ಮುಂಬೈ: ವಿಧಾನ ಪರಿಷತ್ ಚುನಾವಣೆ ವೇಳೆ ಅಡ್ಡ ಮತದಾನದ ಬೆನ್ನಲ್ಲೇ ಮಹಾರಾಷ್ಟ್ರ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದು, ಶಿವಸೇನಾ ಮುಖಂಡ, ಸಚಿವ ಏಕನಾಥ್ ಶಿಂಧೆ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದಾರೆ.
ಸುಮಾರು 15-20 ಶಾಸಕರೊಂದಿಗೆ ಸಚಿವ ಏಕನಾಥ್ ಶಿಂಧೆ ಗುಜರಾತ್ ನ ಸೂರತ್ ರೆಸಾರ್ಟ್ ಗೆ ತೆರಳಿದ್ದು, ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಸಿಡಿದೆದ್ದಿದ್ದಾರೆ.
ಪಕ್ಷದ ಸಂಸ್ಥಾಪಕ ಬಾಳಾ ಠಾಕ್ರೆಯವರ ನಿಧನದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ 56 ವರ್ಷಗಳ ಇತಿಹಾಸದಲ್ಲೇ ದೊಡ್ಡ ಬಂಡಾಯವನ್ನು ಎದುರಿಸುತ್ತಿದೆ. ಶಿಂಧೆ ಬಂಡಾಯ ಯಶಸ್ವಿಯಾದಲ್ಲಿ ಪಕ್ಷ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಳ್ಳಲಿದೆ. ಆದರೆ ಪಕ್ಷಕ್ಕೆ ಯಾವುದೇ ಅಪಾಯ ಇಲ್ಲ ಎಂದು ಶಿವಸೇನೆ ಹಿರಿಯ ನಾಯಕರು ಹೇಳುತ್ತಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಶಿವಸೇನೆ 55 ಶಾಸಕರನ್ನು ಹೊಂದಿದ್ದು, ಪಕ್ಷಾಂತರ ವಿರೋಧ ಕಾಯ್ದೆಯ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಶಿಂಧೆ 37 ಮಂದಿ ಶಾಸಕರ ಬೆಂಬಲ ಪಡೆಯಬೇಕಾಗಿದೆ. ಶಿವಸೇನೆಯ ಭಿನ್ನಮತೀಯ ಶಾಸಕರನ್ನು ಹೊರ ರಾಜ್ಯಕ್ಕೆ ಸ್ಥಳಾಂತರಿಸಲಾಗಿದೆ.
ಬಂಡಾಯಕ್ಕೆ ಕಾರಣ ಏನು? ತಮ್ಮ ನಗರಾಭಿವೃದ್ಧಿ ಇಲಾಖೆ ಸೇರಿ ಇಡೀ ಸರ್ಕಾರದಲ್ಲಿ ಎನ್ಸಿಪಿ, ಕಾಂಗ್ರೆಸ್ನ ಹಸ್ತಕ್ಷೇಪ ಹೆಚ್ಚಾಗಿದೆ ಅನ್ನೋದು ಶಿಂಧೆ ಬೆಂಬಲಿಗರ ಆರೋಪವಾಗಿದೆ. 2019ರ ಫಲಿತಾಂಶಕ್ಕೂ ಮುನ್ನ ಬಿಜೆಪಿ ಜೊತೆ ಮಾತುಕತೆ ವೇಳೆ ಶಿಂಧೆ ಹೆಸರು ಸಿಎಂ ಸ್ಥಾನದ ರೇಸ್ನಲ್ಲಿದ್ದರು. ಇತ್ತೀಚೆಗೆ ಶಿವಸೇನೆಯಲ್ಲಿ ಏಕನಾಥ್ ಶಿಂಧೆ ಮಾತಿನ ಮೌಲ್ಯ ಕುಸಿತವಾಗಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಪಕ್ಷದಲ್ಲಿ ಕಿರಿಯನಾಗಿದ್ದರೂ, ಆದಿತ್ಯ ಠಾಕ್ರೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗ್ತಿದೆ ಅನ್ನೋದು ಶಿಂಧೆ ಸಿಟ್ಟಿಗೆ ಕಾರಣ ಎನ್ನಲಾಗಿದೆ. ಶಿಂಧೆ ಬೆಂಬಲಿಗರ ಪ್ರಕಾರ ಬಂಡಾಯಕ್ಕೆ 7 ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
1 : ನಗರಾಭಿವೃದ್ಧಿ ಇಲಾಖೆಯಲ್ಲಿ ಎನ್ಸಿಪಿ, ಕಾಂಗ್ರೆಸ್ ಹಸ್ತಕ್ಷೇಪ..
