ಭಯೋತ್ಪಾದಕ ಆರೋಪಿಗಳಿಗೆ ಬಿಜೆಪಿ ನಂಟು: ಕಾಂಗ್ರೆಸ್‌ ನಾಯಕರಿಂದ ಫೋಟೋಗಳು ಬಿಡುಗಡೆ

ಬೆಂಗಳೂರು: ಭಯೋತ್ಪಾದನಾ ಕೃತ್ಯದಲ್ಲಿ ಭಾಗೀಯಾಗಿ ಈಗ ಸಿಕ್ಕಿಬಿದ್ದ ಕೆಲವರ ಜೊತೆ ಬಿಜೆಪಿ ನಾಯಕರ ನಿಕಟ ಸಂಪರ್ಕವಿದೆ. ಇತ್ತೀಚಿನ ಪ್ರಕರಣಗಳಲ್ಲೂ ಬಿಜೆಪಿ ಕಾರ್ಯಕರ್ತರೇ ಸಹ ಸಿಕ್ಕಿಬಿದ್ದಿದ್ದಾರೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಆರೋಪಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಉತ್ತಮ್‌ ಕುಮಾರ್‌ ರೆಡ್ಡಿ, ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಭೀಕರ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ರಿಯಾಜ್ ಅಟ್ಟಾರಿ ಬಿಜೆಪಿ ಕಾರ್ಯಕರ್ತ. ಸ್ಥಳೀಯ ಹಿರಿಯ ಮುಖಂಡರೊಬ್ಬರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಮೊಹಮ್ಮದ್ ರಿಯಾಜ್ ಅಟ್ಟಾರಿಯನ್ನು ರಾಜಸ್ಥಾನ ಬಿಜೆಪಿಯ ವಿಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರ ಅಳಿಯ ನೇಮಿಸಿಕೊಂಡಿದ್ದರು. ಬಿಜೆಪಿಯ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ ಪಕ್ಷದ ಹಲವು ಕಾರ್ಯಕ್ರಮಗಳಲ್ಲೂ ಈತನು ಭಾಗಿಯಾಗಿದ್ದ ಎಂದು ವಿವರಿಸಿದರು.

ಮಹಮದ್ ರಿಯಾಜ್ ಬಿಜೆಪಿಯ ಗುಲಾಬ್ ಚಂದ್ ಕಠಾರಿಯಾ ಕಟ್ಟಾ ಬೆಂಬಲಿಗನಾಗಿದ್ದಾನೆ. ಈ ಗುಲಾಬ್ ಚಂದ್ ರಾಜಸ್ಥಾನ ಪ್ರತಿಪಕ್ಷ ನಾಯಕರ ಸಂಬಂಧಿಯೂ ಹೌದು. ಹೀಗಾಗಿ ಹತ್ಯೆಯ ಹಿಂದೆ ಬಿಜೆಪಿ ಕೈವಾಡವಿದೆ. ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗಷ್ಟೇ ಸ್ಥಳೀಯರು ಹಿಡಿದು ಒಪ್ಪಿಸಿರುವ ಲಷ್ಕರ್-ಎ-ತೊಯ್ಬಾ ಉಗ್ರ ತಾಲಿಬ್ ಹುಸೇನ್ ಷಾ ಎಂಬಾತನು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಪದಾಧಿಕಾರಿ ಎಂಬ ಮಾಹಿತಿ ಇದೆ. ಈ ಹಿಂದೆ ಗೃಹ ಸಚಿವ ಅಮಿತ್ ಶಾ ಜೊತೆಯೂ‌ ತಾಲಿಬ್ ಹುಸೇನ್ ಷಾ ಕಾಣಿಸಿಕೊಂಡಿದ್ದರು ಎಂದರು.

ಅಷ್ಟೇ ಅಲ್ಲ, ಇತರ ಹಿರಿಯ ಬಿಜೆಪಿ ನಾಯಕರೊಂದಿಗೆ ಈ ಮೇಲಿನ ಇಬ್ಬರು ಆರೋಪಿಗಳು ಫೋಟೋಗಳಲ್ಲಿ ಕಾಣಿಸಿಕೊಂಡಿದ್ದರು. ಈ‌ ಬಗ್ಗೆ ಆರೋಪಿಗಳು ಬಿಜೆಪಿ ನಾಯಕರೊಂದಿಗೆ ಇರುವ ಫೋಟೋ​ಗಳನ್ನು ಬಹಿರಂಗಪಡಿಸುತ್ತಿದ್ದೇವೆ ಎಂದ ಅವರು, ಬಂಧನಕ್ಕೊಳಗಾದಾಗ ಓರ್ವ ಆರೋಪಿ ಅಮರನಾಥ ಯಾತ್ರೆ ಮೇಲೂ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಎಂದು ಹೇಳಿದರು.

ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಉಮೇಶ್ ಕೊಲೆ ಹಿಂದಿನ ಪ್ರಮುಖ ರೂವಾರಿ ಇರ್ಫಾನ್ ಖಾನ್ ಎಂಬಾತ ಆಗಿದ್ದಾನೆ. ಈತ ಸಂಸದೆ ನವನೀತ್ ರಾಣಾ ಮತ್ತು ಪತಿ, ಶಾಸಕ ರವಿ ರಾಣಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವವನು. ರಾಣಾ ದಂಪತಿ ಮತ್ತು ಬಿಜೆಪಿ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿದೆ. ಇರ್ಫಾನ್ ಖಾನ್ ರಾಣಾ ಪರ ಪ್ರಚಾರ ನಡೆಸಿ ಮತಯಾಚಿಸಿದ್ದ ಎಂದು ಉತ್ತಮ್ ಕುಮಾರ್ ರೆಡ್ಡಿ ಆರೋಪಿಸಿದರು.

ಇದಲ್ಲದೇ, 2017ರಲ್ಲಿ ಬಿಜೆಪಿ ಐಟಿ ಸೆಲ್ ಸದಸ್ಯ ದ್ರುವ ಸಕ್ಸೇನಾ ಸೇರಿ 10 ಮಂದಿ ಬಂಧನವಾಗಿತ್ತು. ಇವರ ವಿರುದ್ಧ ಅಕ್ರಮ ಟೆಲಿಫೋನ್ ಎಕ್ಸ್​ಚೇಂಜ್ ಹೊಂದಿದ್ದ ಆರೋಪ ಇದೆ. ಆಗ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಜೊತೆಗೆ ಆರೋಪಿಗಳು ಕಾಣಿಸಿಕೊಂಡ ಫೋಟೋ ಕೂಡ ವೈರಲ್ ಆಗಿತ್ತು.  ನಂತರ ಎರಡು ವರ್ಷದ ಬಳಿಕ ಬಲರಾಮ್ ಸಿಂಗ್ ಎಂಬಾತನ ಬಂಧನವಾಗಿತ್ತು. ಈತ ಮಧ್ಯಪ್ರದೇಶದ ಬಜರಂಗದಳದ ಮುಖ್ಯಸ್ಥ. ಭಯೋತ್ಪಾದಕರಿಗೆ ಹಣ ಒದಗಿಸಿದ ಆರೋಪ ಈತನ ಮೇಲಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ, ಮುಖಂಡರಾದ ನಾಗರಾಜ್​​ ಯಾದವ್, ರಮೇಶ್​ಬಾಬು ಇದ್ದರು.

Donate Janashakthi Media

Leave a Reply

Your email address will not be published. Required fields are marked *