ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಳೆನಾಡಿನಲ್ಲಿ ಜೂನ್ 14 ರವರೆಗೆ ಮಳೆ ಬರಲಿದೆ. ಇಂದು(ಜೂನ್ 12) ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಜೂನ್ ಮೊದಲ ವಾರದಲ್ಲಿಯೇ ನೈರುತ್ಯ ಮುಂಗಾರು ಕರ್ನಾಟಕಕ್ಕೆ ಆಗಮಿಸಿದೆ. ಆದರೆ 10 ದಿನಗಳಿಂದ ಮುಂಗಾರು ದುರ್ಬಲವಾಗಿದ್ದು, ಮಳೆಗೆ ಬಿಡುವು ನೀಡುತ್ತು. ಮುಂಗಾರು ಪೂರ್ವ ಮಳೆಯ ಪರಿಣಾಮ ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಒಂದು ವಾರದ ಬಿಡುವಿನ ಬಳಿಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಆರಂಭವಾಗಿದೆ. ಗೋವಾ, ಕೊಂಕಣ ಭಾಗದ ವಿವಿಧ ರಾಜ್ಯಗಳಲ್ಲಿ ಸಾಧಾರಣ ಮಳೆ ಆರಂಭವಾಗಿದೆ.
ಇದನ್ನು ಓದಿ: ಭಾರೀ ಮಳೆಗೆ ಕೊಚ್ಚಿ ಹೋಯ್ತು ಬೆಂಗಳೂರು -ಮೈಸೂರು ಹೆದ್ದಾರಿ
ಇಂದಿನವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರದ ಶರಾವತಿ ಅಣೆಕಟ್ಟಿನ ಹಿನ್ನೀರಿನ ಮಟ್ಟ ಕುಸಿದಿದೆ. ಇದರಿಂದಾಗಿ ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಲ್ಲಿ ಸಣ್ಣ ಲಾಂಚ್ ಇದ್ದು, ಕರೂರು ಹೋಬಳಿಯ ಹಲವು ಗ್ರಾಮಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಹೋಬಳಿಯ ಹಲವು ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಕ್ಕೆ ತಲುಪಲು 35 ಕಿ. ಮೀ. ಬದಲು 72 ಕಿ. ಮೀ. ಸಂಚಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ದೇಶದ ವಿವಿಧ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತೀಸ್ಗಢ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಹಲವೆಡೆ ಅಧಿಕ ಮಳೆಯಾಗಲಿದೆ.
ಈಗಾಗಲೇ, ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ತೆಲಂಗಾಣ ಅಲ್ಲಲ್ಲಿ ಮಳೆಯಾಗಿದೆ. ಕೇರಳ, ಮಾಹೆ, ಲಕ್ಷದ್ವೀಪ, ಈಶಾನ್ಯ ಭಾರತದ ರಾಜ್ಯಗಳು, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಜನರು ಮುನ್ನಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಇದನ್ನು ಓದಿ: ‘ಅಸಾನಿ’ಯ ಆರ್ಭಟಕ್ಕೆ ಭಾರೀ ಗಾಳಿ-ಮಳೆಯಾಗುವ ಎಚ್ಚರಿಕೆ!
ಮುಂದಿನ 48 ಗಂಟೆಗಳ ಅವಧಿಯಲ್ಲಿ ನೈರುತ್ಯ ಮುಂಗಾರು ಮಹಾರಾಷ್ಟ್ರದ ಬಹುತೇಕ ಎಲ್ಲ ಭಾಗಗಳು, ತಮಿಳುನಾಡು ಹಾಗೂ ಕರ್ನಾಟಕದ ಹಲವು ಭಾಗಗಳು, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಭಾಗಶಃ ಭಾಗಗಳಲ್ಲಿ ಮಳೆ ವ್ಯಾಪಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.