- ಪರಿಸರ ದಿನಾಚರಣೆ ಕುರಿತು ರಾಜಕೀಯ ನಾಯಕರುಗಳ ಟ್ವಿಟ್
- ಪರಿಸರ ರಕ್ಷಣೆ, ಪರಿಸರದ ಜಾಗೃತಿ, ಪರಿಸರದ ಅವಶ್ಯಕತೆ ಕುರಿತು ಸಂದೇಶ
ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸೇರಿದಂತೆ ಹಲವು ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರುಗಳು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಕರೆ ನೀಡಿದ್ದಾರೆ.
‘ಇರುವುದೊಂದೇ ಭೂಮಿ, ಪರಿಸರವೇ ನಮ್ಮೆಲ್ಲರ ಆಸ್ತಿ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕೋಣ. ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗೋಣ ಎಂದು ನಾಡಿನ ಜನತೆಗೆ ʼವಿಶ್ವ ಪರಿಸರ ದಿನದ ಶುಭಾಶಯಗಳು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ್ದು, ನಾವು ಪರಿಸರವನ್ನು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ ಎಂಬ ಸತ್ಯವನ್ನು ಮನವರಿಕೆ ಮಾಡಿದ್ದಾರೆ. ‘ನಾವು ಪರಿಸರವನ್ನು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ ಎಂಬ ಸರಳ ಸತ್ಯವನ್ನು ವರ್ತಮಾನದಲ್ಲಿ ಅರ್ಥಮಾಡಿಕೊಂಡರೆ ಇಂದಿನ ಮತ್ತು ಮುಂದಿನ ತಲೆಮಾರಿಗೆ ಭವಿಷ್ಯ ಸುರಕ್ಷಿತವಾಗಿ ಉಳಿಯಲಿದೆ. ಭೂತಾಯಿಯ ಮಕ್ಕಳೆಲ್ಲರಿಗೂ ವಿಶ್ವ ಪರಿಸರ ದಿನದ ಶುಭ ಹಾರೈಕೆಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ತಮ್ಮ ಸಂದೇಶದಲ್ಲಿ, ‘ಪರಿಸರವಿಲ್ಲದೆ ನಾವಿಲ್ಲ, ಪರಿಸರದಿಂದಲೇ ನಾವೆಲ್ಲ’ ಎಂಬುದನ್ನು ಮರೆಯದಿರೋಣ. ಅನುಕ್ಷಣವು ಪರಿಸರವನ್ನು ರಕ್ಷಿಸಲು ಕಂಕಣಬದ್ಧರಾಗೋಣ’ ಎಂದು ಪರಿಸರ ದಿನವನ್ನು ಶುಭಕೋರುವ ಮೂಲಕ ಮನವಿ ಮಾಡಿದ್ದಾರೆ.
ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ ಹಾಗಾಗಿ ಪರಿಸರ ಉಳಿಸೋಣ, ಬೆಳೆಸೋಣ. ಎಂದು ಟ್ವಿಟ್ ಮಾಡಿ ಶುಭ ಹಾರೈಸಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡುವ ಮೂಲಕ ಸಂಭ್ರಮವನ್ನು ಆಚರಿಸಲಾಗುತ್ತದೆ. ನೆಲ, ಮಣ್ಣು, ಬೆಳೆ, ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ‘ಜಾಗೃತ ದಿನ’ವೆಂದು ಕರೆಯಲಾಗುತ್ತದೆ ಎಂದು ಶುಭಕೋರಿದ್ದಾರೆ.