ಕೇಂದ್ರ ಸರಕಾರದಿಂದ “ಅಗ್ನಿಪಥ್’’ ಯೋಜನೆಯ ಪ್ರಕಟಣೆ

ಇದು ನಮ್ಮ ಸಶಸ್ತ್ರ ಪಡೆಗಳನ್ನು ಯುವ, ಸುಯೋಗ್ಯ ಮತ್ತು ತಂತ್ರಜ್ಞಾನದ ಒಲವಿನ ಪಡೆಗಳಾಗಿ ಮಾಡುವ ಯೋಜನೆಯೋ ಅಥವ ಸರಕಾರಕ್ಕೆ ‘ಪಿಂಚಣಿ ಹಣವನ್ನು ಉಳಿಸಲಿಕ್ಕಾಗಿ “ಗುತ್ತಿಗೆಯ ಮೇಲೆ” ಸೈನಿಕರನ್ನು ನೇಮಿಸಿಕೊಳ್ಳುವ ಸ್ಕೀಮೋ ಎಂಬ ಸಂದೇಹವನ್ನು ಮಿಲಿಟರಿ ಕ್ಷೇತ್ರದ ಅನುಭವಿಗಳೂ ದೃಢಪಡಿಸುತ್ತಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೂನ್ 14ರಂದು ‘‘ಅಗ್ನಿಪಥ್’ ಎಂಬ ಹೊಸ ಯೋಜನೆಯೊಂದನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರೂ ಹಾಜರಿದ್ದರು.

ಇದು ಯುವ ನಾಗರಿಕರನ್ನು ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಗೆ ನೇಮಿಸಿಕೊಳ್ಳುವ ಸ್ಕೀಮ್ ಎಂದು ಹೇಳಲಾಗಿದೆ. ಇದರ ಅಡಿಯಲ್ಲಿ 17 ರಿಂದ 21 ವರ್ಷ ವಯಸ್ಸಿನ ನಾಗರಿಕರನ್ನು  ನಾಲ್ಕು ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ನೇಮಿಸಿಕೊಳ್ಳಲಾಗುತ್ತದೆ. ನಾಲ್ಕು ವರ್ಷಗಳು ಪೂರ್ಣಗೊಂಡ ನಂತರ ಇವರಲ್ಲಿ 25% ಮಂದಿಯನ್ನು  ಸಶಸ್ತ್ರ ಪಡೆಗಳಲ್ಲಿ ನಿಯಮಿತ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬಹುದು.

ಇದು ನಮ್ಮ ಸಶಸ್ತ್ರ ಪಡೆಗಳ ಸರಾಸರಿ ವಯಸ್ಸನ್ನು ಈಗಿರುವ 32 ವರ್ಷಗಳಿಂಧ 24-26ವರ್ಷಕ್ಕೆ ಇಳಿಸುತ್ತದೆ, ನಮ್ಮ ಸೇನಾಪಡೆಗಳನ್ನು ಇನ್ನಷ್ಟು ಯುವ, ಸುಯೋಗ್ಯ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚು ಒಲವಿರುವ ಪಡೆಗಳಾಗಿ ಮಾಢುತ್ತದೆ ಎಂದು ಹೇಳಲಾಗಿದೆ.

ಬಹುಶಃ ಇದಕ್ಕಿಂತ ಮುಖ್ಯವಾಗಿ ಈ ಯೋಜನೆಯಿಂದ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ವೇತನ ಮತ್ತು ಪಿಂಚಣಿ ಬಿಲ್‌ಗಳನ್ನು ಕಡಿತಗೊಳಿಸುತ್ತದೆಂಬುದು ಈ ಯೋಜನೆ ತಂದಿರುವುದರ ಗುರಿ ಇರಬಹುದು ಎನ್ನಲಾಗಿದೆ. ಏಕೆಂದರೆ ನೇಮಕಗೊಂಡವರು ಮಾಸಿಕ 30,000 ರೂ.ಗಳ ಸಂಭಾವನೆಯನ್ನು ಪಡೆಯುತ್ತಾರೆ, ನಾಲ್ಕನೇ ವರ್ಷದ ವೇಳೆಗೆ ಅದನ್ನು 40,000 ರೂ.ವರೆಗೆ ಏರಿಸಬಹುದು. ನೇಮಕಗೊಂಡವರಿಗೆ ಸಶಸ್ತ್ರ ಪಡೆಗಳಲ್ಲಿ ವಿಶಿಷ್ಟ ಶ್ರೇಣಿಯನ್ನು ನೀಡಲಾಗುವುದು. ಆದರೆ, ‘ಅಗ್ನಿವೀರ’ರು ಎಂದು ಕರೆಯಿಸಿಕೊಳ್ಳುವ ಇವರಿಗೆ  ಯಾವುದೇ ಪೆನ್ಶನ್‍ ಅಥವ ಗ್ರಾಚ್ಯುಟಿ ಇರುವುದಿಲ್ಲ.