ಕಾರಣ 2 : 2019ರ ಫಲಿತಾಂಶಕ್ಕೂ ಮುನ್ನ ಶಿಂಧೆ ಸಿಎಂ ಸ್ಥಾನದ ಆಕಾಂಕ್ಷಿ..
ಕಾರಣ 3 : ಶಿವಸೇನೆಯಲ್ಲಿ ಏಕನಾಥ್ ಶಿಂಧೆ ಮಾತಿನ ಮೌಲ್ಯದಲ್ಲಿ ಕುಸಿತ..
ಕಾರಣ 4 : ಪಕ್ಷದಲ್ಲಿ ಕಿರಿಯನಾದ್ರೂ ಆದಿತ್ಯ ಠಾಕ್ರೆಗೆ ಹೆಚ್ಚಿನ ಪ್ರಾಮುಖ್ಯತೆ..
ಕಾರಣ 5 : ಥಾಣೆಯಲ್ಲಿ ತಮ್ಮ ಬೆಂಬಲಿಗರು ಕಾರ್ಯಕರ್ತರ ಉಚ್ಛಾಟನೆ..
ಕಾರಣ 6 : ಏಕನಾಥ್ ಶಿಂಧೆ & ಫಡ್ನವೀಸ್ ಸೌಹಾರ್ದಯುತ ಸಂಬಂಧ..
ಕಾರಣ 7 : ಕೇಂದ್ರ ಸರ್ಕಾರದ ಇಡಿ ಮತ್ತು ಸಿಬಿಐ ದಾಳಿಯ ಅನುಮಾನ.
ಬಿಜೆಪಿಯಿಂದ ಡಿಸಿಎಂ ಆಫರ್ : ಬಿಜೆಪಿ ಸರಕಾರ ರಚನೆಯಾದರೆ ಏಕನಾಥ್ ಶಿಂದೆಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಬಿಜೆಪಿ ಹೇಳಿದೆ ಎಂಬ ಮಾತು ಮಹಾರಾಷ್ಟ್ರದ ಗಲ್ಲಿ ಗಲ್ಲಿಗಳಲ್ಲೂ ಕೇಳಿ ಬರುತ್ತಿದೆ.ಮೂಲಗಳ ಪ್ರಕಾರ, ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ಬಂಡಾಯದ ಹಿಂದೆ ಗುಜರಾತ್ ಬಿಜೆಪಿ ಘಟಕದ ಸಿಆರ್ ಪಾಟೀಲ್ ಪ್ರಮುಖ ವ್ಯಕ್ತಿ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದಲ್ಲಿ ‘ಆಪರೇಷನ್ ಕಮಲ’ ನಡೆಸಲು ಸಿಆರ್ ಪಾಟೀಲ್ ಅವರು ಶಿಂಧೆ ಅವರೊಂದಿಗೆ ಬಹಳ ಸಮಯದಿಂದ ಸಂಪರ್ಕದಲ್ಲಿದ್ದಾರೆ. ಜಲಗಾಂವ್ ಮೂಲದ ಪಾಟೀಲ್ ಅವರು ಶಿವಸೇನೆಯ ಕೆಲವು ಶಾಸಕರ ಸಂಪರ್ಕದಲ್ಲಿದ್ದಾರೆ. ಈ ಶಾಸಕರಲ್ಲಿ ಪರೋಲಾದಿಂದ ಚಿಮನರಾವ್ ಪಾಟೀಲ್ ಮತ್ತು ಮರಾಠ ಸಮುದಾಯಕ್ಕೆ ಸೇರಿದ ಪಚೋರಾದಿಂದ ಕಿಶೋರ್ ಪಾಟೀಲ್ ಸೇರಿದ್ದಾರೆ.
