ಪಿಎಸ್ಐ ಹಗರಣ: ಪ್ರಮುಖ ವ್ಯಕ್ತಿಗಳ ರಕ್ಷಣೆಗೆ ನಿಂತಿರುವ ಬಿಜೆಪಿ ಸರ್ಕಾರ

ಬೆಂಗಳೂರು: ಸರ್ಕಾರ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಹಿಂದೇಟಾಕುತ್ತಿರುವುದೇಕೆ? ಮಾತೆತ್ತಿದರೆ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು ಹೇಳುತ್ತೀರಿ. ಭಾಗಿಯಾಗಿದ್ದರೆ ಜೈಲಿಗೆ ಹಾಕಿ ಸ್ವಾಮಿ. ನಮ್ಮ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಕೂಡ ಹೇಳಿದ್ದಾರೆ. ಆದರೂ ನ್ಯಾಯಾಂಗ ತನಿಖೆಗೆ ಹಿಂದೇಟು ಹಾಕುತ್ತಿರುವುದೇಕೆ? ಕಾಂಗ್ರೆಸ್ ನವರ ಹೆಸರು ಬರುತ್ತದೆ ಎಂದು ನ್ಯಾಯಾಂಗ ತನಿಖೆಗೆ ನೀಡುತ್ತಿಲ್ಲವೇ? ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

ಕೆಪಿಸಿಸಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ಪಿಎಸ್ಐ ನೇಮಕಾತಿ ಹಗರಣದಲ್ಲಿ ಪ್ರಮುಖ ವ್ಯಕ್ತಿಗಳ ರಕ್ಷಣೆಗೆ ಬಿಜೆಪಿ ಸರ್ಕಾರಕ್ಕೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ಐದು ಆಗ್ರಹಗಳನ್ನು ಮುಂದಿಟ್ಟಿದೆ.

ಸರ್ಕಾರ ಈ ತನಿಖೆ ಮುಗಿಸುವುದು ಯಾವಾಗ? ಮರುಪರೀಕ್ಷೆ ನಡೆಸುವುದು ಯಾವಾಗ? ಇವರು ಮರುಪರೀಕ್ಷೆ ನಡೆಸುವಾಗ ಇವರಿಗೆ ವಯೋಮಿತಿ ಮೀರಿರುತ್ತದೆ. ಅಕ್ರಮ ಮಾಡಿದವರು, ಮಾಡದವರು ಎಲ್ಲರೂ ಬೀದಿಗೆ ಬಿದ್ದಿದ್ದು, ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದರು.

ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕಲಬುರ್ಗಿ ನಗರದ ಚೌಕ್ ಪೊಲೀಸ್ ಠಾಣೆಯ ದೂರಿನ ಪ್ರಕರಣದ ವಿಚಾರವಾಗಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಪ್ರಕರಣದ ಪ್ರಮುಖ ಆರೋಪಿಗಳು ಸ್ಥಳೀಯ ಮಟ್ಟದಲ್ಲಿ ಈ ಅಕ್ರಮವನ್ನು ಹೇಗೆ ನಡೆಸಲಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಪಟ್ಟಿಯಲ್ಲಿ ಇತರೆ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂದು ತಿಳಿಸಲಾಗಿದೆ. ಇದು ನಮ್ಮ ಆರೋಪವಲ್ಲ ನಿಮ್ಮ ತನಿಖಾ ಅಧಿಕಾರಿಗಳ ಆರೋಪಪಟ್ಟಿಯಲ್ಲಿ ಸರ್ಕಾರದ ಮಧ್ಯವರ್ತಿ ಹೇಳಿರುವ ಮಾಹಿತಿಯಾಗಿದೆ.