ಈ ವರ್ಷ 46,000 ಸೈನಿಕರನ್ನು ಈ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಮುಂದಿನ 90 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಜುಲೈ ವೇಳೆಗೆ ಮೊದಲ ಬ್ಯಾಚ್ ಸಿದ್ಧವಾಗಲಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

“ಅಗ್ನಿಪಥ್ ಯೋಜನೆಯ ಮೂಲಕ, ಯುವ ಭಾರತೀಯ ನಾಗರಿಕರಿಗೆ ಅಗ್ನಿವೀರರಾಗಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ” ಎಂದು ರಕ್ಷಣಾ ಮಂತ್ರಿಗಳು  ಹೇಳಿದರು. ಈ ಯೋಜನೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಮತ್ತು ಯುವಕರು ತಮ್ಮ ಮಿಲಿಟರಿ ಸೇವೆಯ ಸಮಯದಲ್ಲಿ ಗಳಿಸಿದ ಕೌಶಲ್ಯಗಳನ್ನು ತರುವಾಯ ವಿವಿಧ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.

ಆದರೆ ಈಗಾಗಲೇ ಸೇನಾಪಡೆಗಳಲ್ಲಿ  ‘ಶಾರ್ಟ್ ಸರ್ವಿಸ್ ಕಮಿಷನ್’ ಎಂಭ ಯೋಜನೆ ಇದೆ. ಇದರ ಅಡಿಯಲ್ಲಿ ಯುವಕರನ್ನು 10 ವರ್ಷಗಳಿಗೆ ನೇಮಿಸಿಕೊಳ್ಳಲಾಗುತ್ತದೆ, ಈ ಅವಧಿಯನ್ನು ಇನ್ನೂ ನಾಲ್ಕು ವರ್ಷಗಳವರೆಗೆ ವಿಸ್ತರಿಸಬಹುದು. ಇವರು ಪೆನ್ಶನ್‍ ಮತ್ತು ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಇವರೂ ಕೂಢ ತಮ್ಮ ಮಿಲಿಟರಿ ಸೇವೆಯ ಸಮಯದಲ್ಲಿ ಗಳಿಸಿದ ಕೌಶಲ್ಯಗಳನ್ನು ತರುವಾಯ ವಿವಿಧ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು ಎಂಬುದನ್ನು ಗಮನಿಸಬಹುದು.

ಬಹುಶಃ ಇದರಿಂದಾಗಿಯೇ ಇದಕ್ಕೆ ಹಲವೆಡೆಗಳಿಂದ ವಿರೋಧ ವ್ಯಕ್ತವಾಗಿದೆ.  ಕೆಲವು ಅನುಭವಿಗಳು  ಮತ್ತು ನಿವೃತ್ತ ಸೇನಾಧಿಕಾರಿಗಳು ಕೂಡ ಈ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ-ವಿರೋಧಿ ಸ್ಕೀಮ್-ಇದನ್ನು ರದ್ದುಮಾಡಿ: ಯೆಚುರಿ