ಈ ಸಂಪರ್ಕ ಶಿಂಧೆ ಮತ್ತು ಸೇನೆಯ ಇತರ ಅತೃಪ್ತ ಶಾಸಕರೊಂದಿಗೆ ಸಂಪರ್ಕ ಸಾಧಿಸಲು ಪಾಟೀಲ್ಗೆ ಸಹಾಯ ಮಾಡಿತು. ಶಿವಸೇನೆಯ ಮತಗಳನ್ನು ಬಿಜೆಪಿಗೆ ವರ್ಗಾಯಿಸುವ ಮೂಲಕ ರಾಜ್ಯಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ರಾಜ್ಯ ವಿಧಾನ ಪರಿಷತ್ತಿನ ಚುನಾವಣೆಗಳಿಗೆ ಮುಂಚಿತವಾಗಿ ಇದನ್ನು ಯೋಜಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ, ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರ ಆಗಮನದ ನಂತರ, ಪಾಟೀಲ್ ತಮ್ಮ ಎಲ್ಲಾ ನಿಗದಿತ ಸಭೆಗಳನ್ನು ರದ್ದುಗೊಳಿಸಿ ಅಹಮದಾಬಾದ್ನಲ್ಲಿದ್ದ ಅವರು ಸೂರತ್ಗೆ ಧಾವಿಸಿದರು. ಅಲ್ಲದೆ, ಶಿವಸೇನೆ ಶಾಸಕರು ಬೀಡುಬಿಟ್ಟಿರುವ ಹೋಟೆಲ್ಗೆ ಗುಜರಾತ್ ಪೊಲೀಸರು ಭಾರೀ ಭದ್ರತೆಯನ್ನು ನಿಯೋಜಿಸಿದ್ದಾರೆ.
ಏಕನಾಥ ಶಿಂದೆ ಯಾರು? ಮಹಾರಾಷ್ಟ್ರ ರಾಜಕಾರಣದ ಬಿಕ್ಕಟ್ಟು ಬಹಿರಂಗಗೊಂಡ ನಂತರ ಏಕನಾಥ್ ಶಿಂಧೆ ಅವರ ಹೆಸರು ದೇಶಾದ್ಯಂತ ಕೇಳಿ ಬರುತ್ತಿದೆ. ಏಕನಾಥ್ ಶಿಂಧೆ ಯಾರು ಎಂದು ಹಲವರು ಇಂಟರ್ನೆಟ್ನಲ್ಲಿ ಹುಡುಕಾಡುತ್ತಿದ್ದಾರೆ.
ಆನಂದ್ ದಿಘೆ ಅವರ ಶಿಷ್ಯನಾಗಿದ್ದ ಏಕನಾಥ್ ಶಿಂಧೆ ಒಂದು ಕಾಲದಲ್ಲಿ ಆಟೋ ಡ್ರೈವರ್ ಆಗಿದ್ದವರು. ಮಹಾರಾಷ್ಟ್ರದ ಥಾಣೆ ಸೇರಿದಂತೆ ವಿವಿಧೆಡೆ ಶಿವಸೇನೆಯನ್ನು ಸದೃಢಗೊಳಿಸಲು ಏಕನಾಥ್ ಶಿಂಧೆ ಶ್ರಮಿಸಿದ್ದರು. 2004 ರಲ್ಲಿ ಶಾಸಕರಾಗುವ ಮೊದಲು ಥಾಣೆ ಮುನ್ಸಿಪಲ್ ಕಾರ್ಪೊರೇಟರ್ ಆಗಿದ್ದರು. ಶಿಂಧೆ ಅವರು ಥಾಣೆ ಮುನ್ಸಿಪಲ್ ಕಾರ್ಪೊರೇಶನ್ನಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ ಮತ್ತು ಮೂರು ವರ್ಷಗಳಿಂದ ನಾಗರಿಕ ಸಂಸ್ಥೆ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಗೆ ಏಕನಾಥ್ ಶಿಂಧೆ ಅವರು ನಾಲ್ಕು ಅವಧಿಗೆ ಶಿವಸೇನೆಯಿಂದ ಆಯ್ಕೆಯಾಗಿದ್ದಾರೆ. 2004, 2009, 2014 ಮತ್ತು 2019ರಲ್ಲಿ ಶಾಸಕರಾಗಿ ಗೆಲುವು ಸಾಧಿಸಿದ್ದರು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಜನಸಾಮಾನ್ಯರ ನಡುವೆ ಏಕನಾಥ್ ಶಿಂಧೆ ಜನಪ್ರಿಯತೆ ಪಡೆದಿದ್ದಾರೆ. ಶಿವಸೇನೆಯ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಅವರು ಹೆಸರುವಾಸಿಯಾಗಿದ್ದರು.