ಬೆಂಗಳೂರು: ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಹೋಲಿಸಿದರೆ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕಡಿಮೆ ಸಂಭಾವನೆ ಪಡೆದಿದೆ” ಎಂದು ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿದ್ದು, ‘ಬಿಜೆಪಿ ಪರಿವಾರ ಹೀಗೇಕೆ ಸುಳ್ಳು ಹೇಳುತ್ತಿದೆ’ ಎಂಬ ಪ್ರಶ್ನೆ ಮೂಡಿದೆ.
ಪತ್ರಿಕೆಯಲ್ಲಿ ‘ಚಕ್ರತೀರ್ಥ ಸಮಿತಿ ಸಂಭಾವನೆ 5 ಸಾವಿರ’ ಎಂಬ ವರದಿಯು ಚರ್ಚೆಗೆ ಗ್ರಾಸವಾಗಿದೆ. ಚಕ್ರತೀರ್ಥ ಸಮಿತಿ ಕಡಿಮೆ ಸಂಭಾವನೆ ಪಡೆದಿದೆ ಎಂದು ಹೇಳುವ ವರದಿಯು ಏಕಪಕ್ಷೀಯವಾಗಿದೆ ಎಂಬ ಟೀಕೆಗಳು ಬಂದಿವೆ. ಪತ್ರಿಕಾ ವರದಿಗೆ ಸಂಬಂಧಿಸಿ ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.
ಬರಗೂರು ರಾಮಚಂದ್ರಪ್ಪ ಅವರ ಸ್ಪಷ್ಟನೆ ಹೀಗಿವೆ;
ಸ್ಪಷ್ಟನೆ 1: ಪಠ್ಯಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಗಾಗಿ ಚಕ್ರತೀರ್ಥ ಸಮಿತಿ ರಚನೆಯಾಗಿದೆ ಎಂದು ವರದಿ ಹೇಳುತ್ತದೆ. ವಾಸ್ತವವಾಗಿ ಚಕ್ರತೀರ್ಥ ಸಮಿತಿ ರಚನೆಯಾಗಿದ್ದು ಪಠ್ಯಪುಸ್ತಕಗಳ ರಚನೆ ಹಾಗೂ ಪರಿಷ್ಕರಣೆಗಾಗಿ ಅಲ್ಲ. ಸಂಕೀರ್ಣ ವಿಷಯಗಳ ಪರಿಶೀಲನೆ ಮಾಡಿ ಒಂದು ತಿಂಗಳಲ್ಲಿ ವರದಿಯನ್ನು ಕೊಡಬೇಕೆಂದು ಸಮಿತಿ ರಚನೆಯಾಯಿತು.
ಸ್ಪಷ್ಟನೆ 2: ಚಕ್ರತೀರ್ಥ ಸಮಿತಿಗೆ ಕೇವಲ ಐದು ಸಾವಿರ ರೂಪಾಯಿಗಳ ಸಂಭಾವನೆಯನ್ನು ಕೊಡಲಾಗಿದೆ ಎಂದು ದೊಡ್ಡ ಶೀರ್ಷಿಕೆಯನ್ನು ವರದಿಗೆ ನೀಡಲಾಗಿದೆ. ಆದರೆ ಅದೇ ವರದಿಯಲ್ಲಿ ಸಂಭಾವನೆ 33,800 ರೂಪಾಯಿ ಎಂದಿದೆ. 28,000 ಬಾಕಿ ಉಳಿದಿದೆ ಎಂದು ಬರೆಯಲಾಗಿದೆ. ಬಾಕಿ ಉಳಿಸಿಕೊಂಡು ಆನಂತರ ಹಣ ಜಮಾ ಮಾಡುವ ಪದ್ಧತಿಯು ನಮ್ಮ ಸರ್ಕಾರದಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ನಮ್ಮ ಸಮಿತಿಯಲ್ಲೂ ಅನೇಕರಿಗೆ ಬಾಕಿ ಉಳಿಸಿಕೊಂಡು ಆನಂತರದಲ್ಲಿ ಹಣ ನೀಡಲಾಯಿತು. ಹೀಗಾಗಿ ಚಕ್ರತೀರ್ಥ ಸಮಿತಿಗೆ ನೀಡಿರುವ ಸಂಭಾವನೆ 5,000 ರೂಪಾಯಿಯಲ್ಲ, 33,800 ರೂಪಾಯಿ ಎಂಬುದು ಸತ್ಯ ಸಂಗತಿ.