ಮೋದಿ ಸರ್ಕಾರವು ವೃತ್ತಿಪರ ಸೈನ್ಯವನ್ನು ಬೆಳೆಸುವ ಬದಲು,  ‘ಪಿಂಚಣಿ ಹಣವನ್ನು ಉಳಿಸಲಿಕ್ಕಾಗಿ “ಗುತ್ತಿಗೆಯ ಮೇಲೆ” ಸೈನಿಕರನ್ನು ನೇಮಿಸಿಕೊಳ್ಳುವ ಸ್ಕೀಮ್ ತರುತ್ತಿದೆ! 3-5 ವರ್ಷಗಳ ನಂತರ ಖಾಸಗಿ ಪಡೆಗಳಿಗೆ ಸೇವೆ ಸಲ್ಲಿಸುವುದಲ್ಲದೆ ಬೇರೆ ಯಾವುದೇ ಭವಿಷ್ಯ ಕಾಣದ ಗುತ್ತಿಗೆ ಸೈನಿಕರಿಗೆ ತರಬೇತಿ ನೀಡುವ ಯೋಜನೆಯಿದು ಎಂದು ವರ್ಣಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಈ ರಾಷ್ಟ್ರವಿರೋಧಿ ಯೋಜನೆಯನ್ನು ರದ್ದುಗೊಳಿಸಿ ಎಂದಿದ್ದಾರೆ.

ಈ ಸಂದರ್ಭಧಲ್ಲಿ ಅವರು ಮಾರ್ಚ್ 2020ರಿಂಧ  ಸೇನಾಪಡೆಗಳಿಗೆ ಕೊವಿಡ್‍-19ರಿಂಧಾಗಿ ನೇಮಕಾತಿ ಮಾಡಿಲ್ಲ ಎಂಧು ಸ್ವತಃ ರಕ್ಷಣಾಮಂತ್ರಿಗಳೇ ರಾಜ್ಯಸಭೆಯಲ್ಲಿ ಪ್ರಶ‍್ನೆಯೊಂದಕ್ಕೆ ಉತ್ತರಿಸುತ್ತ ಹೇಳಿರುವುದನ್ನು, ಮತ್ತು ಈ ಕುರಿತು ಈ ಕೆಳಗಿನ ಅಂಕಿ-ಅಂಶ ಕೊಟ್ಟಿರುವುದನ್ನು ನೆನಪಿಸಿದ್ದಾರೆ.

ನೇಮಕಾತಿಗೆ ಪಟ್ಟಿಮಾಡಿದ ಅಭ್ಯರ್ಥಿಗಳ ಸಂಖ್ಯೆ

“ಒಳ್ಳೆಯ ಕಲ್ಪನೆ ಅಲ್ಲ”- “ಅಭಿಮನ್ಯುಗಳಿರುತ್ತಾರೆ, ಅರ್ಜುನರುಗಳು ಇರುವುದಿಲ್ಲ”

ಲೆಫ್ಟಿನೆಂಟ್ ಜನರಲ್ (ನಿವೃತ್ತ) ವಿನೋದ್ ಭಾಟಿಯಾ ಅವರು ಈ ಯೋಜನೆಯು ಸಶಸ್ತ್ರ ಪಡೆಗಳಿಗೆ “ಸಾವಿನ ಗಂಟೆ” ಎಂದು ಹೇಳಿರುವುದಾಗಿ ಸ್ಕ್ರಾಲ್‍.ಇನ್(ಜೂನ್‍ ‍14) ವರದಿ ಮಾಡಿದೆ. ಇದನ್ನು ಪರೀಕ್ಷೆಗೊಳಪಡಿಸದೆ ಅಥವಾ ಪ್ರಾಯೋಗಿಕ ಯೋಜನೆ ಮಾಡದೆ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಯೋಜನೆಯು ಸಮಾಜದ ಮಿಲಿಟರೀಕರಣಕ್ಕೆ ಕಾರಣವಾಗುತ್ತದೆ ಎಂದು ಭಾಟಿಯಾ ಹೇಳಿದರು ಮತ್ತು ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವಲ್ಲಿ ಅರೆ ತರಬೇತಿ ಪಡೆದ ಸುಮಾರು 40,000 ಯುವಕರು ಪ್ರತಿ ವರ್ಷ ಉದ್ಯೋಗವಿಲ್ಲದೆ ಇರುತ್ತಾರೆ. ಇದು ಒಳ್ಳೆಯ ಕಲ್ಪನೆ ಅಲ್ಲ, ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಮುಂದುವರೆದು ಅವರು ಹೇಳುತ್ತಾರೆ.

