ಪಠ್ಯ ಪುಸ್ತಕಗಳು ಚಲನಶೀಲವೂ, ಸಂವೇದನೆ ರೂಪಿಸುವವೂ ಆಗಬೇಕು

ಭಾರತೀದೇವಿ.ಪಿ

‘ಭಾಷಾಪಠ್ಯದಲ್ಲಿ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ತುರುಕಬಾರದು’ ಎಂದು ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರು ನೀಡಿದ ಹೇಳಿಕೆ ನಮ್ಮ ನಡುವಿನ ಕ್ರೂರ ವಾಸ್ತವದ ಅನುರಣನ. ಇಲ್ಲಿ ಅಸಮಾನತೆ ಒಂದೇ ಸಹಜ, ಉಳಿದವೆಲ್ಲವೂ ತುರುಕಿದವೇ ಎಂಬುದನ್ನು ಅವರ ಮಾತು ಹೇಳುತ್ತಿದೆ. ಈ ಮಾತು ಮತ್ತು ಈಗ ರೂಪಿಸಲಾದ ಪಠ್ಯಪುಸ್ತಕದ ಹಿನ್ನೆಲೆಯಲ್ಲಿ ಯೋಚಿಸಬೇಕಾದ ಅನೇಕ ಪ್ರಶ್ನೆಗಳಿವೆ.

• ಮೊದಲನೆಯದಾಗಿ, ಭಾಷಾ ಪಠ್ಯದ ಕೆಲಸ ಕೇವಲ ಭಾಷಾ ಕೌಶಲ ವೃದ್ಧಿಪಡಿಸುವುದು ಮಾತ್ರವೇ? ಪಠ್ಯಗಳಿಗೆ ಕೌಶಲದ ಜೊತೆಗೆ ಸಂವೇದನೆ ರೂಪಿಸುವ ಹೊಣೆಯೂ ಇದೆಯಲ್ಲವೇ? ಇವರು ಹೇಳಿದಂತೆ ಭಾಷಾ ಕೌಶಲವನ್ನೇ ಮುಖ್ಯವೆಂದು ಪರಿಗಣಿಸಿದರೂ ಈಗ ಇಟ್ಟಿರುವ ಕಬ್ಬಿಣದ ಕಡಲೆಯಂತಹ ಭಾಷೆ ಮಕ್ಕಳಿಗೆ ಹತ್ತಿರವಾದೀತೇ? ಮಕ್ಕಳಿಗೆ ಯಾವ ಹಂತದಲ್ಲಿ ಏನನ್ನು ಬೋಧಿಸಬೇಕು, ಕ್ಲಿಷ್ಟತೆಯ ಮಟ್ಟ ಯಾವುದಿರಬೇಕು ಎಂಬ ಸ್ಪಷ್ಟತೆ ಇರಬೇಕಲ್ಲವೆ?

• ಈಗಾಗಲೇ ನಮ್ಮ ಶಿಕ್ಷಣ ಸಂಸ್ಥೆಗಳು ವೈಚಾರಿಕತೆ ಬೆಳೆಸಿ, ತಾರತಮ್ಯ ಮೀರಲು ದಾರಿ ಮಾಡಿಕೊಡದೇ ಅಸಮಾನತೆಯನ್ನೇ ಅಧಿಕೃತಗೊಳಿಸುವ ಬಗೆಯಲ್ಲಿ ಹಲವು ಸ್ತರಗಳಲ್ಲಿ ವಿನ್ಯಾಸಗೊಂಡಿವೆ. ಹೀಗಿರುವಾಗ ಹಲವು ಆಯಾಮಗಳಲ್ಲಿ ನಮ್ಮ ಕೆಲಸ ನಡೆಯಬೇಕಾಗುತ್ತದೆ. ಈಗಾಗಲೇ ಹಲವು ಬಗೆಗಳಲ್ಲಿರುವ ಪಠ್ಯಕ್ರಮದ ಜೊತೆಗೆ ಖಾಸಗಿ-ಸರ್ಕಾರಿ ಶಾಲೆಗಳು ಹೀಗೆ ಪಂಕ್ತಿಭೇದದ ಶಿಕ್ಷಣ ವ್ಯವಸ್ಥೆ ಇದೆ. ಇದನ್ನು ಮೀರುವಲ್ಲಿ ನಮ್ಮ ಪಠ್ಯ ಹಾಗೂ ಪಠ್ಯಕ್ರಮ ಎಲ್ಲವನ್ನೂ ಪ್ರಜ್ಞಾಪೂವಕವಾಗಿ ಒಳಗು ಮಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ಹೀಗೆ ಒಳಗು ಮಾಡಿಕೊಳ್ಳುವುದನ್ನು ʼತುರುಕುವುದುʼ ಎಂದು ಭಾವಿಸಿ, ಒಂದನ್ನೇ ಸರಿ ಎಂದು ಮಕ್ಕಳ ಮನಸ್ಸಿನಲ್ಲಿ ನೆಡುವ ಕೆಲಸ ಈಗ ಆಗುತ್ತಿದೆ. ಇದು ವಿಪರ್ಯಾಸ.

• ಪಠ್ಯಕ್ರಮ, ಪಠ್ಯಗಳ ಮೂಲಕ ಮನಸ್ಸುಗಳನ್ನು ಒಂದೇ ಸಿದ್ಧಾಂತಕ್ಕೆ ಬದ್ಧಗೊಳಿಸುವುದು ಹಿಂದೆ ಯುರೋಪಿನಲ್ಲಿ ನಡೆದು ಅದರ ಭೀಕರ ಪರಿಣಾಮವನ್ನು ನಮಗೆಲ್ಲ ಇತಿಹಾಸ ತಿಳಿಸಿದೆ. ಈಗ ಅದೇ ಜಾಡಿನಲ್ಲಿ ನಾವು ಸಾಗುತ್ತಿದ್ದೇವೆ. ಇದರ ಪರಿಣಾಮವನ್ನು ನಾವು ಮುಂಗಾಣಬೇಕಿದೆ.

• ಹಿಂದಿನಿಂದಲೂ ಜಾತಿ, ವರ್ಗ, ಲಿಂಗ, ಧರ್ಮದ ಆಧಾರದಲ್ಲಿ ಒಡೆದ ಸಮಾಜ ನಮ್ಮದು. ಈ ವಾಸ್ತವಕ್ಕೆ ಕುರುಡಾಗಿ ಏನೇ ಮಾಡಲು ಹೊರಟರೂ ಹಾಗೆ ಮಾಡಿದವರು ಈ ತಾರತಮ್ಯದ ನೋವು ಅರಿಯದವರಾಗಿರುತ್ತಾರೆ. ಹೀಗಾಗಿಯೇ ಸಮಿತಿಯ ಬಹುಪಾಲು ಸದಸ್ಯರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾರೂ ಇದನ್ನು ಒಪ್ಪಲು ಸಾಧ್ಯವಿಲ್ಲ.

• ಕೇವಲ ಅವೈದಿಕವಾದ ಚಿಂತನೆಗಳ ಜೊತೆಗೆ ಹಲವು ಧರ್ಮಗಳ ಮಂದಿ ಜೊತೆಗಿದ್ದೇವೆ ಎಂಬುದನ್ನೂ ಪಠ್ಯ ರೂಪಿಸುವಾಗ ಗಮನಿಸಬೇಕಾಗುತ್ತದೆ. ಹೀಗಾದಾಗಲೇ ಅದು ನಿಜ ʼಭಾರತೀಯʼ ಆಗುತ್ತದೆ.

• ಒಟ್ಟಾರೆಯಾಗಿ ನೋಡಿದರೂ ಇಂತಹುದನ್ನೇ ಪಠ್ಯ ಎಂದು ನಿಗದಿಪಡಿಸುವುದು ತರಗತಿಯ ಚಲನಶೀಲತೆಯನ್ನು ಸ್ಥಗಿತಗೊಳಿಸಿದಂತೆ.
ನನ್ನ ಗುರುಗಳೂ, ತಜ್ಞರೂ ಆದ ರವಿನಾರಾಯಣ ಚಕ್ರಕೋಡಿಯವರು ಬರೆಯುತ್ತಾರೆ,
The demise of textbooks?
We should think radically and come out of conventional ways of producing textbooks. Why should there be prescribed textbooks – why can’t teachers choose texts that they want to teach? Why can’t students choose texts that they want to read?
It’s time to keep the textbooks aside, teach students (not the textbook), expand their creative minds and prepare them for the 21st century…

ನಮ್ಮ ಶಿಕ್ಷಣ ವ್ಯವಸ್ಥೆ ಪ್ರತಿ ಶಾಲೆ, ತರಗತಿ, ಶಿಕ್ಷಕರು, ಮಕ್ಕಳ ಆದ್ಯತೆ, ಅಗತ್ಯಗಳಿಗನುಗುಣವಾಗಿ ಪಠ್ಯವನ್ನು ಆಯ್ದುಕೊಳ್ಳುವಷ್ಟು ಮಟ್ಟಿಗಿನ ಪ್ರಬುದ್ಧ ಹಂತಕ್ಕೆ ಹೋಗಬೇಕಾಗಿತ್ತು. ಪಠ್ಯಕ್ರಮದ ಮೂಲಕ ಕೇವಲ ಮಾಹಿತಿ, ವಿಚಾರಗಳ ವರ್ಗಾವಣೆಯಾಗದೇ ಅದು ಕಲಿಕೆಗೆ ಉತ್ತೇಜನ ನೀಡುವಂತಿರಬೇಕಾಗಿತ್ತು. ಹಿಂದೆಯೂ ಇಂದೂ ಸೇರಿದ ಹಾಗೆ ನಾವು ಈ ದಿಸೆಯಲ್ಲಿ ಸಾಗಬೇಕಾದಷ್ಟು ಮುನ್ನಡೆ ಸಾಧಿಸಿಲ್ಲ.

• ಬೋಧನೆಗೆ ಸಂಬಂಧಿಸಿ ನೋಡಿದರೆ ಇಂದು ಪಠ್ಯಪುಸ್ತಕ ರಚನಾ ಸಮಿತಿ, ಬೋಧಕರು ಎಲ್ಲರೂ ಪಠ್ಯವನ್ನು ನಿಗದಿಗೊಳಿಸಿದರೆ ಎಲ್ಲ ಆದಂತೆ ಎಂದು ಭಾವಿಸಿದಂತಿದೆ. ಆದರೆ ಪಠ್ಯ, ಪಠ್ಯಕ್ರಮ (ಕರಿಕ್ಯುಲಂ) ಮತ್ತು ಬೋಧನಾ ವಿಧಾನದ ಬಗ್ಗೆ ಗಂಭೀರ ಚಿಂತನೆ ನಡೆದೇ ಇಲ್ಲ. ಇದನ್ನು ಹಿರಿಯರಾದ ಕೆ.ವಿ.ನಾರಾಯಣ, ಶ್ರೀಪಾದ್ ಭಟ್ ಮುಂತಾದವರು ತಮ್ಮ ಮಾತುಗಳ ಮೂಲಕ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಈ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುವ ತುರ್ತು ಇದೆ.

Donate Janashakthi Media

Leave a Reply

Your email address will not be published. Required fields are marked *