ಸ್ಪಷ್ಟನೆ- 3: ಮುಡಂಬಡಿತ್ತಾಯ ಸಮಿತಿಯು 3 ಕೋಟಿ 63 ಲಕ್ಷ ಖರ್ಚು ಮಾಡಿದೆ ಎಂದೂ, ನಮ್ಮ ಸಮಿತಿ 2 ಕೋಟಿ 59 ಲಕ್ಷ ಖರ್ಚು ಮಾಡಿದೆ ಎಂದೂ, ಚಕ್ರತೀರ್ಥ ಸಮಿತಿ 49 ಲಕ್ಷ 99 ಸಾವಿರ ರೂ. ಖರ್ಚು ಮಾಡಿದೆ ಎಂದೂ ವರದಿ ಹೇಳುತ್ತದೆ. ಇದು ನಿಜವೇ ಇರಬಹುದು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಮೇಲ್ನೋಟಕ್ಕೆ ನಮ್ಮ ಸಮಿತಿ ತುಂಬಾ ಖರ್ಚು ಮಾಡಿದೆ ಎಂದೂ ಚಕ್ರತೀರ್ಥ ಸಮಿತಿಯು ಕಡಿಮೆ ಖರ್ಚು ಮಾಡಿದೆ ಎಂದೂ ತೋರಿಸಲಾಗುತ್ತಿದೆ. ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಏನೆಂದರೆ- ನಮ್ಮ ಸಮಿತಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ವಾಸ್ತವವಾಗಿ ಮೊದಲು 27 ಸಮಿತಿಗಳ ರಚನೆ ಮಾಡಲಾಯಿತು. ಆ ನಂತರ ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಯಿತು. ಆ ಸಮಿತಿಗಳು ಎರಡೂವರೆ ವರ್ಷ ಕೆಲಸ ಮಾಡಿದವು. ನಾನು ಎರಡು ವರ್ಷ ಕೆಲಸ ಮಾಡಿದೆ. ಒಟ್ಟು ಸಮಿತಿಯಲ್ಲಿ 172 ಜನರಿದ್ದರು. ಅಧಿಕಾರಿಗಳನ್ನೂ ಒಳಗೊಂಡು ಚಕ್ರತೀರ್ಥ ಸಮಿತಿಯಲ್ಲಿದ್ದದ್ದು (ಸರ್ಕಾರದ ಆದೇಶದ ಪ್ರಕಾರ) ಕೇವಲ 16 ಜನ. ಇವರು ಕೆಲಸ ಮಾಡಿದ್ದು ಹೆಚ್ಚೆಂದರೆ ಎರಡು ಅಥವಾ ಮೂರು ತಿಂಗಳು ಮಾತ್ರ. ಇಲ್ಲಿ ವ್ಯತ್ಯಾಸ ಬಹಳ ಸ್ಪಷ್ಟವಾಗಿದೆ. ನಾನು ಸರ್ವಾಧ್ಯಕ್ಷನಾಗಿದ್ದಾಗ 27 ಸಮಿತಿಗಳು, 172 ಜನರು ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಹೊರಗಿನ 30ಕ್ಕೂ ಹೆಚ್ಚು ತಜ್ಞರ ಜೊತೆಯಲ್ಲಿ, ಅಧ್ಯಾಪಕರ ಜೊತೆಯಲ್ಲಿ ಸಭೆ ಮಾಡಿದ್ದೇವೆ. ಒಟ್ಟಾರೆ ಹೇಳುವುದಾದರೆ ನೂರಾರು ಕಾರ್ಯಾಗಾರಗಳು ನಡೆದಿವೆ. ಇವರಿಗೆ ಪ್ರಯಾಣ ಭತ್ಯೆ, ಸಭಾ ಭತ್ಯೆ ಇತ್ಯಾದಿಗಳನ್ನು ಭರಿಸಿದ್ದು ಪಠ್ಯಪುಸ್ತಕ ಸಂಘ. ಅದೆಲ್ಲವೂ ಈ ರಚನಾ ಪ್ರಕ್ರಿಯೆಯಲ್ಲಿ ಸೇರಿವೆ. ಇಷ್ಟು ಕಾಲ, ಇಷ್ಟು ಮಂದಿ ಮಾಡಿದ ರಚನೆಯ ಕುರಿತು ಆ ವರದಿಯಲ್ಲಿ ಉಲ್ಲೇಖ ಇಲ್ಲದೆ ಇರುವುದರಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ. ಕಾಲವಧಿಯ ವ್ಯತ್ಯಾಸ, ಕೆಲಸದ ರೀತಿಯ ವ್ಯತ್ಯಾಸ, ಸದಸ್ಯರ ಸಂಖ್ಯೆಯ ವ್ಯತ್ಯಾಸ ಈ ವಿವರಗಳೆಲ್ಲ ವರದಿಯಲ್ಲಿ ಇದ್ದಿದ್ದರೆ ಓದುಗರಿಗೆ ಸ್ಪಷ್ಟವಾಗುತ್ತಿತ್ತು.