ಇದು ರಕ್ಷಣಾ ಬಜೆಟನ್ನು ಇಳಿಸುತ್ತದೆ ಎಂಬ ಅಂಶದ ಬಗ್ಗೆ ಹೇಳುತ್ತ ಮೇಜರ್ ಜನರಲ್ (ನಿವೃತ್ತ) ಯಶ್ ಮೋರ್ ಅವರು ಸಶಸ್ತ್ರ ಪಡೆಗಳನ್ನು ಕೇವಲ ಆರ್ಥಿಕ ದೃಷ್ಟಿಕೋನದಿಂದ ನೋಡಲಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಯೋಜನೆಯು ಸ್ಥಾಪಿತ ಮಿಲಿಟರಿ ಸಂಪ್ರದಾಯಗಳು, ಪರಿಸರ, ನೈತಿಕತೆ ಮತ್ತು ಮೌಲ್ಯಗಳಿಗೆ ಅನುಗುಣವಾಗಿಲ್ಲ ಎಂದಿರುವ  ಮೇಜರ್ ಜನರಲ್ (ನಿವೃತ್ತ) ಸತ್ಬೀರ್ ಸಿಂಗ್  “ಇದು ಮಿಲಿಟರಿಯ ದಕ್ಷತೆ ಮತ್ತು ಪರಿಣಾಮಕಾರಿತ್ವದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

 ಈ ಯೋಜನೆಯನ್ನು ಮೊದಲು ‘ ಟೂರ್‍ ಆಫ್‍ ಡ್ಯೂಟಿ’( ಕರ್ತವ್ಯದ ಪ್ರವಾಸ)  ಎಂಧೂ ಹೆಸರಿಸಲಾಗಿತ್ತು. ವಾಸ್ತವವಾಗಿ  ಈ ಯೋಜನೆಯು ಮಿಲಿಟರಿ ಸಂಸ್ಥೆಗಳಲ್ಲಿ “ಅಸಮಾಧಾನಗೊಂಡ ಯುವ ಪ್ರವಾಸಿಗರನ್ನು” ಸೃಷ್ಟಿಸುತ್ತದೆ ಎಂಧು ಮೇಜರ್ ಜನರಲ್ (ನಿವೃತ್ತ) ಸತ್ಬೀರ್ ಸಿಂಗ್  ಟಿಪ್ಪಣಿ ಮಾಡಿದ್ದಾರೆ.

ಲೆಫ್ಟಿನೆಂಟ್ ಜನರಲ್ (ನಿವೃತ್ತ) ಪಿ ಆರ್ ಶಂಕರ್ ಅವರು ಅಗ್ನಿವೀರ್ ಯೋಜನೆಯು ಒಳ್ಳೆಯ ಆಲೋಚನೆಯಾಗಿ ಕಾಣುತ್ತಿಲ್ಲ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.ಈ ಯೋಜನೆಯು “ಶಿಶುವಿಹಾರದ ವಿದ್ಯಾರ್ಥಿಯನ್ನು ಸೂಪರ್‌ಮ್ಯಾನ್” ಮಾಡುವ  ನಿರೀಕ್ಷೆ ಇಟ್ಟುಕೊಂಡಿದೆ  ಎಂದು ಅವರು ಹೇಳಿದರು.

“ನಾವು ಅಭಿಮನ್ಯುವನ್ನು ಉತ್ಪಾದಿಸುತ್ತಿರಬಹುದು ಆದರೆ ಅವನು ಚಕ್ರವ್ಯೂಹದಿಂದ ಹೊರಬರುವುದಿಲ್ಲ” ಎಂದಿರುವ  ಅವರು “ಐದು ವರ್ಷಗಳ ಕರ್ತವ್ಯದ ಪ್ರವಾಸದ ನಂತರ, ನಮ್ಮ ಮುಂದಿನ ಮಹಾಭಾರತದಲ್ಲಿ ಅರ್ಜುನರುಗಳು ಲಭ್ಯವಿರುವುದಿಲ್ಲ. ಅತ್ಯಾಧುನಿಕ ಘಟಕಗಳು ಹೋರಾಡಲು ಸಾಧ್ಯವಾಗುವುದಿಲ್ಲ. ಯುದ್ಧದಲ್ಲಿ ರನ್ನರ್ಸ್ ಅಪ್ ಯಾರೂ ಇಲ್ಲ “ ಎಂದು ಎಚ್ಚರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *