ಕಾಗದ ಬಂದಿದೆ….. ಗಂಜಿಗೆ ಅಕ್ಕಿಯು ಇರಬಾರದೆಂದು

ಶ್ಯಾಮರಾಜ್ ಪಟ್ರಮೆ. ಬೆಳ್ತಂಗಡಿ
ಸಂಪುಟ – 06, ಸಂಚಿಕೆ 20, ಮೇ 13, 2012
ಕಾಗದ ಬಂದಿದೆ ನಮ್ಮ ಪೋಲಿಸಪ್ಪನದು
ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೋ
ಚಾ ಹುಡಿ ಮನೆಯಲ್ಲಿ ಇರಬಾರದೆಂದು ಕಾಗದ ಬಂದಿದೆ
ಸಕ್ಕರೆ ಬೇಳೆ ತರಬೇಡಿರೆಂದು ಕಾಗದ ಬಂದಿದೆ
ಗಂಜಿಗೆ ಅಕ್ಕಿಯೂ ಇರಬಾರದೆಂದು ಕಾಗದ ಬಂದಿದೆ
ಇದ್ದರೆ ನೀವೇ ನಕ್ಸಲರೆಂದು ಕಾಗದ ಬಂದಿದೆ !! 1 !!
ಸಾಯದೆ ಬದುಕುತ ಇರಿ ಎಂದು ಕಾಗದ ಬಂದಿದೆ
ಬದುಕಿಯು ಸತ್ತೂ ಇರಬೇಕೆಂದು ಕಾಗದ ಬಂದಿದೆ
ಬಾಯಿ ಮುಚ್ಚುತ ಇರಿ ಎಂದು ಎಂದು ಕಾಗದ ಬಂದಿದೆ
ಹೇಳಿದನೊಪ್ಪುತ ಬಿದ್ದಿರಿ ಎಂದು ಕಾಗದ ಬಂದಿದೆ !! 2 !!
ಸುಳ್ಳಿನ ಮುಳ್ಳಲೆ ಇರಿ ಎಂದು ಕಾಗದ ಬಂದಿದೆ
ಸತ್ಯ ಹೇಳಿದರೆ ಎಚ್ಚರ ಎಂದು ಕಾಗದ ಬಂದಿದೆ
ಗುಲಾಮರಂತೆ ಇರಬೇಕೆಂದು ಕಾಗದ ಬಂದಿದೆ
ತಪ್ಪಿದರೆ ನೀವು ನಕ್ಸಲರೆಂದು ಕಾಗದ ಬಂದಿದೆ !! 3 !!
ಸಂವಿಧಾನವನೆ ತುಳಿಯಿರಿ ಎಂದು ಕಾಗದ ಬಂದಿದೆ
ಗಾಂಧೀಜಿಯನೆ ಎಸೆಯಿರಿ ಎಂದು ಕಾಗದ ಬಂದಿದೆ
ಸ್ವಾತಂತ್ರ್ಯವೇ ನಿಮಗೆ ಇಲ್ಲ ಎಂದು ಕಾಗದ ಬಂದಿದೆ
ಭಗತ್ ಸಿಂಗ್ರ ಪುಸ್ತಕವಿದ್ದರೆ ನಕ್ಸಲರೆಂದಿದೆ !! 4 !!
ವಿಠಲನ ಹೆಸರು ಹೇಳದೆ ಇರಲು ಕಾಗದ ಬಂದಿದೆ
ಹೇಳಿದಾದರೆ ನಕ್ಸಲರೆಂದು ಬಂಧನ ಎಂದಿದೆ
ಪುರಂದರ ವಿಠಲನ ಮರೆಯಿರಿ ಎಂದು ಕಾಗದ ಬಂದಿದೆ
ಪೋಲೀಸಪ್ಪನ ಪೂಜಿಸಿರೆಂದು ಕಾಗದ ಬಂದಿದೆ !! 5 !!
ನ್ಯಾಯ ನೀತಿಯ ಬಿಡಿರೆಂದು ಕಾಗದ ಬಂದಿದೆ
ಬದುಕುವ ಹಕ್ಕನೆ ಮರೆಯಿರಿ ಎಂದು ಕಾಗದ ಬಂದಿದೆ
ನ್ಯಾಯಕ್ಕೆ ಸ್ವರವ ಎತ್ತದೆ ಇರಲು ಕಾಗದ ಬಂದಿದೆ
ಪುರಂದರ ವಿಠಲನೆ ನಕ್ಸಲನೆಂದು ಕಾಗದ ಬಂದಿದೆ !! 6 !!
0

Donate Janashakthi Media

Leave a Reply

Your email address will not be published. Required fields are marked *