ಇನ್ನು ಈ ಸರ್ಕಾರ ಬಂದ ಮೇಲೆ ಪಿಎಸ್‌ಐ ಹಾಗೂ ಪರೀಕ್ಷಾ ಪ್ರಾಧಿಕಾರ ಹೊರತಾಗಿ ಕೇವಲ ಕೆಪಿಎಸ್‌ಸಿ ನಡೆಸಿರುವ ನೇಮಕಾತಿ ಒಟ್ಟು 3702 ಹುದ್ದೆಗಳ ನೇಮಕ ನಡೆದಿದೆ. ಇದರಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಪಟ್ಟಿಯಲ್ಲಿ ಹೇಳಿರುವಾಗ ಇವುಗಳ ತನಿಖೆ ನಡೆಯಬಹುದಲ್ಲವೇ?  ಈ ಎಲ್ಲ ನೇಮಕಾತಿಗಳ ಕುರಿತು ತನಿಖೆ ನಡೆಸಬೇಕು. ಈ ಸರ್ಕಾರದ ಎಲ್ಲ ಭ್ರಷ್ಟಾಚಾರಕ್ಕೆ ವೇಗವಾಗಿ ವಿಚಾರಣೆ ಮಾಡಲು ತ್ವರಿತ ಗತಿಯ ನ್ಯಾಯಾಲಯ ಸ್ಥಾಪಿಸಬೇಕೆಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಐದು ಆಗ್ರಹ

  1. ಪಿಎಸ್ ಐ ಅಕ್ರಮ ಪ್ರಕರಣದ ತನಿಖೆಯನ್ನು ಕಲ್ಬುರ್ಗಿಯ ಒಂದು ಪರಿಕ್ಷಾ ಕೇಂದ್ರದ ಅಕ್ರಮಕ್ಕೆ ಮಾತ್ರ ಸೀಮಿತಗೊಳಿಸಿದ್ದು, ರಾಜ್ಯದ ಇತರೆ ಕೇಂದ್ರಗಳಲ್ಲಿನ ಅಕ್ರಮದ ಕುರಿತು ತನಿಖೆ ಯಾವಾಗ? ಅದಕ್ಕೆ ಕಾಲಮಿತಿ ಏನು? ರಾಜ್ಯದ ಇತರೆ ಭಾಗಗಳಲ್ಲಿ ನಡೆದಿರುವ ಅಕ್ರಮದ ತನಿಖೆಯೂ ತ್ವರಿತಗತಿಯಲ್ಲಿ ಆಗಬೇಕು.
  2. ಅನ್ನಪೂರ್ಣೇಶ್ವರಿ ನಗರದಲ್ಲಿ ದಾಖಲಾಗಿರುವ ದೂರಿನ ಪ್ರತಿಯನ್ನೇ ಮುಚ್ಚಿಹಾಕಿ ಪ್ರಕರಣವನ್ನೇ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಹಗರಣದ ತನಿಖೆ ವಿಳಂಬ ಹಾಗೂ ಮುಚ್ಚಿಹಾಕುವ ಪ್ರಯತ್ನವನ್ನು ನಿಲ್ಲಿಸಬೇಕು.
  3. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.
  4. ಎಡಿಜಿಪಿ ಅಮೃತ್ ಪೌಲ್ ಅವರ ಹೇಳಿಕೆಯನ್ನು ಸೆಕ್ಷನ್ 164 ಪ್ರಕಾರ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿಕೊಳ್ಳಬೇಕು.
  5. ಅರೋಪಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಎಸ್ ಡಿಎ, ಎಫ್ ಡಿಎ, ಪಿಡಬ್ಲ್ಯೂಡಿ, ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಅಕ್ರಮದ ಕುರಿತು ಕೂಡಲೇ ತನಿಖೆ ಆಗಬೇಕು. ಈ ಸರ್ಕಾರ ಬಂದ ನಂತರ ಆಗಿರುವ ಎಲ್ಲ ನೇಮಕಾತಿ ಪ್ರಕ್ರಿಯೆಗಳ ತನಿಖೆ ಆಗಬೇಕು.

300ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿ

ನೇಮಕಾತಿಯಲ್ಲಿ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮವಾಗಿ ಆಯ್ಕೆಯಾಗಿದ್ದಾರೆ. ಅವರಲ್ಲಿ ಎಷ್ಟು ಮಂದಿ ವಿಚಾರಣೆಗೆ ಹಾಜರಾಗಿದ್ದಾರೆ. ಈ ಅಕ್ರಮ ಬಯಲಿಗೆಳೆದವರಿಗೆ ನೊಟೀಸ್ ಜಾರಿ ಮಾಡುವ ಸರ್ಕಾರ ಈ ಅಭ್ಯರ್ಥಿಗಳಿಗೆ ನೊಟೀಸ್ ಜಾರಿ ಮಾಡಿದೆಯೇ? ನಿಮ್ಮ ನೊಟೀಸ್ ಗೆ ಬೆಲೆ ಕೊಟ್ಟು ಅವರು ವಿಚಾರಣೆಗೆ ಹಾಜರಾಗಿದ್ದಾರೆಯೇ? ಅವರು ನಿಮ್ಮ ನೊಟೀಸ್ ಗೆ ಕವಡೆ ಕಾಸಿನ ಬೆಲೆಯೂ ನೀಡುತ್ತಿಲ್ಲ, ಅವರ ವಿಚಾರಣೆ ನಡೆಸುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ಸರ್ಕಾರ ಈ ಪ್ರಕರಣವನ್ನು ಕೇವಲ ಕಲಬುರ್ಗಿಗೆ ಸೀಮಿತಗೊಳಿಸಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಪಿಎಸ್‌ಐ ಪ್ರಕರಣ ತನಿಖೆ ಬೆಂಗಳೂರಿನವರೆಗೂ ಬಂದರೆ, ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ಬಹಿರಂಗಗೊಳ್ಳಲಿದೆ ಎಂದು ಭಯಗೊಂಡಿದ್ದಾರೆ ಹಾಗಾಗೀ ತನಿಖೆಯನ್ನು ಪೂರ್ಣಪ್ರಮಾಣದಲ್ಲಿ ನಡೆಸುತ್ತಿಲ್ಲ. ಬೆಂಗಳೂರು ಹಾಗೂ ಇತರೆ ಕಡೆಗಳಲ್ಲಿ ದಾಖಲಾಗಿರುವ ದೂರಿನ ಆರೋಪಪಟ್ಟಿಗಳು ಎಲ್ಲಿವೆ? 90 ದಿನಗಳಲ್ಲಿ ಆರೋಪಪಟ್ಟಿ ಕಳುಹಿಸಬೇಕು ಎಂದು ಕಾನೂನು ಇದೆ. ಆದರೂ ಇದನ್ನು ದಾಖಲಿಸಿಲ್ಲ ಯಾಕೆ? ಇದರಲ್ಲಿ ಹಸ್ತಕ್ಷೇಪ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.

ಎಡಿಜಿಪಿ ಅಮೃತ್ ಪೌಲ್ ಅವರು ಈ ಅಕ್ರಮದಲ್ಲಿ ನಿಮ್ಮ ಪಾಲುದಾರರು ಕೂಡ ಹೌದು. ಅವರಿಗೆ ನೀವು ಹೆದರುತ್ತಿರುವುದೇಕೆ? ನಿಮ್ಮ ಹೆಸರುಗಳನ್ನು ಹೇಳುತ್ತಾರೆ ಎಂದು ಭಯವೇ? ಅವರೇ ಕುದ್ದಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಬೇಡಿಕೆ ಇಟ್ಟಿದ್ದಾರೆ. ಬಿಜೆಪಿಯವರು ಈ ಅಕ್ರಮದಲ್ಲಿ ಭಾಗಿಯಾಗದಿದ್ದರೆ, ನಿಮಗೆ ಭಯ ಇಲ್ಲದಿದ್ದರೆ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿ. ನಾ ಖಾವೂಂಗಾ ನಾಖಾನೇದೂಂಗ ಎಂದು ಮೋದಿ ಹೇಳುತ್ತಾರೆ, ನೀವು ಕೂಡ ನಿಮ್ಮ ಸರ್ಕಾರದ ಬೆನ್ನು ತಟ್ಟಿಕೊಳ್ಳುತ್ತೀರಿ. ಹೀಗಾಗಿ ದಕ್ಷ ಐಪಿಎಸ್ ಅಧಿಕಾರಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಅವಕಾಶ ಮಾಡಿಕೊಡಿ ಎಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *