವರನ್ನು ತಮ್ಮ ಪಕ್ಕದಲ್ಲೆ ಕೂರಿಸಿಕೊಂಡು ಪ್ರಶಂಸಿಸಿ, ಮಾತನಾಡುತ್ತ: ‘ನಿಮ್ಮ ಸಾಮಾಜಿಕ ಸೇವೆ, ಹೋರಾಟಗಳ ಬಗೆಗೆ ನನಗೆ ಹೆಮ್ಮೆ ಇದೆ. ಅದನ್ನ ಮುಂದುವರಿಸಿ. ನಿಮಗೆ ಸದಾ ನನ್ನ ಬೆಂಬಲವಿದೆ. ನಿಮ್ಮ ಮಹತ್ತರವಾದ ಆಸೆ ಏನು?’ ಎಂದು ಕೇಳಿದಾಗ, ‘ನಾನು ಸಾಯುವುದರ ಒಳಗಾಗಿ ನನ್ನ ಸಮುದಾಯದಲ್ಲಿ ಕನಿಷ್ಠ ಹತ್ತು ಮಂದಿ ಬಿ.ಎ. ಪದವೀಧರರನ್ನು ನೋಡಬೇಕೆಂದಿದ್ದೇನೆ’ ಎಂದು ಹೇಳಿದ ಕಾಳಿಯ ಮಾತಿಗೆ ಗಾಂಧೀಜಿಯವರು ಪ್ರಭಾವಿತರಾಗುತ್ತಾರೆ.
ಕೇರಳಾದ ಮತ್ತೊಬ್ಬ ಸಾಮಾಜಿಕ ಸುಧಾರಕ ಶ್ರೀ ನಾರಾಯಣಗುರು ಅವರು ಸಹಾ ಕಾಳಿ ಅವರನ್ನು ಭೇಟಿಮಾಡಿ ಅವರ ಹೋರಾಟದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸಾಯುವ ಕೊನೆ ಗಳಿಗೆಯವರೆಗೂ ದಲಿತರ ಹಕ್ಕು, ಸ್ವಾತಂತ್ರ್ಯ, ಸಮಾನತೆಗಾಗಿ ನಿರಂತರವಾಗಿ ಹೋರಾಡಿದ ಅಯ್ಯನ್‌ಕಾಳಿ ಅವರು, ಉಬ್ಬಸ ವ್ಯಾಧಿಯಿಂದಾಗಿ 1941 ಜೂನ್ 18ರಂದು ಮರಣಹೊಂದಿದರು.
ಇಂತಹ ಮಹಾನ್ ನಾಯಕ ಜನ್ಮ ದಿನವಿಂದು…
ಅಸ್ಪೃಶ್ಯರ ದನಿಯಾಗಿ, ಶೋಷಿತರ ದನಿಯಾದವರು ಅಯ್ಯನ್ ಕಾಳಿಯವರು…
ಮಾಹಿತಿ : ಜಗದೀಶ್‌ಸೂರ್ಯ