ನವದೆಹಲಿ: ಪಿಂಚಣಿ ಮತ್ತು ವಾರಕ್ಕೆ ಎರಡು ದಿನ ರಜೆ ನೀಡಬೇಕೆಂದು ಸಾರ್ವಜನಿಕ ವಲಯದ ಬ್ಯಾಂಕ್ಗಳ ನೌಕರರು ಜೂನ್ 27ರಂದು ಮುಷ್ಕರ ಹಮ್ಮಿಕೊಂಡಿದ್ದಾರೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್ಬಿಯು) ಈ ಮುಷ್ಕರವನ್ನು ಮುನ್ನಡೆಸುತ್ತಿದೆ. ಯುಎಫ್ಬಿಯು ಒಟ್ಟು ಒಂಬತ್ತು ಬ್ಯಾಂಕ್ ಒಕ್ಕೂಟಗಳನ್ನು ಒಳಗೊಂಡಿದೆ.
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ) ಮತ್ತು ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಸ್ಥೆ (ಎನ್ಒಬಿಡಬ್ಲ್ಯೂ) ಈ ಮಷ್ಕರವನ್ನು ನಡೆಸುತ್ತಿದೆ.
ಎಲ್ಲಾ ಪಿಂಚಣಿದಾರರಿಗೆ ಪಿಂಚಣಿ ನವೀಕರಣ ಮಾಡುವುದು, ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತೆಗೆದುಹಾಕುವುದು, ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದು ನೌಕರರ ಬೇಡಿಕೆಯಾಗಿದೆ ಎಂದು ಯುಎಫ್ಬಿಯು ಸಭೆಯ ನಂತರ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಂ ಹೇಳಿದರು.
ಬ್ಯಾಂಕ್ಗಳಲ್ಲಿ 5 ದಿನಗಳ ವಾರದ ಅವಧಿಯನ್ನು ಜಾರಿಗೆ ತರಬೇಕು ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಒತ್ತಾಯಿಸಿದೆ. ಬ್ಯಾಂಕ್ಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಬೇಕು. ಉಳಿದ ದಿನಗಳು ರಜಾ ದಿನವಾಗಿರಬೇಕು ಎಂಬ ಬೇಡಿಕೆ ವ್ಯಕ್ತಪಡಿಸಿದ್ದಾರೆ. ಖಾಸಗಿ ವಲಯದ ಬಹುತೇಕ ದೊಡ್ಡ ಕಂಪನಿಗಳಲ್ಲಿ ಈ ನಿಯಮ ಜಾರಿಯಲ್ಲಿವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟದ ಬೇಡಿಕೆಗಳಿಗೆ ಸರ್ಕಾರ ಮತ್ತು ಬ್ಯಾಂಕ್ ಆಡಳಿತವು ಸ್ಪಂದಿಸದಿದ್ದರೆ, ದೇಶಾದ್ಯಂತ 7 ಲಕ್ಷಕ್ಕೂ ಹೆಚ್ಚು ನೌಕರರು ಪಾದಯಾತ್ರೆಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಬಲ ಹೋರಾಟಕ್ಕೆ ಮುಂದಾಗಲಿದ್ದಾರೆ ಎಂದು ಎಐಬಿಒಸಿ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಸೋಮವಾರ (ಜೂನ್ 27) ಮುಷ್ಕರದ ಹಿನ್ನೆಲೆಯಲ್ಲಿ ಮೂರು ಬ್ಯಾಂಕ್ ವ್ಯವಹಾರದ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಜೂನ್ 25 ಮತ್ತು ಜೂನ್ 26 ರಂದು ಶನಿವಾರ ಮತ್ತು ಭಾನುವಾರ ಬ್ಯಾಂಕ್ ರಜೆ ಇರುತ್ತದೆ.