ನವದೆಹಲಿ: 2018ರ ಟ್ವೀಟ್ಟರ್ ನಲ್ಲಿ ಹಾಕಲಾಗಿದ್ದ ಸಂದೇಶಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಪ್ರಕರಣದಲ್ಲಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಅವರ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಗುರುವಾರ(ಜುಲೈ 14) ಕಾಯ್ದಿರಿಸಿತ್ತು.
ಮೊಹಮ್ಮದ್ ಜುಬೇರ್ ಮಾಡಿದ ಟ್ವೀಟ್ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪದಲ್ಲಿ ದಾಖಲಾದ ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ನ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ದೇವೇಂದರ್ ಕುಮಾರ್ ಜಾಮೀನು ನೀಡಿದ್ದಾರೆ.
ರೂ.50,000 ಬಾಂಡ್, ಒಂದು ಶ್ಯೂರಿಟಿ ಮತ್ತು ದೇಶ ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತಿನ ಮೇರೆಗೆ ಜಾಮೀನು ಅನುಮತಿ ನೀಡಲಾಗಿದೆ. ಜುಲೈ 2ರಂದು ಚೀಫ್ ಮೆಟ್ರೊಪಾಲಿಟನ್ ಮೆಜಿಸ್ಟ್ರೇಟ್ ಸ್ನಿಗ್ದಾ ಸಾರ್ವರಿಯಾ ಅವರು ಜಾಮೀನು ನಿರಾಕರಿಸಿದ ನಂತರ ಜುಬೇರ್ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು.
ಜೂನ್ 27ರಂದು ಮೊಹಮ್ಮದ್ ಜುಬೇರ್ ಅವರನ್ನು ಬಂಧಿಸಿದ್ದು, ಅವರು ಈಗಲೂ ಬಂಧನದಲ್ಲೇ ಇದ್ದಾರೆ. ದೆಹಲಿಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಜುಬೇರ್ ಗೆ ಜಾಮೀನು ಸಿಕ್ಕಿದರೂ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಜಾಮೀನು ಸಿಗದೇ ಇರುವ ಕಾರಣ ಅವರು ಜೈಲಿನಲ್ಲೇ ಇರಬೇಕಾಗುತ್ತದೆ. ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ಆರು ಎಫ್ಐಆರ್ಗಳನ್ನು ರದ್ದುಗೊಳಿಸಬೇಕೆಂದು ಜುಬೇರ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಎಲ್ಲಾ ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ಕೋರಿದ್ದರು.
ಜುಬೇರ್ ಪರ ವಾದ ಮಂಡಿಸಿದ ವಕೀಲೆ ವೃಂದಾ ಗ್ರೋವರ್ ಫ್ಯಾಕ್ಟ್ ಚೆಕಿಂಗ್ ಪತ್ರಿಕೋದ್ಯಮದ ವಿರುದ್ಧ ಸೇಡಿನ ಕ್ರಮ ಕೈಗೊಳ್ಳಲು ಮೊಹಮ್ಮದ್ ಜುಬೇರ್ ವಿರುದ್ಧ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. 1983ರಲ್ಲಿ ಬಿಡುಗಡೆಯಾದ ಸಿನಿಮಾವೊಂದರ ಸ್ಕ್ರೀನ್ಶಾಟ್ನ್ನು ಜುಬೇರ್ ಟ್ವೀಟ್ ಮಾಡಿದ್ದು, ಅದು ಅಣಕ. ಕಳೆದ ನಾಲ್ಕು ವರ್ಷಗಳಲ್ಲಿ ಅದು ಯಾರನ್ನೂ ಪ್ರಚೋದಿಸಿಲ್ಲ. ಯಾವುದೋ ಅನಾಮಧೇಯ ಟ್ವಿಟರ್ ಹ್ಯಾಂಡಲ್ ನೀಡಿದ ದೂರನ್ನು ಆಧರಿಸಿ ದೆಹಲಿ ಪೊಲೀಸರು ಮೊಹಮ್ಮದ್ ಜುಬೇರ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ವಾದಿಸಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ಮೊಹಮ್ಮದ್ ಜುಬೇರ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಸಲ್ಲಿಸಿದ್ದರು. ಈ ಕೃತ್ಯವನ್ನು ಯೋಜಿತವಾಗಿ ಮಾಡಲಾಗಿದೆ ಎಂದು ಆರೋಪಿಸಿರುವ ಪೊಲೀಸರು, ಜುಬೈರ್ ಪರ ವಕೀಲರು ಯೋಜಿಸಿದಂತೆ ಇದು ಸರಳವಲ್ಲ. ಜುಬೈರ್ ಟ್ವೀಟ್ ಮೂಲಕ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ವಾದಿಸಿದ್ದರು.
ಅವರ ವಿರುದ್ಧ ಸೆಕ್ಷನ್ 153ಎ, 295 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದಾದ ನಂತರ ಐಪಿಸಿ 295ಎ, ಸೆಕ್ಷನ್ 201, 120 ಬಿ, ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ 2010ರ ಸೆಕ್ಷನ 35ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.